Thursday, June 12, 2025
Thursday, June 12, 2025

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ಗ್ರಂಥಾಲಯದೊಳಗೆ powerpoint ಸೌಕರ್ಯದಿಂದ ಕೂಡಿದ ಒಂದು ಪ್ರೋಗ್ರಾಮ್ ಹಾಲ್. ಇದು ಸದಾ ದಿನಪೂರ್ತಿ ಒಂದಲ್ಲ ಒಂದು ಚಟುವಟಿಕೆಯಿಂದ ಸಂಪನ್ನವಾಗಿರುತ್ತದೆ . ಎರಡು ವರ್ಷದ ಮಕ್ಕಳಿಂದ ತೊಡಗಿ ಮುದುಕರ ವರೆಗಿನವರಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.

ಗ್ರಂಥಾಲಯ(library)ವನ್ನು ಪ್ರವೇಸುತ್ತಿದ್ದಂತೆ ನನಗೊಂದು ಅಚ್ಚರಿ ಕಾದಿತ್ತು. ಚಿಕ್ಕ ಮಕ್ಕಳೊಂದಿಗೆ ತಂದೆತಾಯಂದಿರು ಹೊರಬರುತ್ತಿದ್ದಾರೆ. ಎಲ್ಲರ ಎರಡೂ ಕೈಗಳಲ್ಲೂ ಚೀಲ ತುಂಬ ಪುಸ್ತಕಗಳು. ಇವೆಲ್ಲವನ್ನು ಕಾರಿನಲ್ಲಿ ತುಂಬಿಸಿ ಹೊರಡುತ್ತಾರೆ. ಇವರೇನು ಗ್ರಂಥಾಲಯವನ್ನು ಸೂರೆಗೈಯುತ್ತಿದ್ದಾರೆಯೇ? ಚಿಕ್ಕ ಮಕ್ಕಳಿಗಾದರೂ ಇಲ್ಲೇನು ಕೆಲಸ?- ತಕ್ಷಣ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗಳು.

ನನಗಾದ ಈ ಚಿಕ್ಕ ವಿಸ್ಮಯ ನಡೆದುದು ಅಮೆರಿಕದ (America) ಕ್ಯಾಲಿಫೋರ್ನಿಯಾ (California) ಪ್ರಾಂತ್ತ್ಯದ ಸನ್ನಿವೇಲ್ ಕೌಂಟಿ (Sunnyvale county) ಯ ಸಾರ್ವಜನಿಕ ಗ್ರಂಥಾಲಯದಲ್ಲಿ. ಹೇಗಿದ್ದರೂ ನಿವೃತ್ತನಾಗಿ ನಾಲ್ಕು ತಿಂಗಳು ಮಗನ ಮನೆಯಲ್ಲಿರಲು ಸನ್ನಿವೇಲಿಗೆ ಬಂದಿದ್ದೆ. ಸಮಯ ಕಳೆಯಲು ಉತ್ತಮ ಗೆಳೆಯರು ಎಂದರೆ ಗ್ರಂಥಾಲಯಗಳ ಪುಸ್ತಕಗಳು ತಾನೆ? ಹಾಗಾಗಿ ಮರುದಿನದಿಂದಲೇ ಸನಿಹದ ಸಾರ್ವಜನಿಕ ಗ್ರಂಥಾಲಯಕ್ಕೆ ನನ್ನ ಪ್ರಥಮ ಭೇಟಿ. ಮುಂದೆ ಹಲವಾರು ಬಾರಿ. ಇದರ ಫಲವೇ ಲೈಬ್ರೇರಿಯೊಂದು ಹೇಗಿರಬಹುದು, ಹೇಗಿರಬೇಕು ಎಂಬುದರ ಮೇಲೆ ಬೆಳಕು ಚೆಲ್ಲಲು ಈ ಲೇಖನ.

