Thursday, June 12, 2025
Thursday, June 12, 2025

ದೆಹಲಿಯಿಂದ ಈ ಭಾಗಗಳಿಗೆ ರೈಲು ಪ್ರಯಾಣ ಮಾಡಿ ನೋಡಿ; ಮತ್ತೆ ಮತ್ತೆ ಹೋಗಬೇಕು ಅನ್ನಿಸಿಬಿಡುತ್ತದೆ..

ದೇಶ ಸುತ್ತಾಡಬೇಕು ಅಂದುಕೊಳ್ಳುವ ಸಾಕಷ್ಟು ಮಂದಿ. ಆದರೆ ದೇಶದ ಹಲವೆಡೆ ರೈಲ್ವೇ ಪ್ರಯಾಣದ ಮೂಲಕವೇ ಪರಿಸರವನ್ನು ಆಸ್ವಾದಿಬೇಕೆಂದುಕೊಳ್ಳುವವರು ಇನ್ನೂ ಅನೇಕ ಮಂದಿ..ಅಂಥವರಿಗಾಗಿ ಇಲ್ಲಿಗೆ ದೆಹಲಿಯಿಂದ ಕೈಗೊಳ್ಳಬಹುದಾದ ಅತ್ಯುತ್ತಮ ರೈಲು ಪ್ರಯಾಣಗಳ ಮಾಹಿತಿ.

ಭಾರತದಲ್ಲಿದಾದ್ಯಂತ ರೈಲು ಪ್ರಯಾಣವನ್ನು ಮಾಡುವುದೆಂದರೆ ಅದೆಷ್ಟು ಸುಂದರ ಅನುಭವವನ್ನು ಕಟ್ಟಿಕೊಡುತ್ತದೆ ಗೊತ್ತಾ? ದೇಶದ ವೈವಿಧ್ಯಮಯ ಭೂದೃಶ್ಯಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಹೆಗ್ಗುರುತುಗಳನ್ನು ಕಣ್ತುಂಬಿಕೊಳ್ಳಲು ವಿಶೇಷ ವೇದಿಕೆಯನ್ನು ಇದು ಕಲ್ಪಿಸಿಕೊಡುತ್ತದೆ.

ಅದರಲ್ಲೂ 2025ರಲ್ಲಿ ರೈಲಿನಲ್ಲಿ ಪ್ರಯಾಣಿಸಲು ನೀವು ಯೋಚಿಸುತ್ತಿದ್ದರೆ, ದೆಹಲಿಯಿಂದ ರೈಲಿನ ಮೂಲಕ ಹೋಗಬಹುದಾದ ಅತ್ಯದ್ಭುತ ಸ್ಥಳಗಳಿವೆ. ಪ್ರಾಚೀನ ಕೋಟೆಗಳು ಮತ್ತು ಅರಮನೆಗಳಿಂದ ಪ್ರಾರಂಭವಾಗಿ ಗಿರಿಧಾಮಗಳ ಶಾಂತ ಸೌಂದರ್ಯವನ್ನು ಪ್ರಯಾಣಿಕರು ಇಲ್ಲಿ ಆನಂದಿಸಬಹುದು.

ದೆಹಲಿಯಿಂದ ರೈಲಿನಲ್ಲಿ ನೀವು ಭೇಟಿ ನೀಡಬಹುದಾದ ಪ್ರಮುಖ ತಾಣಗಳ ಮಾರ್ಗದರ್ಶಿ ಇಲ್ಲಿದೆ. ಪ್ರತಿಯೊಂದೂ ಇತಿಹಾಸ, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯದ ವಿಶಿಷ್ಟ ಅನುಭವಗಳನ್ನು ನಿಮಗೆ ಒದಗಿಸುತ್ತದೆ.

