Friday, October 10, 2025
Friday, October 10, 2025

ಇದು ನಿಸರ್ಗದ ಗೋಸುಂಬೆ ಆಟ !

ನ್ಯೂಹ್ಯಾಂಪ್ ಷೈರಿನ “ಕಂಕಾಮೇಗಸ್ ಹೈ ವೇ” ಹೆದ್ದಾರಿಯು “ಫಾಲ್ ಫೋಲಿಯೇಜ್” ನೋಡಲು ಇನ್ನೊಂದು ಸುಂದರ ತಾಣ. ಇಲ್ಲಿ ರಸ್ತೆಯುದ್ದಕ್ಕೂ ಎತ್ತ ಕಣ್ಣು ಹಾಯಿಸಿದರತ್ತ ವಿವಿಧ ಬಣ್ಣಗಳ ವರ್ಣಪಟಲ ಕಾಣಸಿಗುತ್ತದೆ. ದಾರಿಯುದ್ದಕ್ಕೂ ಹಲವಾರು ಸುಂದರ ಜಲಪಾತಗಳು ಮತ್ತು ತಿಳಿನೀರಿನ ಸರೋವರಗಳು ನೋಡ ಸಿಗುತ್ತವೆ. ಈ ಸರೋವರಗಳ ಮೇಲ್ದಂಡೆಗಳಲ್ಲಿರುವ ವರ್ಣಮಯ ವೃಕ್ಷಗಳು ತಿಳಿನೀರಿನಲ್ಲಿ ಪ್ರತಿಬಿಂಬಗಳನ್ನು ಮೂಡಿಸುತ್ತಿದ್ದರೆ ನಿಸರ್ಗದೇವಿಯ ಓಕಳಿ ಆಟ ನಮ್ಮ ಮೈನವಿರೇಳಿಸುತ್ತದೆ.

  • ಜ್ಯೋತಿ ಪ್ರಸಾದ್

ಆಹ್ಲಾದಕರ ಶರದೃತುವಿನ ಆಗಮನ ಪ್ರಕೃತಿಯಲ್ಲಿ ಎಲ್ಲೆಲ್ಲೂ ವಿಶೇಷ ಕಳೆ, ಸೊಬಗು ಮತ್ತು ಸಂಭ್ರಮದೊಂದಿಗೆ ಹೊಸ ಚೈತನ್ಯವನ್ನು ಹೊತ್ತು ತರುತ್ತದೆ. ಋತುಮಾನಕ್ಕೆ ತಕ್ಕಂತೆ ಬದಲಾಗುವ ಹವಾಮಾನದಿಂದ ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶಗಳು ವಿಭಿನ್ನವಾದ ಬದಲಾವಣೆಗಳನ್ನು ಕಾಣುತ್ತವೆ. ಹಗಲಿನ ಸಮಯ ಕಡಿಮೆಯಾಗುತ್ತಾ ರಾತ್ರಿಯ ತಾಪಮಾನವೂ ಕಡಿಮೆಯಾಗುವುದರಿಂದ ಮರಗಿಡಗಳಲ್ಲಿಯೂ ಬದಲಾವಣೆಗಳಾಗುತ್ತದೆ.

ಕೆಲವು ಪ್ರದೇಶಗಳಲ್ಲಿ ಸಸ್ಯಗಳ ಹಸಿರು ಬಣ್ಣವು ಕ್ರಮೇಣ ಹಳದಿ, ಕಿತ್ತಳೆ, ಕೆಂಪು, ಕಂದು ಹಾಗೂ ನೇರಳೆ ಬಣ್ಣಕ್ಕೆ ಬದಲಾಗುತ್ತಲಿರುತ್ತವೆ. ಸಸ್ಯ ಸಮೃದ್ಧಿ ಹೇರಳವಾಗಿರುವ ಪ್ರದೇಶಗಳಲ್ಲಿ ,ಈ ಬಣ್ಣ ಬದಲಾವಣೆ ಪ್ರಕ್ರಿಯೆಯು ನಿಸರ್ಗ ನಮಗೆ ನೀಡುವ ಬಣ್ಣದ ಹಬ್ಬದ ವರದಾನವೆಂದೇ ಹೇಳಬೇಕು.

