• ಸಿರಿ ಹೊಸ್ಮನೆ

ನಾನು ಮತ್ತು ಕಸಿನ್ಸ್‌ ಸೇರಿ ಮೈಸೂರಿಗೆ ಹೋಗುವ ಪ್ಲಾನ್‌ ಮಾಡಿದ್ದೆವು. ಹಲವು ಬಾರಿ ಪ್ಲಾನ್‌ ಕ್ಯಾನ್ಸಲ್‌ ಆಗಿ ಬಳಿಕ ಎಲ್‌ಪಿಜಿ ಸಮಸ್ಯೆಯ ನಡುವೆಯೇ ಮೈಸೂರಿಗೆ ಹೋಗುವ ಕಾಲ ಕೂಡಿ ಬಂದಿತು. ಮೈಸೂರಿನ ಪ್ರವಾಸಿ ತಾಣಗಳನ್ನು ಎಲ್ಲರೂ ಭೇಟಿ ಮಾಡುತ್ತಾರೆ. ಆದರೆ, ನಮ್ಮ ಯೋಚನೆ ಇದ್ದಿದ್ದೇ ಮೈಸೂರಿನ ಫುಡ್‌ ಕಲ್ಚರ್‌ ಎಕ್ಸ್‌ಪ್ಲೋರ್‌ ಮಾಡಬೇಕು ಎನ್ನುವಂಥದ್ದು!

New Project (11)

ಮೈಲಾರಿಯ ದೋಸೆ!

ನಾವು ಮೊದಲು ಹೋದ ಜಾಗ ಅಲ್ಲಿನ ಅತಿ ಹಳೆಯ ಹೊಟೇಲ್‌ ವಿನಾಯಕ ಮೈಲಾರಿ. ನಿರೀಕ್ಷೆಯಂತೆ ಜನರ ಸಂಖ್ಯೆ ಹೆಚ್ಚಿತ್ತು. ಇಲ್ಲಿನ ವಾತಾವರಣ, ಬಿಸಿ ದೋಸೆ, ಮೃದುವಾದ ಇಡ್ಲಿ ಎಲ್ಲವೂ ಒಂದು ಕ್ಷಣ 1930ರ ಮೈಸೂರು ಹೀಗಿರಬಹುದೇ ಎಂಬ ಯೋಚನೆಗೆ ಕರೆದೊಯ್ಯುತ್ತದೆ. ಬಾಳೆ ಎಲೆಯಲ್ಲಿ ಹಾಕಿ ಕೊಡುವ ಆ ದೋಸೆ ಮತ್ತು ಇಡ್ಲಿ ರುಚಿ ಈಗಲೂ ನಾಲಿಗೆ ಮೇಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ 'ಮೈಲಾರಿ' ಘಮ

ಸಾಪ ಕೆಫೆ

ಸೋಶಿಯಲ್ ಮೀಡಿಯಾದಲ್ಲಿ ಸಾಪ ಬೇಕರಿಯ ಕುರಿತು ಬಹಳ ಕೇಳಿದ್ದೆವು. ಆಗಲೇ ಅಲ್ಲಿಗೆ ಹೋಗುವ ಆಸೆಯಿತ್ತು. ಸರಿಯಾಗಿ ಮಧ್ಯಾಹ್ನ ಊಟಕ್ಕೆ ಅಲ್ಲಿಗೆ ಹೋದೆವು. ಜನಜಂಗುಳಿಯಿದ್ದರೂ, ಊಟ ಸಿಗಲು ಎಷ್ಟು ಹೊತ್ತಾದರೂ ಕಾದಾದರೂ ಸರಿ ಅಲ್ಲೇ ಊಟ ಮಾಡಿ ಹೋಗಬೇಕು ಅಂದುಕೊಂಡಿದ್ದೆವು. ಯಾರು ಮೈಸೂರಿಗೆ ಹೋದರು ಈ ಕೆಫೆಗೆ ಭೇಟಿ ಕೊಡಲೇಬೇಕು. ಆ ವಾತಾವರಣ, ಊಟ ಎಲ್ಲವೂ ಅದ್ಭುತ. ಟೇಬಲ್ ಸಿಗುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡರು ಆ ಜಾಗ, ಅಲ್ಲಿನ ಊಟದ ರುಚಿಯಿಂದ ಕಾದ ಸಮಯವೂ ಮರೆತಹೋಗುತ್ತದೆ. ಬೆಂಗಳೂರಲ್ಲಿರುವ ಸುಮಾರು ಕೆಫೆಗಳಿಗೆ ಹೋದರೂ ಸಾಪ ಕೆಫೆಯಲ್ಲಿ ಸಿಗುವ ರುಚಿ ಇಲ್ಲಿ ಸಿಗುವುದಿಲ್ಲ. ಮೈಸೂರಿನ ವಾತಾವರಣವೇ ಚೆಂದ. ಇಲ್ಲಿನ ಡೆಸರ್ಟ್‌, ಕೇಕ್‌ ಹಾಗೂ ಇನ್ನೂ ಹಲವು ತಿನಿಸುಗಳ ರುಚಿಕರವಾಗಿರುತ್ತವೆ.

