ಭಾರತದಲ್ಲಿ ಭೇಟಿ ನೀಡಲೇಬೇಕಾದ ವಸ್ತು ಸಂಗ್ರಹಾಲಯಗಳು
ಭಾರತದಲ್ಲಿ ಅನೇಕ ಹೆಸರಾಂತ ವಸ್ತುಸಂಗ್ರಹಾಲಯಗಳಿವೆ. ಸ್ವಾತಂತ್ಯ್ರ ಪೂರ್ವಕಾಲದಿಂದ ತೊಡಗಿ ಇಂದಿನವರೆಗೂ ಒಂದಕ್ಕಿಂತ ಒಂದು ಭಿನ್ನ ವಸ್ತುಗಳ ಸಂಗ್ರಹಗಳಿರುವ ಭಾರತದ ಈ ಪ್ರಮುಖ ವಸ್ತು ಸಂಗ್ರಹಾಲಯಗಳನ್ನು ಪ್ರವಾಸದ ವೇಳೆ ಭೇಟಿ ಮಾಡಿ.
ಹಳೆಬೇರಿನೊಂದಿಗೆ ಹೊಸ ಚಿಗುರನ್ನು ಕೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವವು ವಸ್ತು ಸಂಗ್ರಹಾಲಯಗಳು.. ಇವು ನಮ್ಮ ಹಿರಿಯರ ಜೀವನ, ಪರಂಪರೆ, ಅವರು ಬಳಸುತ್ತಿದ್ದ ವಸ್ತು, ಕಲಾಕೃತಿ ಹೀಗೆ ಇಲ್ಲಿ ಸಂಗ್ರಹಮಾಡಿಟ್ಟುಕೊಳ್ಳಲಾದ ಎಲ್ಲವೂ ನಮ್ಮನ್ನು ಸೆಳೆಯುವ ಜತೆಗೆ ಹೊಸದೊಂದು ಲೋಕಕ್ಕೆ ಪರಿಚಯಿಸಿಕೊಡುತ್ತದೆ. ಹಾಗಾದರೆ ಪ್ರಾಚ್ಯವಸ್ತುಗಳ ಬಗೆಗೆ ಆಸಕ್ತಿಯುಳ್ಳವರು ಭಾರತದಾದ್ಯಂತ ಭೇಟಿ ಕೊಡಲೇಬೇಕಾದ ಜನಪ್ರಿಯ ವಸ್ತು ಸಂಗ್ರಹಾಲಯಗಳು ಯಾವುವು ಎಂದು ನಿಮಗೆ ಗೊತ್ತಾ? ಇಲ್ಲಿವೆ ಮಾಹಿತಿ.
ಕೋಲ್ಕತ್ತಾ - ಭಾರತೀಯ ವಸ್ತುಸಂಗ್ರಹಾಲಯ
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 1814 ರಲ್ಲಿ ಸ್ಥಾಪನೆಯಾದ ಈ ವಸ್ತು ಸಂಗ್ರಹಾಲಯವು ಭಾರತದ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ ಆರು ಸಾಂಸ್ಕೃತಿಕ ಮತ್ತು ವೈಜ್ಞಾನಿಕ ವಿಭಾಗಗಳಲ್ಲಿ ಅಪರೂಪದ ಪ್ರಾಚೀನ ವಸ್ತುಗಳು, ಪಳೆಯುಳಿಕೆಗಳು, ಮೊಘಲ್ ವರ್ಣಚಿತ್ರಗಳು, ಈಜಿಪ್ಟಿನ ಮಮ್ಮಿಗಳು ಮತ್ತು ಬೌದ್ಧ ಅವಶೇಷಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

ಮುಂಬೈ- ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯ
ಮಹಾರಾಷ್ಟ್ರದ ಮುಂಬೈನಲ್ಲಿದೆ ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯ. ಹಿಂದೆ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯವಾಗಿದ್ದ ಈ ಇಂಡೋ-ಸಾರ್ಸೆನಿಕ್ ಕಟ್ಟಡವು ಕಲೆ, ಪುರಾತತ್ತ್ವ ಶಾಸ್ತ್ರ ಮತ್ತು ನೈಸರ್ಗಿಕ ಇತಿಹಾಸ ಸಂಗ್ರಹಗಳನ್ನು ಪ್ರದರ್ಶಿವಿದೆ. ಅಲ್ಲದೆ ವರ್ಣಚಿತ್ರಗಳು, ಶಸ್ತ್ರಾಸ್ತ್ರಗಳು ಮತ್ತು ಸಿಂಧೂ ಕಣಿವೆ ನಾಗರಿಕತೆಯ ಕಲಾಕೃತಿಗಳು ಪ್ರಮುಖ ಆಕರ್ಷಣೆಯಾಗಿವೆ.