ಅಮೆರಿಕದಲ್ಲಿ ಇದನ್ನು “ಫಾಲ್ ಫೋಲಿಯೇಜ್” ಎನ್ನುತ್ತಾರೆ. ಪ್ರಕೃತಿಪ್ರಿಯರಿಗೆ, ಛಾಯಾಗ್ರಾಹಕರಿಗೆ ಮತ್ತು ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ನೀಡುವುದರಿಂದ ದೇಶ ವಿದೇಶಗಳಿಂದ ಈ ವರ್ಣವೈಭವವನ್ನು ನೋಡುವುದಕ್ಕಾಗಿ ಪ್ರವಾಸಿಗರ ದಂಡೇ ಇಲ್ಲಿಗೆ ಬರುತ್ತದೆ.

fall foliage  2

ಸ್ಥಳದ ಲಕ್ಷಣ, ಹವಾಮಾನ ಮತ್ತು ಅಲ್ಲಿ ಬೆಳೆಯುವ ಮರಗಿಡಗಳಿಗನುಗುಣವಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಈ ಬಣ್ಣ ಬದಲಾವಣೆ ಕ್ರಿಯೆ ನಡೆಯುತ್ತಿರುತ್ತದೆ.

ಶರತ್ಕಾಲದ ನಿಸರ್ಗದ ಈ ಬಣ್ಣಗಳ ಹಬ್ಬಕ್ಕೆ ಅಮೆರಿಕದ ನ್ಯೂ ಇಂಗ್ಲೆಂಡ್ ಪ್ರಾಂತ ಹೆಸರುವಾಸಿಯಾಗಿದೆ. ವಿಶೇಷವಾಗಿ ವರ್ಮಾಂಟ್,ನ್ಯೂ ಹ್ಯಾಂಪ್ ಷೈರ್ ಮತ್ತು ಮೇಯ್ನ್ ರಾಜ್ಯಗಳನ್ನೊಳಗೊಂಡ ಪ್ರದೇಶಗಳು ಜಗತ್ಪ್ರಸಿದ್ಧವಾಗಿವೆ. ಅದರ ಹೊರತಾಗಿ ವರ್ಜೀನಿಯಾ ಮತ್ತು ನಾರ್ತ್ ಕೆರೊಲಿನಾ ಪ್ರಾಂತಗಳ ಅಪಲಾಚಿಯನ್ ಪರ್ವತಗಳಲ್ಲಿರುವ ಬ್ಲೂ ರಿಡ್ಜ್ ಪಾರ್ಕ ವೇ,ಗ್ರೇಟ್ ಸ್ಮೋಕಿ ಪರ್ವತಗಳು ಮತ್ತು ರಾಕಿ ಪರ್ವತಗಳ ಕೆಲವು ಭಾಗಗಳೂ ಕೂಡ ಜನಪ್ರಿಯವಾಗಿವೆ.

ವರ್ಜೀನಿಯಾದ ಶೆನನ್ ಡೋವಾ ರಾಷ್ಟ್ರೀಯ ಉದ್ಯಾನವನದಲ್ಲಿ ಉಳಿದೆಡೆಗಳಿಗಿಂತ ಹೆಚ್ಚು ದಿನಗಳ ಕಾಲ, ಮನಮೋಹಕವಾದ ಬಣ್ಣಗಳ ಪ್ರದರ್ಶನವನ್ನು ಕಾಣಬಹುದು.ಇದೊಂದು ವಾರ್ಷಿಕ ಕ್ರಿಯೆಯಾಗಿದ್ದು ಕೆಲವೇ ದಿನಗಳು ಕಾಣಸಿಗುವ ದೃಶ್ಯವಾಗಿರುವುದರಿಂದ ಎಲ್ಲೆಲ್ಲೂ ಜನರು ಉತ್ಸಾಹದಿಂದ ಸಂಭ್ರಮಿಸುತ್ತಾ ನಿಸರ್ಗದ ಸೊಬಗಿನಲ್ಲಿ ಮೈಮರೆಯುತ್ತಾರೆ.