ಆಧುನಿಕ ಸೌಲಭ್ಯಗಳು:

1908ರಲ್ಲಿ 50 ಪುಸ್ತಕಗಳೊಂದಿಗೆ ಒಂದು ಚಿಕ್ಕ ಕೋಣೆಯಲ್ಲಿ ಒಬ್ಬ ಸಿಬ್ಬಂದಿಯೊಡನೆ ಪ್ರಾರಂಭವಾದ ಈ ಗ್ರಂಥಾಲಯ ಇಂದು ಬರೇ ಗ್ರಂಥಾಲಯವಾಗಿ ಉಳಿಯದೆ ಆಧುನಿಕ ಪರಿಕರಗಳನ್ನು, ಕಾರ್ಯಕ್ರಮಗಳನ್ನೂ ಅಳವಡಿಸಿಕೊಂಡಿದೆ. 60800 ಚ. ಅ. ವಿಸ್ತಾರದಲ್ಲಿ ಆವರಿಸಿದ ಕಟ್ಟಡ. ಒಳಗೂ ಹೊರಗೂ ಪ್ರಶಾಂತ ವಾತಾವರಣ. ಕಟ್ಟಡದ ಎದುರಿನ ಮರಗಳ ನೆರಳಲ್ಲಿ ಆರಾಮವಾಗಿ ಕುಳಿತು ಓದಲು ಮೇಜು ಕುರ್ಚಿಗಳು. ಹೊರಗೆ ಗ್ರಂಥಾಲಯ ಕಾಯಲು ಕಾವಲುಗಾರನಿಲ್ಲ, ಒಳಗೆ ಸಿಬ್ಬಂದಿಯೂ ಇಲ್ಲ (ಸ್ವಯಂಸೇವಾ ತಳಹದಿಯಲ್ಲಿಯಲ್ಲಿರುವ ಒಂದಿಬ್ಬರನ್ನು ಬಿಟ್ಟು). ಎಲ್ಲವೂ ಸ್ವಯಂಚಾಲಿತ. ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ಸ್ವಯಂಚಲಿತ ಬಾಗಿಲುಗಳು. ಒಳ ಪ್ರವೇಶಿದರೆ ಪ್ರತ್ಯೇಕ ಹಾಲ್ ಗಳಲ್ಲಿ ವಿವಿಧ ವಿಭಾಗಗಳು - ಮಕ್ಕಳ ಪುಸ್ತಕಗಳು ಒಂದೆಡೆಯಾದರೆ ದೊಡ್ಡವರ ಪುಸ್ತಕಗಳು ಇನ್ನೊಂದೆಡೆ. ಪರಭಾಷಾ ಪುಸ್ತಕಗಳು ಮತ್ತೊಂದೆಡೆ. ವಾರ್ತಾಪತ್ರಿಕೆಗಳ ಹಾಗೂ ನಿಯತಕಾಲಿಕೆಗಳ ಪ್ರತ್ಯೇಕ ವಿಭಾಗಗಳು ಇದ್ದೇ ಇವೆ. ಹಿರಿಯ ನಾಗರಿಕರಿಗಾಗಿ ದೊಡ್ಡ ಅಕ್ಷರ ಮುದ್ರಣದ ಪುಸ್ತಕಗಳ ದೊಡ್ಡ ಸಂಗ್ರಹ ನನಗೆ ಅಚ್ಚರಿ ಮೂಡಿಸಿತು. ಎಲ್ಲೆಡೆಯೂ ತೆರೆದ rack ಗಳಲ್ಲಿ ಪುಸ್ತಕಗಳು. ಯಾವುದೇ ವಿಭಾಗದ ಯಾವುದೇ ಪುಸ್ತಕ ತೆಗೆಯಲು ಎಲ್ಲರೂ ಸ್ವತಂತ್ರರು- open access. ಅಲ್ಲಲ್ಲಿ ಪುಸ್ತಕ ಹುಡುಕಲು ಕಂಪ್ಯೂಟರ್ ಗಳು. ಈ ಹುಡುಕಾಟವನ್ನು ಮನೆಯಿಂದಲೇ ಇಂಟರ್ನೆಟ್ ಮೂಲಕವೂ ಮಾಡಿಕೊಳ್ಳಲೂಬಹುದು. ಪುಸ್ತಕ ಇಶ್ಯೂ ಆಗಿದ್ದಲ್ಲಿ ಅದು ಹಿಂತುರಿಗಿ ಬಂದಾಗ ಸಿಗುವಂತೆ ಕಾದಿರಿಸುವ ವ್ಯವಸ್ಥೆಯೂ ಇದೆ. ಪುಸ್ತಕ ಬಂದ ಕೂಡಲೇ ಮೊಬೈಲ್ ಗೆ ಮೆಸೇಜ್ ಬರುತ್ತದೆ. ಇನ್ನೂ ಬಯಸಿದರೆ ಸನಿಹದ ಗ್ರಂಥಾಲಯಗಳಿಂದಲೂ ಪುಸ್ತಕಗಳನ್ನು ತರಿಸಿಕೊಡುವ ವ್ಯವಸ್ಥೆಯೂ ಇದೆ. ಇವೆಲ್ಲವನ್ನೂ ಮೀರಿ ವೈಯಕ್ತಿಕ ಪುಸ್ತಕ, ಲ್ಯಾಪ್ ಟಾಪ್ ಗಳನ್ನು ತಂದು ದಿನ ಪೂರ್ತಿ ಗ್ರಂಥಾಲಯದಲ್ಲಿ ಇರಲು ಬಯಸಿದರೆ ಅದಕ್ಕೂ ಅಭ್ಯಂತರವಿಲ್ಲ.

