ವಿಯೆಟ್ನಾಂಗೆ ಹೋಗುವ ಪ್ರವಾಸಿಗರನ್ನು ಮೆಕಾಂಗ್ ಡೆಲ್ಟಾ ಎಂಬ ಜಾಗಕ್ಕೆ ಕರೆದೊಯ್ಯಲಾಗುತ್ತದೆ. ಅದೊಂದು ಅದ್ಭುತ ಜಾಗ. ಪ್ರವಾಸಿಗರು ಮಿಸ್ ಮಾಡಿಕೊಳ್ಳುವಂತಿಲ್ಲ ಎಂಬ ಬಿಲ್ಡಪ್ ಕೊಡಲಾಗುತ್ತದೆ. ಭಾರತೀಯ ಪ್ರವಾಸಿಗರು ದಾರಿಯುದ್ದಕ್ಕೂ ಕನಸು ಕಾಣಲಾರಂಭಿಸುತ್ತಾರೆ. ಮೆಕಾಂಗ್ ಡೆಲ್ಟಾ ತಲುಪಿದ ಕೂಡಲೇ ಅಲ್ಲಿ ಟಿಕೆಟ್ ಪಡೆದು ಒಂದು ಲಾಂಚ್ ಹತ್ತಿಸಲಾಗುತ್ತದೆ. ಗಬ್ಬೆದ್ದಿರುವ ನೀರಿನಲ್ಲಿ ಅರ್ಧ ಕಿಲೋಮೀಟರ್ ಸುತ್ತಿಸಿ ಬರುತ್ತಾರೆ. ಒಂದು ಸಿಹಿ ಎಳನೀರು ನೀಡುತ್ತಾರೆ. ಅಲ್ಲಿಂದ ವಾಪಸ್ ದಡಕ್ಕೆ ಬಂದರೆ ಅಲ್ಲಿ ಅಲ್ಲಿನ ಸಾಂಪ್ರದಾಯಿಕ ಕ್ಯಾಂಟೀನ್ ನಲ್ಲಿ ಒಂದು ಪಾನೀಯ, ನಿಂಬೆ, ನೆಲ್ಲಿಯ ತುಂಡು ಎಲ್ಲ ತಿನ್ನಿಸಿ, ಅಮೃತ ನೀಡಿದೆವು ಎಂಬಂತಾಡುತ್ತಾರೆ. ಆನಂತರ ಅಲ್ಲಿಯ ಪ್ರತಿಭೆಗಳು, ಅಲ್ಲಿನ ಸಾಂಸ್ಕೃತಿಕ ಗೀತೆ ಹಾಡುತ್ತಾರೆ. ನಾವದಕ್ಕೆ ತಲೆದೂಗಬೇಕೆಂದು ನಿರೀಕ್ಷಿಸುತ್ತಾರೆ. ಆನಂತರ ಮತ್ತೊಮ್ಮೆ ಕೊಳಕು ನೀರಿನಲ್ಲಿ ಹುಟ್ಟು ಹಾಕುತ್ತಾ ದೋಣಿಯಲ್ಲಿ ಚಿಕ್ಕದೊಂದು ರೌಂಡ್ ಹೊಡೆಸುತ್ತಾರೆ. ಭಾರತೀಯ ಪ್ರವಾಸಿಗರು ವಾವ್ ಎನ್ನುತ್ತಾರೆ. ಆದರೆ ಅಸಲಿಗೆ ಅದು ವಾವ್ ಅನಿಸುವಷ್ಟು ಅಪರೂಪದ ವಿಷಯವಾಗಿತ್ತಾ? ಖಂಡಿತ ಇಲ್ಲ.