ದೆಹಲಿಯಿಂದ ಕೈಗೊಳ್ಳಲೇಬೇಕಾದ ಪ್ರಮುಖ ರೈಲು ಪ್ರಯಾಣಗಳಿವು:

ಜೈಪುರ - ಗುಲಾಬಿ ನಗರ

ದೆಹಲಿಯಿಂದ ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಒಮ್ಮೆಯಾದರೂ ರೈಲಿನಲ್ಲಿ ಪ್ರಯಾಣಿಸಿ ಬನ್ನಿ. ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರು ಮಾಡಿರುವ ಜೈಪುರದಲ್ಲಿ ಭವ್ಯವಾದ ಕೋಟೆಗಳು, ಅತಿ ಮನೋಹರವಾದ ಅರಮನೆಗಳನ್ನು ಕಣ್ತುಂಬಿಕೊಳ್ಳಬಹುದು. ಪ್ರಸಿದ್ಧ ಅಂಬರ್ ಕೋಟೆ, ಹವಾ ಮಹಲ್ ಮತ್ತು ಸಿಟಿ ಪ್ಯಾಲೇಸ್ ಅನ್ನು ಮಿಸ್‌ ಮಾಡದೇ ನೋಡಿಬನ್ನಿ. ಅಲ್ಲಿನ ಸ್ಥಳೀಯ ಖಾದ್ಯಗಳನ್ನು ಸವಿಯಲು ಮರೆಯಬೇಡಿ.

ದೂರ: 280 ಕಿಮೀ

ಪ್ರಯಾಣದ ಸಮಯ: 5-6 ಗಂಟೆಗಳು

ರೈಲು ಆಯ್ಕೆ: ಶತಾಬ್ದಿ ಎಕ್ಸ್‌ಪ್ರೆಸ್ ಅಥವಾ ಅಜ್ಮೀರ್ ಶತಾಬ್ದಿ ಎಕ್ಸ್‌ಪ್ರೆಸ್

ಆಗ್ರಾ - ತಾಜ್ ಮಹಲ್

ಆಗ್ರಾದಲ್ಲಿರುವ ತಾಜ್ ಮಹಲ್ ನೋಡುವಾಸೆ ನಿಮಗಿದ್ದರೆ ದೆಹಲಿಯಿಂದ ಆಗ್ರಾಕ್ಕೆ ರೈಲು ವ್ಯವಸ್ಥೆಯಿದೆ. ತಾಜ್ ಹೊರತಾಗಿ, ನೀವು ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗೆ ಭೇಟಿ ನೀಡಬಹುದು. ಇವೆರಡೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿವೆ. ದೆಹಲಿಯಿಂದ ಆಗ್ರಾಗೆ ಅತಿ ಕಡಿಮೆ ಸಮಯದಲ್ಲಿ ರೈಲು ಪ್ರಯಾಣ ಸಾಧ್ಯವಿದ್ದು, ಈ ನಡುವೆ ಯಮುನಾ ನದಿ ಸೇರಿದಂತೆ ಪ್ರಕೃತಿ ರಮಣೀಯ ನೋಟಗಳನ್ನು ನೀಡುತ್ತದೆ.