New Project (12)

ಹೊಸ ಅದ್ಭುತ

ಸಾಪ ನಂತರ ನಾವು ʼಲಿವೆನ್ʼ ಎನ್ನುವ ಮತ್ತೊಂದು ಕೆಫೆಗೆ ಏನು ನಿರೀಕ್ಷೆ ಇಲ್ಲದೆ ಹೋದೆವು. ಇ ಅಲ್ಲಿನ ಸಿಹಿ ತಿಂಡಿಗಳು ನಮ್ಮ ನಿರೀಕ್ಷೆಯನ್ನೂ ಮೀರಿಸಿತು. ಬಾಸ್ಕ್ ಚೀಸ್ ಕೇಕ್ ಮತ್ತು ತಿರಮಿಸು ಮಸ್ಟ್‌ ಟ್ರೈ ಎನ್ನಬಹುದು. ಮೈಸೂರಿನ ಕೆಫೆಗಳ ವಿಶೇಷ ಏನೆಂದರೆ ಹಳೆಯ ಮನೆಗಳನ್ನು ಬಹಳ ಚೆನ್ನಾಗಿ ಮಾಡರ್ನ್‌ ಟಚ್ ಕೊಟ್ಟು ಕೆಫೆಗಳಾಗಿ ಬದಲಾಯಿಸಿದ್ದಾರೆ. ನಂತರ ಚಿತ್ತರಂಜನ್ ಅರಮನೆಯಲ್ಲಿದ್ದ 'ಮಾಲ್ಗುಡಿ ಕಾಫಿ ಹೌಸ್'ಗೆ ಹೋಗಿ ಅಲ್ಲಿನ 'ಮುನಿಯಪ್ಪನ ಕಾಫಿ' ಟ್ರೈ ಮಾಡಿದೆವು. ಈ ಹೆಸರು ಕೇಳಲು ವಿಚಿತ್ರ ಅನಿಸಬಹುದು, ಆದರೆ ಕಾಫಿ ವಿಶಿಷ್ಟವಾಗಿತ್ತು. ಈ ಅರಮನೆಯನ್ನು ನೋಡಲು ಅದೃಷ್ಟವಶಾತ್‌ ನಮಗೆ ಅವಕಾಶ ಸಿಕ್ಕಿತು. ಬಹಳ ಸುಂದರವಾದ ಆಂಟಿಕ್ ವಸ್ತುಗಳು ಇಲ್ಲಿದ್ದವು. ಅಲ್ಲಿನ ಕೋಣೆಗಳು, ಡೈನಿಂಗ್ ಹಾಲ್, ಅನೇಕ ಆಂಟಿಕ್ ವಸ್ತುಗಳು ಗಮನ ಸೆಳೆಯುತ್ತವೆ. ಸಂಜೆ ಅರಮನೆ ದೀಪಾಲಂಕಾರವನ್ನು ನೋಡಿ ರಾತ್ರಿ ಊಟಕ್ಕೆ ಸೋಶಿಯಲ್ ಮೀಡಿಯಾದಲ್ಲೇ ನೋಡಿದ ಇನ್ನೊಂದು ಜಾಗಕ್ಕೆ ಹೋದೆವು. ಕುಕೀನ- ಈ ಜಾಗ ಬಹಳ ಚಿಕ್ಕದು. ಆದರೆ ಇಲ್ಲಿನ ಊಟ, ಅದರಲ್ಲೂ ಬರ್ಗರ್ ಅದ್ಭುತವಾಗಿತ್ತು.