ಹಾಗೆಯೇ ನ್ಯೂಹ್ಯಾಂಪ್ ಷೈರಿನ “ಕಂಕಾಮೇಗಸ್ ಹೈ ವೇ” ಹೆದ್ದಾರಿಯು “ಫಾಲ್ ಫೋಲಿಯೇಜ್” ನೋಡಲು ಇನ್ನೊಂದು ಸುಂದರ ತಾಣ. ಇಲ್ಲಿ ರಸ್ತೆಯುದ್ದಕ್ಕೂ ಎತ್ತ ಕಣ್ಣು ಹಾಯಿಸಿದರತ್ತ ವಿವಿಧ ಬಣ್ಣಗಳ ವರ್ಣಪಟಲ ಕಾಣಸಿಗುತ್ತದೆ. ದಾರಿಯುದ್ದಕ್ಕೂ ಹಲವಾರು ಸುಂದರ ಜಲಪಾತಗಳು ಮತ್ತು ತಿಳಿನೀರಿನ ಸರೋವರಗಳು ನೋಡ ಸಿಗುತ್ತವೆ. ಈ ಸರೋವರಗಳ ಮೇಲ್ದಂಡೆಗಳಲ್ಲಿರುವ ವರ್ಣಮಯ ವೃಕ್ಷಗಳು ತಿಳಿನೀರಿನಲ್ಲಿ ಪ್ರತಿಬಿಂಬಗಳನ್ನು ಮೂಡಿಸುತ್ತಿದ್ದರೆ ನಿಸರ್ಗದೇವಿಯ ಓಕಳಿ ಆಟ ನಮ್ಮ ಮೈನವಿರೇಳಿಸುತ್ತದೆ. ಈ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅಲ್ಲಲ್ಲಿ ವೀಕ್ಷಣಾ ಸ್ಥಳಗಳ ವ್ಯವಸ್ಥೆಗಳಿವೆ.

ಈ ಸಮಯದಲ್ಲಿ ನಗರಗಳ ಸುತ್ತಮುತ್ತಲೂ ವಿಶಿಷ್ಟವಾದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜಿಸಲ್ಪಡುತ್ತವೆ.ಪ್ರವಾಸಿಗರು ಇದನ್ನೂ ನೋಡಬಹುದು.ಹಾಗೆಯೇ ನ್ಯೂ ಇಂಗ್ಲೆಂಡ್ ಪ್ರಾಂತದ ಐತಿಹಾಸಿಕ “ಕವರ್ಡ್ ಬ್ರಿಡ್ಜ್ “ ಗಳು ಪ್ರವಾಸಿಗರು ನೋಡಬೇಕಾದ ಇನ್ನೊಂದು ವಿಶೇಷ.

19ನೇ ಶತಮಾನದಲ್ಲಿ ವ್ಯಾಪಾರಿಗಳು ತಮ್ಮ ಸರಕುಗಳನ್ನು ಕುದುರೆಯಮೇಲೆ ಕೊಂಡೊಯ್ಯುತ್ತಾ ನದಿಯನ್ನು ದಾಟಲು ಸಹಕಾರಿಯಾಗುವಂತೆ, ಯಥೇಚ್ಛವಾಗಿ ದೊರಕುತ್ತಿದ್ದ ಮರದ ದಿಮ್ಮಿಗಳಿಂದ ನಿರ್ಮಿಸಲ್ಪಟ್ಟಿರುವ ಈ ಮರದ ಸೇತುವೆಗಳು ಮಳೆ,ಹಿಮ ಮತ್ತು ಬಿಸಿಲಿನಿಂದ ಹಾಳಾಗದಂತೆ ತಡೆಯಲು ಮರದ ಗೋಡೆ ಮತ್ತು ಮೇಲ್ಛಾವಣಿಗಳನ್ನು ಅಳವಡಿಸಲಾಗಿದೆ.

