ಜವಾಬ್ದಾರಿಯುತ ಪ್ರವಾಸೋದ್ಯಮ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಪದಪುಂಜ. ಭಾರತದ ಮಟ್ಟಿಗೆ ಅದಿನ್ನೂ ಪದಪುಂಜವಾಗಿಯಷ್ಟೇ ಉಳಿದಿದೆ ಎಂಬುದು ದುರಂತ. ಕರ್ನಾಟಕವೂ ಈ ಅಪವಾದಕ್ಕೆ ಹೊರತಾಗಿಲ್ಲ. ಹಾಗಂತ ಪೂರ್ತಿ ತಪ್ಪು ಸರ್ಕಾರಗಳದ್ದಾ ಅಂದ್ರೆ ಖಂಡಿತ ಅಲ್ಲ. ಬೇಜವಾಬ್ದಾರಿಯುತ ಪ್ರವಾಸೋದ್ಯಮದ ಸಿಂಹಪಾಲು ದೂಷಣೆ ಅನಾಗರಿಕ ಪ್ರವಾಸಿಗರಿಗೆ ಸಲ್ಲಬೇಕು. ಪ್ರವಾಸ ಹೋಗುವುದೇ ಜವಾಬ್ದಾರಿ ಮರೆಯೋಕೆ, ಮನಸ್ವೇಚ್ಛೆ ಮೆರೆಯೋಕೆ ಎಂದು ಭಾವಿಸಿರುವ ನಮ್ಮ ಪ್ರವಾಸಿಗರಲ್ಲಿ ಶಿಸ್ತು ಮತ್ತು ಜವಾಬ್ದಾರಿ ತುಂಬುವುದು ಸುಲಭದ ಮಾತಲ್ಲ.

Responsible tourism 1

ಪರಿಸರ, ಸಾಂಸ್ಕೃತಿಕ ಪರಂಪರೆ, ಸ್ಥಳೀಯ ಸಮುದಾಯಗಳ ರಕ್ಷಣೆ ಜೊತೆಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಜವಾಬ್ದಾರಿಯುತ ಪ್ರವಾಸೋದ್ಯಮ ಎನ್ನುವುದಾದರೆ ನಾವು ವಿದೇಶಗಳಿಗಿಂತ ಬಹಳ ಹಿಂದುಳಿದಿದ್ದೇವೆ. ಯುರೋಪ್, ಕೋಸ್ಟರಿಕಾ, ಆಸ್ಟ್ರೇಲಿಯಾದಂಥ ದೇಶಗಳಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆ. ನಮ್ಮಲ್ಲೇಕೆ ಆಗುತ್ತಿಲ್ಲ? ಮೊದಲಿಗೆ ಅಲ್ಲಿ ಸರಕಾರಗಳು ಪೂರಕ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿವೆ. ಗ್ರೀನ್ ಟೂರಿಸಂ ಯೋಜನೆಯು ಯುರೋಪಿಯನ್ ಒಕ್ಕೂಟದಲ್ಲಿ ಸಕ್ಸಸ್ ಆಗಿದೆ. ಕಾರ್ಬನ್ ತಟಸ್ಥತೆ, ತ್ಯಾಜ್ಯನಾಶ, ರಿನೀವೆಬಲ್ ಇಂಧನಗಳ ಬಳಕೆ ಇವೆಲ್ಲವೂ ಗೆದ್ದಿವೆ. ತಂತ್ರಜ್ಞಾನ ಬಳಕೆ, ಸ್ಥಳೀಯ ಸಮುದಾಯದ ಒಳಗೊಳ್ಳುವಿಕೆ, ಗೈಡ್ ನೇಮಕಾತಿ, ಸಂಸ್ಕೃತಿ ಮತ್ತು ಆರ್ಥಿಕತೆಯ ಅಳವಡಿಕೆ ಇವೆಲ್ಲವೂ ಸಾಧ್ಯವಾಗಿದೆ. ನಾವು ಸೋತಿರುವುದು ಇಲ್ಲಿ.