ಗ್ರಂಥಾಲಯ ರಾಷ್ಟ್ರೀಯ ದಿನಾಚರಣೆಯ ನಾಲ್ಕೈದು ದಿನಗಳ ಹೊರತಾಗಿ , ವರ್ಷದ ಎಲ್ಲ ದಿನ ತೆರೆದಿರುತ್ತದೆ . ಭಾನುವಾರದ` ರಜೆ ಇಲ್ಲ. ಕೆಲಸದ ವೇಳೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ. ನನಗೆ ಅಚ್ಚರಿ ಮೂಡಿಸಿದ ಇನ್ನೊಂದು ಸಂಗತಿ ಇಲ್ಲಿ ಎರವಲು ಪಡೆಯುವ ಪುಸ್ತಕಗಳ ಸಂಖ್ಯೆ - ಒಬ್ಬನು ಒಮ್ಮೆಗೆ ತಾನೇ ಆಯ್ದ100 ಪುಸ್ತಕಗಳನ್ನು ಒಯ್ಯಬಹುದು! ಇವನ್ನು ಇರಿಸಿಕೊಳ್ಳಲು- 21 ದಿವಸಗಳ ಅವಧಿ! ಕೊಂಡೊಯ್ಯುವ ಪುಸ್ತಕಗಳನ್ನು ಸ್ಕ್ಯಾನಿಂಗ್ ಯಂತ್ರಕ್ಕೆ ತೋರಿಸಿದರೆ ಸಾಕು, ಕೂಡಲೇ ಎಲ್ಲ ವಿವರಗಳೊಂದಿಗೆ ರಶೀದಿ ಸಿದ್ಧ. ಪುಸ್ತಕಗಳ ಹಿಂತಿರಿಗಿಸುವಿಕೆ ಇನ್ನೂ ಸರಳ. ದಿನದ 24 ಗಂಟೆಯೂ ಹೊರಕ್ಕೆ ತೆರೆದಿರುವ ಸ್ಕ್ಯಾನಿಂಗ್ ಗೂಡಿಗೆ ಪುಸ್ತಕ ತುರುಕಿಸಿದಾಗ ಎಲ್ಲ ವಿವರಗಳೊಂದಿಗೆ ಪುನಃ ಕೈಯಲ್ಲಿ ರಶೀದಿ. ಈ ವಿವರಗಳೆಲ್ಲವೂ ಮೊಬೈಲ್ ಗೂ ರವಾನೆ.