ಹೈದರಾಬಾದ್ - ಸಲಾರ್ ಜಂಗ್ ವಸ್ತುಸಂಗ್ರಹಾಲಯ
ವಿಶ್ವದ ಅತಿದೊಡ್ಡ ಏಕವ್ಯಕ್ತಿ ಸಂಗ್ರಹಗಳಲ್ಲಿ ಒಂದಾದ ಸಲಾರ್ ಜಂಗ್ ವಸ್ತುಸಂಗ್ರಹಾಲಯ ತೆಲಂಗಾಣದ ಹೈದರಾಬಾದ್ ನಲ್ಲಿ ಸ್ಥಾಪಿತವಾಗಿದೆ. ಇದು ಪರ್ಷಿಯನ್ ಕಾರ್ಪೆಟ್ಗಳು, ಯುರೋಪಿಯನ್ ಗಡಿಯಾರಗಳು, ಪ್ರಸಿದ್ಧ ಅಮೃತಶಿಲೆಯ ಶಿಲ್ಪ, ವೇಲ್ಡ್ ರೆಬೆಕ್ಕಾ, 40,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿದೆ ಎಂದರೆ ನಂಬಲೇಬೇಕು.
ಚೆನ್ನೈ - ಸರ್ಕಾರಿ ವಸ್ತುಸಂಗ್ರಹಾಲಯ
ತಮಿಳುನಾಡು ಚೆನ್ನೈನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯವನ್ನು ಮದ್ರಾಸ್ ವಸ್ತುಸಂಗ್ರಹಾಲಯ ಎಂದೂ ಕರೆಯಲಾಗುತ್ತದೆ. 1851 ರಲ್ಲಿ ಸ್ಥಾಪನೆಯಾದ ಇದು ಭಾರತದ ಎರಡನೇ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ ಕಂಚು, ಅಮರಾವತಿ ಶಿಲ್ಪಗಳು ಮತ್ತು ವಿಶಾಲವಾದ ನಾಣ್ಯಶಾಸ್ತ್ರೀಯ ಸಂಗ್ರಹಗಳನ್ನು ಕಾಣಲು ಸಾಧ್ಯ.
ನವದೆಹಲಿ - ರಾಷ್ಟ್ರೀಯ ವಸ್ತುಸಂಗ್ರಹಾಲಯ
1949 ರಲ್ಲಿ ತೆರೆಯಲಾದ ಈ ವಸ್ತುಸಂಗ್ರಹಾಲಯವು ಮೊಘಲ್ ಹಸ್ತಪ್ರತಿಗಳು ಮತ್ತು ಪಿಪ್ರಾಹ್ವಾದ ಬೌದ್ಧ ಅವಶೇಷಗಳನ್ನು ಒಳಗೊಂಡಂತೆ 2,00,000 ಕ್ಕೂ ಹೆಚ್ಚು ಪಳೆಯುಳಿಕೆಗಳು, ವಸ್ತುಗಳನ್ನು ಹೊಂದಿದೆ. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಚ್ಯ ವಸ್ತು ಪ್ರಿಯರು ಭೇಟಿ ಮಾಡುವ ಮೂಲಕ ವಿಶೇಷ ಅನುಭವವನ್ನುಪಡೆದುಕೊಳ್ಳುತ್ತಾರೆ.

ಶಂಕರ್ ಅವರ ಅಂತರರಾಷ್ಟ್ರೀಯ ಗೊಂಬೆಗಳ ವಸ್ತುಸಂಗ್ರಹಾಲಯ
1965 ರಲ್ಲಿ ಕೆ. ಶಂಕರ್ ಪಿಳ್ಳೈ ಅವರಿಂದ ನವದೆಹಲಿಯಲ್ಲಿ ಸ್ಥಾಪಿಸಲ್ಪಟ್ಟ ಈ ಮ್ಯೂಶಿಯಂ, ಸಾಂಪ್ರದಾಯಿಕ ವೇಷಭೂಷಣಗಳು ಮತ್ತು ಪ್ರಾದೇಶಿಕ ಉಡುಪಿನಲ್ಲಿರುವ ಭಾರತೀಯ ಗೊಂಬೆಗಳ ದೊಡ್ಡ ಸಂಗ್ರಹವನ್ನು ಒಳಗೊಂಡಿದೆ. ಅಲ್ಲದೆ 85 ದೇಶಗಳ 6,500 ಕ್ಕೂ ಹೆಚ್ಚು ಗೊಂಬೆಗಳನ್ನು ಇಲ್ಲಿ ಕಾಣಬಹುದು
ರಾಜಸ್ಥಾನ- ಉದಯಪುರದ ಸಿಟಿ ಪ್ಯಾಲೇಸ್ ಮ್ಯೂಸಿಯಂ
ಐಕಾನಿಕ್ ಸಿಟಿ ಪ್ಯಾಲೇಸ್ ಸಂಕೀರ್ಣದಲ್ಲಿರುವ ಈ ವಸ್ತು ಸಂಗ್ರಹಾಲಯದಲ್ಲಿ ಮೇವಾರ್ ರಾಜಮನೆತನದ ಪರಂಪರೆ - ಶಸ್ತ್ರಾಸ್ತ್ರ ಸಂಗ್ರಹ, ವರ್ಣಚಿತ್ರಗಳು, ರಾಜಮನೆತನದ ವೇಷಭೂಷಣಗಳು ಮತ್ತು ರಜಪೂತ ಆಡಳಿತಗಾರರ ವೈಭವವನ್ನು ಪ್ರತಿಬಿಂಬಿಸುವ ಕಲಾಕೃತಿಗಳ ಸಂಗ್ರಹವಿದೆ.
