ಜಪಾನ್ ಪ್ರವಾಸಕ್ಕೂ ಮುನ್ನ ಅಲ್ಲಿನ ಈ ಶಿಷ್ಟಾಚಾರಗಳನ್ನು ತಿಳಿದುಕೊಳ್ಳಿ..
ಜಪಾನ್ ಪ್ರವಾಸವನ್ನು ಕೈಗೊಳ್ಳಬೇಕೆಂದುಕೊಂಡಿದ್ದೀರಾ? ಹಾಗಾದರೆ ಅದಕ್ಕೂ ಮುನ್ನ ನೀವು ಅಲ್ಲಿನ ಶಿಷ್ಟಾಚಾರಗಳನ್ನು ಕಲಿತುಕೊಳ್ಳಲೇಬೇಕು. ಅಲ್ಲಿ ಶಿಸ್ತು, ಸಂಪ್ರದಾಯಗಳನ್ನು ತಿಳಿಯುವ ಹಾಗೂ ಅನುಸರಿಸುವ ಮೂಲಕ ನಿಮ್ಮ ಪ್ರವಾಸವನ್ನು ಸುಖಕರವಾಗಿಸಿಕೊಳ್ಳಬಹುದು.
ವಿಭಿನ್ನವಾದ ಆಚಾರಗಳು, ಸಂಪ್ರದಾಯಗಳು ಹಾಗೂ ಶಿಸ್ತಿಗೆ ಹೆಸರು ಮಾಡಿರುವ ದೇಶ ಜಪಾನ್. ಪ್ರಪಂಚದ ಇತರೇ ದೇಶಗಳಿಗೆ ಹೋಲಿಸಿದರೆ ಜಪಾನಿನ ಸಂಸ್ಕೃತಿ, ಆಚರಣೆಗಳೆಲ್ಲವೂ ತೀರಾ ವಿಶೇಷವಾದುವು. ಜಪಾನ್ಗೆ ಭೇಟಿ ನೀಡುವ ಪ್ರವಾಸಿಗರು, ಈ ಸಾಮಾಜಿಕ ಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನುಸರಿಸುವುದು ಅತೀ ಮುಖ್ಯವಾಗಿದೆ. ಈ ಮೂಲಕ ಮಾತ್ರವೇ ಪ್ರವಾಸ ಸುಗಮವಾದೀತು, ಹೆಚ್ಚು ಆನಂದದಾಯಕವಾದೀತು.
ಸಾಮಾನ್ಯವಾಗಿ ನಮಸ್ಕರಿಸುವುದರಿಂದ ಹಿಡಿದು ಚಾಪ್ಸ್ಟಿಕ್ಗಳ ಸರಿಯಾದ ರೀತಿಯ ಬಳಕೆಯವರೆಗೆ, ಜಪಾನಿನ ಶಿಷ್ಟಾಚಾರವು ಅಲ್ಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನೀವು ವಿರಾಮಕ್ಕಾಗಿ ಅಥವಾ ಕೆಲಸಕ್ಕಾಗಿ ಜಪಾನ್ ಗೆ ಪ್ರಯಾಣಿಸುತ್ತಿದ್ದರೆ ಈ ಶಿಷ್ಟಾಚಾರಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಲೇಬೇಕಾಗುತ್ತದೆ.
ಜಪಾನ್ಗೆ ಭೇಟಿ ನೀಡುವ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಅಗತ್ಯ ಜಪಾನೀಸ್ ಶಿಷ್ಟಾಚಾರಗಳು ಇಲ್ಲಿವೆ.
ನಮಸ್ಕರಿಸುವುದು – ಇದು ಗೌರವದ ಸೂಚಕ
ನಮಸ್ಕರಿಸಲು, ಧನ್ಯವಾದ ಹೇಳಲು ಅಥವಾ ಕ್ಷಮೆಯಾಚಿಸಲು ಸಾಮಾನ್ಯವಾಗಿ ಜಪಾನಿಗರು ನಮಸ್ಕರಿಸುತ್ತಾರೆ. ಸಾಂದರ್ಭಿಕ ಶುಭಾಶಯಗಳಿಗೆ ಸುಮಾರು 15 ಡಿಗ್ರಿಗಳಷ್ಟು ಮುಂದಕ್ಕೆ ಬಾಗಿದರೆ ಸಾಕು. ಆದರೆ ಔಪಚಾರಿಕ ಸಂದರ್ಭಗಳಲ್ಲಿ ಪೂರ್ಣವಾಗಿ ಮುಂದಕ್ಕೆ ಬಾಗುವ ಮೂಲಕ ಗೌರವ ಸೂಚಿಸಬೇಕಾಗುತ್ತದೆ.

