ಪ್ರವಾಸಿ ಪ್ರಪಂಚ ಪತ್ರಿಕೆಯ ಮೂಲಕವೇ ಹಲವಾರು ಥರದ ಟೂರಿಸಂ ಬಗ್ಗೆ ತಿಳಿದುಕೊಂಡಿದ್ದೀರಿ. ಆದರೆ ಓವರ್ ಟೂರಿಸಂ ಅನ್ನೋ ಕೆಟಗರಿ ಬಗ್ಗೆ ಗೊತ್ತಾ ನಿಮಗೆ? ಇದ್ಯಾವುದು ಓವರ್ ಟೂರಿಸಂ? ಓವರ್ ಅಂದ್ರೆ ಮೇಲೆ. ಮ್ಯಾಲಕ್ ಹೋಗೋ ಪ್ರವಾಸವಾ? ಅಥವಾ ವಿಮಾನದಲ್ಲಿ ಹೋಗೋ ಪ್ರವಾಸಕ್ಕೆ ಓವರ್ ಟೂರಿಸಂ ಅಂತಾರಾ ಅಂತೆಲ್ಲ ತಲೆ ಕೆರ್ಕೋಬೇಡಿ. ಓವರ್ ಟೂರಿಸಂ ಅಂದ್ರೆ ಅದು ಅತಿಯಾದ ಪ್ರವಾಸೋದ್ಯಮ ಅಂತ. ಪ್ರವಾಸೋದ್ಯಮದಲ್ಲೂ ಅತಿ, ಇತಿ, ಮಿತಿ ಇವೆಲ್ಲ ಇರ್ತವಾ ಅಂತ ನೀವು ಅಚ್ಚರಿ ಪಡಬಹುದು. ಯೆಸ್. ಪ್ರವಾಸೋದ್ಯಮಕ್ಕೂ ಒಂದು ಲಿಮಿಟ್ ಎಂಬುದಿದೆ. ಒಂದು ಪ್ರವಾಸಿ ತಾಣ ಇಂತಿಷ್ಟು ಪ್ರವಾಸಿಗಳನ್ನು ತಾಳಿಕೊಳ್ಳಬಹುದು ಅಂತ ಇರುತ್ತೆ. ಅದಕ್ಕಿಂತ ಅತಿಯಾದಾಗ ಪ್ರವಾಸಿ ತಾಣ ನಾಶವಾಗುತ್ತದೆ. ನಿರ್ವಹಣೆ ಮಾಡಲಾಗದೇ ಗುಣಮಟ್ಟ ಕುಸಿಯುತ್ತದೆ. ಆತಿಥ್ಯ ಕ್ಷೇತ್ರಗಳಲ್ಲಿ ಅತಿಥಿಗಳಿಗೆ ಜಾಗವಿಲ್ಲದೆ ಪರದಾಟ ಶುರುವಾಗುತ್ತದೆ.

ಅತಿಯಾದ ಪ್ರವಾಸೋದ್ಯಮದಿಂದಲೂ ನಷ್ಟವಿದೆ. ಈಗ ಕೊಡಗು ಜಿಲ್ಲೆ ಆ ಅಪಾಯವನ್ನು ಎದುರಿಸುತ್ತಿದೆಯಂತೆ. ಕರ್ನಾಟಕದ ಸ್ಕಾಟ್ಲೆಂಡ್, ಸ್ವಿಟ್ಜರ್‌ಲ್ಯಾಂಡ್, ಊಟಿ ಅಂತೆಲ್ಲ ಪ್ರಚಾರಕ್ಕೊಳಗಾದ ಕೊಡಗು ಜಿಲ್ಲೆಗೆ ಈಗ ಅತಿಯಾದ ಪ್ರವಾಸೋದ್ಯಮವೇ ಶಾಪವಾಗುತ್ತಿದೆಯಂತೆ. ಸುಸ್ಥಿರ ಪ್ರವಾಸೋದ್ಯಮ ಅನ್ನೋ ಪರಿಕಲ್ಪನೆಗೆ ಧಕ್ಕೆ ಬರುವಂತಾಗುತ್ತಿದೆಯಂತೆ.. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಚಾರಣ ಕ್ರೇಜ್, ರೆಸಾರ್ಟ್, ಹೋಮ್ ಸ್ಟೇಗಳಿಗೆ ಹೋಗುವ ಕ್ರೇಜ್ ಇತ್ಯಾದಿಗಳಿಂದಾಗಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಓವರ್ ಟೂರಿಸಂ ಕಾಯಿಲೆಗೆ ತುತ್ತಾಗುತ್ತಿದೆಯಂತೆ. ಒಂದೆಡೆ ಪ್ರವಾಸಿಗರು ಬರುತ್ತಿಲ್ಲ ಎಂಬ ಕೊರಗು ನೋಡುವ ಹೊತ್ತಲ್ಲೇ ಇನ್ನೊಂದೆಡೆ ಕೊಡಗು ಪ್ರವಾಸಿಗರು ಅತಿಯಾಗುತ್ತಿದ್ದಾರೆ ಎನ್ನುತ್ತಿರುವುದು ವಿಚಿತ್ರ ಬೆಳವಣಿಗೆಯೇ ಸರಿ.

