• ಲೋಕೇಶ್

ಇದೇ ಡಿಸೈನಲ್ಲಿ ಬೇರೆ ಕಲರ್ ತೋರಿಸಿ ಅನ್ನೋ ಹೆಣ್ಣು ಮಕ್ಕಳು ಭಾರತದಲ್ಲಿ ಭಾರೀ ಫೇಮಸ್. ಆದರೆ ಪಾಸ್ ಪೋರ್ಟ್ ವಿಚಾರದಲ್ಲೂ ಈ ಹೆಣ್ಮಕ್ಕಳ ಫಾರ್ಮುಲಾ ಚಾಲ್ತಿಯಲ್ಲಿದೆಯಾ? ಪಾಸ್ ಪೋರ್ಟ್ ನಲ್ಲಿ ವರ್ಣಭೇದ ನೀತಿ ಇದೆಯಾ? ವರ್ಣಭೇದ ನೀತಿ ಇಲ್ಲ. ಬಣ್ಣಬಣ್ಣದ ಪಾಸ್ ಪೋರ್ಟ್ ಇರೋದು ನಿಜ. ನಿಮಗೆ ಅಚ್ಚರಿ ಆಗಬಹುದು ಪಾಸ್ ಪೋರ್ಟ್ ನಲ್ಲೂ ವಿವಿಧ ಬಣ್ಣವೇ ಎಂದು. ಈ ಲೇಖನ ನಿಮಗೆ ವಿಶಿಷ್ಠ ಮಾಹಿತಿ ನೀಡಲಿದೆ. ಭಾರತದಲ್ಲಿ ವಿವಿಧ ಬಣ್ಣದ ಪಾಸ್ ಪೋರ್ಟ್ ಯಾಕೆ ಇವೆ? ಯಾವ್ಯಾವ ಬಣ್ಣದ ಪಾಸ್ ಪೋರ್ಟ್ ಇದೆ? ಯಾವ ಬಣ್ಣದ ಪಾಸ್ ಪೋರ್ಟ್ ಯಾವುದಕ್ಕೆ ಉಪಯುಕ್ತ? ಈ ಎಲ್ಲವನ್ನೂ ತಿಳಿಯುವ ಆಸಕ್ತಿ ಇದ್ದರೆ ಮುಂದೆ ಓದಿ.

colour passport 3

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗ್ಬೇಕು ಅಂದ್ರೆ ಪಾಸ್ ಪೋರ್ಟ್ ಅತ್ಯಗತ್ಯ. ಪಾಸ್‌ ಪೋರ್ಟ್ ಒಂದು ದೇಶದ ಸರ್ಕಾರವು ತನ್ನ ಪ್ರಜೆಗೆ ನೀಡುವ ಅಧಿಕೃತ ದಾಖಲೆಯಾಗಿದ್ದು, ಇದು ವ್ಯಕ್ತಿಯ ಗುರುತನ್ನು ಮತ್ತು ರಾಷ್ಟ್ರೀಯತೆಯನ್ನು ದೃಢೀಕರಿಸಲು ಸಹಾಯ ಮಾಡುತ್ತದೆ. ವಿದೇಶಕ್ಕೆ ಪ್ರಯಾಣಿಸಲು ಇದು ಪ್ರೈಮರಿ ಲೈಸೆನ್ಸ್.

ವಿಶ್ವದ ನಕ್ಷೆಯಲ್ಲಿ 190 ಕ್ಕೂ ಹೆಚ್ಚು ದೇಶಗಳಿವೆ. ಪ್ರತಿಯೊಂದು ದೇಶವೂ ವಿವಿಧ ಬಣ್ಣಗಳಲ್ಲಿ ವಿದೇಶ ಪ್ರಯಾಣಕ್ಕಾಗಿ ಪಾಸ್ ಪೋರ್ಟ್ ಗಳನ್ನು ರಚಿಸಿರುತ್ತದೆ. ಭಾರತದಲ್ಲಿ, ಹೊರಾಂಗಣ ವ್ಯವಹಾರಗಳ ಸಚಿವಾಲಯ (MEA) ಪಾಸ್ ಪೋರ್ಟ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ಭಾರತದ ನಾಗರಿಕರಿಗೆ ಜಾಗತಿಕವಾಗಿ ಪ್ರಯಾಣ ಮಾಡಲು ಅಧಿಕೃತ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ದೇಶದಲ್ಲಿ ಒಟ್ಟು 3 ರೀತಿಯ ಪಾಸ್ ಪೋರ್ಟ್ ಗಳನ್ನು ನೀಡಲಾಗುತ್ತದೆ.

ನೀಲಿ ಬಣ್ಣದ ಪಾಸ್ ಪೋರ್ಟ್ (ಸಾಮಾನ್ಯ ಪಾಸ್‌ಪೋರ್ಟ್‌)

ಇದೊಂದು ಸಾಮಾನ್ಯ ಪಾಸ್‌ಪೋರ್ಟ್‌. ನೀಲಿ ಬಣ್ಣ ಹೊಂದಿರುವ ಈ ಪಾಸ್‌ ಪೋರ್ಟ್‌ ವಲಸೆ ಹೋಗುವವರಿಗೆ ಮತ್ತು ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಲಾಗುತ್ತದೆ. ಉನ್ನತ ಹುದ್ದೆಯಲ್ಲಿರುವ ಭಾರತದ ಸರ್ಕಾರಿ ಅಧಿಕಾರಿಗಳ ನಡುವೆ ವ್ಯತ್ಯಾಸವನ್ನು ತಿಳಿಯಲು ಈ ಸಾಮಾನ್ಯ ಪಾಸ್‌ ಪೋರ್ಟ್‌ ಅವಕಾಶ ಮಾಡಿಕೊಡುತ್ತದೆ. ಜನಸಾಮಾನ್ಯರೂ ಬಳಸುವುದು ಇದೇ ಪಾಸ್‌ ಪೋರ್ಟ್‌. ಈ ಬಣ್ಣದ ಪಾಸ್‌ ಪೋರ್ಟ್‌ ವಯಸ್ಕರಿಗೆ 10 ವರ್ಷಗಳವರೆಗೆ ಮತ್ತು ಮಕ್ಕಳಿಗೆ 5 ವರ್ಷಗಳವರೆಗೆ ಅಥವಾ ಅವರು 18 ವರ್ಷ ತುಂಬುವವರೆಗಿನ ಅವಧಿಯ ಗಡುವು ಹೊಂದಿರುತ್ತದೆ.