ಪ್ರತಿ ಪ್ರವಾಸಿ ತಾಣಕ್ಕೂ ಗೈಡ್, ಕಣ್ಗಾವಲು, ಭದ್ರತೆ ಇದ್ದಲ್ಲಿ ಪ್ರವಾಸಿಗರು ತಂತಾನೆ ಶಿಸ್ತಿಗೆ ಒಳಪಡುತ್ತಾರೆ. ಮೂಲಸೌಕರ್ಯಗಳು ಬಲವಾದಲ್ಲಿ, ಕಂಡಕಂಡ ಕಡೆ ಶೌಚ ಮಾಡುವುದಿಲ್ಲ. ಸ್ಮೋಕಿಂಗ್ ಜೋನ್ ಗಳ ನಿರ್ಮಾಣ, ನಿಯಮ ಉಲ್ಲಂಘನೆಗೆ ಶಿಕ್ಷೆ, ದಂಡ ಇವೆಲ್ಲವನ್ನೂ ತರುವುದು ಭಾರತದಲ್ಲಿ ಅತ್ಯಗತ್ಯ. ಶಿಸ್ತನ್ನು ಮತ್ತು ಜವಾಬ್ದಾರಿಯನ್ನು ನಮ್ಮ ಪ್ರವಾಸಿಗರಿಗೆ ಸತತವಾಗಿ ಅಭ್ಯಾಸ ಮಾಡಿಸಬೇಕಿದೆ. ಕೆಲವೊಮ್ಮೆ ಶಿಕ್ಷೆ ಹಾಗೂ ದಂಡದ ಭಯಕ್ಕೆ ಒಳಪಡಿಸಿಯಾದರೂ ದಾರಿಗೆ ತರಬೇಕಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಸೈಕಲ್ ಟೂರ್, ಗ್ರೂಪ್ ಟೂರ್ ಆಯೋಜನೆ ಹೆಚ್ಚಬೇಕಿದೆ.

ಸಾರ್ವಜನಿಕ ಸಾರಿಗೆಯನ್ನು ಕಡ್ಡಾಯವಾಗಿಸಬೇಕಿದೆ. ಹಾಗೆ ಕಡ್ಡಾಯಗೊಳಿಸಬೇಕು ಅಂದರೆ ಸೌಲಭ್ಯ ಮತ್ತು ಸೌಕರ್ಯ ಉತ್ತಮಗೊಳ್ಳಬೇಕಿದೆ. ಕರ್ನಾಟಕದ 2024-29ರ ಪ್ರವಾಸೋದ್ಯಮ ನೀತಿಯೇನೋ ಅದ್ಭುತವಾಗಿದೆ. ಆದರೆ ಅನುಷ್ಠಾನಕ್ಕೆ ಇಚ್ಛಾಶಕ್ತಿಯ ಅಗತ್ಯವಿದೆ. ಶುಚಿತ್ವ, ಮೂಲಸೌಕರ್ಯ ಮತ್ತು ಜನಜಾಗೃತಿಯ ಕೊರತೆ ನೀಗಬೇಕಿದೆ.

Responsible tourism (1)

ತ್ಯಾಜ್ಯ ನಿರ್ವಹಣೆಯಲ್ಲಿ ಇನ್ನೂ ಸ್ಟ್ರಾಂಗ್ ಆಗಿ ರೂಪುಗೊಳುವುದು ಅವಶ್ಯವಿದೆ. ಕರ್ನಾಟಕದ "ಒಂದು ಜಿಲ್ಲೆ ಒಂದು ತಾಣ" ಯೋಜನೆಯು ಸ್ಥಳೀಯ ತಾಣಗಳನ್ನು ಉತ್ತೇಜಿಸುತ್ತದೆ, ಆದರೆ ಇದಕ್ಕೆ ಬಲವಾದ ಜನಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ. ಕೆಲ ವಿದೇಶಗಳನ್ನು ಮಾದರಿಯಾಗಿ ಇಟ್ಟುಕೊಂಡು ಮುನ್ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳು ಇಂದಿನ ಡಿಜಿಟಲ್ ಹಾಗೂ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹೆಚ್ಚಾಗಬೇಕು. ವಿಕಸಿತ ಭಾರತ ಎಂಬ ಕನಸು ನನಸಾಗಲು ಜವಾಬ್ದಾರಿಯುತ ಪ್ರವಾಸೋದ್ಯಮ ಕೂಡ ತನ್ನ ಕೊಡುಗೆ ನೀಡಬೇಕಿರುವುದು ಇಂದಿನ ತುರ್ತು.