Monday, February 23, 2026
Monday, February 23, 2026

ಶಿಕ್ಷಣವನ್ನು ಉದ್ಯಮವಾಗಿಸುವ ಆಲೋಚನೆ ಇಲ್ಲ- ಅಜಯ್ ಪೂಜಾರ್‌

ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ತಮ್ಮೂರಿನ ಭಾಗದ ಜನರ ಶಿಕ್ಷಣದ ತೊಡಕುಗಳನ್ನು ಅರಿತ ಅಜಯ್‌ ಪೂಜಾರ್‌ ಹೊಳಲು ಭಾಗದ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ 2010ರಲ್ಲಿ ಸಾಧನ ಶಾಲೆಯನ್ನು ಕಟ್ಟಿದ್ದರು. ಇಂದಿಗೆ ಅದು 15 ವರ್ಷಗಳನ್ನು ಪೂರೈಸಿದೆ. ಸುತ್ತ ಐವತ್ತು ಹಳ್ಳಿಗಳು ಸೇರಿ ಹತ್ತಿರದ ನಗರಗಳಿಂದಲೂ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ರೈತಾಪಿ ಮಕ್ಕಳಿಗೂ ಕೈಗೆಟಕುವ ಶುಲ್ಕದಲ್ಲಿ ಸಿಬಿಎಸ್‌ಸಿ ಶಿಕ್ಷಣ ನೀಡುತ್ತಿರುವ ಸಾಧನ ಶಾಲೆಯ ಸಾಧನೆಯ ಹಾದಿಯ ಕುರಿತು ಸಂಸ್ಥೆಯ ಅಧ್ಯಕ್ಷ ಅಜಯ್‌ ಪೂಜಾರ್‌ ಅವರ ಸಂದರ್ಶನ ನಡೆಸಿದೆ.

ಸಂದರ್ಶನ: ಚಿದಾನಂದ ರುದ್ರಪುರ ಮಠ್‌

ಸಾಧನಾ ಶಾಲೆ 15 ವರ್ಷಗಳನ್ನು ಪೂರೈಸಿ 16ನೆಯ ವರ್ಷಕ್ಕೆ ದಾಪುಗಾಲು ಇಡುತ್ತಿದೆ ಆರಂಭದಿಂದ ಇಂದಿನವರೆಗಿನ ಸಂಸ್ಥೆಯ ಪಯಣದ ಬಗ್ಗೆ ಏನು ಹೇಳುವಿರಿ?

2009-10ರಲ್ಲಿ ಆರಂಭವಾದ ಪುಟ್ಟ ಶಾಲೆಯಿದು. ಈ ಶಾಲೆ ಆರಂಭವಾಗಲು ಕಾರಣ ಈ ಹಳ್ಳಿಯ ಭಾಗದಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ಇರಲಿಲ್ಲ. ಸ್ವತಃ ನಾನೇ ಇಲ್ಲಿನ ಶಾಲೆಗಳಲ್ಲಿ ಓದಿದ್ದೇನೆ. ಇಲ್ಲಿನ ಶಿಕ್ಷಣದ ಕುರಿತು ನನಗೆ ತುಂಬಾ ಪರಿಚಯವಿದೆ. ಹಾಗಾಗಿ ಈ ಭಾಗಕ್ಕೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಕನಸು ಕಂಡಿದ್ದೆ. ಇದಕ್ಕಾಗಿ ಒಂದು ಸ್ಟಾಂಡರ್ಡ್‌ ಶಾಲೆಯನ್ನು ಕಟ್ಟಬೇಕು ಎಂದು ಸಂಕಲ್ಪ ಮಾಡಿದ್ದೆ. ಬಿಎಸ್‌ಸಿ ಮತ್ತು ಎಂಬಿಎ ಕಂಪ್ಲೀಟ್‌ ಆದ ನಂತರ ಅಂದರೆ 2009-10ರಲ್ಲಿ ನಮ್ಮದೇ ಚಿಕ್ಕ ಬಿಲ್ಡಿಂಗ್‌ನಲ್ಲಿ ಶಾಲೆಯನ್ನು ಆರಂಭಿಸಿದೆ. ಇದು ಸ್ಟೇಟ್‌ ಬೋರ್ಡ್‌ ಶಾಲೆಯಾಗಿತ್ತು. ಆಗ ಕೇವಲ 49 ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲಿದ್ದರು. ನಂತರ 2013ರಲ್ಲಿ ಸಿಬಿಎಸ್‌ಸಿ ಪರ್ಮಿಷನ್‌ ದೊರಕಿತು. ಈಗ 1050-1100 ವಿದ್ಯಾರ್ಥಿಗಳು ಇಂದು ಶಿಕ್ಷಣ ಪಡೆಯುತ್ತಿದ್ದಾರೆ. 11 ಬಸ್‌ಗಳು ಇವೆ. ಸುಮಾರು 30 ಕಿಮೀ ವ್ಯಾಪ್ತಿಯಲ್ಲಿನ 45-50 ಹಳ್ಳಿಯ ಮಕ್ಕಳು ಇಂದು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಬರುತ್ತಿದ್ದಾರೆ.

