Saturday, February 28, 2026
Saturday, February 28, 2026

ರವೆ ಇಡ್ಲಿಯ ಹಿಂದಿನ ಕತೆ!

ಹೊಟೇಲ್‌ಗಳಲ್ಲಿ ಎಷ್ಟೊಂದು ಕತೆಗಳು ನಡೆಯುತ್ತವೆ. ಎಷ್ಟೊಂದು ಸಿನಿಮಾಗಳು ನಡೆಯುತ್ತವೆ, ಆದರೆ, ಆ ಹೊಟೇಲ್‌ ನದ್ದೇ ಒಂದು ಕತೆ ಇರಬಹುದೆಂದು ನಮಗೆ ಅನಿಸಿರುವುದಿಲ್ಲ. ಹೊಟೇಲ್‌ ಹಿಂದಿರುವ ಕತೆ ನಮಗೆ ಗೊತ್ತಿರುವುದೂ ಅಪರೂಪ. ಎಂಟಿಆರ್ ಬಹಳವೇ ಪ್ರಖ್ಯಾತ ಹೊಟೇಲ್. ಅದೊಂದು ಬ್ರಾಂಡ್. ನಮ್ಮ ದೈನಂದಿನ ಜೀವನದ ಭಾಗವೇ ಆಗಿರುವ ಎಂಟಿಆರ್ ನ ಕಥೆ ಎಷ್ಟು ಮಂದಿಗೆ ಗೊತ್ತು?

ಎಂಟಿಆರ್‌ ಗುಲಾಬ್‌ ಜಾಮೂನ್‌ ಮಿಕ್ಸ್‌, ಎಂಟಿಆರ್‌ ಪುಳಿಯೋಗರೆ, ಎಂಟಿಆರ್‌ ಸಾಂಬಾರ್‌ ಪೌಡರ್‌.. ಇದನ್ನು ಕೇಳದೇ ಇರುವವರು, ಈ ಪದಾರ್ಥಗಳಿಂದ ಮಾಡಿದ ಯಾವುದೋ ಊಟವನ್ನು ಸೇವಿಸದವರು ಕರ್ನಾಟಕದಲ್ಲಿ ಇದ್ದಾರೆಯೇ? ಉಹುಂ.. ಎಷ್ಟು ಹುಡುಕಿದರೂ ಸಿಗಲಿಕ್ಕಿಲ್ಲ. ಮನೆಯಲ್ಲಿ ಪ್ರತಿದಿನ ಬಳಸುವ ಮಸಾಲೆ ಪುಡಿಗಳು ಅಥವಾ ಎಲ್ಲ ಆಹಾರ ಪದಾರ್ಥಗಳಲ್ಲೂ ಇದು ಇದ್ದೇ ಇರುತ್ತದೆ. ಎಂಟಿಆರ್‌ ಬರೀ ಸಾಂಬಾರ್‌ ಪೌಡರ್‌ ಆಗಿರದೆ, ಹೊಟೇಲ್‌ ಕ್ಷೇತ್ರದಲ್ಲೂ ತನ್ನ ಹೆಸರನ್ನು ಮಾಡಿದೆ. ಇನ್‌ಫ್ಯಾಕ್ಟ್‌ ಎಂಟಿಆರ್‌ ರೆಡಿ ಸಾಮಗ್ರಿಗಳು ಬರುವ ಮೊದಲು ಎಂಟಿರ್ ಎಂಬುದು ಹೊಟೇಲ್‌ ಆಗಿ ಖ್ಯಾತವಾಗಿತ್ತು.

