ಪ್ರವಾಸಿಗರಿಂದ ಅವನತಿಯತ್ತ ಸಾಗಿದ್ದ ಈ ಸುಂದರ ಪ್ರವಾಸಿ ತಾಣಗಳು
ಜಗತ್ತಿನ ಯಾವುದೇ ಭಾಗಕ್ಕೆ ನೀವು ಪ್ರವಾಸ ತೆರಳುವ ಯೋಜನೆಯನ್ನು ಹಾಕಿಕೊಂಡಿರಬಹುದು, ಆದರೆ ಪ್ರವಾಸ ತೆರಳುವ ಮುನ್ನ ನೀವು ತಿಳಿದಿರಬೇಕಾದ ವಿಚಾರವೇನು ಗೊತ್ತಾ ?
ದೇಶ ವಿದೇಶಗಳ ಪ್ರವಾಸ ಕೈಗೊಳ್ಳಬೇಕು, ಪ್ರವಾಸಿ ತಾಣಗಳನ್ನು ಆನಂದಿಸಬೇಕು. ಸಾಕಷ್ಟು ಹೊಸ ವಿಚಾರಗಳನ್ನು ತಿಳಿಯಬೇಕು..ಎಲ್ಲವೂ ಸರಿ. ಆದರೆ ಯಾವುದೇ ಪ್ರವಾಸಿ ತಾಣವನ್ನು ಸಂದರ್ಶಿಸಿದರೂ ಅಲ್ಲಿನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು, ಅಲ್ಲಿನ ನಿಯಮಗಳನ್ನುಅನುಸರಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಜಾಗತಿಕ ಮಟ್ಟದಲ್ಲಿ ಅನೇಕ ಪ್ರವಾಸಿ ಸ್ಥಳಗಳ ಅವನತಿಗೆ ಪ್ರವಾಸಿಗರೇ ಕಾರಣರಾಗಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ? ಪ್ರವಾಸಿಗರಿಂದ ವಾತಾವರಣ ಮಲಿನಗೊಂಡಿರುವುದಷ್ಟೇ ಅಲ್ಲ, ಜನದಟ್ಟಣೆಯಿಂದ ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ..ಅಂತಹ ಸ್ಥಳಗಳ ಪರಿಚಯ ಇಲ್ಲಿ ನೋಡಿ.
ಮಾಯಾ ಬೇ, ಥೈಲ್ಯಾಂಡ್
ಥೈಲ್ಯಾಂಡ್ನ ಫಿ ಫಿ ದ್ವೀಪಗಳಲ್ಲಿನ ಈ ಸ್ವರ್ಗ ಮಾಯಾ ಕೊಲ್ಲಿ. ಪ್ರತಿದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸವನ್ನು ಆನಂದಿಸುವುದರ ನಡುವೆ ಈ ಸುಂದರ ತಾಣಗಳನ್ನು ಹಾನಿಗೊಳಿಸಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು 2018 ರಲ್ಲಿ ಕೆಲಕಾಲ ಈ ಪ್ರವಾಸಿ ತಾಣವನ್ನು ಪ್ರವಾಸಿಕರಿಗೆ ನಿರ್ಬಂಧಿತ ಪ್ರದೇಶವನ್ನಾಗಸಿದ್ದರು. ನಂತರ ದಿನಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲ ಸಂದರ್ಶಕರನ್ನು ಅನುವುಮಾಡಿದ್ದಾರೆ.

ವೆನಿಸ್, ಇಟಲಿ
"ಜಗತ್ತಿನ ತೇಲುವ ನಗರ" ಎಂದೇ ಜನಪ್ರಿಯವಾಗಿರುವ ವೆನಿಸ್ (Venice) ತನ್ನ ಐತಿಹಾಸಿಕ ಶ್ರೀಮಂತಿಕೆ, ಪಾರಂಪರಿಕ ವಿನ್ಯಾಸ ಮತ್ತು ಸೇತುವೆಗಳಿಗಾಗಿ ಹೆಸರುವಾಸಿ. ಭಾರತದ ಬಾಲಿವುಡ್ ಚಿತ್ರಗಳಲ್ಲಿ ಹಲವು ಬಾರಿ ವೆನಿಸ್ ಪಟ್ಟಣದ ಸೌಂದರ್ಯವನ್ನು ಚಿತ್ರೀಕರಿಸಲಾಗಿರುವುದನ್ನು ಗಮನಿಸಬಹುದು. ಆದರೆ ಹೆಚ್ಚುತ್ತಿರುವ ಪರ್ಯಟನೆ ಹಾಗೂ ಅಪಾರ ಸಂಖ್ಯೆಯಲ್ಲಿ (Tourists) ಪ್ರವಾಸಿಗರ ಆಗಮನ ಈ ಪ್ರದೇಶದ ಭವ್ಯ ಪರಂಪರೆಗೆ ಅಪಾಯ ಒಡ್ಡಬಹುದಾದ ಸಾಧ್ಯತೆ ಇಲ್ಲಿನ ಆಡಳಿತಕ್ಕೆ ಚಿಂತೆ ಮೂಡಿಸಿತ್ತು. 2024ರಲ್ಲಿ ಈ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರವೇಶ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿತು.