ಗ್ರಂಥಾಲಯದ ಆಧುನಿಕತೆ ಇಲ್ಲಿಗೆ ಮುಗಿಯಲಿಲ್ಲ. ಫ್ರೀ ವೈ -ಫೈ ವ್ಯವಸ್ಥೆ ಇದೆ. ಸಿನಿಮಾ, ಮ್ಯೂಸಿಕ್ (music)ಗಳಿಗಾಗಿ ಆಡಿಯೋ, ವಿಡಿಯೋ ಗಳ ಅಪಾರ ಸಂಗ್ರಹಗಳಿವೆ .ಇ -ಬುಕ್ , ಆಡಿಯೋ -ಬುಕ್ ಗಳಿವೆ. Internet Wifi-Hotspot ಗಳೂ ಇವೆ. ಇವೆಲ್ಲವೂ 21 ದಿನಗಳ ಎರವಲಿಗೆ ಲಭ್ಯ. ಗ್ರಂಥಾಲಯದೊಳಗೆ 55 ಹೈಸ್ಪೀಡ್ ಕಂಪ್ಯೂಟರ್ ಗಳು ಸಾರ್ವಜನಿಕರ ಬಳಕೆಗೆ ಲಭ್ಯ. ಎಲ್ಲವುಗಳಿಗೂ firefox, chrome, adobe acrobat reader, headphone,ಮೊದಲಾದವುಗಳ ಸೌಲಭ್ಯವಿದೆ. ಡಾಕ್ಯುಮೆಂಟ್ ಗಳ ಪ್ರಿಂಟಿಂಗ್ ಗೂ ವ್ಯವಸ್ಯೆ ಇದೆ . ಇಳಿ ವಯಸ್ಸಿನ ಹಿರಿಯರಿಗೆ ಹಾಗೂ ಅಂಗವೈಕಲ್ಯದಿಂದ ಪ್ರಯಾಣಿಸಲಾಗದವರಿಗೆ ತಿಂಗಳಿಗೆ ಒಮ್ಮೆ ಅವರ ಮನೆಗೇ ಅವರ ಅವಶ್ಯಕತೆಯಂತೆ ಪುಸ್ತಕ,ಸಿಡಿಗಳನ್ನು ತಲಪಿಸುವ ಏರ್ಪಾಡೂ ಇದೆ. ಮಕ್ಕಳಪುಸ್ತಕಗಳು ಖರೀದಿಗೂ ಇಲ್ಲಿ ಲಭ್ಯ.

ಸಮಾಜಮುಖಿ ಕಾರ್ಯಕ್ರಮಗಳು, ಮಕ್ಕಳಿಗಾಗಿ ಚಟುವಟಿಕೆಗಳು: ಗ್ರಂಥಾಲಯದೊಳಗೆ powerpoint ಸೌಕರ್ಯದಿಂದ ಕೂಡಿದ ಒಂದು ಪ್ರೋಗ್ರಾಮ್ ಹಾಲ್. ಇದು ಸದಾ ದಿನಪೂರ್ತಿ ಒಂದಲ್ಲ ಒಂದು ಚಟುವಟಿಕೆಯಿಂದ ಸಂಪನ್ನವಾಗಿರುತ್ತದೆ . ಎರಡು ವರ್ಷದ ಮಕ್ಕಳಿಂದ ತೊಡಗಿ ಮುದುಕರ ವರೆಗಿನವರಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಚಿಕ್ಕ ಮಕ್ಕಳಿಗಾಗಿ ಕತೆ ಹೇಳುವ, ನರ್ಸರಿ ಪದ್ಯಗಳ ಕಾರ್ಯಕ್ರಮಗಳಿದ್ದರೆ ದೊಡ್ಡ ಮಕ್ಕಳಿಗೆ ಹೋಂ ವರ್ಕ್ ಸಹಾಯ ,ಇಂಗ್ಲಿಷ್ ಸ್ಪೀಕಿಂಗ್ ಸ್ಕಿಲ್ ಇಂತಹ ಕಾರ್ಯಕ್ರಮಗಳು. ಹಿರಿಯರಿಗೆ ರೋಡ್`ಸೇಫ್ಟಿ , ಗಾರ್ಡೆನಿಂಗ್ ,ಕಂಪ್ಯೂಟರ್ ಶಿಕ್ಷಣ, - ಹೀಗೆ ಸಾರ್ವಜನಿಕರಿಗೆ ಏನು ಬೇಕೋ ಆ ಕಾರ್ಯಕ್ರಮ. ವಸ್ತುಶಃ ಸಾರ್ವಜನಿಕರ ಅಭಿಪ್ರಾಯ ಕೇಳಿಯೇ ಕಾರ್ಯಕ್ರಮಗಳ ಸಂಯೋಜನೆ ನಡೆಯುತ್ತದೆ. ತಮ್ಮತಮ್ಮ ಕ್ಷೇತ್ರದಲ್ಲಿ ಪ್ರಾವೀಣ್ಯವುಳ್ಳವರು ಪ್ರೋಗ್ರಾಮ್ ನಡಸಿಕೊಡಲು ಮುಕ್ತ ಅವಕಾಶವಿದೆ . ಗ್ರಂಥಾಲಯದ website ನಲ್ಲಿ ಒಂದು ತಿಂಗಳ ಪ್ರೋಗ್ರಾಮಿನ ವಿಸ್ತೃತ ವಿವರಣೆ ನೋಡಿಕೊಂಡು ಅವರವರ ಅಭಿರುಚಿಯಂತೆ ಭಾಗವಹಿಸಲು ಅವಕಾಶ. ಒಂದು ದಿನ Kirk Stoddard ಎಂಬವರು ಪ್ರಸ್ತುತ ಪಡಿಸಿದ “Greek and latin for nature lovers’ ಎಂಬ ಪ್ರಸ್ತುತಿಯಲ್ಲಿ ನಾನೂ ಭಾಗವಹಿಸಿದೆ. ಭಾಷಣದನಂತರ ಭಾಗವಹಿಸಿದ ಎಲ್ಲರಿಗೂ ಆ ಬಗ್ಗೆ ಮುದ್ರಿತ ಟಿಪ್ಪಣಿಯೂ ದೊರಕಿತು. ಈ ರೀತಿ ಪ್ರದೇಶದ ಜನರ ಪೂರ್ಣ ಭಾಗವಹಿಸುವಿಕೆಯ ಗ್ರಂಥಾಲಯವಿದು. ಗ್ರಂಥಾಲಯದ ದೈನಂದಿನ ಕಾರ್ಯಗಳಿಗೆ ತೊಂದರೆಯಾಗದಂತೆ ಸಾಂಸ್ಕೃತಿಕ, ಜಾನಪದ ಉತ್ಸವಗಳ ಸಂಕೇತ ರೂಪದ ಆಚರಣೆಯನ್ನೂ ಇಲ್ಲಿ ಕಂಡೆ. ಒಂದು ದಿನ ದೀಪಾವಳಿಯನ್ನೂ ಆಯೋಜಿಸಲಾಗಿತ್ತು.