ಮನೆಯೊಳಗೆ ಶೂಗಳನ್ನು ಹಾಕುವಂತಿಲ್ಲ
ಮನೆಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ ಅಥವಾ ದೇವಾಲಯಗಳಂತಹ ಸಾಂಪ್ರದಾಯಿಕ ಪರಿಸರಗಳಲ್ಲಿ ಶೂಗಳನ್ನು ಅನುಮತಿಸಲಾಗುವುದಿಲ್ಲ. ಯಾವಾಗಲೂ ಸ್ವಚ್ಛವಾದ ಸಾಕ್ಸ್ ಧರಿಸಿ ಮತ್ತು ಶೂ ರ್ಯಾಕ್ಸ್ ನಲ್ಲೇ ಶೂಗಳನ್ನು ಸರಿಯಾಗಿ ಜೋಡಿಸಿಡಬೇಕಾಗುತ್ತದೆ. ಇದು ಶುಚಿತ್ವವನ್ನು ಕಾಪಾಡಲು ಮಾತ್ರವಲ್ಲದೆ ಸ್ಥಳಕ್ಕೆ ನೀವು ಸಲ್ಲಿಸುವ ಗೌರವದ ಸಂಕೇತವಾಗಿದೆ.
ಸರತಿ ಸಾಲಿನಲ್ಲಿ ನಿಲ್ಲಲೇಬೇಕು
ಶಿಸ್ತಿಗೆ ಹೆಸರುವಾಸಿಯಾಗಿರುವ ಜಪಾನಿನ ಯಾವುದೇ ಸಾರ್ವಜನಿಕ ಪ್ರದೇಶಗಳನ್ನು ನೀವು ಭೇಟಿ ಕೊಡುವುದಾದರೂ ಸರತಿ ಸಾಲನ್ನು ಅನುಸರಿಸುವುದು ಅತೀ ಮುಖ್ಯ. ರೈಲು ನಿಲ್ದಾಣಗಳು, ಅಂಗಡಿಗಳು ಅಥವಾ ಕಾರ್ಯಕ್ರಮಗಳಲ್ಲಿ ಸಾಲಾಗಿ ನಿಲ್ಲಬೇಕಾಗುತ್ತದೆ. ನೂಕು ನುಗ್ಗಲಿಗೆ ಇಲ್ಲಿ ಆಸ್ಪದವಿಲ್ಲ. ತಾಳ್ಮೆಯಿಂದ ಸಾಲಿನಲ್ಲಿ ನಿಂತುಕೊಳ್ಳುವ ಮೂಲಕ ಇತರರ ಸಮಯ ಮತ್ತು ಶಿಸ್ತಿನ ನಡೆಯನ್ನು ಗೌರವಿಸಬೇಕಾಗುತ್ತದೆ.
ಸಾರ್ವಜನಿಕ ಸಾರಿಗೆಯಲ್ಲಿ ಮೌನವಾಗಿರಿ
ನೀವು ಜಪಾನಿನ ರೈಲುಗಳು ಮತ್ತು ಬಸ್ಸುಗಳಲ್ಲಿ ಪ್ರಯಾಣಿಸಿ, ಹೊಸ ಅನುಭವವನ್ನು ಪಡೆಯಲು ಬಯಸಿದರೆ ಮೊದಲು ಮೌನವಾಗಿರುವುದನ್ನು ಕಲಿಯಬೇಕಿದೆ. ಪ್ರಯಾಣಿಕರು ಜೋರಾಗಿ ಮಾತನಾಡುವುದು ಅಥವಾ ಫೋನ್ ಕರೆಗಳನ್ನು ಸ್ವೀಕರಿಸಿ, ಜೋರಾಗಿ ಮಾತನಾಡುವುದು ಪ್ರಯಾಣಿಕರಿಗೆ ಕಿರಿಕಿರಿಯುಂಟುಮಾಡಬಹುದು.
ಚಾಪ್ಸ್ಟಿಕ್ಗಳನ್ನು ಸರಿಯಾದ ರೀತಿಯಲ್ಲಿ ಬಳಸಿ
ಜಪಾನ್ನಲ್ಲಿ ಚಾಪ್ಸ್ಟಿಕ್ಗಳನ್ನು ಬಳಸಲು ಬೇರೆಯದೇ ನಿಯಮಗಳಿವೆ. ಸರಿಯಾದ ರೀತಿಯಲ್ಲಿ ಬಳಸುವ ಮೂಲಕ ಆಹಾರದ ಮೇಲಿ ನಿಮಗಿರುವ ಶ್ರದ್ಧೆ, ಪ್ರೀತಿ ಮಾತ್ರವಲ್ಲದೆ ಗೌರವನ್ನು ವ್ಯಕ್ತಪಡಿಸಬಹುದು.

