ಕಹಳೆ ಫಿಲ್ಟರ್ ಕಾಫಿ ಬಾರ್
ಕೆಲವು ಜಾಗಗಳೇ ಹಾಗೆ, ಅವು ಕೇವಲ ಆಹಾರವನ್ನಷ್ಟೇ ಉಣಬಡಿಸುವುದಿಲ್ಲ; ಆಹಾರದ ಜತೆಗೆ ಅನೇಕ ನೆನಪುಗಳನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುತ್ತವೆ. ಅಂಥ ವಿಶೇಷವಾದ ಫುಡ್ ಸೆಂಟರ್‌ಗಳ ಪೈಕಿ ಜಯನಗರದಲ್ಲಿರುವ ಕಹಳೆ ಪ್ರಮುಖವಾದುದು. ಕಹಳೆ ರುಚಿಕರವಾದ ಫಿಲ್ಟರ್ ಕಾಫಿಯ ಜತೆಗೆ ನಿಮ್ಮನ್ನು 80 ಮತ್ತು 90ರ ದಶಕದ ದಿನಗಳಿಗೆ ಕರೆದೊಯ್ಯುತ್ತದೆ.
ಓಲ್ಡ್ ಬೆಂಗಳೂರು ಹೇಗಿದ್ದಿರಬಹುದು? ಆಗ ಬಳಕೆಯಲ್ಲಿದ್ದ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಮನೆಗಳ ನಿರ್ಮಾಣ ಹೀಗೆ ಎಲ್ಲದರ ಬಗ್ಗೆ ತಿಳಿಕೊಳ್ಳಬೇಕೆಂದಿದ್ದರೆ, ಇದಕ್ಕಾಗಿ ಒಂದಷ್ಟು ವಸ್ತುಸಂಗ್ರಹಾಲಯಗಳು ನಮ್ಮ ಬೆಂಗಳೂರಿನಲ್ಲೇ ಇವೆ. ಇದರ ಬಗೆಗೆ ಚಿತ್ರಕಲಾ ಪ್ರದರ್ಶನಗಳೂ ಆಗೊಮ್ಮೆ ಈಗೊಮ್ಮೆ ನಡೆಯುತ್ತವೆ. ಇಂಥ ಇವೆಂಟ್ ಗಳನ್ನು ಬಿಟ್ಟರೆ 80-90ರ ದಶಕದ ಬೆಂಗಳೂರು ಹೇಗಿತ್ತು ಎಂಬುದನ್ನು ಖುದ್ದು ನೋಡಿ ತಿಳಿಯುವುದು ಕಷ್ಟ. ಆದರೆ ಈಗ ಅದಕ್ಕೊಂದು ಪರಿಹಾರ ಸಿಕ್ಕಿದೆ. ಓಲ್ಡ್ ಬೆಂಗಳೂರು ನೋಡಬೇಕೆಂದುಕೊಂಡರೆ ಜಯನಗರದ ಕಹಳೆ ಫಿಲ್ಟರ್ ಕಾಫಿ ಬಾರ್ಗೆ ಭೇಟಿ ನೀಡಿದರೆ ಸಾಕು.
ಆಹಾರದ ಜತೆಗೆ ವಿಹಾರ ಎಂಬ ಯೋಜನೆಯೊಂದಿಗೆ ಇಂದಿನ ಯುವ ಜನಾಂಗಕ್ಕೆ ಹಳೆಯ ಬೆಂಗಳೂರನ್ನು ಪರಿಚಯಿಸುತ್ತಿರುವವರು ಕಹಳೆ ಫಿಲ್ಟರ್ ಕಾಫಿ ಬಾರ್. ಹಳೆಯ ಬೇರನ್ನು ಹೊಸ ಚಿಗುರುಗಳಿಗೆ ಪರಿಚಯಿಸುವ ಈ ಪ್ರಯತ್ನದ ಹಿಂದೆ ಸಾಕಷ್ಟು ಶ್ರಮವಿರುವುದು ಮೊದಲ ನೋಟದಲ್ಲೇ ತಿಳಿದುಬರುತ್ತದೆ. ಇದನ್ನು ಕೆಫೆ ಎನ್ನಬೇಕಾ ಅಥವಾ ಮ್ಯೂಸಿಯಂ ಎನ್ನಬೇಕಾ ಎಂಬ ಗೊಂದಲ ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಆಗದೇ ಇರದು.