ವಾರವಾರ ತೆರಳಿ ಮಗನ ಹೆಸರಲ್ಲಿ ನನ್ನ ಅಭಿರುಚಿಗೆ ತಕ್ಕಂತೆ ಹಲವಾರು ಪುಸ್ತಕಗಳನ್ನು ಪಡೆದು ಓದಿದೆ. ಕೆಲವನ್ನು ಮತ್ತೆ ಮತ್ತೆ ಓದಿದೆ. ಸಿದ್ದಾರ್ಥ ಮುಖರ್ಜಿ ಬರೆದ The Gene, Watson ರ ಇತ್ತೀಚಿನ -DNA- Story of Genetic Revolution, Thomas Marent ಬರೆದ Rain Forests, Thomas Pakenham ರವರ Remarkable Trees of the World, Wolfe ಮತ್ತು Glillean ರವರ Rain Forests of the World, Heather Angel ರ Pollination Power, John Handsರವರ Cosmos - ಮೊದಲಾದ ಸಚಿತ್ರ ಗ್ರಂಥಗಳ ಓದು ನನಗೆ ಚಿರಕಾಲದ ನೆನಪುಗಳು.

ಸಾರ್ವಜನಿಕರು ಇಚ್ಛಿಸಿದರೆ ಪುಸ್ತಕರೂಪದಲ್ಲಾಗಲಿ ಹಣದರೂಪದಲ್ಲಾಗಲಿ ದೇಣಿಗೆ ಗ್ರಂಥಾಲಯಕ್ಕೆ ನೀಡಬಹುದು. ಇದು ಜನರಿಂದ ಜನರಿಗಾಗಿ. ಆ ಮೇಲೆ ತಿಳಿಯಿತು - ಅಮೆರಿಕಾದ ಉದ್ದಗಲಕ್ಕೆ ಎಲ್ಲಾ ಕೌಂಟಿ ಗಳಲ್ಲೂ ಗ್ರಂಥಾಲಯಗಳು ಹೀಗೆಯೇ ಇವೆಯಂತೆ. ಗ್ರಂಥಾಲಯವೊಂದು ಹೀಗೂ ಇರಲು ಸಾಧ್ಯ ಎಂಬ ಅನುಭವ ನನ್ನದಾಯಿತು.

