ವಿದ್ಯಾರ್ಥಿ ಭವನ, ಇಲ್ಲಿ ಪ್ರತಿ ದಿನವೂ ಅಲುಮ್ನಿಯೇ!
ಈ ವಿದ್ಯಾರ್ಥಿ ಭವನ ಬರೀ ಒಂದು ಹೊಟೇಲ್ ಅಲ್ಲ, ಒಂದಿಡೀ ಊರಿನ ನಾಡಿಮಿಡಿತ. ಸ್ನೇಹಿತರು ಹರಟೆ ಹೊಡೆಯಲು, ಪ್ರೇಮಿಗಳು ಭೇಟಿಯಾಗಲು, ಉದ್ಯಮಿಗಳು ಬ್ಯುಸಿನೆಸ್ ಕುದುರಿಸಲು, ಕ್ಲಾಸ್ ಬಂಕ್ ಮಾಡಿದವರು ಮರೆಮಾಚಲು, ಟೈಮ್ ಪಾಸಿಗಾಗಿ ಕುಳಿತುಕೊಳ್ಳಲು, ಬಸ್ ಮಿಸ್ ಆದವರು, ಹಿರಿಯರು ಕಿರಿಯರು ಮಾತನಾಡಲು, ಸಂಘಟಕರು ಸಂಘಟನೆಯನ್ನು ಬೆಳೆಸಲು, ರಾಜಕಾರಣಿಗಳು ಹೊಸ ರಾಜಕೀಯ ದಾಳವನ್ನು ಹಾಕಲು ಹೀಗೆ ಹಲವಾರು ಸ್ತರದ ಜನರಿಗೆ ತಮ್ಮ ದಿನನಿತ್ಯದ ಕೆಲಸಗಳ ನಡುವೆ ಈ ಹೊಟೇಲ್ ಕ್ಯಾಟಲಿಸ್ಟ್ ಆಗಿತ್ತು.
ಎಲ್ಲ ಊರಲ್ಲೂ ಒಂದು ಹೊಟೇಲ್ ಇರುತ್ತೆ. ಅದರ ಖ್ಯಾತಿ ಹೇಗಿರುತ್ತದೆಂದರೆ, ಆ ಊರಿನ ಬಗ್ಗೆ ಮಾತು ಬಂದಾಗಲೆಲ್ಲ ಆ ಹೊಟೇಲ್ ಹೆಸರು ಪ್ರಸ್ತಾಪ ಆಗಿಯೇ ಆಗುತ್ತದೆ. ಅಲ್ಲಿಗೆ ಹೋದಾಗ ಆ ಹೊಟೇಲ್ ನಲ್ಲಿ ಈ ತಿಂಡಿ ತಿನ್ನೋದು ಮಾತ್ರ ಮಿಸ್ ಮಾಡಬೇಡ ಅಂತ ಸಜೆಶನ್ ಬರ್ತವೆ. ಆ ಊರಿನ ಮಾರ್ಗವಾಗಿ ಹೋಗುವವರೂ ಆ ಹೊಟೇಲ್‌ನಲ್ಲಿ ತಿಂಡಿ ಮುಗಿಸಿಕೊಂಡೇ ಹೋಗುತ್ತಾರೆ. ಅವು ಆ ಊರಿನ ಸಿಗ್ನೇಚರ್ ಹೊಟೇಲ್ ಎಂಬಂತಾಗಿಬಿಟ್ಟಿರುತ್ತವೆ. ಬೆಂಗಳೂರಿನಲ್ಲೂ ಅಂಥ ಹಲವಾರು ಹೊಟೇಲ್ ಗಳಿವೆ. ಒಳ್ಳೆ ಇಡ್ಲಿ ತಿನ್ನೋಕೆ ಒಂದು ಹೊಟೇಲ್ ಫೇಮಸ್ ಇದ್ದರೆ, ದೋಸೆಗೆ ಮತ್ತೊಂದು. ಫಿಲ್ಟರ್ ಕಾಫಿ, ಮಸಾಲಾ ಚಾಯ್, ರವಾ ಇಡ್ಲಿ ಹೀಗೆ ಪ್ರತಿಯೊಂದು ತಿಂಡಿಗೂ ಒಂದೊಂದು ಹೊಟೇಲ್ ತನ್ನದೇ ಆದ ಗರಿಮೆಯನ್ನು ಉಳಿಸಿಕೊಂಡಿದೆ. ಅವುಗಳಲ್ಲೊಂದು ವಿದ್ಯಾರ್ಥಿ ಭವನ. ತನ್ನ ರುಚಿ, ಸ್ಟೈಲ್, ಹಾಗೆ ವಿಂಟೇಜ್ ವೈಬ್‌ಗಳಿಂದ ಬೆಂಗಳೂರಿಗರ ಹೃದಯದಲ್ಲಿ ಸ್ಥಾನ ಗಳಿಸಿರುವ ಹೊಟೇಲ್ ಇದು. ಕೇವಲ ಬೆಂಗಳೂರಿಗರಷ್ಟೇ ಅಲ್ಲ, ದೇಶ ವಿದೇಶದ ಜನರೂ ಬೆಂಗಳೂರಿಗೆ ಬಂದಾಗ ಈ ಹೊಟೇಲ್‌ಗೊಂದು ಭೇಟಿ ನೀಡದೇ ಇರುವುದಿಲ್ಲ. ಈ ಹೊಟೇಲ್‌ಗೆ ಹೋದಾಗ ಯಾರಾದರೊಬ್ಬ ಸೆಲೆಬ್ರಿಟಿ, ರಾಜಕಾರಣಿ, ಕ್ರೀಡಾಳು ನಿಮ್ಮ ಕಣ್ಣಿಗೆ ಬೀಳೋದು ಕಾಮನ್. ವಿದ್ಯಾರ್ಥಿ ಭವನ ಎಂಬುದು ಕೇವಲ ಹೊಟೇಲ್ ಅಲ್ಲ. ಬೆಂಗಳೂರಿಗರ ಎಮೋಷನ್ ಎಂಬಂತಾಗಿಬಿಟ್ಟಿದೆ.
ಇದನ್ನೂ ಓದಿ: ಉತ್ಸವ್ ರಾಕ್ ಗಾರ್ಡನ್
ಸಾಮಾನ್ಯವಾಗಿ ಹಳೆಯ ಹೊಟೇಲ್ ಅಂದರೆ ಅದೊಂದು ಹರಟೆ ಕಟ್ಟೆಯಾಗಿಬಿಟ್ಟಿರುತ್ತದೆ. ಒಂದು ಕಪ್ ಟೀ ತಗೊಂಡು ಒಂದು ಗಂಟೆ ಟೈಮ್ ಪಾಸ್ ಮಾಡುವ ತಾಣವಾಗಿರುತ್ತದೆ. ಆದರೆ ವಿದ್ಯಾರ್ಥಿಭವನ ಇದಕ್ಕೆ ಅಪವಾದ. ಇದು ಸದಾ ಹೌಸ್ ಫುಲ್. ವಿದ್ಯಾರ್ಥಿ ಭವನಕ್ಕೊಂದು ದಿವ್ಯ ಇತಿಹಾಸವಿದೆ. ಒಂದಿಡೀ ತಲೆಮಾರಿನ ಸಾಹಿತಿಗಳು ಇಲ್ಲಿಗೆ ಬರುತ್ತಿದ್ದರು. ಆ ಕಾಲದಲ್ಲಿ ಅವರಿಗೆಲ್ಲ ಇದು ಅರ್ಥಪೂರ್ಣ ಸಾಹಿತ್ಯ ಸಂವಾದದ ವೇದಿಕೆಯಾಗಿತ್ತು. ಒಂದೆರಡು ಇಡ್ಲಿ ತಿಂದು, ವಡೆ ಮುಗಿಸಿ ಕಾಫಿ ಹೀರುತ್ತ, ಹೊಸ ಕತೆಗಳಿಗೆ ಸ್ಫೂರ್ತಿ ಪಡೆದು ಹೋಗುತ್ತಿದ್ದರು ಸಾಹಿತಿಗಳು. ಬೆಂಗಳೂರಿನ ಪ್ರತಿ ಹಿರಿಯ ಸಾಹಿತಿಗೂ ವಿದ್ಯಾರ್ಥಿ ಭವನದಲ್ಲೊಂದು ಮೆಮೋರಿಯಿದೆ. ʼಅದು 1979ರ ಡಿಸೆಂಬರ್, ನನ್ನ ಬದುಕಿನ ದುರ್ಭರ ದಿನಗಳು. ಒಂದು ದಿನ ರಸ್ತೆಯಲ್ಲಿ ನಿಂತಿದ್ದವನನ್ನು ಮಹಾನ್ ಕವಿ ಗೋಪಾಲಕೃಷ್ಣ ಅಡಿಗರು “ವಿದ್ಯಾರ್ಥಿ ಭವನಕ್ಕೆ” ಕರೆತಂದು ದೋಸೆ ತಿನ್ನಿಸಿ, ಕಾರಣವನ್ನೇ ಹೇಳದೆ ಆ ಕಾಲಕ್ಕೆ 300ರುಪಾಯಿ ಜೇಬಲ್ಲಿಟ್ಟು ಸುಮ್ಮನೆ ನಡೆದು ಹೋದರು. ನಾನು ಕನ್ನಡದ ಅಷ್ಟೂ ಹಿರಿಯ ಸಾಹಿತಿಗಳನ್ನು ಕಂಡದ್ದೇ ಇಲ್ಲಿ. ಅವತ್ತಿನ ದೋಸೆ, ಚಟ್ನಿ, ಆತಿಥ್ಯ ಇನ್ನೂ ಬದಲಾಗಿಲ್ಲ. ನಾನು ವಿದ್ಯಾರ್ಥಿ ಭವನಕ್ಕೆ ಋಣಿ.’ ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಒಮ್ಮೆ ಬರೆದಿದ್ದರು.