ಫಿಲ್ಟರ್ ಕಾಫಿ ಬಾರ್

ಹೆಸರೇ ಹೇಳುವಂತೆ ಇಂದೊಂದು ಮಿನಿ ಫಿಲ್ಟರ್ ಕಾಫಿ ಬಾರ್ ಅಥವಾ ಕೆಫೆ ಎನ್ನಬಹುದು. ಕಾಫಿ ಪ್ರಿಯರಿಗಾಗಿಯೇ ಇಲ್ಲಿ ವಿಭಿನ್ನವಾದ ಆಯ್ಕೆಗಳಿವೆ. ಫಿಲ್ಟರ್ ಕಾಫಿಯಲ್ಲೇ ಒಂದಷ್ಟು ಆಪ್ಶನ್‌ಗಳಿದ್ದು ನಿಮ್ಮ ಟೇಸ್ಟ್ ಗೆ ಅನುಗುಣವಾಗಿ ಆರ್ಡರ್ ಮಾಡಿಕೊಳ್ಳಬಹುದು. ಇಲ್ಲಿಗೆ ಭೇಟಿ ನೀಡುವವರಲ್ಲಿ ಅನೇಕರು ಅಯ್ಯಂಗಾರ್ ಶೈಲಿಯ ಬ್ರೆಡ್ ಟೋಸ್ಟ್, ಲೈಮ್ ಚೀಸ್‌ಕೇಕ್ಗಳನ್ನು ಸವಿಯದೇ ಮರಳುವುದೇ ಇಲ್ಲ.
ಮೋಡಿ ಮಾಡುವ ಮಿನಿ ಮ್ಯೂಸಿಯಂ
ಕಹಳೆ ಫಿಲ್ಟರ್ ಕಾಫಿ ಬಾರ್ ಒಳ ಹೋಗುತ್ತಿದ್ದಂತೆ ಹಳ್ಳಿಯಲ್ಲಿರುವ ಅಜ್ಜಿಯ ಮನೆಯೇ ನೆನಪಾಗುತ್ತದೆಯೆಂಬುದು ಇಲ್ಲಿಗೆ ಬರುವ ಅನೇಕ ಗ್ರಾಹಕರ ಮಾತು.ಇದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿನ ವಾತಾವರಣ, ನೆಲ ಹಾಸು, ಗೋಡೆಯಲ್ಲಿರುವ ಚಿತ್ತಾರಗಳು, 80-90ರ ದಶಕದ ಟಿವಿ, ರೇಡಿಯೋ, ಗ್ರಾಮೋಫೋನ್, ಸ್ಪೀಕರ್, ದೂರವಾಣಿ, ಟೈಪ್‌ರೈಟರ್, ಟೇಪ್ ರೆಕಾರ್ಡರ್, ಪೀಠೋಪಕರಣಗಳು ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ವಸ್ತುಗಳು ಹಳೆಯ ದಿನಗಳನ್ನು ಮತ್ತೆ ನೆನಪಿಸುತ್ತದೆ, ಪರಿಚಯಿಸುತ್ತವೆ.

ವಾರಾಂತ್ಯದಲ್ಲಿ ಲೈವ್ ಸಂಗೀತ
ಕೆಫೆ, ಮ್ಯೂಸಿಯಂ ಎಂಬೆಲ್ಲಾ ಹೆಸರುಗಳಿಂದಲೂ ಕರೆಸಿಕೊಳ್ಳುವ ಕಹಳೆ ಕಾಫ್ ಬಾರ್‌ನಲ್ಲಿ ವಾರಾಂತ್ಯಗಳಲ್ಲಿ ಲೈವ್ ಸಂಗೀತ ಕಾರ್ಯಕ್ರಮಗಳದ್ದೇ ದರ್ಬಾರ್!. ಸದ್ಯ ಟ್ರೆಂಡ್‌ನಲ್ಲಿರುವ ಯುವ ಗಾಯಕ, ಗಾಯಕಿಯರು ಲೈವ್ ಪರ್ಫಾರ್ಮೆನ್ಸ್ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಯುವ ಗಾಯಕಿ ಸ್ಪೂರ್ತಿ ರಾವ್ ಅವರ ಭಕ್ತಿಗೀತೆಗಳು ಹಾಗೂ ಬಾಲಿವುಡ್ ಹಿಟ್ಸ್ ಲೈವ್ ಕಾರ್ಯಕ್ರಮವಂತೂ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು.
