Thursday, June 12, 2025
Thursday, June 12, 2025

ಕಾಂಬೋಡಿಯಾದ ಪ್ರವಾಸಿ ಆಕರ್ಷಣೆಗಳಿವು…!

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಅಂಕೋರ್ ವಾಟ್ನಿಂದ ಪ್ರಾರಂಭವಾಗಿ, ಪ್ರೀಹ್ ವಿಹಾರ್ ದೇವಾಲಯ, ಕೊಹ್ ರಾಂಗ್ ದ್ವೀಪಸಮೂಹ ಹೀಗೆ ವಿಶೇಷತೆಗಳನ್ನು ಒಡಲಲ್ಲಿ ಹೊತ್ತಿರುವ ಕಾಂಬೋಡಿಯಾ ಪ್ರವಾಸವನ್ನು ಸದ್ಯದಲ್ಲೇ ಕೈಗೊಳ್ಳಬೇಕೆಂದಿರುವಿರಾ..? ಇಲ್ಲಿವೆ ಕಾಂಬೋಡಿಯಾದ ಇತರೇ ತಾಣಗಳ ಮಾಹಿತಿ.

ಆಗ್ನೇಯ ಏಷ್ಯಾದಲ್ಲಿರುವ ಕಾಂಬೋಂಡಿಯಾ ದೇಶವು, ಇಂಡೋ-ಚೀನಾ ಪರ್ಯಾಯ ದ್ವೀಪದಲ್ಲಿದೆ. ಕಡಿಮೆ ವೆಚ್ಚದಲ್ಲಿ ವಿದೇಶ ಸುತ್ತಲು ಬಯಸುವವರಿಗೆ ಕಾಂಬೋಂಡಿಯಾ ಬಹಳ ಒಳ್ಳೆಯ ಆಯ್ಕೆ. ಯಾಕೆಂದರೆ ಇಲ್ಲಿನ ಪ್ರಯಾಣ ವೆಚ್ಚ, ವಸತಿ, ಆಹಾರ ಮಾತ್ರವಲ್ಲದೆ ಪ್ರವಾಸಿ ಸ್ಥಳಗಳ ಭೇಟಿಗೂ ಸಹ ಹೆಚ್ಚಿನ ಮೊತ್ತವನ್ನು ತೆರಬೇಕಾಗಿಬರುವುದಿಲ್ಲ. ಆದರೆ ಕಾಂಬೋಡಿಯಾ ಪ್ರವಾಸ ಕೈಗೊಳ್ಳುವ ಮುನ್ನ ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಬಗೆಗೆ ತಿಳಿದುಕೊಳ್ಳದಿದ್ದರೆ ಹೇಗೆ..?

ಅಂಕೋರ್‌ ವಾಟ್

ಕಾಂಬೋಡಿಯಾ ಎಂದಾಕ್ಷಣ ತಟ್ಟನೆ ನೆನಪಾಗುವುದೇ ಅಂಕೋರ್‌ ವಾಟ್‌. ಇದು ಇತ್ತೀಚೆಗೆ ವಿಶ್ವದ ಎಂಟನೇ ಅದ್ಭುತ ಎಂಬ ಬಿರುದನ್ನು ಪಡೆದುಕೊಂಡಿದೆ. ಅಲ್ಲದೆ ಕಾಂಬೋಡಿಯಾದಲ್ಲಿರುವ ಈ ಹಿಂದೂ-ಬೌದ್ಧ ದೇವಾಲಯದ ಸಂಕೀರ್ಣ ಕೆತ್ತನೆಗಳು ಮತ್ತು ಐತಿಹಾಸಿಕ ಮಹತ್ವವು ಇತಿಹಾಸದ ಉತ್ಸಾಹಿಗಳನ್ನು ಸೆಳೆಯುತ್ತಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

images (3)

ಪ್ರೀಹ್ ವಿಹಾರ್ ದೇವಾಲಯ

ಕಾಂಬೋಡಿಯಾದಲ್ಲಿ ಅನೇಕ ಪ್ರಾಚೀನ ದೇವಾಲಯಗಳಿದ್ದು, ಅವುಗಳಲ್ಲಿ ಈ ಪ್ರೀಹ್‌ ವಿಹಾರ್ ದೇವಾಲಯವು ಪ್ರಮುಖವಾದುದು. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಥಾಯ್-ಕಾಂಬೋಡಿಯನ್ ಗಡಿಯಲ್ಲಿರುವ ಡ್ಯಾಂಗ್ರೆಕ್ ಪರ್ವತಗಳ ಮೇಲೆ ನೆಲೆಸಿದೆ. ಯುನೆಸ್ಕೋ-ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಈ ದೇವಾಲಯವು ಕಾಂಬೋಡಿಯಾ ಪ್ರವಾಸದ ವೇಳೆ ಭೇಟಿ ನೀಡಲೇಬೇಕಾದ ಪ್ರವಾಸಿ ಆಕರ್ಷಣೆಯಾಗಿದೆ.