ಮತ್ತೊಬ್ಬ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಹೀಗೆ ಬರೆಯುತ್ತಾರೆ: ʼ1930ರ ಸಮಯ, ಇಡೀ ವಿದ್ಯಾರ್ಥಿ ಸಮೂಹವನ್ನು ಗಮನದಲ್ಲಿ ಇಟ್ಟುಕೊಂಡು ಒಂದು ಹೊಟೇಲ್ ಶುರುವಾಯಿತು. ಅದರ ಹೆಸರೇ ವಿದ್ಯಾರ್ಥಿ ಭವನ. ಇಲ್ಲಿನ ದೊಸೆ ಮತ್ತು ಕಾಫಿಯ ಗುಣಮಟ್ಟ ಮತ್ತು ರುಚಿ, ಬುದ್ಧಿವಂತರನ್ನು ಸೆಳೆಯಲು ಶುರುಮಾಡಿತು. ಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿದ್ಯಾರ್ಥಿ ಭವನಕ್ಕೆ ಬಂದು, ತಮ್ಮ ಕೋಟ್‌ನಲ್ಲಿ ಇಲ್ಲಿನ ರವಾ ವಡೆಯ ಪಾರ್ಸಲ್ ಇಟ್ಟುಕೊಂಡು, ಬಸವನ ಗುಡಿ ಕ್ಲಬ್‌ನ ದಿನನಿತ್ಯದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಆದರೆ, ಇಲ್ಲಿ ಸಿಗರೇಟ್ ಸೇದುವುದಕ್ಕೆ ನಿಷೇಧವಿದ್ದಿದ್ದರಿಂದ ಕೆಲವೊಂದಿಷ್ಟು ಸಾಹಿತಿಗಳು ಸರ್ಕಲ್ ಲಂಚ್ ಹೋಮ್‌ಗೆ ಹೋಗುತ್ತಿದ್ದರು….ʼ
’ವಿದ್ಯಾರ್ಥಿ ಭವನಕ್ಕೆ ನಾನು ಬಂದು, ನಾನು ಬೆಂಗಳೂರಿಗೆ ಬಂದಷ್ಟೇ ವರ್ಷಗಳಾದವು. ನಾನು ಬೆಂಗಳೂರಿಗೆ ಬಂದ ಮೊದಲ ದಿನವೇ ಇಲ್ಲಿಗೆ ಬಂದಿದ್ದೆ. ಅಲ್ಲಿಂದ ಇಲ್ಲಿ ತನಕ ನನ್ನ ಸಂಬಂಧ ವಿದ್ಯಾರ್ಥಿ ಭವನದೊಂದಿಗೆ ಮುಂದುವರಿದುಕೊಂಡು ಬಂದಿದೆ. ಇಲ್ಲಿ ವೈಯೆನ್ಕೆ ಅವರ ಜತೆ ಕುಳಿತು ಕಳೆದ ದಿನಗಳೆಷ್ಟೋ. ವಿದ್ಯಾರ್ಥಿ ಭವನ ಬೆಂಗಳೂರಿನ ಪ್ರಮುಖ ಹೊಟೇಲ್ ಅಷ್ಟೇ ಅಲ್ಲ, ಇದೊಂದು ಸಾಂಸ್ಕೃತಿಕ ತಾಣ.ʼ ಎಂದು ವಿಶ್ವೇಶ್ವರ ಭಟ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆಯುತ್ತಾರೆ.