Mekong Delta

ಅದಕ್ಕಿಂತ ಅದ್ಭುತವಾದ ಶರಾವತಿ ಹಿನ್ನೀರು ನಮ್ಮಲ್ಲಿದೆ, ಲಾಂಚ್ ಇದೆ. ಅಲ್ಲೊಂದು ದೇವಾಲಯವಿದೆ. ಅಲ್ಲೊಂದು ಹಳ್ಳಿಯಿದೆ. ಸಂಸ್ಕೃತಿ ಇದೆ. ನಾವು ವಾವ್ ಅನಿಸುವಂತೆ ಮಾಡಲೇ ಇಲ್ಲ. ಈ ವಿಷಯ ಹೇಳಬೇಕೆನಿಸಿದ್ದು ಉತ್ತರಪ್ರದೇಶ ಮುಖ್ಯಮಂತ್ರಿಗಳ ಪ್ರವಾಸೋದ್ಯಮ ಯೋಜನೆಯ ಒಂದು ಅಪೂರ್ವ ಹೆಜ್ಜೆಯ ಬಗ್ಗೆ ಓದಿದಾಗ. ಯೋಗಿ ಆದಿತ್ಯನಾಥ್ ಇದೀಗ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸುವ ಅದ್ಭುತ ಪರಿಕಲ್ಪನೆಗೆ ಅಡಿಗಲ್ಲು ಇಟ್ಟಿದ್ದಾರೆ. ಗ್ರಾಮಗಳನ್ನು ಸಾಂಸ್ಕೃತಿಕ ಕೇಂದ್ರವಾಗಿಸುವ, ಪ್ರವಾಸಿಗರಿಗೆ ಗ್ರಾಮೀಣ ಜೀವನದ ನೈಜ ಅನುಭವ ನೀಡುವ ಜತೆಗೆ ಕೃಷಿ ಪ್ರವಾಸೋದ್ಯಮವನ್ನೂ ಉತ್ತೇಜಿಸುತ್ತಾ, ರೈತರಿಗೆ ಹಾಗೂ ಗ್ರಾಮೀಣ ಸಮುದಾಯಗಳಿಗೆ ಆದಾಯದ ಅವಕಾಶ ಸೃಷ್ಟಿಸುತ್ತಿದ್ದಾರೆ ಯೋಗಿ.

ವಿಯೆಟ್ನಾಂ ಮಾಡಿರುವುದು ಇದನ್ನೇ ಅಲ್ಲವೇ? ತಮ್ಮ ಹಳ್ಳಿಗಳಿಗೆ ಪ್ರವಾಸೋದ್ಯಮದ ಸ್ಪರ್ಶ ಕೊಟ್ಟಿರುವುದು ಅಷ್ಟೆ. ಯೋಗೀಜಿಯ ಈ ಪರಿಕಲ್ಪನೆ ಇಡೀ ದೇಶಕ್ಕೆ ಪಸರಿಸುವುದು ಪ್ರವಾಸೋದ್ಯಮ ದೃಷ್ಟಿಕೋನದಿಂದ ಬಹುದೊಡ್ಡ ಕ್ರಾಂತಿಕಾರಿ ವಿಷಯ ಆಗಬಲ್ಲದು. ಯೋಗಿ ಯೋಜನೆ ಪ್ರಕಾರ ಯುಪಿಯ ಗ್ರಾಮಗಳಲ್ಲಿ ಹೋಮ್ ಸ್ಟೇ ಮಾದರಿಯಲ್ಲಿ ಫಾರ್ಮ್ ಸ್ಟೇ ಗಳನ್ನು ನಿರ್ಮಿಸಿ, ಪ್ರವಾಸಿಗರಿಗೆ ಎಲ್ಲ ಸೌಕರ್ಯ ನೀಡಲಾಗುತ್ತದೆ. ಪ್ರವಾಸಿಗರಿಂದ ಕೃಷಿ, ತೋಟಗಾರಿಕೆ, ಡೈರಿ ಕೆಲಸ, ಗ್ರಾಮೀಣ ಅಡುಗೆ ಎಲ್ಲವನ್ನೂ ಮಾಡಿಸಲಾಗುತ್ತದೆ. ಪ್ರವಾಸಿಗರು ಹಾಲು ಹಿಂಡುತ್ತಾರೆ, ಬೆಳೆ ಕೊಯ್ಲು, ಬಿತ್ತನೆ ಎಲ್ಲವನ್ನೂ ಮಾಡುತ್ತಾರೆ. ರೈತರ ಕುಟುಂಬದೊಂದಿಗೆ ಬೆರೆಯುತ್ತಾರೆ. ಅವರ ಜೀವನಶೈಲಿ, ಸಂಸ್ಕೃತಿ ತಿಳಿದುಕೊಳ್ಳುತ್ತಾರೆ. ರೈತರ ಬದುಕು ಅರ್ಥವಾಗುತ್ತದೆ. ಎಂಥ ಅದ್ಭುತ ಕಾನ್ಸೆಪ್ಟ್ ಇದು! ಖಾಸಗಿಯಾಗಿ ಕೆಲವು ಹೋಮ್ ಸ್ಟೇಗಳು ಟೂರ್ ಆಪರೇಟರ್ ಗಳು ಅಪರೂಪಕ್ಕೆ ಇಂಥ ಟ್ರಿಪ್ ಆಯೋಜನೆ ಮಾಡುವುದುಂಟು.