ಇದನ್ನೂ ಓದಿ: ಸಹಕಾರ ನಗರದಲ್ಲೊಂದು ಮತ್ಸ್ಯಲೋಕ

ಈ ಹೊಟೇಲ್‌ನ ಕತೆ ಶುರುವಾಗೋದು, ಅಖಂಡ ಒಂದು ಶತಮಾನಗಳ ಹಿಂದೆ. 1920ರಲ್ಲಿ ಉಡುಪಿಯ ಒಂದು ಸಣ್ಣ ಹಳ್ಳಿಯಿಂದ ಪರಮೇಶ್ವರ ಮಯ್ಯ, ಗಣಪಯ್ಯ ಮಯ್ಯ, ಯಜ್ಞನಾರಾಯಣ ಮಯ್ಯರವರು ಬೆಂಗಳೂರಿಗೆ ಬಂದರು. ಈ ಮೂರು ಸಹೋದರರು ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಅಲ್ಲಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು ಈ ಸಹೋದರರು. 1920ರಲ್ಲಿ ಪರಮೇಶ್ವರ ಮಯ್ಯ ಮತ್ತು ಗಣಪಯ್ಯ ಮಯ್ಯ ಸೇರಿ, ಲಾಲ್‌ಬಾಗ್‌ ಕೋಟೆ ರಸ್ತೆಯಲ್ಲಿ ಬ್ರಾಹ್ಮಣರ ಕಾಫಿ ಬಾರ್‌ ಶುರು ಮಾಡಿದರು. ಆಗ ಈ ಬಾರ್‌ನಲ್ಲಿ ಕಾಫಿ ಮತ್ತು ಇಡ್ಲಿಯನ್ನಷ್ಟೇ ನೀಡುತ್ತಿದ್ದರು. ಪರಮೇಶ್ವರ ಮಯ್ಯ ಅವರು 5 ವರ್ಷದ ನಂತರ ತೀರಿಹೋಗುತ್ತಾರೆ. ಆಗ ಅವರ ಮತ್ತೊಬ್ಬ ಸಹೋದರ ಯಜ್ಞನಾರಾಯಣ ಮಯ್ಯ ಈ ಬಾರ್‌ನಲ್ಲಿ ಸಹಾಯಕನಾಗುತ್ತಾರೆ. ಹಲವಾರು ವರ್ಷಗಳ ಕಾಲ ಕಷ್ಟಪಟ್ಟು ದುಡಿದ ಮೇಲೆ ಆ ಕಾಫಿ ಬಾರ್‌ ದೊಡ್ಡದಾಗಿ ಹೆಸರು ಮಾಡಿತು.

Untitled design (65)

1951ರಲ್ಲಿ ಯಜ್ಞನಾರಾಯಣ ಮಯ್ಯ ಅವರು ಹೊಟೇಲ್‌ಗಳ ಬಗ್ಗೆ ತಿಳಿದುಕೊಳ್ಳಲು ಯುರೋಪ್‌ಗೆ ಹೋಗುತ್ತಾರೆ. ಅಲ್ಲಿನ ರೆಸ್ಟೋರೆಂಟ್‌ಗಳು ಹೇಗೆಲ್ಲ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಆತಿಥ್ಯ ಕ್ಷೇತ್ರದಲ್ಲಿ ಭಾರತ ಯುರೋಪ್‌ಗೆ ಇರುವ ಅಂತರವನ್ನು ತಿಳಿದುಕೊಳ್ಳುತ್ತಾರೆ. ಹೊಟೇಲ್‌ಗಳನ್ನು ಹೇಗೆಲ್ಲ ಸ್ವಚ್ಛತೆಯಲ್ಲಿ ಇರಿಸಿಕೊಳ್ಳಬಹುದು ಎಂಬುವುದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಯುರೋಪ್‌ನಿಂದ ಬಂದ ನಂತರ ರಿನೋವೇಷನ್‌ ಮಾಡಿ ರೆಸ್ಟೋರೆಂಟ್‌ನಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಾರೆ. ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಅವರು ಸ್ವಚ್ಛತೆಯನ್ನು ಹೆಚ್ಚಿಸುತ್ತಾರೆ. ಪಾತ್ರೆಗಳು, ತಟ್ಟೆ, ಕಪ್ಪು ಮತ್ತು ಕಟ್ಲರಿಗಳ ಮೇಲೆ ಆಗಿನ ಕಾಲದ ಸಾಬೂನುಗಳನ್ನು ಪರಿಚಯಿಸುತ್ತಾರೆ. ಆರೋಗ್ಯ ಮತ್ತು ಸರಿಯಾದ ಆಹಾರ ಪದ್ಧತಿಗಳ ಕುರಿತು ಸಣ್ಣ ಕಿರುಪುಸ್ತಕಗಳನ್ನು ವಿತರಿಸುತ್ತಾರೆ. ಗ್ರಾಹಕರು ಪರಿಶೀಲನೆ ಮಾಡಲು ಅಡುಗೆಮನೆಯನ್ನು ಎಲ್ಲರಿಗೂ ತೆರೆಯುತ್ತಾರೆ. ಬ್ರಾಹ್ಮಣರ ಕಾಫಿ ಬಾರ್‌ ನಂತರದಲ್ಲಿ ಮಾವಳ್ಳಿ ಟಿಫಿನ್‌ ರೂಮ್‌ ಎಂದಾಗುತ್ತದೆ. ಅದೇ ಶಾರ್ಟ್ ಅಂಡ್ ಸ್ವೀಟ್ ಆಗಿ ಕರೆಯಲ್ಪಡುವ ಎಂಟಿಆರ್‌!