ʼಬೆಂಗಳೂರಿಗೆ ಬಂದಾಗಿನಿಂದಲೂ ಇಲ್ಲಿ ಅನೇಕ ಖ್ಯಾತರೊಂದಿಗೆ ದೊಸೆ ತಿಂದು ಸಂತೋಷಪಟ್ಟಿದ್ದೇನೆ. ಬೆಂಗಳೂರಿನಲ್ಲಿದ್ದವರು ವಿದ್ಯಾರ್ಥಿ ಭವನದ ದೋಸೆ ತಿನ್ನದಿದ್ದರೆ ಅವರ ಬೆಂಗಳೂರು ವಾಸ್ತವ್ಯವೇ ವ್ಯರ್ಥ ಅನ್ನುವಷ್ಟರ ಮಟ್ಟಿಗೆ ಖ್ಯಾತವಾದ ಈ ಹೊಟೇಲ್ ಬಗ್ಗೆ ನನಗೆ ಹೆಮ್ಮೆ ಅಭಿಮಾನ ಪ್ರೀತಿʼ ಎಂದು ಚಂದ್ರಶೇಖರ ಕಂಬಾರ ಬರೆದುಕೊಳ್ಳುತ್ತಾರೆ.

ಈ ವಿದ್ಯಾರ್ಥಿ ಭವನ ಬರೀ ಒಂದು ಹೊಟೇಲ್ ಅಲ್ಲ, ಒಂದಿಡೀ ಊರಿನ ನಾಡಿಮಿಡಿತ. ಸ್ನೇಹಿತರು ಹರಟೆ ಹೊಡೆಯಲು, ಪ್ರೇಮಿಗಳು ಭೇಟಿಯಾಗಲು, ಉದ್ಯಮಿಗಳು ಬ್ಯುಸಿನೆಸ್ ಕುದುರಿಸಲು, ಕ್ಲಾಸ್ ಬಂಕ್ ಮಾಡಿದವರು ಮರೆಮಾಚಲು, ಟೈಮ್ ಪಾಸಿಗಾಗಿ ಕುಳಿತುಕೊಳ್ಳಲು, ಬಸ್ ಮಿಸ್ ಆದವರು, ಹಿರಿಯರು ಕಿರಿಯರು ಮಾತನಾಡಲು, ಸಂಘಟಕರು ಸಂಘಟನೆಯನ್ನು ಬೆಳೆಸಲು, ರಾಜಕಾರಣಿಗಳು ಹೊಸ ರಾಜಕೀಯ ದಾಳವನ್ನು ಹಾಕಲು, ವಿಜ್ಞಾನಿಗಳು ವಿಜ್ಞಾನ ಬಿಟ್ಟು ಬೇರೆ ವಿಚಾರದ ಬಗ್ಗೆ ಹೀಗೆ ಹಲವಾರು ಸ್ತರದ ಜನರಿಗೆ ತಮ್ಮ ದಿನನಿತ್ಯದ ಕೆಲಸಗಳ ನಡುವೆ ಈ ಹೊಟೇಲ್ ಕ್ಯಾಟಲಿಸ್ಟ್ ಆಗಿತ್ತು.

