ನಕಾಶೆಗಳಾಚೆಗಿನ ಪ್ರಯಾಣ: ಆಟಿಸಂ ಹಾಗೂ ಪ್ರವಾಸದ ನಿಜ ಅರ್ಥ
ಆಟಿಸಂ ಹೊಂದಿರುವ ವ್ಯಕ್ತಿಗಳ ಪ್ರವಾಸದ ವೇಳೆಯಲ್ಲಿನ ಬಹುದೊಡ್ಡ ಅಡೆತಡೆ ಎಂದರೆ ಸಂವೇದನೆಗಳ ಅತಿಯಾದ ಪ್ರಚೋದನೆ. ಉದಾಹರಣೆಗೆ ಅತಿಯಾದ ಬೆಳಕು, ಜೋರಾದ ಪ್ರಕಟಣೆಗಳು, ಜನದಟ್ಟಣೆ ಹೀಗೆ ಪ್ರವಾಸಿ ಕೇಂದ್ರಗಳಲ್ಲಿನ ಈ ಸಹಜವಾದ ವಿಚಾರಗಳು ಅವರಲ್ಲಿ ಒತ್ತಡವನ್ನುಂಟು ಮಾಡಬಹುದು.
ಡಾ. ಶ್ವೇತಾ ಬಿಸಿ
- ಲೇಖಕರು: ಸಹಾಯಕ ಪ್ರಾಧ್ಯಾಪಕಿ, ಆಪ್ತ ಸಲಹೆಗಾರ್ತಿ
ಪ್ರವಾಸವೆಂದರೆ ಭೌಗೋಳಿಕವಾದ ಸುತ್ತಾಟ ಎಂದೇ ವ್ಯಾಖ್ಯಾನಿಸಲಾಗುತ್ತದೆ. ನಿಜ ಅರ್ಥದಲ್ಲಿ ಅದು ದೃಷ್ಟಿಕೋನಗಳ ಓಡಾಟ,ಒಡನಾಟ,ಸುತ್ತಾಟ. ವಿಶ್ವ ಆಟಿಸಂ ದಿನದಂದು ಪ್ರವಾಸದ ನಡುವಿನ ಸಂಬಂಧವನ್ನು ಮರುಪರಿಶೀಲಿಸುವುದು ಅಗತ್ಯ. ಆಟಿಸಂನವರೊಟ್ಟಿಗಿನ ಪ್ರವಾಸ ಅದು ಕೇವಲ ಸವಾಲುಗಳ ಕಥೆಯಷ್ಟೇ ಅಲ್ಲ ಒಳಗೊಳ್ಳುವಿಕೆ,ಅರ್ಥೈಸುವಿಕೆ ಜತೆಗೆ ಬೆಳವಣಿಗೆಯ ಪೂರಕ ಕಥೆಯೂ ಹೌದು!
ಇದನ್ನೂ ಓದಿ: ಮೇಘಾಲಯದ ಈ ಸೇತುವೆ ಬೀಳೋದಲ್ಲ ಬೆಳೆಯೋದು
ಆಟಿಸಂ ಅಥವಾ ಆರ್ಟಿಸಂ ಸ್ಪೆಕ್ಟ್ರಮ್ ಕಂಡೀಶನ್ ಎಂಬುದು ಸಂವಹನ, ಸಂವೇದನೆಗಳ ಗ್ರಹಿಕೆ ಮತ್ತು ವರ್ತನೆಗಳ ಮಾದರಿಗಳಲ್ಲಿನ ವ್ಯತ್ಯಾಸಗಳನ್ನು ಹೊಂದಿರುವ ಒಂದು ಸ್ಥಿತಿ. ಹಲವಾರು ಆಟಿಸಂ ಹೊಂದಿರುವವರಿಗೆ ಜಗತ್ತು ಕೆಲವೊಮ್ಮೆ ಗದ್ದಲದ,ಅಸಮಂಜಸ ಮತ್ತು ಅತಿಯೆನಿಸುವ ಅನುಭವವನ್ನು ಉಂಟುಮಾಡಬಹುದು. ಬಸ್ಸು,ರೈಲು ಹಾಗೂ ವಿಮಾನ ನಿಲ್ದಾಣಗಳ ಗದ್ದಲಗಳು, ಅನಿರೀಕ್ಷಿತ ವೇಳಾಪಟ್ಟಿಗಳು, ಪರಿಚಿತವಲ್ಲದ ಆಹಾರ ಪದ್ಧತಿಗಳು, ಹೊಸ ಪರಿಸರ ಅವರಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಪ್ರಚೋದಿಸಬಹುದು. ಆದಾಗ್ಯೂ ವಿರೋಧಭಾಸವಾಗಿ ಪ್ರವಾಸವು ಅವರ ರಚನಾತ್ಮಕ ಅನ್ವೇಷಣೆಗೆ, ನಿಯಂತ್ರಿತ ಹುಡುಕಾಟಗಳಿಗೆ ಹಾಗೂ ಅರ್ಥಪೂರ್ಣ ಒಳಗೊಳ್ಳುವಿಕೆಗೆ ಪೂರಕವೂ ಆಗಬಲ್ಲದು. ಆಟಿಸಂ ಹೊಂದಿರುವ ವ್ಯಕ್ತಿಗಳ ಪ್ರವಾಸದ ವೇಳೆಯಲ್ಲಿನ ಬಹು ದೊಡ್ಡ ಅಡೆತಡೆ ಎಂದರೆ ಸಂವೇದನೆಗಳ ಅತಿಯಾದ ಪ್ರಚೋದನೆ. ಉದಾಹರಣೆಗೆ ಅತಿಯಾದ ಬೆಳಕು, ಜೋರಾದ ಪ್ರಕಟಣೆಗಳು, ಜನದಟ್ಟಣೆ ಹೀಗೆ ಪ್ರವಾಸಿ ಕೇಂದ್ರಗಳಲ್ಲಿನ ಈ ಸಹಜವಾದ ವಿಚಾರಗಳು ಅವರಲ್ಲಿ ಒತ್ತಡವನ್ನುಂಟು ಮಾಡಬಹುದು. ಆದರೆ ಆಟಿಸಂ ಕುರಿತಾಗಿ ಹೆಚ್ಚುತ್ತಿರುವ ಅರಿವು "ಆಟಿಸಂ ಸ್ನೇಹಿ" ಕ್ರಮಗಳು ಎಲ್ಲೆಡೆ ಹೊರಹೊಮ್ಮುವಿಕೆಗೆ ಕಾರಣವಾಗಿವೆ. ಅನೇಕ ದೇಶಗಳ ವಿಮಾನ ನಿಲ್ದಾಣಗಳು ಇತ್ತೀಚೆಗೆ ನಿಶ್ಶಬ್ದ ಕೊಠಡಿಗಳ ಸೇವೆಯನ್ನು ಒದಗಿಸಿಕೊಡುತ್ತಿವೆ ಅಷ್ಟೇ ಅಲ್ಲದೆ ಸಂವೇದನಾ ನಕ್ಷೆಗಳನ್ನು ಹಾಗೂ ವಿಮಾನ ಹತ್ತುವ ಪೂರ್ವಭ್ಯಾಸಗಳನ್ನು ಲಭ್ಯಗೊಳಿಸಿವೆ. ಸಣ್ಣ ಆದರೆ ಪರಿಣಾಮಕಾರಿಯಾದ ಬದಲಾವಣೆಗಳು ಪ್ರವಾಸವನ್ನು ಆಟಿಸಂ ವ್ಯಕ್ತಿಗಳಿಗೆ ಬೆದರಿಕೆಯಾಗಿಸದೆ ಸುಲಭ ಸಾಧ್ಯಗೊಳಿಸಿದೆ.

ಆಟಿಸಂ ವ್ಯಕ್ತಿಗಳ ಪ್ರವಾಸದ ಬಹುಮುಖ್ಯ ಸಂಗತಿ ಯೋಜನೆ. ಅನೇಕ ಮಂದಿ ತತ್ ಕ್ಷಣದ ಪ್ರವಾಸಗಳು ಹೆಚ್ಚು ಆಕರ್ಷಣೀಯವೆಂದು ಭಾವಿಸುತ್ತಾರೆ. ಆದರೆ ಆಟಿಸಂ ವ್ಯಕ್ತಿಗಳುಳ್ಳ ಪ್ರವಾಸದಲ್ಲಿ ನಿರೀಕ್ಷಿತ ವಿಚಾರಗಳು ಹೆಚ್ಚು ಹಿತವಾಗಬಲ್ಲವು. ದೃಶ್ಯ ವೇಳಾಪಟ್ಟಿಗಳು, ಸಾಮಾಜಿಕ ಕಥೆಗಳು ಮತ್ತು ಪ್ರವಾಸಿ ಸ್ಥಳದ ಪೂರ್ವ ಪರಿಚಯವು ಅವರಲ್ಲಿನ ಆತಂಕವನ್ನು ಕಡಿಮೆಗೊಳಿಸುತ್ತದೆ. ಜತೆಗೆ ಹೊಟೇಲ್ ಕೊಠಡಿಯ ಚಿತ್ರಗಳನ್ನು ಮುಂಚಿತವಾಗಿ ತೋರಿಸುವುದು ಪ್ರಯಾಣದ ಹಂತಗಳನ್ನು ವಿವರಿಸುವುದು ಸಹ ಅವರಿಗೆ ಸಹಾಯಕವಾಗಿರುತ್ತದೆ.