ಮನಾಲಿ, ಭಾರತ
ಪ್ರವಾಸಿಪ್ರಿಯರಿಗೆ ಹಿಮಾಚಲ ಪ್ರದೇಶದಲ್ಲಿ ವಿಹಾರಕ್ಕೆ ಅಚ್ಚುಮೆಚ್ಚಿನ ತಾಣ ಮನಾಲಿ. ಆದರೆ ಈ ಪ್ರದೇಶಕ್ಕೆ ಅತಿಯಾದ ಪ್ರವಾಸಿಗರ ಸಂಖ್ಯೆ ಬರುವುದರೊಂದಿಗೆ ಪರಿಸರ ಮಾಲಿನ್ಯ ಸರ್ವೇ ಸಾಮಾನ್ಯವಾಗಿತ್ತು..ಅಲ್ಲದೆ ಜನ ದಟ್ಟಣೆಯ ಜೊತೆಗೆ ವಾಹನ ದಟ್ಟಣೆಯೂ ಹೆಚ್ಚಾಗಿದ್ದು ಪ್ರಶಾಂತವಾಗಿದ್ದ ಇಲ್ಲಿನ ವಾತಾವರಣ ಕಲ್ಮಶವಾಗಿಬಿಟ್ಟಿರುವುದಾಗಿ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊರಾಕೆ, ಫಿಲಿಪೈನ್ಸ್
ಫಿಲಿಪೈನ್ಸ್ ನಲ್ಲಿರುವ ಈ ಬೊರಾಕೆ ದ್ವೀಪವು ಕೆಲವು ಸ್ವಚ್ಛವಾದ ಕಡಲತೀರಗಳಿಂದ ಹೆಚ್ಚು ಜನಪ್ರಿಯವಾಗಿದೆ. ನೀವು ಶಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಲು ಬಯಸುವ ಪ್ರವಾಸಿಗರ ಸಂಖ್ಯೆ ಲೆಕ್ಕಕ್ಕೆ ಸಿಗಲಾರದು. ಸರ್ಕಾರವು ಇದನ್ನು 2018 ರಲ್ಲಿ ತಾತ್ಕಾಲಿಕವಾಗಿ ಮುಚ್ಚಿತು.ಅಲ್ಲದೆ ಅಂದಿನಿಂದ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡುವ ಮೂಲಕ ಪ್ರವಾಸಿಗರನ್ನು ನಿಯಂತ್ರಿಸಿತು.
ಬಾಲಿ, ಇಂಡೋನೇಷ್ಯಾ
ಇಂಡೋನೇಷ್ಯಾದ ಬಾಲಿ ದ್ವೀಪ ವಿಶ್ವದ ಜನಪ್ರಿಯವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅಪಾರ ಜಲರಾಶಿ, ದಟ್ಟ ಕಾನನದ ನಡುವೆ ಇರುವ ಈ ದ್ವೀಪದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ.ಆದರೆ ಇಲ್ಲಿನ ದೇವಾಲಯಗಳಲ್ಲಿ ಅತಿಕ್ರಮಣ ಮಾಡುವ ಪ್ರವಾಸಿಗರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ಬಾಲಿ ಸಂಸ್ಕೃತಿ, ಸಂಪ್ರದಾಯಗಳು ಹೆಸರು ಕಳೆದುಕೊಳ್ಳುವ ಭೀತಿಯಲ್ಲಿದೆ.
ಮಚು ಪಿಚು, ಪೆರು
ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಮಚು ಪಿಚುವನ್ನು ವೀಕ್ಷಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಹರಿದುಬರುತ್ತಲೇ ಇದ್ದರು. ಇದರಿಂದ ಇಲ್ಲಿನ ಪರಿಸರ ಹಾಗೂ ವಾತಾವರಣ ಕಳುಶಿತಗೊಂಡಿದ್ದು, ಇಲ್ಲಿ ಪ್ರವಾಸೋದ್ಯಮ ಇಲಾಖೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ನಿರ್ದಿಷ್ಟ ಪ್ರವಾಸಿಗರನ್ನು ಮಾತ್ರ ಪ್ರವೇಶಕ್ಕೆ ಅನುವು ಮಾಡಿದ್ದು, ವೀಕ್ಷಣೆಯ ಸಮಯವನ್ನೂ ನಿಗದಿ ಪಡಿಸಿ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ನಿಭಾಯಿಸಿದೆ.

ಮೌಂಟ್ ಎವರೆಸ್ಟ್, ನೇಪಾಳ
ಇದನ್ನು ನಂಬಿ ಅಥವಾ ಬಿಡಿ, ವಿಶ್ವದ ಅತಿ ಎತ್ತರದ ಶಿಖರ ಈಗ ಕಸದ ರಾಶಿಯಾಗಿದೆಯಂತೆ. ಎವರೆಸ್ಟ್ ಬೇಸ್ ಕ್ಯಾಂಪ್ ಟ್ರಯಲ್ ತುಂಬಾ ಕಿಕ್ಕಿರಿದಿದ್ದು, ಇದು 26,000 ಅಡಿಗಳಷ್ಟು "ಟ್ರಾಫಿಕ್ ಜಾಮ್" ಅನ್ನು ಸೃಷ್ಟಿಸುತ್ತದೆ. ಕಸ, ಮಾನವ ತ್ಯಾಜ್ಯ ಸೇರಿ ತ್ಯಾಜ್ಯಗಳ ಕೊಂಪೆಯಾಘಿ ಮಾರ್ಪಾಡಾಗುತ್ತಲಿದೆಯಂತೆ.