ನೊಬೆಲ್ ಶಾಂತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೊನಾಲ್ಡ್ ಟ್ರಂಪ್ ಈಗ ವೀಸಾಭಾಗ್ಯ ಯೋಜನೆ ಜಾರಿಗೆ ತರ್ತಿದ್ದಾನಂತೆ. ತಮ್ಮೊಂದಿಗೆ ಚೆನ್ನಾಗಿರುವ ನಲವತ್ತೆರಡು ದೇಶಗಳಿಗೆ ವೀಸಾ ಇಲ್ಲದೇ ಅಮೆರಿಕಗೆ ಹಾರಿಬರಲು ಅವಕಾಶ ನೀಡಿ ಮಹಾತ್ಮಾ ಅನಿಸಿಕೊಳ್ಳಲು ಹೊರಟಿದ್ದಾನೆ. ಮೂರುತಿಂಗಳ ಮಟ್ಟಿಗೆ ಪ್ರವಾಸ ಅಥವಾ ವ್ಯಾಪಾರಕ್ಕಾಗಿ ಬರೋ ಕೆಲವು ದೇಶಗಳ ಪ್ರಜೆಗಳಿಗೆ ವೀಸಾ ಅಗತ್ಯವೇ ಇಲ್ಲ. ಆದರೆ ಕಂಡಿಷನ್ಸ್ ಅಪ್ಲೈ ಅಂದಿದ್ದಾನೆ ಟ್ರಂಪ್. ಕಂಡಿಷನ್ ಏನಪ್ಪಾ ಅಂದ್ರೆ ಐದು ವರ್ಷದ ಸೋಷಿಯಲ್ ಮೀಡಿಯಾ ಹಿಸ್ಟರಿ ಶೇರ್ ಮಾಡಬೇಕಂತೆ! ಇದಪ್ಪಾ ವರಸೆ. ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಹಳೇ ಟ್ರಾವೆಲ್ ಡೀಟೇಲ್ಸ್, ಕ್ರಿಮಿನಲ್ ರೆಕಾರ್ಡ್ ಹಿಸ್ಟರಿ ಇಂಥವನ್ನೆಲ್ಲ ಚೆಕ್ ಮಾಡೋ ಬದಲು ಟ್ರಂಪ್ ಸೋಷಿಯಲ್ ಮೀಡಿಯಾ ಮತ್ತು ಇಮೇಲ್‌ಗಳ ಇತಿಹಾಸ ಕಟ್ಟಿಕೊಡಿ ಅಂತ ಕೇಳ್ತಿದ್ದಾನೆ. ಮೂರು ತಿಂಗಳು ಹೋಗಿಬರೋದಕ್ಕೆ ಐದು ವರ್ಷದ ಸೋಷಿಯಲ್ ಮೀಡಿಯಾ ಹಿಸ್ಟರಿ ಯಾಕೆ? ಅವನ ನಿಲುವು, ಸಿದ್ಧಾಂತ, ಅಮೆರಿಕ ಬಗ್ಗೆ ಇರೋ ಅಭಿಪ್ರಾಯ, ಶತ್ರು/ಮಿತ್ರ ದೇಶಗಳ ಜತೆಗಿನ ಸಂಬಂಧ ಇದೆಲ್ಲವನ್ನೂ ಅಳೆದು ತೂಗಿ ಇವರನ್ನು ವೀಸಾ ಇಲ್ಲದೇ ಒಳಗೆ ಬಿಟ್ಕೋಬೇಕೋ ಬಿಟ್ಕೋಬಾರ್ದೋ ಅಂತ ತೀರ್ಮಾನ ಮಾಡ್ತಾನಂತೆ! ಒಂದುವೇಳೆ ಭಾರತ ಆ ನಲವತ್ತೆರಡು ದೇಶಗಳ ಪಟ್ಟಿಯಲ್ಲಿದ್ದಿದ್ರೆ, ಭಾರತದವರು ಸೋಷಿಯಲ್ ಮೀಡಿಯಾ ಹಿಸ್ಟರಿ ಕೊಡಬೇಕು ಅಂತ ಆಗಿದ್ರೆ ಹೇಗಿರ್ತಿತ್ತು? ಭಾರತದ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸಂಖ್ಯೆ ಭಾರತದ ಜನಸಂಖ್ಯೆಗಿಂತ ಜಾಸ್ತಿ ಇದೆ. ಯಾಕಂದ್ರೆ ಒಬ್ಬೊಬ್ಬರದ್ದೂ ಹತ್ತತ್ತು ಫೇಕ್ ಅಕೌಂಟ್‌ಗಳಿರ್ತವೆ. ನಮ್ಮ ದೇಶದ ಜನ ಬ್ಯಾಂಕ್ ಅಕೌಂಟ್ ಜತೆಗೆ ಪಾಸ್‌ವರ್ಡು, ಪಿನ್ ನಂಬರ್ ಬೇಕಾದ್ರೂ ಕೊಡ್ತಾರೆ. ಆದರೆ ಸೋಷಿಯಲ್ ಮೀಡಿಯಾ ಡೀಟೇಲ್ಸ್ ಕೊಡೋದಿಲ್ಲ. ಇಷ್ಟಕ್ಕೂ ಕೀ ವರ್ಡ್ ಹಾಕಿ ಪೋಸ್ಟ್‌ಗಳನ್ನು ಡಿಲೀಟ್ ಮಾಡೋದೇನು ಕಷ್ಟದ ವಿಷಯಾನಾ? ಇದರಿಂದ ಅದ್ಯಾವ ಮಹಾಮಾಹಿತಿ ಸಿಕ್ಕುಬಿಡತ್ತೋ ಟ್ರಂಪೇ ಹೇಳ್ಬೇಕು. ಈ ಜನರೇಶನ್‌ನವರು ತುಘಲಕ್‌ನನ್ನು ನೋಡಿರಲಿಲ್ಲ. ಆತ ಅಮೆರಿಕದಲ್ಲಿ ಟ್ರಂಪ್ ಅಗಿ ಹುಟ್ಟಿದ್ದಾನೆಂಬ ಸತ್ಯ ಇದೀಗ ಬಹಿರಂಗವಾದಂತಾಗಿದೆ. ಸದ್ಯ ಮೆಸ್ಸೆಂಜರ್, ವಾಟ್ಸಾಪ್ ಚಾಟ್ ಹಿಸ್ಟರಿ ಕೇಳಿಲ್ಲ ಈ ಪುಣ್ಯಾತ್ಮ. ಇಷ್ಟಕ್ಕೂ ಇವ್ನು ಕೇಳಿದ ಅಂತ ಕೊಡೋವ್ರ್ ಯಾರು? ಅಷ್ಟೂ ಬೇಕೇ ಬೇಕಂದ್ರೆ ಹೊಸ ಅಕೌಂಟ್ ಓಪನ್ ಮಾಡಿ ಕಳಿಸಿದ್ರಾಯ್ತು. ಏನಂತೀರಿ?