ವ್ಯವಸ್ಥೆಗಳ ಆಚೆಯೂ ಪ್ರವಾಸವು ಆಳವಾದ ಮೌಲ್ಯವನ್ನು ಹೊಂದಿದೆ. ಪ್ರವಾಸವು ಆಟಿಸಂ ವ್ಯಕ್ತಿಗಳು ತಮ್ಮದೇ ನಿಯಮಾನುಸಾರ ಜಗತ್ತಿನೊಟ್ಟಿಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಒದಗಿಸಿಕೊಡುತ್ತದೆ. ಪ್ರಕೃತಿಯ ಜತೆಗಿನ ಒಡನಾಟ ಮನಸನ್ನು ಮತ್ತಷ್ಟು ಸಮೃದ್ಧಗೊಳಿಸುತ್ತದೆ. ಸಮುದ್ರ ತೀರಗಳು, ಕಾಡು-ಮೇಡುಗಳು, ರಮಣೀಯ ಪರ್ವತಗಳು ಸಂವೇದನಾ ಸ್ನೇಹ ಪರಿಸರವನ್ನು ಒದಗಿಸಿಕೊಡುವುದಲ್ಲದೆ ಹೆಚ್ಚು ಗದ್ದಲವಿಲ್ಲದೆ ಜಗತ್ತನ್ನು ಅನ್ವೇಷಿಸಲು ಸಹಕಾರಿಯಾಗುತ್ತವೆ. ಇಂಥ ಜಾಗಗಳಲ್ಲಿ ಆಟಿಸ್ಟಿಕ್ಟ್ ವ್ಯಕ್ತಿಗಳು ಪರಿಸರಕ್ಕೆ ಬಲವಂತವಾಗಿ ಹೊಂದಿಕೊಳ್ಳುವ ಅಗತ್ಯವಿಲ್ಲ ಪರಿಸರವೇ ಇವರಿಗನುಗುಣವಾಗಿ ಹೊಂದಿಕೆಯಾಗಿ ಬಿಡುತ್ತದೆ.
ಪ್ರವಾಸವು ಸಮಾಜದ ದೃಷ್ಟಿಕೋನಗಳಿಗೂ ಸವಾಲನ್ನೊಡುತ್ತದೆ. ಅನೇಕ ಸಂದರ್ಭಗಳಲ್ಲಿ ಆಟಿಸಂ ಅನ್ನು ಮಿತಿಯ ಕನ್ನಡಿಯೊಳಗೆ ನೋಡಲಾಗುತ್ತದೆ. ಕುಟುಂಬಗಳು ಆಟಿಸ್ಟಿಕ್ಟ್ ವ್ಯಕ್ತಿಗಳೊಂದಿಗೆ ಪ್ರವಾಸ ಕೈಗೊಂಡಾಗ ಸಮಾಜದ ಈ ಊಹೆಗಳನ್ನು ಸುಲಭವಾಗಿ ಕಿತ್ತೊಗೆಯಬಹುದು. ಪ್ರವಾಸವು ಆ ವ್ಯಕ್ತಿಗಳಿಗೆ ಹೊಂದಾಣಿಕೆ, ಪುಟಿದೇಳುವ ಚೈತನ್ಯ ಮತ್ತು ಅನುರೂಪವಾಗಿ ಜಗತ್ತನ್ನು ಅನುಭವಿಸುವ ಮಾರ್ಗಕ್ಕೆ ಮುನ್ನುಡಿ ಬರೆಯುತ್ತದೆ.ವಾಸ್ತುಶಿಲ್ಪದೊಳಗೆ ವಿನ್ಯಾಸವನ್ನು ಗುರುತಿಸುವ ಮಗುವಿನಂತೆಯೋ ಅಥವಾ ಟ್ರೈನಿನ ಲಯದಲ್ಲಿ ಖುಷಿಪಡುವ ಒಬ್ಬ ವಯಸ್ಕರನಂತೆಯೋ ಆಟಿಸ್ಟಿಕ್ ವ್ಯಕ್ತಿಯು ಕೂಡ ತನ್ನದೇ ಮಾದರಿಯಲ್ಲಿ ಜಗತ್ತನ್ನು ಗ್ರಹಿಸುತ್ತಾ ಹೋಗುತ್ತಾನೆ.