ಇದನ್ನೂ ಓದಿ: ದಿನೇಶ್‌ ಆರ್‌ ನಾಯ್ಕ್‌ ನಾಯಕತ್ವದಲ್ಲಿ ದೇಶಪಾಂಡೆ ಐಟಿಐ ಕಾಲೇಜು

ಈ ಶಿಕ್ಷಣ ಸಂಸ್ಥೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಹೇಳಿ.

ಈ ಮೊದಲು ನಾವು ಸ್ಟೇಟ್‌ ಬೋರ್ಡ್‌ ಅಡಿ ಕೆಲಸ ಮಾಡುತ್ತಿದ್ದೆವು. ಒಂದು ನಿಗದಿತ ಪ್ಯಾರಾಮೀಟರ್‌ನಲ್ಲಿ ಕೆಲಸ ಮಾಡಬೇಕಿತ್ತು. ಸಿಬಿಎಸ್‌ಸಿ ಬೋರ್ಡ್‌ಗೆ ನಾವು ಸೇರಿದಾಗಿನಿಂದ ಗೆಸ್ಟ್‌ ಲೆಕ್ಚರರ್ ಗಳನ್ನು ಕರೆಸುತ್ತಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೇರೆ ಬೇರೆ ಪಿಯು ಕಾಲೇಜುಗಳಿಂದ ಇಂಟರ್‌ವ್ಯೂಗಳು ನಡೆಯುತ್ತಿರುತ್ತವೆ. ಅವರು ನಮ್ಮಲ್ಲಿನ ಮಕ್ಕಳನ್ನು ಪಿಯು ಎಜುಕೇಷನ್‌ ನೀಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ವಾಲಿಟಿ ಎಜುಕೇಷನ್‌ ಮತ್ತು ನಿರಂತರ ಶಿಕ್ಷಣ ನೀಡುತ್ತಿದ್ದೇವೆ. ಒಂಬತ್ತನೆಯ ತರಗತಿಯ ಕ್ಲಾಸ್‌ಗಳನ್ನು ಬೇಗನೇ ಮುಗಿಸಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೇಗನೇ ತರಗತಿ ಆರಂಭಿಸುತ್ತೇವೆ. ಅವರಿಗೆ 13 ತಿಂಗಳುಗಳ ಕಾಲ ತರಗತಿಗಳನ್ನು ಆಯೋಜಿಸುತ್ತೇವೆ. 100 ಪ್ರತಿಶತ ನಮ್ಮ ಪ್ರತಿವರ್ಷದ ರಿಸಲ್ಟ್‌ ಇದ್ದೇ ಇರುತ್ತದೆ. ಸೈನ್ಸ್‌ಗೆ ನಮ್ಮಲ್ಲಿ ಹೆಚ್ಚಿನ ಆದ್ಯತೆ ಇರುತ್ತದೆ. ಅಗತ್ಯವಿರುವ ಎಲ್ಲಾ ಡಿಜಿಟಲ್‌ ಸಿಸ್ಟಮ್‌ಗಳನ್ನೂ ಅಳವಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನೂತನ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎನ್ನುವ ಆಸೆ ನಮ್ಮದು.

Untitled design (40)

ಇಲ್ಲಿ ಶಿಕ್ಷಣ ಪಡೆದ ಮಕ್ಕಳ ಸಾಧನೆಗಳ ಕುರಿತು ತಿಳಿಸುವಿರಾ?

ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡುವುದೇ ನಮ್ಮ ಉದ್ದೇಶವಾಗಿತ್ತು. ಇಲ್ಲಿ ಶಿಕ್ಷಣ ಪಡೆದ ಮಕ್ಕಳು ಇಂದು ಮೆಡಿಕಲ್‌, ಎಂಜಿನಿಯರಿಂಗ್‌ ಮಾಡುತ್ತಿದ್ದಾರೆ. ಲೆಕ್ಚರರ್‌ಗಳಾಗಿದ್ದಾರೆ. ನಾವು ಸೈನ್ಸ್‌ ಮತ್ತು ಎಂಜಿನಿಯರಿಂಗ್‌ಗೆ ಆದ್ಯತೆ ನೀಡುತ್ತಿರುವ ಪರಿಣಾಮ ಅವರು ಮೆಡಿಕಲ್‌, ಎಂಜಿನಿಯರಿಂಗ್‌ ಭಾಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ರಷ್ಯಾ, ಜಪಾನ್‌ಗಳಿಗೆ ಹೋಗಿ ಎಂಬಿಬಿಎಸ್‌ ಪದವಿ ಪಡೆದು ಡಾಕ್ಟರ್‌ಗಳಾಗಿದ್ದಾರೆ.

ಹಳ್ಳಿ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು ಕಾರಣ ಏನು?

ಇಲ್ಲಿ ಕ್ವಾಲಿಟಿ ಎಜುಕೇಷನ್‌ನ ಕೊರತೆ ಇತ್ತು. ಅದು ನಾನು ಶಿಕ್ಷಣ ಸಂಸ್ಥೆ ತೆರೆಯಲು ಕಾರಣವಾಯಿತು. ಹುಬ್ಬಳ್ಳಿ, ಹಾವೇರಿ, ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆ ಮಾಡಿದ್ದರೆ ಇಲ್ಲಿನ ಮಕ್ಕಳು ಶಿಕ್ಷಣಕ್ಕಾಗಿ ಅಲ್ಲಿಗೆ ಹೋಗುತ್ತಿರುವುದು ತಪ್ಪುತ್ತಿರಲಿಲ್ಲ. ಹಾಗಾಗಿ ಹಳ್ಳಿ ಭಾಗದಲ್ಲಿಯೇ ಶಿಕ್ಷಣ ಸಂಸ್ಥೆ ಮಾಡಲು ಯೋಚಿಸಿದೆ. ಸಣ್ಣದಾದರೂ ಸರಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಈ ಶಿಕ್ಷಣ ಸಂಸ್ಥೆ ಆರಂಭಿಸಿದೆ.

ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಇರುವ ತೊಡಕುಗಳು ಏನು?

ಮೊದಲಿಗೆ ಈ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ 30-40 ಕಿಮೀ ಒಳಗೆ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ಟೀಚರ್‌ಗಳು, ಹಾಸ್ಟೆಲ್‌ಗಳು, ಅಕಾಮುಡೇಶನ್‌ ಎಲ್ಲವನ್ನೂ ಒಟ್ಟುಮಾಡುವುದು ದೊಡ್ಡ ಕೆಲಸ. ಇದಕ್ಕೆಲ್ಲ ದೊಡ್ಡ ಇನ್ಫ್ರಾಸ್ಟ್ರಕ್ಚರ್‌ ಬೇಕೇ ಬೇಕು. ನಮಗೆ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಲೇಬೇಕು, ಗುಣಮಟ್ಟದ ಶಿಕ್ಷಣ ನೀಡಲೇಬೇಕು ಎನ್ನುವ ಉದ್ದೇಶವಿದ್ದಿದ್ದರಿಂದ ನಾವು ಪುಟ್ಟದಾಗಿ ಆರಂಭಿಸಿದೆವು. ಈಗ 1050-1100 ಮಕ್ಕಳು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದು ನಮಗೆ ಖುಷಿ ತಂದಿದೆ.

Untitled design (39)

ಸಾಧನಾ ಪಬ್ಲಿಕ್‌ ಸ್ಕೂಲ್‌ನಂತೆ ಬೇರೆಡೆಗಳಲ್ಲಿ ಶಾಲೆಗಳನ್ನು ಆರಂಭಿಸುವ ಆಲೋಚನೆ ಇದೆಯಾ?

