Friday, October 10, 2025
Friday, October 10, 2025

ಪ್ರವಾಸೋದ್ಯಮದಲ್ಲಿ ಉದ್ಯೋಗವಿದೆ ಆರಿಸಿಕೊಳ್ಳಿ!

ಇತ್ತೀಚೆಗೆ ಎಕನಾಮಿಕ್ ಟೈಮ್ಸ್‌ನ ಟ್ರಾವೆಲ್ ವರ್ಲ್ಡ್ ಡಾಟ್ ಕಾಮ್ ಒಂದು ವರದಿಯನ್ನು ನೀಡಿತ್ತು. ಆ ವರದಿಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಂಬತ್ತೊಂದು ದಶಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. ಆದರೆ ಹಾಗೆ ಸೃಷ್ಟಿಯಾದ ಉದ್ಯೋಗಕ್ಕೆ ಉದ್ಯೋಗಿಗಳನ್ನು ತುಂಬಿಸುವುದು ಹರಸಾಹಸವಾಗಿ ಉಳಿಯಲಿದೆ. ಅರ್ಥಾತ್, ಸುಮಾರು ನಲವತ್ಮೂರು ದಶಲಕ್ಷ ಉದ್ಯೋಗಗಳು ಕೆಲಸಗಾರರ ಕೊರತೆಯಿಂದ ಖಾಲಿ ಉಳಿಯಲಿವೆ ಅಂತ!

ಇತ್ತೀಚೆಗೆ ಎಕನಾಮಿಕ್ ಟೈಮ್ಸ್‌ನ ಟ್ರಾವೆಲ್ ವರ್ಲ್ಡ್ ಡಾಟ್ ಕಾಮ್ ಒಂದು ವರದಿಯನ್ನು ನೀಡಿತ್ತು. ಆ ವರದಿಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಂಬತ್ತೊಂದು ದಶಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. ಆದರೆ ಹಾಗೆ ಸೃಷ್ಟಿಯಾದ ಉದ್ಯೋಗಕ್ಕೆ ಉದ್ಯೋಗಿಗಳನ್ನು ತುಂಬಿಸುವುದು ಹರಸಾಹಸವಾಗಿ ಉಳಿಯಲಿದೆ. ಅರ್ಥಾತ್, ಸುಮಾರು ನಲವತ್ಮೂರು ದಶಲಕ್ಷ ಉದ್ಯೋಗಗಳು ಕೆಲಸಗಾರರ ಕೊರತೆಯಿಂದ ಖಾಲಿ ಉಳಿಯಲಿವೆ ಅಂತ! ಮೇಲ್ನೋಟಕ್ಕೆ ಇದು ಮಹಾನ್ ಸುದ್ದಿ ಅನಿಸುವುದಿಲ್ಲ. ಆದರೆ ನಿಜಕ್ಕೂ ಇದು ಗಂಭೀರ ವಿಚಾರ. ಪ್ರವಾಸೋದ್ಯಮ ಇಷ್ಟೊಂದು ಉದ್ಯೋಗ ಸೃಷ್ಟಿಸುತ್ತದೆ ಎಂಬುದು ಸಂತಸ ಹಾಗೂ ಅಚ್ಚರಿಯ ಸುದ್ದಿಯಾದರೆ, ಅದರಲ್ಲಿ ಅರ್ಧಕ್ಕರ್ಧ ಉದ್ಯೋಗಗಳು ಖಾಲಿ ಉಳಿಯುವ ಭೀತಿ ಎದುರಾಗಿರೋದು ಶಾಕಿಂಗ್ ವಿಚಾರ.

Tourism employment

ಪ್ರವಾಸೋದ್ಯಮ ಕೇವಲ ಮನರಂಜನಾ ಕ್ಷೇತ್ರವಲ್ಲ. ಅದು ದೇಶದ ಎಕಾನಮಿಯನ್ನು ನಿರ್ಧರಿಸುವ ಅಂಶಗಳಲ್ಲೊಂದು. ಪ್ರವಾಸೋದ್ಯಮದಿಂದ ಆಗುವ ಉದ್ಯೋಗ ಸೃಷ್ಟಿ ಎಷ್ಟು ಎಂಬುದು ಇಂಥ ವರದಿಯಿಂದಲೇ ಅರ್ಥವಾಗೋದು. ಕಳೆದ ವರ್ಷದ ಅಂತ್ಯದಲ್ಲಿ ವಿಶ್ವ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದ್ದ ಉದ್ಯೋಗ ಸಂಖ್ಯೆ ಬರೋಬ್ಬರಿ 357 ಮಿಲಿಯನ್. ಈ ವರ್ಷ ಅದು ಏರಿಕೆಯಾಗಿರುವುದು 371 ಮಿಲಿಯನ್‌ಗೆ. ವಿಶ್ವದಲ್ಲಿ ಪ್ರತಿ ಹತ್ತು ಉದ್ಯೋಗಗಳಲ್ಲಿ ಒಂದು ಉದ್ಯೋಗ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಿದ್ದು ಎಂದು ವರದಿ ಹೇಳುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಮೂರು ಉದ್ಯೋಗದಲ್ಲಿ ಒಂದು ಉದ್ಯೋಗ ಪ್ರವಾಸೋದ್ಯಮ ಕ್ಷೇತ್ರದ್ದಾಗಿರುತ್ತೆ ಎಂಬುದು ಅಂದಾಜು. ಪ್ರವಾಸೋದ್ಯಮ ಎಷ್ಟು ಸೀರಿಯಸ್ ಎಕಾನಮಿ ಎಂಬುದು ಅರ್ಥವಾಗೋಕೆ ಇದಕ್ಕಿಂತ ಬೇರೆ ಅಂಕಿ ಅಂಶ ಬೇಕಾ?

