ಇತ್ತೀಚೆಗೆ ಹಂಪಿಯ ಕುರಿತು ಹೊರಬಂದ ಅಂಕಿ ಅಂಶವೊಂದು ನಿಜಕ್ಕೂ ಬಹಳ ಶಾಕಿಂಗ್ ಹಾಗೂ ಬೇಸರ ಮೂಡಿಸುವಂತಿತ್ತು. ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆ ಹೊಂದಿದರೆ ಸಾಕು ಆ ಜಾಗ ತಾನೇ ತಾನಾಗಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿಬಿಡುತ್ತದೆ. ಹಂಪಿ ತನ್ನೆಲ್ಲ ಅರ್ಹತೆ, ಯೋಗ್ಯತೆ, ವೈಭವ ಮತ್ತು ಇತಿಹಾಸಬಲದಿಂದ ವಿಶ್ವಮಾನ್ಯತೆ ಪಡೆದುಕೊಂಡ ಸ್ಥಳ. ಒಂದು ಕಾಲದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಮಾರುವ ಮಾದರಿಯಲ್ಲಿ ಚಿನ್ನ, ಬೆಳ್ಳಿ ವಜ್ರವೈಡೂರ್ಯಗಳನ್ನು ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದ ಕೇಂದ್ರನಗರಿ. ಇದು ವೈಭವೀಕರಣವಾಗಲೀ ಕಲ್ಪನೆಯ ಕಟ್ಟುಕತೆಯಾಗಲೀ ಅಲ್ಲ. ವಿಜಯನಗರದ ಹಾಗೂ ಹಂಪಿಯ ವೈಭವಕ್ಕೆ ಸಕಲ ಸಾಕ್ಷಿಗಳಿವೆ. ಅಲ್ಲಿನ ಶಿಲ್ಪಕಲೆಗಳಂತೂ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರಲರ್ಹವಾಗಿವೆ. ಹಲವು ದಾಳಿಗಳ ನಂತರ ಉಳಿದಿರುವ ಕಲಾಸಂಪತ್ತೇ ಇಷ್ಟೊಂದು ಅಂದರೆ ದಾಳಿಗೆ ಮುನ್ನ ಹೇಗಿದ್ದಿರಬಹುದು. ಇಂಥ ಹಂಪಿಯ ಮಹತ್ವ ಸರಕಾರಕ್ಕೇಕೆ ಅರ್ಥವಾಗುತ್ತಿಲ್ಲ? ಪ್ರವಾಸೋದ್ಯಮ ಇಲಾಖೆಗೇಕೆ ಹಂಪಿಯ ಬಗ್ಗೆ ಇಷ್ಟು ನಿರ್ಲಕ್ಷ್ಯ?

2024-25ರ ಸಾಲಿನಲ್ಲಿ ಹಂಪಿಗೆ ಭೇಟಿ ಇತ್ತ ವಿದೇಶಿ ಪ್ರವಾಸಿಗರ ಸಂಖ್ಯೆ ಕೇವಲ 3818. 