ಪಣಜಿ - ಗೋವಾ ರಾಜ್ಯ ವಸ್ತು ಸಂಗ್ರಹಾಲಯ
ಗೋವಾದ ಪಣಜಿಯಲ್ಲಿ ಸ್ಥಾಪಿಸಲ್ಪಟ್ಟ ಈ ವಸ್ತು ಸಂಗ್ರಹಾಲಯವು ಗೋವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸವನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಶಿಲ್ಪಗಳು, ವಸಾಹತುಶಾಹಿ ಪ್ರಾಚೀನ ವಸ್ತುಗಳು ಮತ್ತು ದೇವನಾಗರಿ, ರೋಮನ್ ಮತ್ತು ಪರ್ಷಿಯನ್ ಲಿಪಿಗಳಲ್ಲಿನ ಹಸ್ತಪ್ರತಿಗಳು ಸೇರಿದಂತೆ 8,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿದೆ.

ಸಜ್ನೇಖಲಿ - ಸುಂದರಬನ್ಸ್ ಇಂಟರ್ಪ್ರಿಟೇಷನ್ ಸೆಂಟರ್
ಪಶ್ಚಿಮಬಂಗಾಳದ ಸುಂದರಬನ್ಸ್ ರಿಸರ್ವ್ ವ್ಯಾಪ್ತಿಯಲ್ಲಿ ಬರುವ ಈ ವಸ್ತುಸಂಗ್ರಹಾಲಯವು ಮ್ಯಾಂಗ್ರೋವ್ ಜೀವವೈವಿಧ್ಯ, ರಾಯಲ್ ಬಂಗಾಳ ಹುಲಿಗಳು, ಮೊಸಳೆಗಳು ಮತ್ತು ಶೈಕ್ಷಣಿಕ ಪ್ರದರ್ಶನಗಳು ಮತ್ತು ಡಿಯೋರಾಮಾಗಳ ಮೂಲಕ ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಪರಿಸರ ಒಳನೋಟವನ್ನು ನೀಡುತ್ತದೆ.ಪರಿಸರ ಪ್ರಿಯರಿಗೂ ಇದೊಂದು ಉತ್ತಮ ಪ್ರೇಕ್ಷಣೀಯ ಸ್ಥಳವಾಗಿದೆ.
ತಿರುವನಂತಪುರಂ - ನೇಪಿಯರ್ ವಸ್ತುಸಂಗ್ರಹಾಲಯ
1855ರಲ್ಲಿ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ತಿರುವನಂತಪುರಂನಲ್ಲಿ ನಿರ್ಮಿಸಲಾದ ಈ ವಸ್ತು ಸಂಗ್ರಹಾಲಯ ಕೇರಳದ ಶ್ರೀಮಂತ ಇತಿಹಾಸ - ಕಂಚಿನ ಶಿಲ್ಪಗಳು, ಮರದ ಕೆತ್ತನೆಗಳು ಮತ್ತು ಸಾಂಪ್ರದಾಯಿಕ ಸಂಗೀತ ವಾದ್ಯಗಳು ಇಂತಿಹ ಐತಿಹಾಸಿಕ ಪ್ರದರ್ಶನವನ್ನು ಹೊಂದಿದೆ. ತಿರುವನಂತಪುರಂಗೆ ಭೇಟಿ ಕೊಟ್ಟರೆ ತಪ್ಪದೆ ಈ ಮ್ಯೂಸಿಯಂಗೊಮ್ಮೆ ಹೋಗಿ ಬನ್ನಿ.