ಮತ್ತೊಂದು ಮೈಲಾರಿ

ಮರುದಿನ ಬೆಳಗ್ಗೆ ಮತ್ತೆ ಮತ್ತೊಂದು ಮೈಲಾರಿ ಹೊಟೇಲ್‌ಗೆ ದೋಸೆ ತಿನ್ನಲು ಹೋದೆವು. ಈ ಮೈಲಾರಿ ಕೂಡ ನಮ್ಮನ್ನು ನಿರಾಶೆ ಮಾಡದೆ ಬಾಯಲ್ಲಿ ಇಟ್ಟರೆ ಕರಗುವಂಥ ದೋಸೆ ಹಾಗೂ ಇಡ್ಲಿಯನ್ನು ರುಚಿಯಾಗಿ ಉಣಬಡಿಸಿತು. ಮೈಲಾರಿ ಅಂತ ಸುಮಾರು ಹೊಟೇಲ್‌ಗಳು ಇಲ್ಲಿವೆ. ವಿನಾಯಕ ಮೈಲಾರಿ ಒರಿಜಿನಲ್.

New Project (13)

ಸಚ್ಚಿದಾನಂದ ಆಶ್ರಮ

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಹೋದೆವು. ಆ ಜಾಗದ ಮಹಿಮೆಯ ಕುರಿತು ತಿಳಿಯುವ ಅವಕಾಶ ದೊರೆಯಿತು. ಅಲ್ಲಿನ ಗುರುಗಳ ಪವಾಡದ ಕಥೆಗಳನ್ನು ಕೇಳಿದೆವು. ರಾಜರಾಜೇಶ್ವರಿ ಮಂದಿರ, ಸಾಲಿಗ್ರಾಮ ಹೀಗೆ ಹಲವಾರು ದೇವತೆಗಳ ತಾಣ ಈ ಆಶ್ರಮ. ಅಲ್ಲಿನ ಶುಕವನದಲ್ಲಿ ನಮಗೆ ಗಿಳಿಗಳನ್ನು ಹತ್ತಿರದಿಂದ ನೋಡಿ ಅವುಗಳಿಗೆ ಹಣ್ಣುಗಳನ್ನು ಕೊಡುವ ಅವಕಾಶವಾಯಿತು. ಅಲ್ಲಿನ ಮ್ಯೂಸಿಯಂಗೆ ಕೂಡ ಹೋಗಲೇಬೇಕು. ಇಡೀ ಜಗತ್ತನ್ನೇ ಅಲ್ಲಿ ತಂದು ಕೂರಿಸಿದ ಹಾಗೆ ಭಾಸವಾಗುತ್ತದೆ. ಜಗತ್ತಿನ ಬೇರೆ ಬೇರೆ ಮೂಲೆಯ ವಸ್ತುಗಳು, ಒಂದು ಕೋಣೆಯನ್ನು ಆವರಿಸಿರುವ ದೊಡ್ಡ ಭಗವದ್ಗೀತೆಯ ಪುಸ್ತಕ, ಜಗತ್ತಿನ ಎಲ್ಲಾ ದೇಶಗಳ ನಾಣ್ಯಗಳು ಹಾಗೂ ಮುದ್ರೆಗಳು, ಸಂಗೀತ ವಾದ್ಯಗಳು ಎಲ್ಲವೂ ವಿಶಿಷ್ಟವಾಗಿದೆ. ಅಂಬಾವಿಲಾಸ ಅರಮೆನಯಲ್ಲಿದ್ದ ಕಲಾಕೃತಿಗಳು, ಅಂದಿನ ಮೈಸೂರಿನ ಬಗ್ಗೆ ಇದ್ದ ಚಿತ್ರಗಳು ನಮ್ಮನ್ನು ಸೆಳೆದವು. ಅಲ್ಲಿನ ಪ್ರತಿ ಗೋಡೆಗಳು ಒಂದೊಂದು ಕಥೆ ಹೇಳುತ್ತಿದ್ದವು. ಆ ಕಾಲದಲ್ಲಿ ಅಗ್ನಿ ಅಪಘಾತಕ್ಕೆ ಒಳಗಾಗಿದ್ದ ಹಳೆಯ ಅರಮನೆಯನ್ನು ನೋಡುವಾಸೆ ಇತ್ತು. ಆದರೆ, ಆಗಲಿಲ್ಲ. ನಂತರ ಜಗನ್ಮೋಹನ ಅರಮನೆಯ ಚಿತ್ರ ಶಾಲೆಗೆ ಹೋಗಿ 2000ಕ್ಕೂ ಹೆಚ್ಚು ಕಲಾಕೃತಿಗಳನ್ನು ನೋಡಿದೆವು.