ಪ್ರವಾಸೋದ್ಯಮವು ಕೂಡ ಆಟಿಸಂ ಥರದ ನರ ವೈವಿಧ್ಯತೆಗಳ ಆಲಿಂಗನಕ್ಕೆ ಸಿದ್ಧವಾಗಿ ನಿಂತಿದೆ. ಎಲ್ಲರ ಒಳಗೊಳ್ಳುವಿಕೆಯ ಪ್ರವಾಸವು ಕೇವಲ ಸಾಮಾಜಿಕ ಜವಾಬ್ದಾರಿಯಲ್ಲ; ಸಾಧ್ಯತೆಗಳ ವಿಸ್ತರಣೆಯು ಹೌದು! ಸಿಬ್ಬಂದಿಯನ್ನು ತರಬೇತುಗೊಳಿಸುವುದರಿಂದ ಹಿಡಿದು ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವುದು, ಸಂವೇದನಾ ಜಾಗೃತ ಜಾಗಗಳನ್ನು ವಿನ್ಯಾಸಗೊಳಿಸುವ ಮೂಲಕ ಪ್ರವಾಸೋದ್ಯಮವು ವಿಶಾಲ ವ್ಯಾಪ್ತಿಯಲ್ಲಿ ಪ್ರವಾಸಿಗರನ್ನು ಸ್ವಾಗತಿಸಬಹುದು. ಇಲ್ಲಿ ಒಳಗೊಳ್ಳುವಿಕೆ ಎಂದರೆ ವಿಶೇಷ ಉಪಚಾರವಲ್ಲ ಬದಲಿಗೆ ಸಮಾನ ಅವಕಾಶವನ್ನು ಒದಗಿಸಿ ಕೊಡುವುದು.

ವಿಶ್ವ ಆಟಿಸಂ ದಿನವೂ ನಮ್ಮೆಲ್ಲರಿಗೂ ಮತ್ತೆ ಮತ್ತೆ ನೆನಪಿಸುವ ಸಂಗತಿ ಎಂದರೆ ಒಳಗೊಳ್ಳುವಿಕೆಯು ಕ್ಲಾಸ್ ರೂಮಿನಾಚೆಗೂ ಕೆಲಸ ಮಾಡುವ ಸ್ಥಳದ ಆಚೆಗೂ ಅಂದರೆ ಬದುಕಿನ ಪ್ರತಿಯೊಂದು ವಲಯಕ್ಕೂ ವಿಸ್ತರಿಸಬೇಕಿದೆ ಅದರಲ್ಲಿ ಪ್ರವಾಸವು ಸೇರಬೇಕಿದೆ ಏಕೆಂದರೆ ನರ ಸಂಬಂಧಿ ಸಮಸ್ಯೆ ಅಥವಾ ವ್ಯತ್ಯಾಸಗಳ ಹೊರತಾಗಿಯೂ ಈ ಪ್ರಪಂಚವು ಎಲ್ಲರ ಹುಡುಕಾಟದ ಖುಷಿಗೂ ಕಾರಣವಾಗಬೇಕು.
ಪ್ರವಾಸ ಕೇವಲ ಸ್ಥಳಗಳನ್ನು ಗುರುತು ಹಾಕುವುದಲ್ಲ, ಅದೊಂದು ಸಂಪರ್ಕ ಸೇತುವೆ - ಸ್ಥಳಗಳೊಂದಿಗೆ ಜನರೊಂದಿಗೆ ನಮ್ಮೊಂದಿಗೆ ನಾವೇ ಸಂಪರ್ಕ ಸಾಧಿಸುವ ಸೇತುವೆಯದು. ಆಟಿಸ್ಟಿಕ್ ವ್ಯಕ್ತಿಗಳಿಗೆ ಈ ಸಂಪರ್ಕ ಬೇರೆಯದೇ ತೆರನಾಗಿರಬಹುದು ಆದರೆ ಅರ್ಥಪೂರ್ಣವಾಗಿಯಂತೂ ಇರುತ್ತದೆ. ಈ ವ್ಯತ್ಯಾಸಗಳನ್ನು ಅಪ್ಪಿಕೊಳ್ಳುತ್ತಲೇ ಪ್ರವಾಸವನ್ನು ನಾವು ಮರು ವ್ಯಾಖ್ಯಾನಿಸಬಹುದು.
ವಿಶ್ವ ಆಟಿಸಂ ದಿನದ ಈ ಸಂದರ್ಭದಲ್ಲಿ ಅರಿವಿಗೂ ಮಿಗಿಲಾಗಿ ಕ್ರಮಗಳನ್ನು ಕೈಗೊಳ್ಳುವತ್ತ ಕೈಜೋಡಿಸೋಣ ಸಹಾನುಭೂತಿಯುಳ್ಳ ಪ್ರಯಾಣವನ್ನು ವಿನ್ಯಾಸಗೊಳಿಸೋಣ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ನಿರ್ಮಿಸೋಣ ಪ್ರವಾಸವು ಎಲ್ಲರನ್ನೂ ಒಳಗೊಂಡಾಗ ಗಡಿಗಳಷ್ಟೇ ಅಲ್ಲ ಮನಸುಗಳು ಅಲ್ಲಿ ತೆರೆದುಕೊಳ್ಳುತ್ತವೆ!