ಇಲ್ಲ. ನಮ್ಮ ಊರಿನಲ್ಲಿ ಈ ಥರದ ಸಂಸ್ಥೆ ಹುಟ್ಟುಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಈಗ ನಮ್ಮ ಸಂಸ್ಥೆ ನಮ್ಮ ಭಾಗದ ಮಕ್ಕಳಿಗೆ ಉತ್ತಮ ಎಜುಕೇಷನ್‌ ನೀಡುತ್ತಿದೆ. ಈ ಕುರಿತು ನಮಗೆ ಹೆಮ್ಮೆ ಇದೆ. ಬೇರೆಡೆ ಶಾಲೆಗಳನ್ನು ಆರಂಭಿಸುವ ಯಾವ ಆಲೋಚನೆಯೂ ಇಲ್ಲ. ಉದ್ಯಮವನ್ನು ಆರಂಭಿಸುವ ಆಲೋಚನೆಯೂ ಇಲ್ಲ. ನಮಗೆ ಈ ಶಿಕ್ಷಣ ಸಂಸ್ಥೆ ಕಟ್ಟಿದಕ್ಕೆ ಸಂತೃಪ್ತಿ ಇದೆ.

--

ಸಾಧನಾ ಶಾಲೆ ಪ್ರಾರಂಭವಾಗಲು ಮೂಲ ಕಾರಣ ಪೂಜಾರ ಕುಟುಂಬ. ಈ ಕುಟುಂಬವು ಸುಮಾರು ಒಂದೂವರೆ ದಶಕದ ಹಿಂದೆ ಈ ಭಾಗದಲ್ಲಿದ್ದ ಶಿಕ್ಷಣದ ಕೊರತೆಯನ್ನು ಗಮನಿಸಿ ತಮ್ಮ ಗ್ರಾಮೀಣ ಭಾಗಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡಲು ನಿರ್ಧರಿಸಿ ʻಸಾಧನಾʼ ಎಂಬ ಸುಂದರ ಶಾಲೆಯನ್ನು ನಿರ್ಮಿಸಿದರು. ಈ ಮೂಲಕ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಸಂಸ್ಥೆಯು ಶ್ರೀ. ಚಂದ್ರಶೇಖರ ಡಿ ಪೂಜಾರ ಅವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀ. ಅಜಯ ಬಿ ಪೂಜಾರ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಮುನ್ನಡೆಸಲ್ಪಡುತ್ತಿದೆ. ಸಂಸ್ಥೆಯ ಜವಾಬ್ದಾರಿಯುತ ಸ್ಥಾನವಾದ ಆಡಳಿತಾಧಿಕಾರಿಯಾಗಿ ನನ್ನನ್ನು ಆಯ್ಕೆ ಮಾಡಿ ಈ ಸಂಸ್ಥೆಗೆ ಅಳಿಲು ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ.

ಕೇವಲ ಶಿಕ್ಷಣ ರಂಗದಲ್ಲಿ ಅಷ್ಟೇ ಅಲ್ಲದೆ ವೈದ್ಯಕೀಯ, ಕೃಷಿ, ವ್ಯಾಪಾರಗಳಲ್ಲಿ ತಮ್ಮ ಅಮೋಘ ಸೇವೆಯನ್ನು ಸಲ್ಲಿಸಲು ಗ್ರಾಮೀಣ ಭಾಗದ ಅನೇಕ ಬಡ ಕುಟುಂಬಗಳಿಗೆ ಆಧಾರವಾಗಿ ನಿಲ್ಲಲು ಇತರೆ ಸಂಸ್ಥೆಗಳಾದ ಸಾಯಿ ಹಾಸ್ಪಿಟಲ್, ಸಾಧನಾ ಫರ್ಟಿಲೈಜರ್ಸ ಮತ್ತು ಪೆಸ್ಟಿಸೈಡ್ಸ್, ಸಾಧನಾ ಪೆಟ್ರೋಲಿಯಂ, ಸೂರಜ್ ಆಗ್ರೋ ಡಿಸ್ಟಲರೀಸ್, ಸಾಧನಾ ಸಿರಿ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿ ಸೇವೆ ಸಲ್ಲಿಸುವುದರ ಜತೆಗೆ ಸಾವಿರಾರು ಕುಟುಂಬಗಳಿಗೆ ದಾರಿ ದೀಪವಾಗಿದ್ದಾರೆ.