yogi adityanath

ಮಳೆಹಬ್ಬದ ಹೆಸರಲ್ಲಿ ಕರ್ನಾಟಕದಲ್ಲೂ ಇಂಥ ಪರಿಕಲ್ಪನೆ ಜೀವತಳೆದು ಅಸುನೀಗಿದ್ದಿದೆ. ಅದರೆ ಸರಕಾರವೇ ಮುಂದೆನಿಂತು ಇಂಥದ್ದೊಂದು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಎಂಥ ದೊಡ್ಡ ಬದಲಾವಣೆ ಆದೀತು. ವಿಯೆಟ್ನಾಂ ಮೀರಿಸುವಂತೆ ಗ್ರಾಮೀಣ ಪ್ರವಾಸೋದ್ಯಮವನ್ನು ಗ್ಲೋಬಲ್ ಲೆವೆಲ್ ನಲ್ಲಿ ಎತ್ತಿ ನಿಲ್ಲಿಸಬಹುದು. ಹಳ್ಳಿಯೊಂದಕ್ಕೆ ವಿದೇಶಿಗರನ್ನು ಕರೆದೊಯ್ದು ಅಲ್ಲಿನ ಸ್ಥಳೀಯ ಆಹಾರ ನೀಡಿ, ಸಂಸ್ಕೃತಿಯ ಪರಿಚಯ ಮಾಡಿ, ಸುತ್ತಲಿನ ದೇವಸ್ಥಾನಗಳು, ಪ್ರಕೃತಿಯನ್ನು ರುಚಿಕಟ್ಟಾಗಿ ಪರಿಚಯಿಸಿಕೊಟ್ಟರೆ ವಿದೇಶಿಗರು ಸಂತುಷ್ಟಗೊಳ್ಳದೆ ಇರುವರೇ? ಮೊದಲಿಗೆ ನಮ್ಮ ಹಿತ್ತಲಿನ ಬಗ್ಗೆ ಕೀಳರಿಮೆ ತಾತ್ಸಾರ ತೊಲಗಬೇಕು. ನಮಗೆ ನಮ್ಮ ದೇಶ ಯಾರಿಗಿಂತ ಕಮ್ಮಿ ಇಲ್ಲ ಅನಿಸಬೇಕು. ಸರಕಾರವೂ ಅಂಥ ಮನಸ್ಥಿತಿಯೊಂದಿಗೆ ಪ್ರವಾಸೋದ್ಯಮವನ್ನು ನೋಡಬೇಕು. ಆಗ ಭಾರತ ಪ್ರವಾಸೋದ್ಯಮ ವಿದೇಶಗಳೊಂದಿಗೆ ಸ್ಪರ್ಧೆ ಗೆಲ್ಲಬಹುದು.