ದೂರ: 230 ಕಿಮೀ

ಪ್ರಯಾಣದ ಸಮಯ: 2-3 ಗಂಟೆಗಳು

ರೈಲು ಆಯ್ಕೆ: ಗತಿಮಾನ್ ಎಕ್ಸ್‌ಪ್ರೆಸ್ ಅಥವಾ ಶತಾಬ್ದಿ ಎಕ್ಸ್‌ಪ್ರೆಸ್

ವಾರಣಾಸಿ - ಭಾರತದ ಆಧ್ಯಾತ್ಮಿಕ ರಾಜಧಾನಿ

ಆಧ್ಯಾತ್ಮಿಕ ಅನುಭವವನ್ನು ಪಡೆಯಲು ಬಯಸುವವರಿಗೆ, ವಾರಣಾಸಿಯು ಸೂಕ್ತ ಸ್ಥಳ. ಗಂಗಾ ನದಿಯ ಉದ್ದಕ್ಕೂ ಇರುವ ಪ್ರಾಚೀನ ಘಾಟ್‌ಗಳು ಮತ್ತು ವಿಶೇಷವಾದ ದೇವಾಲಯಗಳಿಗೆ ಹೆಸರುವಾಸಿಯಾದ ವಾರಣಾಸಿ, ಭಾರತದ ಆಧ್ಯಾತ್ಮಿಕ ಭೂದೃಶ್ಯದ ಹೃದಯಭಾಗವಾಗಿದೆ. ದಶಾಶ್ವಮೇಧ ಘಾಟ್‌ನಲ್ಲಿ ಮೋಡಿಮಾಡುವ ಗಂಗಾ ಆರತಿಯನ್ನು ವೀಕ್ಷಿಸಿ ಮತ್ತು ಗಂಗಾ ನದಿಯಲ್ಲಿ ದೋಣಿ ವಿಹಾರ ಮಾಡುವುದನ್ನು ಮರೆಯಬೇಡಿ.

ದೂರ: 760 ಕಿ.ಮೀ

ಪ್ರಯಾಣದ ಸಮಯ: 12-14 ಗಂಟೆಗಳು

ರೈಲು ಆಯ್ಕೆ: ವಂದೇ ಭಾರತ್ ಎಕ್ಸ್‌ಪ್ರೆಸ್ ಅಥವಾ ವಾರಣಾಸಿ ಎಕ್ಸ್‌ಪ್ರೆಸ್

ಅಮೃತಸರ - ಸ್ವರ್ಣ ದೇವಾಲಯ ಮತ್ತು ಪಂಜಾಬಿ ಆತಿಥ್ಯ

ಪಂಜಾಬ್‌ನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿಯಲು, ಆನಂದಿಸಲು ಬಯಸುವವರು ಮೊದಲು ಸ್ವರ್ಣ ದೇವಾಲಯವಿರುವ ಅಮೃತಸರಕ್ಕೆ ಭೇಟಿ ನೀಡಲೇಬೇಕು. ಅದರ ಜೊತೆಗೆ ಜಲಿಯನ್ ವಾಲಾ ಬಾಗ್‌ಗೆ ಭೇಟಿ ನೀಡಿ ಮತ್ತು ಸಂಜೆ ನಡೆಯುವ ಅದ್ಭುತ ವಾಘಾ ಗಡಿಯ ಕಾರ್ಯಕ್ರಮವನ್ನು ವೀಕ್ಷಿಸಿ. ಸಾಂಪ್ರದಾಯಿಕ ಪಂಜಾಬಿ ಆಹಾರವನ್ನು ಸವಿಯಲು ಮರೆಯಬೇಡಿ.

ದೂರ: 450 ಕಿಮೀ

ಪ್ರಯಾಣದ ಸಮಯ: 6-7 ಗಂಟೆಗಳು

ರೈಲು ಆಯ್ಕೆ: ಶತಾಬ್ದಿ ಎಕ್ಸ್‌ಪ್ರೆಸ್ ಅಥವಾ ಗೋಲ್ಡನ್ ಟೆಂಪಲ್ ಮೇಲ್.

ಋಷಿಕೇಶ ಮತ್ತು ಹರಿದ್ವಾರ - ಹಿಮಾಲಯಕ್ಕೆ ದ್ವಾರ

ಗಂಗಾ ನದಿಯ ದಡದಲ್ಲಿರುವ ಋಷಿಕೇಶ ಮತ್ತು ಹರಿದ್ವಾರವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿಬರಬೇಕು ಅಂದುಕೊಳ್ಳುವವರಿಗೆ ದೆಹಲಿಯಿಂದ ರೈಲು ಸಂಪರ್ಕವನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತ. ಚಾರ್ ಧಾಮ್ ತೀರ್ಥಯಾತ್ರೆಗೆ ಋಷಿಕೇಶವು ದ್ವಾರವಿದ್ದಂತೆ.

ದೂರ: 240 ಕಿಮೀ

ಪ್ರಯಾಣದ ಸಮಯ: 5-6 ಗಂಟೆಗಳು

ರೈಲು ಆಯ್ಕೆ: ಶತಾಬ್ದಿ ಎಕ್ಸ್‌ಪ್ರೆಸ್ ಅಥವಾ ಡೆಹ್ರಾಡೂನ್ ಎಕ್ಸ್‌ಪ್ರೆಸ್

ಶಿಮ್ಲಾ - ಬೆಟ್ಟಗಳ ರಾಣಿ

ಹಿಮಾಲಯದಲ್ಲಿ ನೆಲೆಗೊಂಡಿರುವ ಆಕರ್ಷಕ ಗಿರಿಧಾಮ ಶಿಮ್ಲಾ. ವಸಾಹತುಶಾಹಿ ವಾಸ್ತುಶಿಲ್ಪ, ರಮಣೀಯ ನೋಟಗಳು ಮತ್ತು ತಂಪಾದ ವಾತಾವರಣಕ್ಕೆ ಹೆಸರುವಾಸಿಯಾದ ಶಿಮ್ಲಾ, ಶಾಂತಿಯುತವಾದ ಪರಿಸರವನ್ನು ಹೊಂದಿದೆ. ಇದನ್ನು ಕಣ್ತುಂಬಿಕೊಳ್ಳಲು ಕಲ್ಕಾದಿಂದ ಶಿಮ್ಲಾಗೆ ಟಾಯ್‌ ಟ್ರೈನ್ ಸವಾರಿ ಮಾಡಿನೋಡಿ. ವಿಭಿನ್ನವಾದ ಅನುಭವವನ್ನು ನಿಮಗಿದು ನೀಡುತ್ತದೆ.

ದೂರ: 350ಕಿಮೀ

ಪ್ರಯಾಣದ ಸಮಯ: 6-7 ಗಂಟೆಗಳು

ರೈಲು ಆಯ್ಕೆ: ಹಿಮಾಚಲ ಎಕ್ಸ್‌ಪ್ರೆಸ್ ಅಥವಾ ಕಲ್ಕಾ-ಶಿಮ್ಲಾ ಆಟಿಕೆ ರೈಲು.

ಉದಯಪುರ - ಸರೋವರಗಳ ನಗರಿ

ಸರೋವರಗಳ ನಗರಿ ಎಂದು ಕರೆಯಲ್ಪಡುವ ಉದಯಪುರವು ಸಾಕಷ್ಟು ಇತಿಹಾಸವನ್ನು ಹೊಂದಿದೆ. ಸುಂದರವಾದ ಪಿಚೋಲಾ ಸರೋವರ, ನಗರ ಅರಮನೆ ಮತ್ತು ಪ್ರಶಾಂತವಾದ ಜಗದೀಶ ದೇವಾಲಯವನ್ನು ನೋಡದಿದ್ದರೆ ನಿಮ್ಮ ಪ್ರವಾಸ ಪೂರ್ಣಗೊಳ್ಳದು.

ದೂರ: 660 ಕಿಮೀ

ಪ್ರಯಾಣದ ಸಮಯ: 12-14 ಗಂಟೆಗಳು

ರೈಲು ಆಯ್ಕೆ: ಮೇವಾರ್ ಎಕ್ಸ್‌ಪ್ರೆಸ್ ಅಥವಾ ಚೇತಕ್ ಎಕ್ಸ್‌ಪ್ರೆಸ್

ಒಟ್ಟಿನಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ನೀವು ಬಯಸಿದರೆ, ದೆಹಲಿಯಿಂದ ಈ ರೈಲು ಪ್ರಯಾಣವನ್ನು ಕೈಗೊಳ್ಳಿ..ವಿಶೇಷ ಅನುಭವ ನಿಮ್ಮದಾದೀತು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು  ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!

Read Next

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!