ಕೊಹ್ ರಾಂಗ್ ದ್ವೀಪಸಮೂಹ

ಸಮುದ್ರ ಮರಳಿನಲ್ಲಿ ಸೂರ್ಯರಶ್ಮಿಗೆ ಮೈಯೊಡ್ಡಿ ಮಲಗಬೇಕೆಂಬ ಕನಸು ಹೊತ್ತವರು ಕಾಂಬೋಡಿಯಾದಲ್ಲಿ ದ್ವೀಪ ಸಮೂಹಗಳಿಗೆ ಭೇಟಿ ನೀಡಲೇಬೇಕು. ಚಿಕ್ಕದಾದರೂ ಕೊಹ್ ರಾಂಗ್ನಲ್ಲಿನ ಪುರಾತವಾದ ಕಡಲತೀರಗಳು ಅಲ್ಲದೆ ಮೈನವಿರೇಳಿಸುವ ಹವಳದ ಬಂಡೆಗಳನ್ನು ನೋಡಿದವರಂತೂ ಉಳಿದ ಜೀವನವನ್ನು ಇಲ್ಲೇ ಕಳೆಯಬಾರದೇಕೆ ಅಂದುಕೊಳ್ಳದೇ ಇರಲಾರರು.

ಬಟ್ಟಂಬಾಂಗ್

ಕಾಂಬೋಡಿಯಾದ ಎರಡನೇ ಅತಿ ದೊಡ್ಡ ನಗರ ಬಟ್ಟಂಬಾಂಗ್. ಕಾಂಬೋಡಿಯಾದ ಪ್ರಮುಖ ಆಕರ್ಷಣೆಯಾಗಿರುವ ಬಟ್ಟಂಬಾಂಗ್‌ ಅನೇಕ ಪ್ರೇಕ್ಷಣಿಐ ತಾಣಗಳನ್ನು ಒಳಗೊಂಡಿದೆ. ಅದರಲ್ಲೂ ಇಲ್ಲಿನ ಬಿದಿರಿನ ರೈಲು ಪ್ರವಾಸಿಗರಿಗೆ ಹೊಸ ಅನುಭವವನ್ನೇ ನೀಡುತ್ತದೆ. ಮಿನಿ ಅಂಕೋರ್ ವಾಟ್ ಎಂದು ಕರೆಯಲಾಗುವ ವಾಟ್ ಬನಾನ್ ದೇವಾಲಯವಂತೂ ನೋಡಲೇ ಬೇಕಾದ ಪ್ರವಾಸಿ ತಾಣ.

images (4)

ಬೊಕೊರ್ ಗಿರಿಧಾಮ

ಐತಿಹಾಸಿಕ ತಾಣವಾಗಿರುವ ಕಾಂಬೋಡಿಯಾದ ಬೊಕೊರ್ ಗಿರಿಧಾಮವು ಹಲವು ವಿಶೇಷತೆಗಳನ್ನು ಒಡಲಲ್ಲಿ ಹೊತ್ತುಕೊಂಡಿದೆ. ಇಲ್ಲಿನ ಲೆ ಬೊಕೊರ್ ಪ್ಯಾಲೇಸ್ ಹೋಟೆಲ್, ಹಳೆಯ ಚರ್ಚ್, ಮತ್ತು ಪರ್ವತದ ತುದಿಯಿಂದ ಕಾಂಬೋಡಿಯನ್ ಕರಾವಳಿಯ ಅದ್ಭುತ ನೋಟಗಳನ್ನು ನೋಡಲು ಮರೆತರೆ ಕಾಂಬೋಡಿ ಪ್ರವಾಸವು ಪೂರ್ಣವೆನ್ನಿಸದು.

ಇವಿಷ್ಟೇ ಅಲ್ಲದೆ ಕಾಂಬೋಡಿಯಾದಲ್ಲಿ ಪ್ರವಾಸಿಗರಿಗಾಗಿ ಮೊಂಡುಲ್‌ಕಿರಿ, ಬೌ ಸ್ರಾ ಜಲಪಾತ ಮತ್ತು ಆನೆ ಅಭಯಾರಣ್ಯಗಳು, ಕಾಂಬೋಡಿಯಾದ ಸ್ಥಳೀಯ ಸಂಸ್ಕೃತಿಗಳು ಮತ್ತು ಅಪೂರ್ವ ಭೂದೃಶ್ಯಗಳಿಗೆ ಹೆಸರುವಾಸಿಯಾಗಿರುವ ಬಾನ್ಲುಂಗ್ ಸೇರಿದಮತೆ ಹತ್ತು ಹಲವು ಪ್ರವಾಸಿ ತಾಣಗಳು ಇಲ್ಲಿವೆ..ನಿಮ್ಮ ಪ್ರವಾಸದ ವೇಳೆ ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು  ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!

Read Next

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!