ಇದು ಬರೀ ಸಾಹಿತಿಗಳಿಗಷ್ಟೇ ಅಲ್ಲ, ಸಿನಿಮಾ ರಂಗದವರಿಗೆ, ಹೊಸದಾಗಿ ವ್ಯಾಪಾರ ಶುರುಮಾಡಿದವರಿಗೆ, ಅಷ್ಟೇ ಯಾಕೆ, ಬೆಂಗಳೂರಿಗೆ ಬಂದವರಿಗೆಲ್ಲ ಇದು ಒಂಥರಾ ʼತೀರ್ಥತ್ಷೇತ್ರʼ. ದೋಸೆಯನ್ನು ಪ್ರಸಾದವನ್ನಾಗಿ ಸ್ವೀಕರಿಸಿ, ಕಾಫೀಯನ್ನು ಪ್ರೀತಿಯಿಂದ ಕುಡಿದು ಹೋದ ಹಲವಾರು ಜನರಿದ್ದಾರೆ. ಡಾ.ರಾಜಕುಮಾರ್ ಅವರು ಇಲ್ಲಿಗೆ ಆಗಾಗ ಬರಬೇಕು ಎಂದು ಅನಿಸುತ್ತದೆ ಎಂದು ಹೇಳಿದರೆ, ಡಾ.ವಿಷ್ಣುವರ್ಧನ ಇಲ್ಲಿನ ಖಾಯಂ ಗಿರಾಕಿ. ಸ್ನೇಹಿತರೊಡನೆ ವಿದ್ಯಾರ್ಥಿ ಭವನಕ್ಕೆ ಸಿದ್ದರಾಮಯ್ಯನವರು ಬರುತ್ತಿದ್ದರು. ಮುಖ್ಯಮಂತ್ರಿಗಳಾದ ಮೇಲೂ ಇಲ್ಲಿಗೆ ಆಗಾಗ ಭೇಟಿ ನೀಡಿದ್ದಾರೆ. ಹಲವಾರು ವರ್ಷಗಳಿಂದ ವಿದ್ಯಾರ್ಥಿ ಭವನಕ್ಕೆ ಬರುತ್ತಿದ್ದ ಯಡಿಯೂರಪ್ಪನವರಿಗೂ ಇಲ್ಲಿನ ಸಾಗು ದೋಸೆ ಇಷ್ಟ. ಮಾಜಿ ಪ್ರಧಾನಿ ದೇವೆಗೌಡರು ಇಲ್ಲಿ ಬಂದಿದ್ದಾರೆ. ಇನ್ನೂ ಹಲವಾರು ನಾಯಕರಿಗೆ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ ಭವನ ನೆಚ್ಚಿನದ್ದಾಗಿತ್ತು. ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರಿಗೂ ಇಲ್ಲಿ ದೋಸೆ ತಿನ್ನೋ ಆಸೆ ಆಗಿತ್ತು. ಫುಡ್ ವ್ಲಾಗರ್ಸ್, ಖ್ಯಾತ ಬಾಣಸಿಗರಷ್ಟೇ ಅಲ್ಲದೇ. ಸ್ಟಾರ್‌ಬಕ್ಸ್‌ನ ಸಂಸ್ಥಾಪಕ ಜೀವ್ ಸಿಗಲ್ ಅವರೂ ಇಲ್ಲಿನ ದೊಸೆ ತಿಂದು, ಕಾಫೀ ಕುಡಿದರೆಂದರೆ, ಈ ಭವನದ ಹವಾ ಎಷ್ಟಿದ್ದೀತು ಯೋಚಿಸಿ.
ಕೈ ಕಾಣದಷ್ಟು ಎತ್ತರದ ದೋಸೆಯ ಪ್ಲೇಟ್‌ಗಳು, ಗಂಟೆಗಟ್ಟಲೆ ಗೇಟಿನ ಹೊರಗಡೆ ಕಾಯುವ ಜನರು, ಬುಸಬುಸ ಓಡಾಡುವ ಸರ್ವರ್‌ಗಳು, ಎಲ್ಲಿ ನೋಡಿದರೂ ಕಾಣುವ ಸಾಹಿತಿಗಳ ಚೆಂದದ ಚಿತ್ರಗಳು. ಬಿಸಿ ಬಿಸಿ ದೋಸೆ, ಇಡ್ಲಿ. ಸುತ್ತಲು ನಗುತ್ತಾ ಓಡಾಡುವ ಜನರು. ಇಂಥ ವಿದ್ಯಾರ್ಥಿ ಭವನದಲ್ಲಿ ಹಲವಾರು ಜನ ವಿದ್ಯಾರ್ಥಿಯಾಗಿ ಬಂದು ಮತ್ತೊಮ್ಮೆ ವಿದ್ಯಾರ್ಥಿಯಾಗಲು ಬರುತ್ತಲೇ ಇರುತ್ತಾರೆ. ಈ ಸಂಸ್ಕೃತಿ ಹೀಗೆ ಮುಂದುವರಿಯಲಿ. ನೀವೂ ಆಗಾಗ ವಿದ್ಯಾರ್ಥಿ ಭವನದ ವಿದ್ಯಾರ್ಥಿ ಆಗುತ್ತಿರಿ.