ಹಾಸನಾಂಬೆ ದರ್ಶನಕ್ಕೆ ಗೋಲ್ಡ್ ಕಾರ್ಡ್
ಹಾಸನಾಂಬೆ ದರ್ಶನಕ್ಕೆ ಈ ಬಾರಿ ವಿವಿಐಪಿ, ವಿಐಪಿ ಪಾಸ್‌ಗಳನ್ನು ಸಂಪೂರ್ಣ ರದ್ದು ಮಾಡಿ ಗಣ್ಯರಿಗೆ ಗೋಲ್ಡ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಪ್ರತಿವರ್ಷದಂತೆ ಹಾಸನಾಂಬೆ ದೇವಸ್ಥಾನ ಶೀಘ್ರದಲ್ಲೇ ಓಪನ್ ಆಗಲಿದೆ. ಈಗಾಗಲೇ ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿಯಾಗಿದೆ. ಈ ವೇಳೆ ದರ್ಶನಕ್ಕೆ ವಿಐಪಿ ಪಾಸ್ನೊಂದಿಗೆ ಬರುವವರಿಗೆ ಎಂಟ್ರಿ ಸಿಗಲಾರದು. ಯಾಕೆಂದರೆ ಈ ಬಾರಿ ವಿವಿಐಪಿ, ವಿಐಪಿ ಪಾಸ್‌ಗಳನ್ನು ಸಂಪೂರ್ಣ ರದ್ದು ಮಾಡಿ ಗಣ್ಯರಿಗೆ ಗೋಲ್ಡ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅ.9 ರಿಂದ 23 ರವರೆಗೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದು, ದೇವಿಯ ನೇರ ದರ್ಶನಕ್ಕೆ 1,000 ರೂ. ಮತ್ತು 300 ರೂ. ಟಿಕೆಟ್ ವ್ಯವಸ್ಥೆ ಎಂದಿನಂತೆ ಮುಂದುವರಿಯಲಿದೆ.

ಈ ಬಗ್ಗೆ ಮಾತನಾಡಿರುವ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಕಳೆದ ವರ್ಷ ವಿವಿಐಪಿ, ವಿಐಪಿ ಪಾಸ್‌ಗಳನ್ನು ಯಥೇಚ್ಚವಾಗಿ ಹಂಚಿದ್ದರಿಂದ ಧರ್ಮ ದರ್ಶನದವರಿಗೆ ಭಾರೀ ತೊಂದರೆಯಾಗಿತ್ತು. ಹಾಗಾಗಿ ವಿಐಪಿ ಮತ್ತು ವಿವಿಐಪಿ ಪಾಸ್‌ಗಳ ಬದಲಿಗೆ ಗೋಲ್ಡ್ ಕಾರ್ಡ್ ವ್ಯವಸ್ಥೆ ಮಾಡುವಂತೆ ಸಭೆಯಲ್ಲಿ ಸಲಹೆ ಬಂದಿದೆ. ಒಂದು ಗೋಲ್ಡ್ ಕಾರ್ಡ್‌ಗೆ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.