ಕುಂಕುಮ ಬಣ್ಣದ ಪಾಸ್‌ಪೋರ್ಟ್ (ರಾಜ ತಾಂತ್ರಿಕ)

ಈ ಪಾಸ್‌ಪೋರ್ಟನ್ನು ಭಾರತದ ರಾಜತಾಂತ್ರಿಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ನೀಡಲಾಗುತ್ತದೆ. ಈ ಪಾಸ್‌ ಪೋರ್ಟ್‌ ಹೊಂದಿರುವವರಿಗೆ ಕೆಲವು ವಿಶೇಷ ಸೌಲಭ್ಯಗಳು ಇರುತ್ತವೆ. ವಿಮಾನ ನಿಲ್ದಾಣಗಳಲ್ಲಿ ತ್ವರಿತ ನಿರ್ಗಮನದ ಸೌಲಭ್ಯ ಸೇರಿ ಹಲವಾರು ಪ್ರಯೋಜನಗಳು ಸಿಗುತ್ತವೆ. ಇನ್ನೂ ಕೆಲವು ದೇಶಗಳಲ್ಲಿ ರಾಜತಾಂತ್ರಿಕ ರಕ್ಷಣೆ ಕೂಡ ಸಿಗುತ್ತದೆ. ವಿಶೇಷ ವಿಮಾನ ನಿಲ್ದಾಣದ ಲೌಂಜ್‌ಗಳಿಗೆ ಪ್ರವೇಶಾತಿ ಸಹ ದೊರಕುತ್ತದೆ. ಇದು ಸರ್ಕಾರಿ ಉದ್ದೇಶಗಳಿಗಾಗಿ ವಿದೇಶ ಪ್ರವಾಸ ಮಾಡುವವರ ಅನುಕೂಲಕ್ಕಾಗಿ ನೀಡಲಾಗುತ್ತದೆ. ನಿಮಗೆ ನೆನಪಿದ್ದಿರಬಹುದು. ಸಂಸದ ಪ್ರಜ್ವಲ್ ರೇವಣ್ಣ ಭಾರತದಿಂದ ವಿದೇಶಕ್ಕೆ ಹಾರಲು ಬಳಸಿದ್ದು ಇದೇ ಡಿಪ್ಲೊಮೆಟಿಕ್ ಪಾಸ್ ಪೋರ್ಟ್.

colour passport

ಬಿಳಿ ಬಣ್ಣದ ಪಾಸ್ಪೋರ್ಟ್ (ಅಧಿಕೃತ ಪಾಸ್‌ಪೋರ್ಟ್)

ಸರ್ಕಾರದ ಅಧಿಕೃತ ಕೆಲಸದ ಪ್ರಯೋಜನಕ್ಕಾಗಿ ನೀಡಲ್ಪಡುವ ವಿಶಿಷ್ಟ ದಾಖಲ ಇದಾಗಿದೆ. ಇದನ್ನು ಸಾಮಾನ್ಯವಾಗಿ ಸರ್ಕಾರಿ ನೌಕರರು ಅಥವಾ ಅಧಿಕಾರಿಗಳು, ಸರ್ಕಾರದ ಪರವಾಗಿ ಅಥವಾ ಸರ್ಕಾರದ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವಾಗ ಬಳಸುತ್ತಾರೆ. ಈ ಪಾಸ್‌ಪೋರ್ಟ್‌ ಅನೇಕ ರೀತಿಯಿಂದ ಅಧಿಕಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಜೊತೆಗೆ ಆರೋಗ್ಯ ಚಿಕಿತ್ಸೆಗೂ ಇದು ಪ್ರಯೋಜನಕಾರಿಯಾಗಿದೆ.

ಕಿತ್ತಳೆ ಬಣ್ಣದ ಪಾಸ್‌ ಪೋರ್ಟ್‌

ಕಿತ್ತಳೆ ಪಾಸ್‌ಪೋರ್ಟ್‌ ಇತ್ತೀಚೆಗೆ ಪರಿಚಯ ಮಾಡಲಾಗಿರುವ ಪಾಸ್‌ ಪೋರ್ಟ್‌. 2018 ರಿಂದ ಭಾರತೀಯ ನಾಗರಿಕರಿಗೆ ನೀಡಲು ಪ್ರಾರಂಭಿಸಲಾಯಿತು. ಶೈಕ್ಷಣಿಕ ಆರ್ಹತೆ ಹೊಂದಿರದ ಜನರಿಗೆ ಈ ಪಾಸ್‌ ಪೋರ್ಟ್‌ ನೀಡಲಾಗುತ್ತದೆ. ಅಂದರೆ 10 ನೇ ತರಗತಿಯನ್ನು ಪೂರ್ತಿ ಮಾಡಿರದ ಜನರಿಗೆ ಈ ಪಾಸ್‌ಪೋರ್ಟ್‌ ನೀಡಲಾಗುತ್ತದೆ.