ಮೊದಲ ನೋಟಕ್ಕೇ ಮನಸೋಲುವುದು ಆತಿಥ್ಯ ಕ್ಷೇತ್ರಕ್ಕೂ ಸಲ್ಲುವ ಮಾತು. ಜಯನಗರ 4ನೇ ಬ್ಲಾಕ್, ಗಣೇಶ ದೇವಸ್ಥಾನದ ಹತ್ತಿರ, ಸರಿಯಾಗಿ ʻಟೀ ವಿಲ್ಲಾʼ ಪಕ್ಕದಲ್ಲಿ ಹಾದುಹೋಗುವ ವೇಳೆ ಕಾಣಿಸಿಕೊಂಡ ಪುಟ್ಟದಾದ ಹೊಟೇಲ್ ʻರಸಧಾರೆʼ. ಯಾವುದೋ ಕೆಲಸಕ್ಕಾಗಿ ಆ ಹಾದಿಯಲ್ಲಿ ಹೋಗಿದ್ದೆನಾದರೂ ಅಲ್ಲೊಂದು ವಿರಾಮ ತೆಗೆದುಕೊಳ್ಳದೇ, ಒಳಗೊಮ್ಮೆ ಹೋಗಿ ಅಲ್ಲಿನ ಅಡುಗೆಯ ರುಚಿ ನೋಡದೇ ಮುಂದಕ್ಕೆ ಹೋಗಬೇಕೆನಿಸಲೇ ಇಲ್ಲ.

ನೋಡುತ್ತಿದ್ದರೆ ಗ್ರಾಮೀಣ ಭಾಗದ ಮನೆಗಳಲ್ಲಿದ್ದೇವೇನೋ ಎಂಬಂತೆ ಕಾಣಿಸಿಕೊಂಡ ಈ ಹೊಟೇಲ್‌ನಲ್ಲಿ ಕೂರುವುದಕ್ಕೆ ಒಂದೇ ಒಂದು ಕುರ್ಚಿಯಿಲ್ಲ, ವಿಶೇಷ ಸೀಟಿಂಗ್ ವ್ಯವಸ್ಥೆಯೂ ಇಲ್ಲ. ಹಳ್ಳಿ ಕಟ್ಟೆ ಇಲ್ಲವೇ ಜಗಲಿ ಕಟ್ಟೆಯನ್ನು ಸುತ್ತಲೂ ನಿರ್ಮಿಸಲಾಗಿದ್ದು, ಟೇಬಲ್ ವ್ಯವಸ್ಥೆಯನ್ನಷ್ಟೇ ಹೆಚ್ಚುವರಿಯಾಗಿ ನೀಡಲಾಗಿದೆ. ಕೆಂಪು ಕಾವಿ ನೆಲವಂತೂ ಊರಿನ ನೆನಪನ್ನು ಮತ್ತೆ ತರಿಸುವಂತಿತ್ತು. ಬೆಂಗಳೂರಿನ ಹೃದಯಭಾಗವೆನಿಸಿದ ಜಯನಗರದಲ್ಲೂ ಇಂಥ ವಿಶೇಷ ರಚನೆಯ ಹೊಟೇಲ್ ಇರಲು ಸಾಧ್ಯವಾ ಅಂತ ಯೋಚಿಸುವಂತೆ ಮಾಡಿದ್ದು ಸುಳ್ಳಲ್ಲ.

Jayanagar’s new destination for soulful vegetarian food

ರಸಧಾರೆ ಬರಿಯ ಅಂದಚಂದಕ್ಕಷ್ಟೇ ಹೆಸರುಮಾಡಿರುವುದಲ್ಲ. ಬದಲಾಗಿ ಶುಚಿ ಹಾಗೂ ರುಚಿಯಾದ ಆಹಾರಕ್ಕಾಗಿಯೂ ಆಹಾರಪ್ರಿಯರ ಗಮನಸೆಳೆದಿದೆ. ಸಾಮಾನ್ಯವಾಗಿ ಜಯನಗರದಲ್ಲಿ ಸಿಗದಿರುವ ಆಹಾರ ಪದಾರ್ಥಗಳೇ ಇಲ್ಲ. ಆದರೂ ಇಷ್ಟೊಂದು ರುಚಿಕರವಾದ ಮುದ್ದೆ ಊಟ, ಅತಿ ಕಡಿಮೆ ದರದಲ್ಲಿ ಜಯನಗರದ ಯಾವುದೇ ಹೊಟೇಲ್‌ನಲ್ಲೂ ಸಿಗಲು ಸಾಧ್ಯವೇ ಇಲ್ಲ.

ಇಲ್ಲಿ ವಿಶೇಷ ಖಾದ್ಯಗಳೇನು ಗೊತ್ತಾ?