Kodagu a scenic beauty

ಹಾಗೆ ನೋಡಿದರೆ ಪ್ರಾಕೃತಿಕ ಪ್ರವಾಸಿ ತಾಣಗಳಿಗೆ ಓವರ್ ಟೂರಿಸಂ ಎಂಬುದು ಶಾಪ ಅಂತ ಒಪ್ಪಲೇಬೇಕು. ಬೇಜವಾಬ್ದಾರಿ ಪ್ರವಾಸಿಗರಿಂದ ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯದ ಹೆಚ್ಚಳ, ಕಿಡಿಗೇಡಿಗಳಿಂದ ಕಾಡ್ಗಿಚ್ಚು, ಕಾಡುಪ್ರಾಣಿಗಳ ಇರುವಿಕೆಗೆ ಧಕ್ಕೆ ಎಲ್ಲವೂ ಯೋಚಿಸಬೇಕಾಗಿರೋ ವಿಷಯವೇ. ಆದರೆ ಓವರ್ ಟೂರಿಸಂ ಹೆಸರಲ್ಲಿ ಪ್ರವಾಸೋದ್ಯಮವನ್ನು ಕುಗ್ಗಿಸುವ ಬದಲು, ಕಠಿಣ ನಿಯಮ ಮತ್ತು ಸೂಕ್ತ ಯೋಜನೆ ಮಾಡಿ ಸಿಬ್ಬಂದಿ ಮೂಲಕ ಕಾರ್ಯಗತಗೊಳಿಸಿದರೆ ಓವರ್ ಟೂರಿಸಂ ಎಂಬ ಸಮಸ್ಯೆ, ಸಮಸ್ಯೆ ಅನಿಸದೇ ಇರಬಹುದು. ಓವರ್ ಟೂರಿಸಂ ಕಡೆಗೆ ಗಮನ ವಹಿಸಿರುವ ಸರಕಾರ ಟೂರಲ್ಲಿ ಓವರ್ ಆಗಿ ಆಡುವವರ ಕಡೆಗೂ ಚೂರು ಗಮನವಹಿಸಬೇಕಿದೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರೇಮಶಾಸನ ಬರೆಯೋವ್ರನ್ನು, ಸೆಲ್ಫೀಗಾಗಿ ಹುಚ್ಚುತನ ಪ್ರಾಣಹಾನಿ ಮಾಡ್ಕೊಳೋವ್ರನ್ನು, ಪ್ರವಾಸಿ ತಾಣಗಳಲ್ಲಿ ಡ್ರಿಂಕ್ ಪಾರ್ಟಿ ಮಾಡಿ ಓವರ್ ಆಕ್ಟಿಂಗ್ ಮಾಡುವವರನ್ನು, ಕಾಡುಗಳ ಮಧ್ಯ ಸಿಗರೇಟ್ ಹಚ್ಚುವ ಕಿಡಿಗೇಡಿಗಳನ್ನು ತಡೆಯಬೇಕಿದೆ. ರೀಲ್ಸ್ ಹುಚ್ಚಿನಿಂದ ಪ್ರವಾಸಿ ತಾಣಗಳ ಘನತೆ ಹಾಳುಮಾಡುವವರನ್ನು ನಿಯಂತ್ರಿಸಬೇಕಿದೆ. ಎಷ್ಟು ಹೇಳಿದರೂ ಅರ್ಥ ಮಾಡಿಕೊಳ್ಳದೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕಿ ಪ್ರಕೃತಿ ಹಾಳುಮಾಡುವವರಿಗೆ ಪೆಟ್ಟುಕೊಡಬೇಕಿದೆ. ಅಪಾಯ ಓವರ್ ಟೂರಿಸಂಗಿಂತ ಟೂರಿನಲ್ಲಿ ಓವರಾಗಿ ಆಡುವವರದ್ದು. ಅಂಥವರನ್ನು ಮಟ್ಟಹಾಕಬೇಕಿದೆ.