ಭಾರತದಲ್ಲೂ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ಲಕ್ಷಾಂತರ ಉದ್ಯೋಗಗಳಿವೆ. ಆದರೆ ಇಲ್ಲಿಯೂ ಅದೇ ಸಮಸ್ಯೆ.ಉದ್ಯೋಗಳಿದ್ದಷ್ಟು ಅದನ್ನು ಆರಿಸಿಕೊಳ್ಳುವ ಉದ್ಯೋಗಿಗಳಿಲ್ಲ. ಕಾರಣ ಇಲ್ಲಿನ ಅನಿಶ್ಚಿತತೆ ಮತ್ತು ಅರೆಕಾಸಿನ ಮಜ್ಜಿಗೆಗೂ ಸಾಲದ ವೇತನ. ಹೀಗಾಗಿ ಯಾರೂ ಪ್ರವಾಸೋದ್ಯಮ ಸಂಬಂಧಿ ಉದ್ಯೋಗಳಿಗೆ ಬರುತ್ತಿಲ್ಲ ಎನ್ನುತ್ತದೆ ವರದಿ. ಸುಮಾರು ಹನ್ನೊಂದು ದಶಲಕ್ಷ ಉದ್ಯೋಗಗಳು ಇಲ್ಲಿ ಖಾಲಿ ಬೀಳಲಿವೆ ಎಂದು ಶಾಕಿಂಗ್ ರಿಪೋರ್ಟ್ ಹೇಳ್ತಾ ಇದೆ. ಇಷ್ಟೊಂದು ಪ್ರವಾಸಿ ತಾಣಗಳಿರುವ ಭಾರತದಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗಿಗಳಾಗೋಕೆ ಯಾಕೆ ಉತ್ಸುಕತೆ ತೋರುತ್ತಿಲ್ಲ? ಪ್ರವಾಸೋದ್ಯಮದಲ್ಲಿ ಇರುವ ಉದ್ಯೋಗಗಳೆಲ್ಲವೂ ಮನುಷ್ಯರು ಮಾಡುವಂಥದ್ದು. ಯಂತ್ರಗಳಿಂದ ರೀಪ್ಲೇಸ್ ಮಾಡಲಾಗದ್ದು. ಹೀಗಿದ್ದೂ ಇಲ್ಲಿ ಉದ್ಯೋಗಿಗಳ ಕೊರತೆ ಎದುರಾಗಿರುವುದು ವಾಸ್ತವ. ಗೈಡ್‌ಗಳು, ಹೊಟೇಲ್ ಸೇವೆ, ಸಾರಿಗೆ, ಕಸ್ಟಮರ್ ಕೇರ್ ಇವೆಲ್ಲಕ್ಕೂ ಇಂದಿಗೂ ಮನುಷ್ಯರ ಅಗತ್ಯವೇ ಇದೆ. ಆದರೆ ಯಾಕೆ ಇತ್ತ ಒಲವು ತೋರುತ್ತಿಲ್ಲ? ಭಾರತದಲ್ಲಿ ಹೀಗಾಗಲು ಕಾರಣ ಉದ್ಯೋಗದ ಅನಿಶ್ಚಿತತೆ ಮತ್ತು ಅನಿಶ್ಚಿತ ಆದಾಯ.