ನಿಮ್ಮ ಮಾತುಗಳು ಸಭ್ಯವಾಗಿರಲಿ
ಜಪಾನ್ ಗೆ ಭೇಟಿ ನೀಡುವ ಮುನ್ನ ಅಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ವಾಕ್ಯಗಳನ್ನು ಕಲಿತುಕೊಳ್ಳಿ..ಧನ್ಯವಾದಗಳು, ನಮಸ್ಕಾರ, ಶುಭ ಮುಂಜಾನೆ, ಶುಭರಾತ್ರಿ, ಕ್ಷಮಿಸಿ ಇಂತಹ ಅಗತ್ಯ ವಾಕ್ಯಗಳನ್ನು ಜಪಾನ್ ಭಾಷೆಯಲ್ಲಿ ಕಲಿತುಕೊಳ್ಳವುದರಿಂದ ಜಪಾನಿಗರೊಂದಿಗೆ ಬೆರೆಯಲು ಸುಲಭವಾಗುತ್ತದೆ.
ಕಸವನ್ನು ಎಲ್ಲೆಂದರಲ್ಲಿ ಎಸೆಯದಿರಿ
ಶುಚಿತ್ವದ ಬಗ್ಗೆ ಅತಿಯಾಗಿ ಕಾಳಜಿ ವಹಸುವ ಜಪಾನಿಗರ ನಡುವೆ ನೀವು ಕೊಂಚ ಜಾಗರೂಕತೆಯಿಂದಿರಬೇಕಾಗುತ್ತದೆ. ಯಾಕೆಂದರೆ ಜಪಾನ್ನಲ್ಲಿ ಸಾರ್ವಜನಿಕ ಕಸದ ತೊಟ್ಟಿಗಳು ಬಹಳ ಕಡಿಮೆ ಇದ್ದರೂ, ಸ್ವಚ್ಛ ಬೀದಿ, ಪರಿಸರಕ್ಕೆ ಜಪಾನ್ ಹೆಸರುವಾಸಿಯಾಗಿದೆ. ಇಲ್ಲಿ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ಕಸವನ್ನು ಹಾಕುವುದಕ್ಕಾಗಿ ಸಣ್ಣ ಚೀಲವನ್ನು ಜೊತೆಗಿರಿಸಿಕೊಳ್ಳಿ. ಮತ್ತು ಅದನ್ನು ಮನೆಗೆ ವಾಪಾಸ್ ತಂದು, ಮರುಬಳಕೆ ತೊಟ್ಟಿಗಳಲ್ಲಿ ಹಾಕಿಬಿಡಿ.
ಉಡುಗೊರೆ ನೀಡುವ ಶಿಷ್ಟಾಚಾರ
ಉಡುಗೊರೆ ನೀಡುವುದು ಜಪಾನೀಸ್ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ. ಆದರೆ ಉಡುಗೊರೆ ನೀಡುವ ಮುನ್ನ ಸರಿಯಾದ ರೀತಿಯಲ್ಲಿ ಅನ್ನು ಪ್ಯಾಕ್ ಮಾಡಿಕೊಂಡು, ಎರಡೂ ಕೈಗಳಿಂದ ಉಡುಗೊರೆ ನೀಡುವ ರೂಢಿ ಮಾಡಿಕೊಳ್ಳಿ. ಇದು ಸಂಬಂಧಗಳಿಗೆ ಬೆಲೆ ಕೊಡುವುದು, ಸಂಬಂಧಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಇತರರಿಗೆ ಕೃತಜ್ಞತೆಯನ್ನು ಸಲ್ಲಿಸುವ ವಿಧಾನವಾಗಿರುತ್ತದೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಗೌರವಿಸಿ.
ಜಪಾನ್ನ ದೇವಾಲಯಗಳು, ಸಾಂಸ್ಕೃತಿಕ ಹೆಗ್ಗುರುತುಗಳನ್ನು ನೀವು ಬೇಟಿ ನೀಡುವ ವೇಳೆ ಆ ಸ್ಥಳಗಳಿಗೆ ಸೂಕ್ತ ರೀತಿಯ ಗೌರವ ನೀಡುವುದು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸಿ ತಾಣಗಳಲ್ಲಿ ಪೋಸ್ಟ್ ಮಾಡಲಾದ ಸೂಚನೆಗಳನ್ನು ಅನುಸರಿಸಿ, ನಿಷೇಧಿತ ಸ್ಥಳಗಳಲ್ಲಿ ಫೋಟೋ ತೆಗೆಯದಿರಿ ಮತ್ತು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವಾಗ ನಿಮ್ಮ ಉಡುಗೆಯ ಬಗ್ಗೆ ಗಮನಹರಿಸಿ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಜಪಾನ್ಗೆ ಭೇಟಿ ನೀಡುವುದು ಒಂದು ಉತ್ಕೃಷ್ಟ ಅನುಭವವನ್ನು ನೀಡುತ್ತದೆ. ಆದರೆ ಅದರ ಸಾಂಸ್ಕೃತಿಕ ಶಿಷ್ಟಾಚಾರಗಳನ್ನು ಅರ್ಥಮಾಡಿಕೊಡು ಮತ್ತು ಅಭ್ಯಾಸ ಮಾಡಿಕೊಳ್ಳುವ ಮೂಲಕ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸ್ಮರಣೀಯವಾಗಿಸಬಹುದು.