Friday, October 3, 2025
Friday, October 3, 2025

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್

ಸಾರ್ವಜನಿಕರಿಗೆ ವಿಧಾನಸೌಧವನ್ನು ಹತ್ತಿರವಾಗಿಸುವ ಉದ್ದೇಶದೊಂದಿಗೆ ಪ್ರವಾಸೋದ್ಯಮ ಇಲಾಖೆ ಗೈಡೆಡ್ ಟೂರ್ ಯೋಜನೆಯನ್ನು ಹಮ್ಮಿಕೊಂಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (DPAR) ಈಗಾಗಲೇ ಅನುಮತಿ ಸಿಕ್ಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ವಿಧಾನ ಸೌಧ ಎಂದರೆ ಸಾಮಾನ್ಯ ಜನರಿಗೆ ಅದೇನೋ ಕೌತುಕ. ಹೊರಗಿನಿಂದಲೇ ಅಷ್ಟೊಂದು ವಿಶಾಲವಾಗಿ, ಭವ್ಯವಾಗಿ ಕಾಣಿಸಿಕೊಳ್ಳುವ ವಿಧಾನಸೌದ ಒಳಗಿನಿಂದ ಇನ್ನೆಷ್ಟು ಸುಂದರವಾಗಿ ನಿರ್ಮಾಣವಾಗಿರಬಹುದು ಎಂಬುದು ಅನೇಕರ ಪ್ರಶ್ನೆ. ಜನಸಾಮಾನ್ಯರ ಇಂತಹ ಆಸಕ್ತಿ, ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ಕಾರ ಈಗ ಸಜ್ಜಾಗಿದೆ.. ಸಾರ್ವಜನಿಕರಿಗೆ ವಿಧಾನಸೌಧಕ್ಕೆ ಪ್ರವಾಸ ಕೈಗೊಳ್ಳುವ ಅವಕಾಶ ಕಲ್ಪಿಸಿದೆ.

ಸ್ಥಳೀಯರು, ಕರ್ನಾಟಕದ ಅನೇಕ ಕಡೆಗಳಿಂದ ಮಾತ್ರವಲ್ಲದೆ ದೇಶ ವಿದೇಶಗಳಿಂದ ವಿಧಾನ ಸೌಧವನ್ನು ವೀಕ್ಷಿಸಲು ಬರುವ ಪ್ರವಾಸಿಗರು, ಗೇಟಿನಿಂದ ಹೊರಭಾಗದಲ್ಲಿ ನಿಂತು ಸೌಧವನ್ನು ಕಣ್ತುಂಬಿಕೊಳ್ಳುತ್ತಾರೆ. ಅಲ್ಲದೆ ಅಲ್ಲೇ ಇರುವ ಖಾಸಗಿ ಫೊಟೋಗ್ರಾಫರ್‌ಗಳ ಸಹಾಯದಿಂದ ಸೌಧದ ಮುಂದೆ ನಿಂತು ಫೋಟೋ ತೆಗೆಸಿಕೊಂಡು, ಸೆಲ್ಫೀ ಹೊಡೆದುಕೊಂಡು ಮರಳುತ್ತಿದ್ದರು. ಆದರೆ ವಿಧಾನ ಸೌಧದ ಒಳಗೆ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಸದ್ಯ ಗೈಡೆಡ್‌ ಟೂರ್‌ನಿಂದಾಗಿ ಸಾಕಷ್ಟು ವರ್ಷಗಳ ಇತಿಹಾಸವಿರುವ ವಿಧಾನ ಸೌಧದೊಳಗೆ ಪ್ರವೇಶಿಸುವ ಅವಕಾಶ ಲಭ್ಯವಾಗಿದೆ. ಇಲ್ಲಿನ ಕಟ್ಟಡಗಳು, ಅವುಗಳ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಮಹತ್ತರದ ಉದ್ದೇಶವನ್ನು ಸರ್ಕಾರ ಹೊಂದಿದೆ. ‌

Vidhana-Soudha-2

ವಿಧಾನ ಸೌಧಕ್ಕೆ ಪ್ರವಾಸಿಗರು ಯಾವಾಗ ಭೇಟಿಕೊಡಬಹುದು ? ಪ್ರವೇಶ ಶುಲ್ಕವೆಷ್ಟು ?

ಪ್ರವಾಸೋದ್ಯಮ ಇಲಾಖೆಯು ಪ್ರವಾಸಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (DPAR) ಅನುಮತಿ ಕೋರಿದ್ದು, ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಆದರೆ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ, ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪ್ರವಾಸಗಳನ್ನು ನಡೆಸಬಹುದು ಎಂದು ಡಿಪಿಎಆರ್ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಸಾಫ್ಟ್‌ವೇರ್ ಅಭಿವೃದ್ಧಿಯಾಗಬೇಕಾಗಿದ್ದು, ಟಿಕೆಟ್ ದರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಭದ್ರತಾ ಇಲಾಖೆ ಅಧಿಕಾರಿಗಳ ಸಹಾಯದಿಂದ ಸೌಧದ ಒಳಗೆ ಮಾರ್ಗ ನಕ್ಷೆಯನ್ನು ಇನ್ನೂ ವಿನ್ಯಾಸಗೊಳಿಸಬೇಕಾಗಿದೆ. ನೀಲನಕ್ಷೆ ರೂಪುಗೊಂಡ ನಂತರ, ಪ್ರವಾಸಗಳು ಪ್ರಾರಂಭವಾಗುತ್ತವೆ.

ವಿಧಾನ ಸೌಧಕ್ಕೆ ಹೋಗುವ ಮುನ್ನ ನೀವು ತಿಳಿಯಬೇಕಿರುವ ವಿಚಾರ:

  • ನೀರಿನ ಬಾಟಲಿಗಳನ್ನು ಹೊರತುಪಡಿಸಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
  • ವಿಧಾನಸೌಧ ಆವರಣದಲ್ಲಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವಂತಿಲ್ಲ.
  • ಕಟ್ಟಡ, ಪ್ರತಿಮೆಗಳು ಅಥವಾ ಇತರ ರಚನೆಗಳಿಗೆ ಹಾನಿ ಮಾಡಕೂಡದು.
  • ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗಾಗಿ ಅಳವಡಿಸಲಿರುವ ಸೂಚನಾ ಫಲಕಗಳನ್ನು ತಿಳಿದು ಕಾರ್ಯನಿರ್ವಹಿಸಬೇಕು.
  • ಸೌಧದ ಆವರಣದಲ್ಲಿ ಡ್ರೋನ್‌ಗಳನ್ನು ಹಾರಿಸುವಂತಿಲ್ಲ.

ವಿಧಾನ ಸೌಧದ ಇತಿಹಾಸವನ್ನು ಅದರ ಮಹತ್ವ, ಒಳಾಂಗಣ ಕಟ್ಟಡ ವಿನ್ಯಾಸ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಇಂದಿನ ಯುವ ಜನಾಂಗ ತಿಳಿದುಕೊಳ್ಳಬೇಕಿದೆ. ಈ ಮಹತ್ತರದ ಉದ್ದೇಶದೊಂದಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರ ಕೈಜೋಡಿಸಿರುವುದು ಸಾರ್ವಜನಿಕರಲ್ಲೂ ಸಂತಸ ಮೂಡಿಸಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..