ಕೆಂಪಕ್ಕಿ ಮಸಾಲೆ ದೋಸೆ

ಖಾಲಿ ತುಪ್ಪ ದೋಸೆ

ಮಧ್ಯಾಹ್ನಕ್ಕೆ ರಾಗಿ ಮುದ್ದೆ ಊಟ

ರಾಗಿ ಅಂಬಲಿ

ಪೊಂಗಲ್

ಅಕ್ಕಿ ರೊಟ್ಟಿ, ರಾಗಿ ರೊಟ್ಟಿ

ಸೇಬು, ಅನಾನಸ್, ಬಾಳೆಹಣ್ಣಿನ ಕೇಸರಿಬಾತ್

Dosa at Rasadhare

ಇತ್ತೀಚೆಗಷ್ಟೇ ಅಂದರೆ ನಾಲ್ಕೈದು ತಿಂಗಳ ಹಿಂದಷ್ಟೇ ಆಹಾರಪ್ರಿಯರಿಗೆ ಮುಕ್ತವಾಗಿರುವ ʻರಸಧಾರೆʼಯಲ್ಲಿ ಬರಿಯ ನೂರು ರುಪಾಯಿಗೆ ಹೊಟ್ಟೆತುಂಬ ಸಾಂಪ್ರದಾಯಿಕ ಶೈಲಿಯ ಮುದ್ದೆ ಊಟ ಸಿಗುತ್ತದೆ. ʻಬ್ಯಾಕ್ ಟು ದಿ ರೂಟ್ಸ್ʼ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಪ್ರಾರಂಭಿಸಿರುವ ಈ ಹೊಟೇಲ್ ಮೂಲಕ ಇಂದಿನ ಯುವ ಜನತೆಯನ್ನು ಮತ್ತೆ ನಮ್ಮ ಪಾರಂಪರಿಕ ಆಹಾರದತ್ತ ಸೆಳೆಯುವ ಪ್ರಯತ್ನ ಇವರದ್ದಾಗಿದೆ. ಜಗಲಿ ಕಟ್ಟೆಯಲ್ಲಿ ಕುಳಿತು ಮುದ್ದೆ ಊಟ ಸವಿಯುವ ಮಜವೇ ಬೇರೆ ಬಿಡಿ.

Mudde thali at Rasadhare

ಮುದ್ದೆ ಊಟದಲ್ಲಿ ಏನೇನಿರಲಿದೆ?

ಕೆಂಪು ರಾಗಿ ಮುದ್ದೆ, ಸೊಪ್ಪಿನ ಪಲ್ಯ, ಸೊಪ್ಪು ಸಾರು, ಮಜ್ಜಿಗೆ ಹುಳಿ, ಅನ್ನ-ರಸಂ, ಸೆಂಡಿಗೆ, ಕರಿದ ಮಜ್ಜಿಗೆ ಮೆಣಸು ಹೀಗೆ ಅನೇಕ ಆಯ್ಕೆಗಳಿವೆ.

ಪ್ರಿಸರ್ವೇಟಿವ್ಸ್, ಕಲರಿಂಗ್ ಏಜೆಂಟ್ಸ್, ಪಾಮ್ ಆಯಿಲ್ ಹೀಗೆ ರುಚಿ ಹೆಚ್ಚಿಸಲು, ಆಹಾರ ಕೆಡದಂತೆ ಯಾವುದೇ ರಾಸಾಯನಿಕಗಳನ್ನೂ ಬಳಸದೆಯೇ ಇಲ್ಲಿ ತಯಾರಾಗುವ ರುಚಿಕರ ಖಾದ್ಯಗಳು ಈಗಾಗಲೇ ಬೆಂಗಳೂರಿಗರ ಮನಗೆದ್ದಿದೆ. ನಾಟಿ ಕೊತ್ತಂಬರಿ, ನಾಟಿ ಹಸಿಮೆಣಸು, ನಾಟಿ ಟೊಮೆಟೊ, ನಾಟಿ ಬೆಣ್ಣೆ, ಶುದ್ಧ ತುಪ್ಪ ಹೀಗೆ ಎಲ್ಲದರಲ್ಲೂ ಪರಿಶುದ್ಧತೆ ಕಾಣುವ ಮೂಲಕ ಗ್ರಾಹಕರಿಗೂ ಶುಚಿ-ರುಚಿಯ ಆಹಾರವನ್ನು ನೀಡುವ ಮೂಲಕ ʻರಸಧಾರೆʼ ಜಯನಗರದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಶನಿವಾರ ಹಾಗೂ ಭಾನುವಾರಗಳಂದು ಇಲ್ಲಿ ವಿಶೇಷವಾದ ಅಣಬೆ ಬಿರಿಯಾನಿ ಲಭ್ಯವಿದ್ದು, ಇದರ ರುಚಿ ನೋಡಲು ಮರೆಯಬೇಡಿ.

ಒಟ್ಟಿನಲ್ಲಿ ಜಯನಗರದ ಆಸುಪಾಸಿನಲ್ಲಿ ಶುದ್ಧ ಸಸ್ಯಹಾರಿ ಹೊಟೇಲ್, ಸಕತ್ ಟೇಸ್ಟಿಯಾಗಿರುವ ಸಾಂಪ್ರದಾಯಿಕ ಆಹಾರಕ್ಕಾಗಿ ಹುಡುಕಾಡುವವರಿಗೆ ʻರಸಧಾರೆʼ ಉತ್ತಮ ಆಯ್ಕೆಯಾಗಿದೆ.

ವಿಳಾಸ:

ರಸಧಾರೆ, 6ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560011