ಈ ಅನುಭವವನ್ನು ದಾಖಲಿಸಿ ಮಗ ಸಾತ್ವಿಕನಿಗೆ ತೋರಿಸಿದ ನನ್ನ ಅಭಿರುಚಿಯನ್ನು ಕಂಡು ಮರುದಿನ ಮತ್ತೊಂದು ಭವ್ಯ ಗ್ರಂಥಾಲಯದ ದರ್ಶನ ಮಾಡಿಸಿದನು. ಇದು ಸನ್ನಿವೇಲ್ ಸನಿಹದ ನಗರ ಸ್ಯಾನೋಸೆ (San Jose)ಯಲ್ಲಿನ ಡಾ. ಮಾರ್ಟಿನ್ ಲೂಥರ ಕಿಂಗ್ ಲೈಬ್ರರಿ. ಸ್ಯಾನೋಸೆ ವಿಶ್ವವಿದ್ಯಾಲಯದ ಲೈಬ್ರರಿಯೂ ಹೌದು. ಇತ್ತೀಚೆಗೆಷ್ಟೇ ನಿರ್ಮಾಣಗೊಂಡ ಎಂಟು ಅಂತಸ್ತುಗಳ ಬೃಹತ್ ಭವ್ಯ ಕಟ್ಟಡ. ವಿದ್ಯಾರ್ಥಿಗಳಿಗಾಗಿ ದಿನದ 24 ಗಂಟೆಯೂ ತೆರೆದ ಗ್ರಂಥಾಲಯವಿದು. ಅಗಾಧವಾದ ಪುಸ್ತಕ ಸಂಗ್ರಹ. ನನ್ನ ಯೋಚನೆಗೂ ನಿಲುಕದ ಅತ್ಯಾಧುನಿಕ ಸಕಲ ಸೌಕರ್ಯಗಳು-ರೆಸ್ಟ್ ರೂಮುಗಳು, ಸ್ನಾನ ಕೋಣೆಗಳು, ಫುಡ್ ಕೋರ್ಟುಗಳು,ಲ್ಯಾಪ್ ಟಾಪ್ಗಳು-ಎಲ್ಲವೂ ಲಭ್ಯ, ದಿನದ 24 ಗಂಟೆಯೂ. ವಿದ್ಯಾರ್ಥಿಗಳಿಗೆ ಏಕಾಂತ ಅಧ್ಯಯನ, ಸಮೂಹ ಅಧ್ಯಯನ- ಎರಡಕ್ಕೂ ಬೇಕಾದ ವ್ಯವಸ್ಥೆ. ಇಲ್ಲಿ ಜಗತ್ತಿನ ನೂರಾರು ಭಾಷೆಗಳ ಪುಸ್ತಕಗಳನ್ನು ಪತ್ರಿಕೆಗಳನ್ನು ಕಂಡೆ. ಭೈರಪ್ಪನವರ ಕಾದಂಬರಿಗಳ ಸಹಿತ ಅನೇಕ ಕನ್ನಡ ಪುಸ್ತಕಗಳನ್ನು, ಅದೇ ತಿಂಗಳ ಕನ್ನಡ ಮಾಸಪತ್ರಿಕೆಗಳನ್ನು ಅಲ್ಲಿ ಕಂಡು ಆಶ್ಚರ್ಯಗೊಂಡೆ. ಒಂದೊಂದಾಗಿ ಎಂಟು ಅಂತಸ್ತುಗಳನ್ನು ಎಲೆವೇಟರುಗಳಲ್ಲಿ ಏರಿ ಸುತ್ತಾಡಿ ಲಿಫ್ಟ್ ಮೂಲಕ ಕೆಳಗಿಳಿದು ಹೊರಬಂದಾಗ ಅಚ್ಚರಿಪಡುವುದೊಂದೇ ನನ್ನ ಕೆಲಸವಾಗಿತ್ತು.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!