New Project (14)

ವೈಟ್‌ ಟೀಕ್‌

ವೈಟ್ ಟೀಕ್ ಎನ್ನುವ ಮತ್ತೊಂದು ಕೆಫೆಗೆ ಮಧ್ಯಾಹ್ನದ ಭೋಜನಕ್ಕೆ ತೆರಳಿದೆವು. ಯಾವುದೋ ಸಮುದ್ರದ ಬಳಿ ಇರುವ ಜಾಗಕ್ಕೆ ಹೋದ ಹಾಗೆ ಅನಿಸುತ್ತದೆ. ಜಾಗದ ಹಾಗೆ ಊಟವೂ ಕೂಡ ಅದ್ಭುತವಾಗಿತ್ತು. ಅಲ್ಲಿನ ಪಾಸ್ತಾ, ಮೊಯಿತೊ ಇವೆಲ್ಲದರ ರುಚಿ ನೆನಪಿಟ್ಟುಕೊಳ್ಳುವ ಹಾಗೆ ಇತ್ತು. ನವಿಲುನ ಎನ್ನುವ ಕೆಫೆ ವಿದೇಶಿಯರು ನಡೆಸುವ ಜಾಗ. ಆ ಜಾಗದ ವಿಶೇಷ ಎಂದರೆ ಅವರೇ ತಯಾರಿಸುವ ಚಾಕ್ಲೆಟ್ಸ್‌ಗಳು. ನಂತರ ವರ್ಲ್ಡ್ ಆಫ್ ಮೈಸೂರ್ ಪಾಕ್‌ಗೆ ಭೇಟಿ ನೀಡಿ ಬಗೆ ಬಗೆಯ ಮೈಸೂರ್ ಪಾಕ್‌ಗಳನ್ನು ಸವಿದು ಹೊರಟೆವು. 'ಸಿಹಿ' ಎಂಬ ಕೆಫೆಯಿದೆ. ಇದರ ಹೆಸರಿನ ಹಾಗೆ ಬಹಳ ಸಿಹಿಯಾಗಿದೆ. ಸುಂದರವಾದ ಹಳೆಯ ಮನೆಯನ್ನು ಕೆಫೆಯಾಗಿ ಬದಲಾಯಿಸಲಾಗಿದೆ. ಒಳಗೆ ಕೂತು ಸಿಹಿಯನ್ನ ತಿನ್ನುತ್ತಾ ಹರಟೆ ಹೊಡೆಯುತ್ತಿದ್ದರೆ ಸಮಯ ಹೋಗುವುದು ಗೊತ್ತಾಗುವುದೇ ಇಲ್ಲ. ಅಲ್ಲಿನ ವಿಶೇಷ ರಿಯಲಿಸ್ಟಿಕ್ ಸಿಹಿತಿನಿಸುಗಳು. ಬೆಂಗಳೂರಲ್ಲೂ ಕೆಫೆಗಳಿದೆ. ಆದರೆ ಮೈಸೂರಿನ ಅಂಬಿಯನ್ಸ್ ಅಥವಾ ಫುಡ್ ಇಲ್ಲಿ ಸಿಗುವುದಿಲ್ಲ.