Kaapi ಗಳು ನಿಮ್ಮ ಆಯ್ಕೆಗೆ ಬಿಟ್ಟಿದ್ದು
ಕಾಫಿ ಚಿಕ್ಕ, ಕಾಫಿ ದೊಡ್ಡ, ಬೆಲ್ಲದ್ ಕಾಪಿ, ಬ್ಲ್ಯಾಕ್ ಕಾಫಿ, ಶುಂಠಿ ಕಾಫಿ, ಸುಕ್ಕ ಕಾಫಿ,
ಹೇಸಲ್ ನಟ್ ಐಸ್ಡ್ ಫಿಲ್ಟರ್ ಕಾಫಿ, ವೆನಿಲಾ ಐಸ್ಡ್ ಫಿಲ್ಟರ್ ಕಾಫಿ, ವಿಯೆಟ್ನಾಮೀಸ್ ಐಸ್ಡ್ ಫಿಲ್ಟರ್ ಕಾಫಿ, ಸಾಲ್ಟೆಡ್ ಕ್ಯಾರೆಮೆಲ್ ಐಸ್ಡ್ ಕಾಫಿ, ರೋಸ್ ಐಸ್ಡ್ ಕಾಫಿ, ಸ್ಟ್ರಾಬೆರಿ ಐಸ್ಡ್ ಕಾಫಿಗಳಿಗೆ ಇಲ್ಲಿ ಭಾರೀ ಬೇಡಿಕೆಯಿದೆ.
ಬೆಂಗಳೂರಿನ ಜಯನಗರದಲ್ಲಿರುವ ಕಹಳೆ ಫಿಲ್ಟರ್ ಕಾಫಿ ಬಾರ್ಗೆ ಭೇಟಿ ನೀಡಿ ವಿಂಟೇಜ್-ಶೈಲಿಯ ಅನುಭವದೊಂದಿಗೆ ಕಾಫಿ ಹೀರಬೇಕೆಂದುಕೊಂಡರೆ ದಿನದ ಯಾವ ಸಮಯವಾದರೂ ಪ್ರಶಸ್ತವೇ. ವಾರಾಂತ್ಯದಲ್ಲಿ ಮತ್ತು ಸಂಜೆಯ ಹೊತ್ತು ಇಲ್ಲಿ ಅಪಾರ ಜನದಟ್ಟಣೆಯಿರುತ್ತದೆಯಾದರೂ ಅದರ ನಡುವೆ ಕಾದು, ರುಚಿಕರವಾದ ಕಾಫಿ ಹೀರುತ್ತಾ ವಿಂಟೇಜ್ ಮತ್ತು ರೆಟ್ರೋ ಅಲಂಕಾರಗಳನ್ನು ಕಣ್ತುಂಬಿಕೊಳ್ಳುವ ಖುಷಿ ಬೇರೆಲ್ಲೂ ಸಿಗದು. ಇನ್ಯಾಕೆ ತಡ ಕಹಳೆಗೆ ಒಂದು ಬಾರಿ ಭೇಟಿ ನೀಡಿ ಬನ್ನಿ.
ವಿಳಾಸ: ಕಹಳೆ - ಫಿಲ್ಟರ್ ಕಾಪಿ ಬಾರ್, 731, 10ನೇ ಮುಖ್ಯ ರಸ್ತೆ, ಕಾರ್ನರ್ ಹೌಸ್ ಹತ್ತಿರ, 4ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560041