2023-24ರಲ್ಲಿ ಬಂದಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ 19838. ಅಂದ್ರೆ ಸುಮಾರು ಎಂಬತ್ತು ಪ್ರತಿಶತ ಕುಸಿತ. ವಿದೇಶಿಯರು ಬರದೇ ಹೋದರೇನಂತೆ, ಭಾರತೀಯರು ಭೇಟಿ ಕೊಡುತ್ತಿದ್ದಾರಲ್ಲ ಸಾಕು ಎಂದು ತೃಪ್ತಿ ಪಡಬೇಕಾ? ನಾಲ್ಕೂವರೆ ಲಕ್ಷ ಭಾರತೀಯ ಪ್ರವಾಸಿಗರು ಈ ಸಾಲಿನಲ್ಲಿ ಹಂಪಿಗೆ ಬಂದಿದ್ದಾರೆಂಬುದು ಹಿರಿಮೆಯಾಗಬೇಕಾ? ಖಂಡಿತ ಇಲ್ಲ. ವಿದೇಶಿ ಪ್ರವಾಸಿಗರು ನಮ್ಮ ದೇಶದ ನಮ್ಮ ರಾಜ್ಯದ ತಾಣಗಳನ್ನು ನೋಡಲು ಬರುವಂತೆ ಮಾಡುವುದು ಪ್ರವಾಸೋದ್ಯಮದ ಪ್ರಥಮ ಆದ್ಯತೆಯಾಗಬೇಕು. ಹಂಪಿಗೆ ಬರಲು ವಿದೇಶಿಯರು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಕಾರಣ ಹುಡುಕಿದರೆ ನೆಪವಾಗಿ ಸಣಾಪುರದ ಬಳಿ ವರದಿಯಾದ ಲೈಂಗಿಕ ದೌರ್ಜನ್ಯದ ಘಟನೆ ಮತ್ತು ವಿದೇಶಿ ಪ್ರವಾಸಿಗನ ಹತ್ಯೆ ಕಾಣುತ್ತವೆ. ಖಂಡಿತ ಅವು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಅತಿ ದೊಡ್ಡ ವಿಷಯಗಳೇ ಹೌದು. ಆದರೆ ಅದರ ಹೊರತಾಗಿ ವರ್ಲ್ಡ್ ಹೆರಿಟೇಜ್ ಸೆಂಟರ್ ಒಂದರ ಗುಣಮಟ್ಟ ಸೆಟ್ ಮಾಡುವಲ್ಲಿ ಕರ್ನಾಟಕ ಪ್ರವಾಸೋದ್ಯಮ ಸೋತಿದೆ ಎಂಬುದನ್ನು ಒಪ್ಪಲೇಬೇಕು.

foreign visitors to Hampi

ವಿದೇಶಿಯರು ತಮ್ಮ ಜೀವದ ಸುರಕ್ಷತೆ ಮತ್ತು ಹಣದ ಸುರಕ್ಷತೆ ನೋಡುವುದು ಸಹಜ. ಸಣಾಪುರದಲ್ಲಿ ಆದ ಘಟನೆ ಕೇವಲ ಹಂಪಿಯ ಮೇಲೆ ಮಾತ್ರವಲ್ಲ ಭಾರತದ ಪ್ರತಿ ಪ್ರವಾಸಿ ತಾಣದ ಮೇಲೂ ಪರಿಣಾಮ ಬೀರುತ್ತದೆ. ವಿದೇಶಿಗರ ಕಣ್ಣಲ್ಲಿ ಇಡೀ ಭಾರತದ ಮೇಲಿನ ಇಮೇಜನ್ನೇ ಬದಲಿಸಿಬಿಡುತ್ತದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಲಾ ಅಂಡ್ ಆರ್ಡರ್ ಕೆಲಸ ಮಾಡುವುದು ಎಷ್ಟು ಮುಖ್ಯ ಎಂಬುದು ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಹಂಪಿಯ ಮೂಲಸೌಕರ್ಯ ವ್ಯವಸ್ಥೆ ಬಗ್ಗೆ ಬಂದಷ್ಟು ಕಟುಟೀಕೆಗಳು ಇನ್ನೆಲ್ಲೂ ಕೇಳಿಬರಲಿಕ್ಕಿಲ್ಲ. ರಸ್ತೆಗಳಿಂದ ಹಿಡಿದು, ಉಳಿದುಕೊಳ್ಳಲು ಲಾಡ್ಜ್, ಊಟತಿಂಡಿಗೆ ಹೊಟೇಲ್ ಯಾವುದೂ ಆಕರ್ಷಕವಾಗಿಲ್ಲ. ಹತ್ತಿರದಲ್ಲಿ ರೆಸಾರ್ಟ್‌ಗಳ ಆಯ್ಕೆಯೇ ಇಲ್ಲ. ಇರುವ ಕೆಲವು ರೆಸಾರ್ಟ್‌ಗಳನ್ನೇ ನೆಚ್ಚಬೇಕು. ಅಲ್ಲಿನ ವ್ಯಾಪಾರಿಗಳು, ಗೈಡ್‌ಗಳು, ಹೋಮ್ ಸ್ಟೇ ಗಳಿಗೆ ಪ್ರವಾಸಿಗರನ್ನು ಸುಲಿಯುವುದೇ ಕಾಯಕವಾಗಿದೆ. ಹಲವು ಹೋಮ್ ಸ್ಟೇಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಹಂಪಿಯ ಹೊರಾಂಗಣದಲ್ಲಿ ರಾತ್ರಿ ಓಡಾಡುವುದು ಸುರಕ್ಷಿತವಲ್ಲ ಎಂಬಂತಾಗಿದೆ. ಮೂಲಸೌಕರ್ಯ ಮತ್ತು ಸ್ವಚ್ಛತೆ ಬಗ್ಗೆ ಹೇಳುವುದೇ ವ್ಯರ್ಥ ಎಂಬ ಪರಿಸ್ಥಿತಿ. ವಿದೇಶಿಯರಿಗೆ ಸುಲಭವಾಗುವ ಸೂಚನಾಫಲಕಗಳಿಲ್ಲ. ಮಾಹಿತಿ ಕೇಂದ್ರಗಳಿಲ್ಲ. ಸಾರಿಗೆ ವ್ಯವಸ್ಥೆಯಂತೂ ಅಧ್ವಾನ. ಹೆರಿಟೇಜ್ ಸೆಂಟರ್ ಎಂದು ಹೆಸರಾಗಿರುವ ರಾಜ್ಯದ ಅಗ್ರಮಾನ್ಯ ಪ್ರವಾಸಿ ತಾಣಕ್ಕೆ ಸರಿಯಾದ ವಿಮಾನ ಕನೆಕ್ಟಿವಿಟಿ ಮುಖ್ಯ ಎಂಬುದು ಪ್ರವಾಸೋದ್ಯಮ ಇಲಾಖೆ ಮತ್ತು ಸರಕಾರ ಎಂದು ಅರ್ಥಮಾಡಿಕೊಂಡೀತೋ! ಭಾರತೀಯ ರೈಲ್ವೇ ಎಷ್ಟೇ ಸುಧಾರಣೆ ಕಂಡೂ ಹಂಪಿ ವಿಷಯದಲ್ಲಿ ಅಂಥ ಉಪಯೋಗವಾಗಿಲ್ಲ. ಹೀಗಿದ್ದಾಗ ಹಂಪಿಗೆ ಯಾವ ಖುಷಿಗಾಗಿ ಪ್ರವಾಸಿಗರು ಬರುತ್ತಾರೆ? ಅದರಲ್ಲೂ ವಿದೇಶಿಗರು ಯಾಕಾಗಿ ಬಂದಾರು? ಹಂಪಿಯ ಮೂಲಸೌಕರ್ಯಕ್ಕೆ ಕಾಯಕಲ್ಪ ಒದಗಿಸಿ, ಸುರಕ್ಷತೆಯ ಭರವಸೆ ಇತ್ತು, ವಿಶ್ವಮಟ್ಟದಲ್ಲಿ ಪ್ರಚಾರ ಕೊಡದಿದ್ದರೆ ಹಂಪಿಯಂಥ ಹಂಪಿಯೂ ಕಾಲಕ್ರಮೇಣ ಮೂಲೆಗುಂಪಾಗುತ್ತದೆ. ಈ ಅಪಾಯವನ್ನು ಅರಿತು ಹಂಪಿಯನ್ನು ಉಳಿಸಿಕೊಳ್ಳುವತ್ತ ಯೋಚಿಸಬಹುದಾ?