ಸಾಧನ ಶಾಲೆಯೊಂದಿಗೆ ನನ್ನದು 15ವರ್ಷಗಳ ಪಯಣ

ಕಳೆದ ಒಂದೂವರೆ ದಶಕದಿಂದ ಸಾಧನ ಶಾಲೆಯ ಆಡಳಿತ ಮಂಡಳಿಯ ಅವಿಭಾಜ್ಯ ಅಂಗವಾಗಿ ಕೆಲಸ ಮಾಡಿರುವುದು ನನಗೆ ಸಂತಸದ ವಿಷಯ. ಇದು ನನಗೆ ಕೇವಲ ಉದ್ಯೋಗವಾಗಿರದೆ ಒಂದು ಭಾವನಾತ್ಮಕ ಪಯಣವೂ ಆಗಿದೆ. ಈ 15 ವರ್ಷಗಳಲ್ಲಿ ನನಗಾದ ಅನುಭವಗಳು ಅಪಾರವಾಗಿವೆ.

ಶಿಸ್ತು ಮತ್ತು ಮೌಲ್ಯಯುತ ಶಿಕ್ಷಣ

ಸಾಧನ ಶಾಲೆಯು ಕೇವಲ ಅಂಕಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಆಡಳಿತಾಧಿಕಾರಿಯಾಗಿ, ಶಾಲೆಯ ಈ ಶಿಸ್ತುಬದ್ಧ ವಾತಾವರಣವೇ ನನಗೆ ಕೆಲಸ ಮಾಡಲು ಉತ್ತಮ ಸ್ಪೂರ್ತಿ ನೀಡಿದೆ.

ನಿರಂತರ ಬೆಳವಣಿಗೆ ಮತ್ತು ಮೂಲಸೌಕರ್ಯ

15 ವರ್ಷಗಳಿಂದಳು ಶಾಲೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ನೂತನ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವುದು, ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಡಿಜಿಟಲ್ ತರಗತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾದನಾ ಶಾಲೆ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿರುವುದು ಹೆಮ್ಮೆಯ ಸಂಗತಿ.

ತಂಡದ ಸಹಕಾರ

15 ವರ್ಷಗಳ ನನ್ನ ಸುದೀರ್ಘ ಸೇವೆಯಲ್ಲಿ ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮ್ಯಾನೇಜ್‌ಮೆಂಟ್‌ ಸಹಕಾರ ಅಪಾರವಾಗಿದೆ. ಎಲ್ಲರೂ ಒಂದು ಕುಟುಂಬದಂತೆ ಶ್ರಮಿಸುವುದರಿಂದಲೇ ಸಾಧನಾ ಶಾಲೆಯಲ್ಲಿ ಇಂದು ಸುತ್ತಲಿನ ಐವತ್ತು ಹಳ್ಳಿಗಳ ಮಕ್ಕಳೂ ಶಿಕ್ಷಣ ಪಡೆಯಲು ಬರುತ್ತಿದ್ದಾರೆ.

Untitled design (38)

ವಿದ್ಯಾರ್ಥಿಗಳ ಸಾಧನೆಯೇ ನಮ್ಮ ಯಶಸ್ಸು

ಪ್ರತಿವರ್ಷ ಸಾಧನಾ ಶಾಲೆಯಿಂದ ಹೊರಹೋಗುವ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನ ಅಲಂಕರಿಸುತ್ತಿದ್ದಾರೆ. ಇದನ್ನು ನೋಡುವುದೇ ಒಬ್ಬ ಆಡಳಿತಾಧಿಕಾರಿಯಾಗಿ ನನಗೆ ಸಿಗುವ ದೊಡ್ಡ ಗೌರವ.

ಒಟ್ಟಾರೆ ʻಸಾಧನ ಶಾಲೆ ಎಂಬುದು ಕೇವಲ ಇಟ್ಟಿಗೆ-ಮಣ್ಣಿನ ಕಟ್ಟಡವಲ್ಲ; ಇದು ಸಾವಿರಾರು ಕನಸುಗಳನ್ನು ನನಸು ಮಾಡುವ ದೇಗುಲ. ಇಲ್ಲಿನ 15 ವರ್ಷಗಳ ಸೇವೆ ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳನ್ನು ನೀಡಿದೆʼ.