ಎರಡನೇ ಮಹಾಯುದ್ಧವು ವಿಶ್ವದಲ್ಲಿನ ಎಲ್ಲರನ್ನೂ ನಡುಗಿಸಿತ್ತು. ಆ ಸಮಯದಲ್ಲಿ ವಿಶ್ವದಲ್ಲಿ ಅಕ್ಕಿಗೆ ಎಲ್ಲೆಡೆ ಬೇಡಿಕೆ ಇತ್ತು. ಬೆಂಗಳೂರಿನಲ್ಲಿ ಫೇಮಸ್‌ ಹೊಟೇಲ್‌ ನಡೆಸುತ್ತಿದ್ದ ಮಯ್ಯರವರಿಗೆ ಇಡ್ಲಿ ಮಾಡುವುದು ಕಷ್ಟವಾಗ ತೊಡಗಿತು. ದೇಶದಲ್ಲಿ ಊಟಕ್ಕೂ ಅಕ್ಕಿ ಸಿಗುವುದು ಕಷ್ಟವಾಗಿತ್ತು. ಆದರೆ, ಇವರ ಹೊಟೇಲ್‌ನಲ್ಲಿ ಎಲ್ಲರೂ ಕೇಳುವುದು ಇಡ್ಲಿಯನ್ನೇ. ಆಗ, ಹೊಟೇಲ್‌ ನಡೆಸುತ್ತಿದ್ದ ಮಯ್ಯ ಅವರು ಅಕ್ಕಿಯ ಬದಲು ರವೆಯನ್ನು ಬಳಸಿ ಇಡ್ಲಿಯನ್ನು ಮಾಡಲು ಶುರುಮಾಡಿದರು. ಆಗ ಹುಟ್ಟಿದ್ದೇ, ರವಾ ಇಡ್ಲಿ!

Untitled design (67)

ಎಂಟಿಆರ್‌ನಲ್ಲಿ ಹಲವಾರು ಕತೆಗಳಿವೆ. ಇವರು ಹೊಟೇಲ್‌ ಶುರುಮಾಡಿದ್ದು ಒಂದು ಕತೆಯಾದರೆ, ಇಲ್ಲಿನ ಒಂದೊಂದು ಅಡುಗೆಗೂ ಒಂದೊಂದು ಕತೆಯಿದೆ. ರವೆ ಇಡ್ಲಿ ಎಲ್ಲರಿಗೂ ಗೊತ್ತು. ಆದರೆ, ಅದು ಹುಟ್ಟಿದ್ದು ಎಲ್ಲಿ ಗೊತ್ತಾ? ಇದೇ ಎಂಟಿಆರ್‌ನಲ್ಲಿ, 1975ರಲ್ಲಿ ನಮ್ಮ ದೇಶದ ಮೇಲೆ ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದ್ದರ ಬಗ್ಗೆ ಗೊತ್ತೇ ಇದೆ. ಆ ಎಮರ್ಜೆನ್ಸಿಯಿಂದ ಎಷ್ಟೋ ವ್ಯಾಪಾರಗಳು ನಶಿಸಿಹೋದವು. ಎಂಟಿಆರ್‌ ಕೂಡ ನಶಿಸುವ ಹಂತದಲ್ಲಿತ್ತು, ಆದರೆ, ಇವರು ಎಮರ್ಜೆನ್ಸಿಗೂ ಕುಗ್ಗದೆ ಮತ್ತಷ್ಟು ಹಿಗ್ಗಿ ನಡೆಯುವಂತಾಯಿತು. ಎಮರ್ಜೆನ್ಸಿ ಸಮಯದಲ್ಲಿ ಎಲ್ಲ ಹೊಟೇಲ್‌ಗಳಲ್ಲೂ ಪದಾರ್ಥಗಳ ದರವನ್ನು ಕಡಿಮೆ ಮಾಡುವ ಬಗ್ಗೆ ಕೈಫಿಯತ್ತು ಹೊರಡಿಸಲಾಗುತ್ತೆ. ಅದಾದನಂತರ ಹೊಟೇಲ್‌ಗಳು ಆದಷ್ಟು ಕಡಿಮೆ ಬೆಲೆಯಲ್ಲೇ ತಮ್ಮ ಖಾದ್ಯಗಳನ್ನು ಮಾಡುತ್ತಾರೆ. ಆದರೆ, ಈ ಬೆಲೆ ಈ ಹೊಟೇಲ್‌ನ್ನು ನಡೆಸುವುದೂ ಅಸಾಧ್ಯ ಮಾಡಿಸುತ್ತದೆ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ತಂದೆಗೆ ಬಂದಂಥ ಕಷ್ಟ ಅವರ ಮಗ ಸದಾನಂದ ಮಯ್ಯರಿಗೂ ಬಂದಿತ್ತು. ನಡೆಸಲು ಆಗದೆ ಹೊಟೇಲ್‌ನ್ನು ಬಂದ್‌ ಮಾಡಿದ್ದರು. ಆಗ ಇವರಿಗೆ ಮತ್ತೊಂದು ಪ್ಲಾನ್‌ ಹೊಳೆದಿತ್ತು.