ಪ್ರವಾಸೋದ್ಯಮ ಬಾಹ್ಯ ಅಂಶಗಳಿಂದ ಹೆಚ್ಚು ಪ್ರಭಾವಿತವಾಗುವ ಕ್ಷೇತ್ರ. ಕೋವಿಡ್-19 ಮಹಾಮಾರಿ, ಯುದ್ಧ–ರಾಜಕೀಯ ಅಶಾಂತಿ, ಹವಾಮಾನ ಬದಲಾವಣೆ—ಇವು ಎಲ್ಲವೂ ಒಂದೇ ಹೊಡೆತದಲ್ಲಿ ಉದ್ಯೋಗಕ್ಕೆ ಕೊಡಲಿ ಏಟು ನೀಡುತ್ತವೆ. ಇದನ್ನು ನಂಬಿ ಹೇಗೆ ತಾನೇ ಉದ್ಯೋಗಕ್ಕೆ ಸೇರುವುದು? ಈ ಅಭದ್ರತೆಗೆ ಉತ್ತರ ಸಿಗಬೇಕು. ಅಭಯ ಸಿಗಬೇಕು. ಆಗ ಉದ್ಯೋಗಗಳು ಭರ್ತಿಯಾಗುತ್ತವೆ. ಭಾರತವು ಯುವಶಕ್ತಿಯ ದೇಶ. ಈ ಶಕ್ತಿಯನ್ನು ಸರಿಯಾದ ದಾರಿಗೆ ತರುವ ಹೊಣೆಗಾರಿಕೆ ಸರ್ಕಾರ, ಉದ್ಯಮಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ. ಪ್ರವಾಸೋದ್ಯಮ ಶಿಕ್ಷಣ, ವೃತ್ತಿಪರ ತರಬೇತಿ, ಗ್ರಾಮೀಣ ಪ್ರವಾಸೋದ್ಯಮ ಉತ್ತೇಜನ ಇವೆಲ್ಲವೂ ಆದಲ್ಲಿ ಉದ್ಯೋಗಗಳತ್ತ ಆಕರ್ಷಣೆ ಮೂಡುತ್ತದೆ.

Hampi Utsav

ಕರ್ನಾಟಕದ ದೃಷ್ಟಿಯಿಂದ ನೋಡಿದರೆ, ಮೈಸೂರು ದಸರಾ, ಹಂಪಿ ಉತ್ಸವ, ಕೋಸ್ಟಲ್ ಕರ್ನಾಟಕದ ಕಡಲು ತೀರಗಳು, ಮಲೆನಾಡಿನ ಹಸಿರು ಕಣಿವೆಗಳು, ಇವೆಲ್ಲ ಪ್ರವಾಸೋದ್ಯಮದ ಶಕ್ತಿ ಕೇಂದ್ರಗಳಾಗಿವೆ. ಹಾಗಂತ ಪ್ರಕೃತಿಯೇ ತನ್ನ ಕಥೆಹೇಳಿಕೊಳ್ಳಬಲ್ಲದೇ? ಸೂಕ್ತ ತರಬೇತಿ ಪಡೆದ ಯುವಕರು ಮಾರ್ಗದರ್ಶಕರಾಗಬೇಕು. ಅಂತಾರಾಷ್ಟ್ರೀಯ ಮಟ್ಟದ ಹೊಟೇಲ್ ನಿರ್ವಹಣೆಯ ಕೌಶಲ್ಯಗಳಿಸಬೇಕು. ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಬೇಕು. ಪ್ರವಾಸೋದ್ಯಮವು ಭವಿಷ್ಯದಲ್ಲಿ ಆರ್ಥಿಕತೆಗೆ ಜೀವ ನೀಡುವ ಪ್ರಮುಖ ಕ್ಷೇತ್ರ. ಆದರೆ ಕೆಲಸಗಾರರ ಕೊರತೆ ಎಂಬ ಸಮಸ್ಯೆಗೆ ಈ ತಕ್ಷಣ ಪರಿಹಾರ ಕಂಡುಕೊಳ್ಳಬೇಕಿದೆ. ಭಾರತ ಅದರಲ್ಲೂ ಕರ್ನಾಟಕ ಪ್ರವಾಸೋದ್ಯಮವನ್ನು ಉದ್ಯೋಗ ಸೃಷ್ಟಿಯ ಶಕ್ತಿ ಕೇಂದ್ರವನ್ನಾಗಿ ರೂಪಿಸುವಂತಾಗಬೇಕು. ಜಾಗತಿಕ ಮಟ್ಟದಲ್ಲಿಸೃಷ್ಟಿಯಾಗುವ ಮಿಲಿಯನ್ ಗಟ್ಲೆ ಉದ್ಯೋಗಗಳಿಗೆ ಭಾರತೀಯರು ಭರ್ತಿಯಾಗುವಂತಾಗಬೇಕು. ಅದು ಪ್ರವಾಸೋದ್ಯಮದ ಗೆಲುವು. ಸಾರ್ಥಕತೆ.

Naveen Sagar

Naveen Sagar

Travel blogger and adventurer passionate about exploring new cultures and sharing travel experiences.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!