ಇದರಿಂದ ಆ ದಿನಗಳಲ್ಲಿ ಕುದುರೆ ಸವಾರಿಗೂ ಅನುಕೂಲಕರವಾಗಿದ್ದು, ಸೇತುವೆಗೆ ಹೆಚ್ಚಿನ ಭಧ್ರತೆಯನ್ನು ನೀಡಿ ಬಲವಾದ ಗಾಳಿ ಮತ್ತು ಹಿಮದ ಒತ್ತಡವಿರದಂತೆ ತಡೆಯುತ್ತದೆ.

ಚಳಿಗಾಲದಲ್ಲಿ ಹಿಮಬಂಡಿಗಳ ಸಂಚಾರಕ್ಕಾಗಿ ಸೇತುವೆಯ ಮೇಲೆ ಮಂಜುಗಡ್ಡೆಗಳನ್ನು ಹರಡಲಾಗುತ್ತಿತ್ತಂತೆ. ಐತಿಹಾಸಿಕ ಮಹತ್ವದ ಕಾರಣ ಹಲವಾರು ಕವರ್ಡ್ ಬ್ರಿಡ್ಜ್ ಗಳನ್ನು ಇಂದಿನವರೆಗೂ ಉಳಿಸಿಕೊಳ್ಳಲಾಗಿದೆ.ಇವುಗಳಲ್ಲಿ ವರ್ಮಾಂಟ್ ಮತ್ತು ನ್ಯೂ ಹೆಂಪ್ ಷೈರ್ ನಡುವಿನ 450 ಅಡಿ ಉದ್ದದ “ಕಾರ್ನಿಶ್ ವಿಂಡ್ಸರ್ ಬ್ರಿಜ್” ಅಮೆರಿಕದ ಅತಿ ಉದ್ದನೆಯ ಕವರ್ಡ್ ಬ್ರಿಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೇತುವೆಗಳ ಕಲಾತ್ಮಕ ವಿನ್ಯಾಸದ ಕಾರಣ ಈ ತಾಣಗಳಲ್ಲಿ ಹಲವಾರು ಚಲನ ಚಿತ್ರಗಳು ಮತ್ತು ಕಲಾಕೃತಿಗಳು ತಯಾರಾಗಿವೆ.

ಇನ್ನು ಇವೆಲ್ಲದರ ಜೊತೆ ಉತ್ತಮ ಕಾಫಿ ಮತ್ತು ಐಸ್ಕ್ರೀಂ ಪ್ರಿಯರಿಗೆ ವರ್ಮಾಂಟಿನ “ಆರ್ಟಿಸನ್ ಕಾಫಿ” ಮತ್ತು ಅಲ್ಲಿನ ಸುಂದರ ನಗರ ವಾಟರ್ಬರಿಯ “ಬೆನ್ ಅಂಡ್ ಜೆರ್ರಿ” ಐಸ್ಕ್ರೀಂ ಫ್ಯಾಕ್ಟರಿಗಳು ಜಗತ್ಪ್ರಸಿದ್ಧ ಸ್ಥಳಗಳು.ಇಲ್ಲಿನ ಈ ಫ್ಯಾಕ್ಟರಿಗಳ ಒಳಹೊಕ್ಕು ಅಲ್ಲಿನ ತಯಾರಿಕಾ ವಿಧಾನಗಳನ್ನು ಕಣ್ಣಾರೆ ನೋಡಿ ತಿಳಿದುಕೊಳ್ಳಬಹುದು ಮತ್ತು ನಿಮ್ಮ ನೆಚ್ಚಿನ ರುಚಿಗಳನ್ನು ಸವಿಯಬಹುದು.