ಆಗೆಲ್ಲ ಸಾಂಬಾರ್‌ ಪೌಡರ್‌, ಪುಳಿಯೋಗರೆ ಪೌಡರ್‌ಗಳನ್ನೆಲ್ಲ ಮನೆಯಲ್ಲೇ ಮಾಡಿಕೊಳ್ಳುತ್ತಿದ್ದರು. ಮತ್ತು ಮನೆಗೆ ಬೇಕಾದ ಪುಡಿ, ಗೊಜ್ಜು, ಚಟ್ನಿ, ಹಿಟ್ಟುಗಳನ್ನೆಲ್ಲ ಮನೆಯಲ್ಲಿಯೇ ಮಾಡುತ್ತಿದ್ದರು. ಆಗ ಹೊಟೇಲ್‌ ಮುಚ್ಚಿದರೆ ಏನು, ನಮ್ಮ ರುಚಿ ಮಾತ್ರ ನಿಲ್ಲಬಾರದು ಎಂದು, ಆಗಿನ್ನೂ ಭಾರತದಲ್ಲಿ ಯಾರಿಗೂ ಗೊತ್ತಿರದ ರೆಡಿ ಟು ಮಿಕ್ಸ್‌ ಕಾನ್ಸೆಪ್ಟ್‌ನ್ನು ಶುರುಮಾಡಿದರು. ಆಗ ಸದಾನಂದ ಮಯ್ಯ ಅವರು ಮುಚ್ಚಿದ ತಮ್ಮ ಹೊಟೇಲ್‌ ಮುಂದೆಯೇ ಅದನ್ನು ಮಾರಲು ಶುರುಮಾಡಿದರು. ನಮ್ಮ ದೇಶದಲ್ಲಿ ಹೊಟೇಲ್‌ಗೆ ಬರುವವರ ಸಂಖ್ಯೆ ಕಡಿಮೆ. ಎಲ್ಲರೂ ಮನೆಯಲ್ಲೇ ಅಡುಗೆ ಮಾಡ್ಕೋತಾರೆ, ಈ ರೆಡಿ ಟು ಮಿಕ್ಸ್‌ ಯಾರು ಬಳಸುತ್ತಾರೆ ಎಂದು ಕೇಳಿದವರೆಲ್ಲ, ಮುಂದೆ ರೆಡಿ ಟು ಮಿಕ್ಸ್‌ ಬಳಸಲು ಶುರುಮಾಡಿದರು. ಹೀಗೆ, ಮುಚ್ಚಿದ್ದ ಹೊಟೇಲ್‌ ಮುಂದೆ ಶುರುಮಾಡಿದ ಮತ್ತೊಂದು ವ್ಯಾಪಾರ ಕೂಡ ಇವರ ಕೈ ಹಿಡಿಯಿತು. ಆಗ, ಕೆಲವು ಪದಾರ್ಥಗಳನ್ನಷ್ಟೇ ಒಳಗೊಂಡಿದ್ದ ಎಂಟಿಆರ್‌ ಈಗ 300 ಕ್ಕೂ ಅಧಿಕ ಪದಾರ್ಥಗಳನ್ನು ಹೊಂದಿದೆ.