  • ಆಡಳಿತ ಅಧಿಕಾರಿಗಳು, ಶ್ರೀ. ಕೋಟೆಪ್ಪ ಬಿ

--

ಸಾಧನಾ ಆಂಗ್ಲ ಮಾಧ್ಯಮ ಶಾಲೆ ಹೊಳಲು ಪೂಜಾರ ಕುಟುಂಬದವರಿಂದ ಸ್ಥಾಪಿನೆಗೊಂಡಿತು. ಆಡಳಿತಾಧಿಕಾರಿ ಶ್ರೀ. ಕೋಟೆಪ್ಪ ಬಿ ಅವರು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅಗತ್ಯ ಸಂದರ್ಭಗಳಲ್ಲಿ ನಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಶಾಲೆಯ ಆಡಳಿತ ಸುಗಮವಾಗಿದೆ. ಪ್ರಾಂಶುಪಾಲರಾಗಿ ಯಾವ ಅಡೆತಡೆಗಳು ಇಲ್ಲದಂತೆ ಮಕ್ಕಳ ಶಿಕ್ಷಣವನ್ನು ಕೇಂದ್ರೀಕರಿಸಲು ಸಹಾಯಕವಾಗಿದೆ. ಇವರ ಸಂಪನ್ಮೂಲಗಳ ನಿರ್ವಹಣೆ ಮತ್ತು ಪರಿಣಾಮಕಾರಿ ನೀತಿ ನಿಯಮಗಳು ಶಾಲೆಯ ನಿರ್ವಹಣೆಗೆ ಸಹಕಾರಿಯಾಗಿವೆ ಎಂದರೆ ತಪ್ಪಾಗದು. ಯಾವ ಒತ್ತಡಗಳೂ ಇಲ್ಲದಿರುವುದರಿಂದ ಶಿಕ್ಷಕರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣವೂ ದೊರೆಯುತ್ತಿದೆ. ಶಿಕ್ಷಕರೂ, ತರಗತಿಯಲ್ಲಿ ತಮ್ಮ ಸಮರ್ಪಣೆ, ನವೀನ ಭೊಧನಾ ವಿಧಾನಗಳು ಮತ್ತು ನೇರವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಿಕೆಯ ಮೂಲಕ ಪರಿಣಾಮಕಾರಿಯಾಗಿ ಶಿಕ್ಷಣ ನೀಡುತ್ತಿದ್ದಾರೆ. ಪೋಷಕರಿಂದಲೂ ನಮಗೆ ಸಹಕಾರ ದೊರೆಯುತ್ತಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯ ರೂಪಿಸುವಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನಬಹುದು.
-ಪ್ರಾಂಶುಪಾಲರು, ಪ್ರಶಾಂತಗೌಡ ಬಿ

ಸಾಧನಾ ಶಾಲೆ ನಮ್ಮ ಈ ಭಾಗದ ಎಲ್ಲಾ ಗ್ರಾಮೀಣ ಮಕ್ಕಳಿಗೆ ಅತ್ಯಂತ ಇಷ್ಟದ ಶಾಲೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರವನ್ನು ಶಾಲೆ ನೀಡುತ್ತಿದೆ. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಎಲ್ಲಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗುವಂತೆ ಪ್ರೋತ್ಸಾಹಿಸುತ್ತಾರೆ. ಫಲಿತಾಂಶದ ಜತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೂ ಸಾಧನಾ ಶಾಲೆ ಶ್ರಮಿಸುತ್ತಿರುವುದು ಸಂತಸದ ವಿಷಯ. ಸಾಧನಾ ಶಾಲೆಯು ದೊಡ್ಡ ಕಟ್ಟಡ, ವಿಶಾಲವಾದ ತರಗತಿಗಳು, ಮೈದಾನ ಹೊಂದಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಿದೆ.
-ಮಾಲತೇಶ. ಕೋರಿ ವಕೀಲರು, ಮೈಲಾರ
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್

Read Next

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್