ಈ ಪ್ರದೇಶಗಳಲ್ಲಿ ಹೇರಳವಾಗಿ ಸೇಬು ಬೆಳೆಯುವುದರಿಂದ ಆಪಲ್ ಸಿಡರ್(ಸೇಬಿನ ರಸ) ಮಿಲ್ಲುಗಳು ಇವೆ. ಇಲ್ಲಿಗೆ ಭೇಟಿ ನೀಡಿ ವಿಶೇಷವಾದ ಆಪಲ್ ಸಿಡರ್,ಆಪಲ್ ಪೈ ಮತ್ತು ಆಪಲ್ ಡೋನಟ್ ಗಳ ಸ್ವಾದಗಳನ್ನು ಸವಿಯಬಹುದು.

ಪ್ರವಾಸಿ ತಾಣಗಳಾದುದರಿಂದ ಉಳಿದುಕೊಳ್ಳಲು ಉತ್ತಮವಾದ ಹೋಟೆಲ್ ಗಳು ಮತ್ತು ಏರ್ ಬಿ ಎನ್ ಬಿ ಗಳು ಯಥೇಚ್ಛವಾಗಿ ದೊರೆಯುತ್ತವೆಯಾದರೂ,ಮುಂಗಡವಾಗಿ ಕಾಯ್ದಿರಿಸಬೇಕಾಗುತ್ತದೆ.

ಈ ಜಾಗಗಳನ್ನು ನೋಡಲು ವ್ಯವಸ್ಥಿತ ಪ್ರವಾಸಿ ಪ್ಯಾಕೇಜುಗಳೂ,ಅತ್ಯುತ್ತಮ ಸಾರಿಗೆ ವ್ಯವಸ್ಥೆಗಳೂ ಇವೆ.ಆದಾಗ್ಯೂ ಹೆಚ್ಚಿನ ಜನರು ಅನುಕೂಲತೆಯ ದೃಷ್ಟಿಯಿಂದ ಸ್ವಂತ ವಾಹನಗಳಲ್ಲಿ ಬರುತ್ತಾರೆ ಅಥವಾ ಬಾಡಿಗೆಗೆ ಕಾರುಗಳನ್ನು ಪಡೆದು ತಾವೇ ಡ್ರೈವ್ ಮಾಡುತ್ತಾ ಪ್ರವಾಸವನ್ನು ಆನಂದಿಸುತ್ತಾರೆ.

fall foliage

ನಾವು ಅಕ್ಟೋಬರ್ ಮೊದಲನೇ ವಾರದಲ್ಲಿ ವರ್ಮಾಂಟ್ ನ ಸ್ಟೋವ್, ನ್ಯೂ ಹೆಂಪ್ಷೈರ್ ನ ಎರೋಲ್ ಮತ್ತು ಕಂಕಾಮೇಗಸ್ ಹೈ ವೇ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದು ವಾರ ಕಾಲ ನಮ್ಮದೇ ವಾಹನದಲ್ಲಿ ಪ್ರವಾಸ ಕೈಗೊಂಡು ಈ ಹಬ್ಬವನ್ನು ಸಂಪೂರ್ಣವಾಗಿ ಸಂಭ್ರಮಿಸಿದೆವು. ಇಲ್ಲಿನ ಸುಂದರವಾದ ಗ್ರಾಮೀಣ ರಸ್ತೆಗಳು,ಚಿಕ್ಕ ಚಿಕ್ಕ ಪಟ್ಟಣಗಳು ಮತ್ತು ಪರ್ವತಗಳಮೇಲಿನ ದೃಶ್ಯಗಳು ,ಎಲೆಗಳ ಬದಲಾಗುತ್ತಿರುವ ಬಣ್ಣಗಳೊಂದಿಗೆ ಸೇರಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ.ಪರ್ವತಗಳ ಮೇಲಿನ ಮರಗಿಡಗಳು ವಿವಿಧ ಬಣ್ಣಗಳಿಂದ ಹೊಳೆಯುವುದನ್ನು ನೋಡಲು ಎರಡು ಕಣ್ಣುಗಳು ಸಾಲವು.ಹಾಗೆಯೇ ಹರಿಯುವ ನದಿಗಳ ದಡದಲ್ಲಿನ ಮರಗಳು ತಮ್ಮ ರಂಗಿನಾಟವನ್ನು ನೀರಿನಲ್ಲಿ ಪ್ರತಿಫಲಿಸುತ್ತಾ ಪ್ರವಾಸಿಗರನ್ನು ಕುಣಿಸುತ್ತವೆ.