2007ರಲ್ಲಿ ಒರ್ಕ್ಲಾ ಎಂಬ ನಾರ್ವೇ ದೇಶದ ಸಂಸ್ಥೆ ಎಂಟಿಆರ್‌ನ ಪ್ಯಾಕೇಜ್ಡ್‌ ಫುಡ್‌ ಸರ್ವೀಸ್‌ ಸಂಸ್ಥೆಯನ್ನು ಖರೀದಿಸುತ್ತದೆ. ಅದಾದ ಕೆಲವು ವರ್ಷದ ನಂತರ ಅಂದರೆ 2012ರಲ್ಲಿ ಸದಾನಂದ ಮಯ್ಯ ಅವರು ಮಯ್ಯಾಸ್ ಫುಡ್ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. ಎಂಟಿಆರ್‌ ರೆಸ್ಟೋರೆಂಟ್‌ಗಳು ಈಗ ಮಯ್ಯ ಕುಟುಂಬದ ಮೂರನೆಯ ತಲೆಮಾರಾದ ಹೇಮಾಮಾಲಿನಿ ಮಯ್ಯ, ವಿಕ್ರಂ ಮಯ್ಯ ಮತ್ತು ಅರವಿಂದ ಮಯ್ಯ ಅವರ ನಾಯಕತ್ವದಲ್ಲಿದೆ.

Untitled design (64)

ಎಂಟಿಆರ್‌ಗೆ ಹೋದಾಗಲೆಲ್ಲ ರವಾ ಇಡ್ಲಿ, ಮಸಾಲಾ ದೋಸೆ, ಚಂದ್ರಹಾರ, ಬಿಸಿಬೇಳೆ ಬಾತ್‌, ಖಾರಾಬಾತ್‌, ಕೇಸರಿಬಾತ್‌, ಫ್ರೂಟ್‌ ಮಿಕ್ಸ್ಚರ್‌, ಪ್ಯೂರ್‌ ಫಿಲ್ಟರ್‌ ಕಾಫಿ ಹೊಟ್ಟೆಗೆ ಬೀಳೋದು ಸುಲಭ ಅಲ್ವಾ? ಅದರ ಜತೆಗೆ ಈ ಹೊಟೇಲ್‌ ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಾ, ಕಷ್ಟ ಬರೋದು ಸುಲಭ ಆದರೆ, ಅದನ್ನು ಎದುರಿಸಿ ನಿಲ್ಲಬೇಕು. ಕಷ್ಟವೂ ನಮಗೆ ಬೆಳೆಯೋಕೆ ಬಿಡುತ್ತೆ ಅಂತ ತಿಳಿದುಕೊಂಡು, ಸ್ಫೂರ್ತಿ ಪಡೆಯಬೇಕಾ ನಿಮಗೆ ಬಿಟ್ಟದ್ದು.

ಎಲ್ಲೆಲ್ಲ ನಮ್ಮ ಎಂಟಿಆರ್‌?

ಎಚ್‌ಎಸ್‌ಆರ್‌ ಲೇಔಟ್‌, ಎಚ್‌ಬಿಆರ್‌ ಲೇಔಟ್‌, ಇಂದಿರಾ ನಗರ, ಜೆಪಿ ನಗರ್‌, ಸೇಂಟ್‌. ಮಾರ್ಕ್ಸ್‌ ರೋಡ್‌, ಗಾಂಧಿ ನಗರ, ಕನಕಪುರ ರೋಡ್‌, ಭಾರತೀಯ ಮಾಲ್‌ ಆಫ್‌ ಬೆಂಗಳೂರು ಇಷ್ಟೆಲ್ಲ ಬೆಂಗಳೂರಿನಲ್ಲಿ ಸಿಕ್ಕರೆ. ಮೈಸೂರು, ಉಡುಪಿ, ಹಾಸನ, ಸಿಂಗಾಪುರ್‌, ದುಬೈ, ಕೌಲಾ ಲಂಪುರ್‌, ಲಂಡನ್‌, ಸಿಯಾಟಲ್‌, ಕಠ್ಮಂಡು, ಟೊರಾಂಟೋ, ಬ್ಯಾಂಕಾಕ್‌ ಇಲ್ಲೆಲ್ಲ ತನ್ನ ಶಾಖೆಗಳನ್ನು ಶುರುಮಾಡಿಕೊಂಡಿದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