ವರ್ಮಾಂಟಿನ “ಸ್ಟೋವ್” ನಲ್ಲಿ ಗೊಂಡೋಲಾ/ಚೇರ್ ಲಿಫ್ಟ್ ರೈಡಿನಲ್ಲಿ ಕುಳಿತು ಪರ್ವತದ ಮೇಲ್ಭಾಗದಿಂದ ಸುತ್ತ ಮುತ್ತಲಿನ ಅರಣ್ಯಗಳ ವರ್ಣರಂಜಿತ ದೃಶ್ಯಗಳನ್ನು ನೋಡಿದ್ದು ಅನನ್ಯ ಅನುಭವ.

ಭೌಗೋಳಿಕ ಭಿನ್ನತೆಯ ಕಾರಣ, ಶೆನನ್ ಡೋವಾ ರಾಷ್ಟ್ರೀಯ ಉದ್ಯಾನವನ ಮತ್ತು ಸುತ್ತಲಿನ ಬ್ಲೂ ರಿಡ್ಜ್ ಮೌಂಟನ್ ಪ್ರದೇಶಗಳಲ್ಲಿ ಈ ಬಣ್ಣಬದಲಾವಣೆ ಕ್ರಿಯೆಯು ಸ್ವಲ್ಪ ನಿಧಾನವಾಗಿ ಜರುಗುತ್ತದೆ.ಹಾಗಾಗಿ ನವೆಂಬರ್ ನಲ್ಲಿ ಅಲ್ಲಿನ ಸಂಭ್ರಮವನ್ನೂ ಕಣ್ತುಂಬಿಕೊಳ್ಳುವ ಅವಕಾಶವು ನಮಗೆ ದೊರೆಯಿತು.ಜಪಾನ್ ಮತ್ತು ಯೂರೋಪ್ ದೇಶದ ಕೆಲವು ಭಾಗದಲ್ಲಿಯೂ ಈ ಬಣ್ಣಬದಲಾಗುವ ಪ್ರಕ್ರಿಯೆಗಳನ್ನು ಕಾಣಬಹುದಾದರೂ ಅವು ಇಷ್ಟು ಪ್ರಸಿದ್ಧಿಪಡೆದಿಲ್ಲ. ಎಲೆಗಳು ಬಣ್ಣಬದಲಿಸುವ ಈ ಕ್ರಿಯೆ ಕುಂಚ ಹಿಡಿವ ಕಲಾವಿದರಿಗೂ,ಕವಿಗಳಿಗೂ ಸ್ಪೂರ್ತಿಯ ಸೆಲೆಯಾಗುತ್ತವೆ.

ಪ್ರವಾಸಪ್ರಿಯರು ಪ್ರಕೃತಿಯ ಗಿಡಮರಬಳ್ಳಿಗಳ,ಪರ್ವತಗಳ ಈ ಅದ್ಭುತ ಚಮತ್ಕಾರವನ್ನು ಕಣ್ಣಾರೆ ಕಂಡು ಆನಂದಿಸಬೇಕೇ ವಿನಃ ಬರೆವಣಿಗೆಗಾಗಲೀ,ನೂರಾರು ಛಾಯಾಚಿತ್ರಗಳಿಗಾಗಲೀ ನಿಲುಕುವಂತಹುದಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat