Monday, June 22, 2026
Monday, June 22, 2026

ಆಸ್ಟ್ರೇಲಿಯನ್ ಪಾರ್ಲಿಮೆಂಟ್

ಸಂಸತ್ ಭವನದ ಮಧ್ಯದಲ್ಲಿ ನೀರಿನ ಕಾರಂಜಿ ಇದೆ. ಅಧಿವೇಶನದಲ್ಲಿ ದೊಡ್ಡ ಚರ್ಚೆಗಳು ನಡೆದಾಗ ಮತ್ತು ನಿರ್ಧಾರ ತೆಗೆದುಕೊಳ್ಳಲು ಸಮಯ ಬೇಕಾದಾಗ ನಾಯಕರು ಈ ಕಾರಂಜಿಯ ಸುತ್ತ ನಿಂತು ಮಾತನಾಡುತ್ತಾರೆ. ನೀರಿನ ಶಬ್ದ ಎಷ್ಟು ಜೋರಾಗಿರುತ್ತದೆಯೆಂದರೆ, ಪಕ್ಕದಲ್ಲಿರುವವರಿಗೆ ಮಾತ್ರ ಮಾತು ಕೇಳಿಸುತ್ತದೆ. ಸ್ವಲ್ಪವೇ ದೂರ ಇರುವವರಿಗೂ ಮಾತು ಕೇಳಿಸುವುದಿಲ್ಲ.

  • ವಿದ್ಯಾ ವಿಜಯ್, ಪರ್ತ್ ( ವೆಸ್ಟರ್ನ್ ಆಸ್ಟ್ರೇಲಿಯಾ)

ನಾವು ಕ್ಯಾನ್‌ಬೆರ್ರಾಗೆ ಹೋಗಬೇಕು ಎಂದು ತೀರ್ಮಾನ ಮಾಡಿದ ಕ್ಷಣದಿಂದಲೇ ನಮ್ಮ ಮನಸಿನಲ್ಲಿ ಇದ್ದದ್ದು ಒಂದೇ ಒಂದು ಜಾಗ. ಅದು ಆಸ್ಟ್ರೇಲಿಯಾದ ಪಾರ್ಲಿಮೆಂಟ್. ಒಂದು ದೇಶ ಹೇಗೆ ನಡೆಯುತ್ತದೆ? ನಾವು ಹಾಕುವ ಒಂದು ವೋಟ್ ಯಾವ ರೀತಿ ಜನಪ್ರತಿನಿಧಿಗಳನ್ನು ರೂಪಿಸುತ್ತದೆ? ಸಂಸತ್ ಎನ್ನುವ ವ್ಯವಸ್ಥೆ ನಿಜವಾಗಿ ಒಳಗಡೆ ಹೇಗೆ ಕೆಲಸ ಮಾಡುತ್ತದೆ? ಈ ಎಲ್ಲ ಕುತೂಹಲಗಳಿಗೆ ಉತ್ತರ ಹುಡುಕಬೇಕೆಂಬ ಆಸೆಯಿಂದಲೇ ನಾವು ಮೊದಲೇ ಆನ್‌ಲೈನ್‌ನಲ್ಲಿ ಪಾರ್ಲಿಮೆಂಟ್ ವೀಕ್ಷಣೆಗೆ ಸೆಶನ್ ಬುಕ್ ಮಾಡಿದ್ದೆವು. ಕ್ಯಾನ್‌ಬೆರ್ರಾದಲ್ಲಿರುವ ನನ್ನ ಸ್ನೇಹಿತೆ ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅಲ್ಲಿನ ವ್ಯವಸ್ಥೆ, ನಿಯಮಗಳು ಮತ್ತು ಸಂಸತ್ತಿನ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಅರಿತಿದ್ದರು. ಇದು ಇನ್ನೂ ಹೆಚ್ಚು ವಿಷಯ ತಿಳಿಯಲು ಸಹಕಾರಿಯಾಯಿತು.

ಇದನ್ನೂ ಓದಿ: ಮಲಯನ್ನರ ನೆಲದಲ್ಲಿ

ಕ್ಯಾನ್‌ಬೆರ್ರಾದಲ್ಲಿ ಎರಡು ಸಂಸತ್ ಭವನಗಳಿವೆ. ಹಳೆಯ ಸಂಸತ್ ಭವನ ಮತ್ತು ಹೊಸ ಸಂಸತ್ ಭವನ. ಇವೆರಡನ್ನೂ ನೋಡಿದಾಗ ನನಗೆ ಅನ್ನಿಸಿದ್ದು ಒಂದೇ. ಕಟ್ಟಡಗಳು ಕೇವಲ ಗೋಡೆಗಳಲ್ಲ, ಅವು ದೇಶದ ಚರಿತ್ರೆಯನ್ನು ಹೊತ್ತಿರುವ ಜೀವಂತ ದಾಖಲೆಗಳು ಅಂತ.

ಓಲ್ಡ್‌ ಪಾರ್ಲಿಮೆಂಟ್‌- ಇಲ್ಲಿ ಇತಿಹಾಸ ಜೀವಂತ

ಮೊದಲಿಗೆ ನಾವು ಹೋದದ್ದು ಹಳೆಯ ಸಂಸತ್ ಭವನಕ್ಕೆ. ಇದನ್ನು ಈಗ MOAD — ಮ್ಯೂಸಿಯಂ ಆಫ್‌ ಆಸ್ಟ್ರೇಲಿಯನ್‌ ಡೆಮೋಕ್ರಸಿ ಎಂದು ಕರೆಯುತ್ತಾರೆ. 1927ರಿಂದ 1988ರವರೆಗೆ ಆಸ್ಟ್ರೇಲಿಯಾದ ಎಲ್ಲ ಪ್ರಮುಖ ನಿರ್ಧಾರಗಳನ್ನು ಇದೇ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಒಳಗೆ ಹೋಗುವ ಮೊದಲು ಪ್ರವೇಶದ್ವಾರದ ಹತ್ತಿರದ ರಿಸೆಪ್ಶನ್‌ನಲ್ಲಿ ಪಾಸ್ ತೆಗೆದುಕೊಂಡು ನಾವು ಒಳಗೆ ಹೋದೆವು. ಒಳಗೆ ಕಾಲಿಟ್ಟ ಕ್ಷಣದಿಂದಲೇ ಇದು ಸಾಮಾನ್ಯ ಮ್ಯೂಸಿಯಂ ಅಲ್ಲ ಎಂಬುದು ಖಾತರಿಯಾಯಿತು.

Untitled design (53)


ಮೊದಲಿಗೆ ನಾವು ಹೋದದ್ದು ಹಳೆಯ ನ್ಯೂಸ್ ರೂಂ ಕಡೆಗೆ. ಅಲ್ಲಿ ಆಗಿನ ಕಾಲದಲ್ಲಿ ಬಳಸುತ್ತಿದ್ದ ಧ್ವನಿ ಪೆಟ್ಟಿಗೆಗಳು, ವಿಡಿಯೋ ಕ್ಯಾಮೆರಾಗಳು, ಪತ್ರಿಕೆ ಮುದ್ರಿಸುವ ಯಂತ್ರಗಳು, ಹಳೆಯ ಕಂಪ್ಯೂಟರ್‌ಗಳು, ಪೆನ್‌, ಪೇಪರ್‌ಗಳು — ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶನಕ್ಕೆ ಇಟ್ಟಿದ್ದರು. ಆ ಕಾಲದ ಪತ್ರಿಕೆಗಳು, ಸುದ್ದಿವಾಚನದ ವಿಡಿಯೋಗಳು, ವರದಿಗಾರರು ಕೆಲಸ ಮಾಡುತ್ತಿದ್ದ ವಿಧಾನ — ಇವೆಲ್ಲ ನೋಡಿದಾಗ ಮಾಧ್ಯಮದ ಇತಿಹಾಸ ಕಣ್ಣ ಮುಂದೆ ಬಂದಂತಾಯಿತು.

ಕಲರ್‌ ಕಲರ್‌ ರಾಜಕೀಯ

ಅದಾದ ನಂತರ ನಾವು ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ಮತ್ತು ಹೌಸ್ ಆಫ್ ಸೆನೆಟ್ ನೋಡಲು ಹೋದೆವು. ಮುಖ್ಯ ದ್ವಾರದಿಂದ ಒಳಗೆ ಹೋದರೆ ಎಡಗಡೆ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ಹಾಲ್ ಸಿಗುತ್ತದೆ. ಇಲ್ಲಿ ಇರುವ ಪ್ರತಿಯೊಂದು ವಸ್ತುವೂ ಹಸಿರು ಬಣ್ಣದಲ್ಲಿದೆ; ಕುರ್ಚಿಗಳು, ಮೇಜುಗಳು, ಗೋಡೆಗಳು, ನೆಲ… ಎಲ್ಲವೂ ಹಸಿರು.

ಮೇಲ್ಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಜಾಗ, ಮಾಧ್ಯಮದವರು ಸೆಶನ್ ನೋಡುವ ವಿಭಾಗ ಮತ್ತು ಹಳೆಯ ಕಾಲದಲ್ಲಿ ರೇಡಿಯೋ ಪ್ರಸಾರ ಮಾಡುತ್ತಿದ್ದ ಸ್ಥಳವೂ ಇದೆ. ಗೋಡೆಗಳ ಮೇಲೆ ಪ್ರಸಿದ್ಧ ಪತ್ರಕರ್ತರ ಫೊಟೋಗಳು ಮತ್ತು ಅವರು ಮಾಡಿದ ಸಾಹಸಗಳ ವಿವರಗಳನ್ನು ಪ್ರದರ್ಶಿಸಿದ್ದಾರೆ.

ಮುಖ್ಯ ದ್ವಾರದ ಬಲಗಡೆ ಇರೋದು ಹೌಸ್ ಆಫ್ ಸೆನೆಟ್. ಇಲ್ಲಿ ಎಲ್ಲವೂ ಕೆಂಪು ಬಣ್ಣದಲ್ಲಿವೆ. ಕುರ್ಚಿಗಳು, ಗೋಡೆಗಳು, ನೆಲ ಎಲ್ಲವೂ ಕೆಂಪು ಕೆಂಪು. ಈ ಹಳೆಯ ಸಂಸತ್ ಭವನವನ್ನು ಈಗ ಶಾಲಾ ಮಕ್ಕಳು ಮತ್ತು ಸಾಮಾನ್ಯ ಜನರಿಗೆ ಆಸ್ಟ್ರೇಲಿಯಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸುವ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ನ್ಯೂ ಪಾರ್ಲಿಮೆಂಟ್- ಪ್ರತಿ ಗೋಡೆಯಲ್ಲೂ ಒಂದು ಕಥೆ

1988ರಲ್ಲಿ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ ಅವರು ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರು. ಈ ಕಟ್ಟಡವು ಕೇವಲ ವಿಸ್ತೀರ್ಣದಲ್ಲಿ ದೊಡ್ಡದಾಗಿರುವುದಷ್ಟೇ ಅಲ್ಲ, ಇದರ ವಿನ್ಯಾಸದಲ್ಲಿ ಹಲವು ವೈಶಿಷ್ಟ್ಯಗಳಿವೆ. ಹೊಸ ಪಾರ್ಲಿಮೆಂಟ್ಅನ್ನು ಕ್ಯಾಪಿಟಲ್ ಹಿಲ್ ಎಂಬ ಬೆಟ್ಟದ ಮೇಲೆ ನಿರ್ಮಿಸಿದ್ದಾರೆ. ಈ ಜಾಗವನ್ನು ಆಯ್ಕೆ ಮಾಡಲು ಅನೇಕ ಸ್ಥಳಗಳಲ್ಲಿ ಅಧ್ಯಯನ ನಡೆಸಿ ಕೊನೆಗೆ ಇದನ್ನೇ ಆಯ್ಕೆ ಮಾಡಲಾಗಿತ್ತು.

ಕಾರಣ ಬಹಳ ವಿಶೇಷ. ಕ್ಯಾಪಿಟಲ್ ಹಿಲ್ ಮೇಲೆ ನಿಂತು ನೋಡಿದರೆ ಹಳೆಯ ಸಂಸತ್ ಭವನ, ಬರ್‌ಲಿ ಗ್ರಿಫಿನ್ ಸರೋವರ ಮತ್ತು ವಾರ್ ಮೆಮೋರಿಯಲ್ — ಈ ಮೂರು ಪ್ರಮುಖ ಜಾಗಗಳು ಒಂದೇ ಸರಳ ರೇಖೆಯಲ್ಲಿ ಕಾಣಿಸುತ್ತವೆ.

ನಾವು ಮೇಲಿನಿಂದ ನೋಡಿದಾಗ ಆ ದೃಶ್ಯ ನಿಜವಾಗಿಯೂ ಅದ್ಭುತವಾಗಿತ್ತು. ಒಂದು ದೇಶ ತನ್ನ ರಾಜಕೀಯ, ಇತಿಹಾಸ ಮತ್ತು ಯುದ್ಧ ಸ್ಮರಣೆಯನ್ನು ಒಂದೇ ದೃಶ್ಯದಲ್ಲಿ ಜೋಡಿಸಿರುವ ರೀತಿಯೇ ವಿಭಿನ್ನವಾಗಿತ್ತು.

ಗ್ರೇಟ್ ಹಾಲ್ ನಲ್ಲೊಂದು ಕಸೂತಿ ಕಲೆ

ಅಲ್ಲಿಂದ ಒಳಗೆ ಹೋದ ತಕ್ಷಣ ಕಾಣಿಸುವುದು ಗ್ರೇಟ್ ಹಾಲ್. ಈ ದೊಡ್ಡ ಸಭಾಂಗಣದ ಗೋಡೆಯ ಮೇಲೆ 15 ಮೀಟರ್ ಉದ್ದದ ಮತ್ತು 65 ಸೆಂಟಿಮೀಟರ್ ಅಗಲದ ಭಾರೀ ಎಂಬ್ರಾಯಿಡರಿ ಕಲಾಕೃತಿ ಇದೆ. ಕಲಾವಿದೆ ಕೇ ಲಾರೆನ್ಸ್ ಇದನ್ನು ಕೈಯಿಂದ ರಚಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಕೃತಿ, ಜನಜೀವನ, ಸಂಸ್ಕೃತಿ — ಎಲ್ಲವನ್ನೂ ಆ ಕಲಾಕೃತಿಯಲ್ಲಿ ಹೊಲೆಯಲಾಗಿದೆ. ಇಲ್ಲಿಯೇ ಅಧಿಕೃತ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಮುಖ ಸಮಾರಂಭಗಳು ನಡೆಯುತ್ತವೆ.

ಮೆಟ್ಟಿಲಿಗೂ ಒಂದು ಕಥೆ ಇದೆ

ಸಂಸತ್ ಭವನದಲ್ಲಿ ಎರಡು ಮಹಡಿಗಳಿವೆ. ಮೇಲಕ್ಕೆ ಹೋಗುವ ಮೆಟ್ಟಿಲುಗಳಿಗೆ ಬಳಸಿದ ಗ್ರಾನೈಟ್ ಕಲ್ಲುಗಳಲ್ಲಿ ಒಂದರಲ್ಲಿ ಸೀಗಡಿ ಮೀನಿನ ಅವಶೇಷ ಕಂಡುಬಂದಿತಂತೆ. ಆ ಕಲ್ಲನ್ನು ಹಾನಿ ಮಾಡದೇ ಅದೇ ಸ್ಥಿತಿಯಲ್ಲಿ ಕಟ್ಟಡದಲ್ಲಿ ಬಳಸಿದ್ದಾರೆ. ಈಗಲೂ ಆ ಕಲ್ಲಿನಲ್ಲಿ ಮೀನಿನ ಅವಶೇಷ ಕಾಣಬಹುದು. ಅದನ್ನು ನೋಡಿದಾಗ ನನಗೆ ಅನಿಸಿದ್ದು — ಇಲ್ಲಿ ಇತಿಹಾಸವನ್ನು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಸಿಲ್ಲ, ಕಟ್ಟಡದ ಒಳಗೂ ಉಳಿಸಿಕೊಂಡಿದ್ದಾರೆ.

Untitled design (54)

ಕಾರಂಜಿಯ ಸುತ್ತ ಗುಪ್ತ ಚರ್ಚೆಗಳು

ಸಂಸತ್ ಭವನದ ಮಧ್ಯದಲ್ಲಿ ನೀರಿನ ಕಾರಂಜಿ ಇದೆ. ಅಧಿವೇಶನದಲ್ಲಿ ದೊಡ್ಡ ಚರ್ಚೆಗಳು ನಡೆದಾಗ ಮತ್ತು ನಿರ್ಧಾರ ತೆಗೆದುಕೊಳ್ಳಲು ಸಮಯ ಬೇಕಾದಾಗ ನಾಯಕರು ಈ ಕಾರಂಜಿಯ ಸುತ್ತ ನಿಂತು ಮಾತನಾಡುತ್ತಾರೆ. ನೀರಿನ ಶಬ್ದ ಎಷ್ಟು ಜೋರಾಗಿರುತ್ತದೆಯೆಂದರೆ, ಪಕ್ಕದಲ್ಲಿರುವವರಿಗೆ ಮಾತ್ರ ಮಾತು ಕೇಳಿಸುತ್ತದೆ. ಸ್ವಲ್ಪವೇ ದೂರ ಇರುವವರಿಗೂ ಮಾತು ಕೇಳಿಸುವುದಿಲ್ಲ.

ಈ ಕಾರಂಜಿಯ ಸುತ್ತ ನಾಲ್ಕು ಗೆರೆಗಳಿವೆ. ಅವು ಸಂಸತ್ ಭವನದ ನಾಲ್ಕು ದ್ವಾರಗಳನ್ನು ಸೂಚಿಸುತ್ತವೆ. ಒಂದು ಸಾಮಾನ್ಯ ಜನರಿಗೆ, ಒಂದು ಪ್ರಧಾನ ಮಂತ್ರಿ ಮತ್ತು ಶಾಸಕರಿಗೆ, ಒಂದು ಶಾಲಾ ಮಕ್ಕಳಿಗೆ, ಮತ್ತೊಂದು ಇಂಗ್ಲೆಂಡ್ ರಾಜಕುಟುಂಬ ಮತ್ತು ಗವರ್ನರ್ ಜನರಲ್‌ಗಳಿಗೆ

ಹಸಿರು ಸದನ ಮತ್ತು ಕೆಂಪು ಸದನ

ಹೊಸ ಪಾರ್ಲಿಮೆಂಟ್‌ನಲ್ಲೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಹಸಿರು ಬಣ್ಣದಲ್ಲಿದೆ. ಈ ಹಸಿರು ಬಣ್ಣ, ಆಸ್ಟ್ರೇಲಿಯಾದ ನೀಲಗಿರಿ ಎಲೆಗಳು ಮತ್ತು ಬುಷ್‌ಲ್ಯಾಂಡ್ ಅನ್ನು ಸೂಚಿಸುತ್ತದೆ. ಸ್ಪೀಕರ್ ಬರುವಾಗ ಚಿನ್ನದ ದಂಡವನ್ನು ಟೇಬಲ್ ಮೇಲೆ ಇಡುತ್ತಾರೆ. ಅದರ ತಲೆ ಸ್ಪೀಕರ್‌ನ ಬಲಭಾಗಕ್ಕೆ ಮುಖಮಾಡಿರುತ್ತದೆ. ಆದ್ದರಿಂದ ಆಡಳಿತ ಪಕ್ಷ ಬಲಗಡೆ ಮತ್ತು ವಿರೋಧ ಪಕ್ಷ ಎಡಗಡೆ ಕುಳಿತುಕೊಳ್ಳುತ್ತದೆ. ಸಭಾಂಗಣ ಸಂಪೂರ್ಣ ಸೌಂಡ್‌ಪ್ರೂಫ್ ಆಗಿದ್ದು, ಒಳಗೆ ನಡೆಯುವ ಮಾತು ಸ್ವಲ್ಪವೂ ಹೊರಗೆ ಕೇಳಿಸೋದಿಲ್ಲ.

ಹೌಸ್ ಆಫ್ ಸೆನೆಟ್ ಕೆಂಪು ಬಣ್ಣದಲ್ಲಿದೆ. ಈ ಕೆಂಪು ಆಸ್ಟ್ರೇಲಿಯಾದ ಔಟ್‌ಬ್ಯಾಕ್ ಮತ್ತು ಅಲ್ಲಿನ ಕೆಂಪು ಮಣ್ಣನ್ನು ಪ್ರತಿನಿಧಿಸುತ್ತದೆ. ಇಲ್ಲಿ 120 ಜನ ಕುಳಿತುಕೊಳ್ಳಬಹುದು. ಸೆನೆಟ್‌ನಲ್ಲಿ ಅಧ್ಯಕ್ಷರ ಹಿಂದೆ ಇರುವ ಎರಡು ದೊಡ್ಡ ಕುರ್ಚಿಗಳು ಗವರ್ನರ್ ಜನರಲ್ ಮತ್ತು ವಿದೇಶಿ ಮುಖ್ಯಸ್ಥರಿಗಾಗಿ ಮಾತ್ರ. ಆಸ್ಟ್ರೇಲಿಯಾದ ಲಾಂಛನದಲ್ಲಿರುವ ಎಮು ಮತ್ತು ಕಾಂಗರೂ ಸಾಮಾನ್ಯವಾಗಿ ಒಂದಕ್ಕೊಂದು ಮುಖಮಾಡಿ ನಿಂತಿರುತ್ತವೆ. ಆದರೆ ಇಲ್ಲಿ ಮಾತ್ರ ಅವು ಜನರ ಕಡೆ ನೋಡುತ್ತಿರುವಂತೆ ವಿನ್ಯಾಸ ಮಾಡಿದ್ದಾರೆ.

ಮ್ಯಾಗ್ನಾ ಕಾರ್ಟಾ ಮತ್ತು ಸಂವಿಧಾನದ ನೆನಪು

ಸಂಸತ್ ಭವನದ ಇನ್ನೊಂದು ಪ್ರಮುಖ ಭಾಗದಲ್ಲಿ ಮ್ಯಾಗ್ನಾ ಕಾರ್ಟಾವನ್ನು ಗಾಜಿನ ಬಾಕ್ಸ್‌ನಲ್ಲಿ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾದ ಸಂವಿಧಾನದ ಆರಂಭಿಕ ದಾಖಲೆಗಳೊಂದಿಗೆ ಅದರ ಇತಿಹಾಸವನ್ನು ಅಲ್ಲಿ ವಿವರಿಸಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿರುವ ಆ ದಾಖಲೆ ನೋಡಿದಾಗ ಪ್ರಜಾಪ್ರಭುತ್ವ ಎಷ್ಟು ಹಳೆಯ ಹಾದಿಯಿಂದ ಬಂದಿದೆ ಎಂಬುದು ಗೊತ್ತಾಗುತ್ತದೆ.

ತಡವಾದರೆ ಪ್ರಧಾನಿಗೂ ನೋ ಎಂಟ್ರಿ!

ಸಂಸತ್ ಭವನದ ಎಲ್ಲೆಡೆ, ಅಂದ್ರೆ ಕಾರಿಡಾರ್, ಕೋರ್ಟ್ ಹಾಲ್, ಕೆಫೆ, ಅಂಗಡಿ, ಮೀಟಿಂಗ್ ರೂಮ್, ಶೌಚಾಲಯ… ಎಲ್ಲ ಕಡೆ ಒಂದೇ ರೀತಿಯ ಬಿಳಿ ಗಡಿಯಾರಗಳು ಕಾಣಿಸುತ್ತವೆ. ಆ ಗಡಿಯಾರದಲ್ಲಿ ಎರಡು ಬಣ್ಣದ ಲೈಟ್ ಗಳಿರುತ್ತವೆ — ಕೆಂಪು ಮತ್ತು ಹಸಿರು. ಕೆಂಪು ಬ್ಲಿಂಕ್ ಆದರೆ ಸೆನೆಟ್‌ಗೆ ಹೋಗಬೇಕು. ಹಸಿರು ಬ್ಲಿಂಕ್ ಆದರೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಹೋಗಬೇಕು. ವೋಟಿಂಗ್ ಅಥವಾ ಪ್ರಮುಖ ನಿರ್ಧಾರದ ಸಮಯ ಬಂದಾಗ ಸೈರನ್ ಕೂಡ ಕೇಳಿಸುತ್ತದೆ. ಯಾರೇ ಆಗಲಿ, ಪ್ರಧಾನ ಮಂತ್ರಿಯೇ ಆಗಿದ್ದರೂ, ಮೂರು ನಿಮಿಷದೊಳಗೆ ಸಭಾಂಗಣ ತಲುಪಬೇಕು. ತಡವಾದರೆ ಬಾಗಿಲು ಮುಚ್ಚುತ್ತಾರೆ. ನನಗೆ ಈ ನಿಯಮ ತುಂಬಾ ಇಷ್ಟವಾಯಿತು. ಪದವಿಗಿಂತ ವ್ಯವಸ್ಥೆಗೆ ಹೆಚ್ಚು ಗೌರವ ಕೊಟ್ಟಿರುವುದರ ಸಂಕೇತ ಅದು.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲೂ ಕನ್ನಡದ ಕಂಪು

ಮನಿ ಟ್ರೀ ಅಡಿಯಲ್ಲೇ ಬಜೆಟ್!

ಸಂಸತ್ ಭವನದ ಒಳಗೆ ಒಂದು ಮರ ಇದೆ. ಅದನ್ನು ’ಮನಿ ಟ್ರೀ’ ಎಂದು ಕರೆಯುತ್ತಾರೆ.ಪ್ರತಿ ವರ್ಷ ಆಸ್ಟ್ರೇಲಿಯಾದ ಹಣಕಾಸು ಸಚಿವರು ಅದರ ಕೆಳಗೆ ನಿಂತು ಬಜೆಟ್ ಮಂಡಿಸುತ್ತಾರಂತೆ. ಭವನದ ಮಧ್ಯಭಾಗದಲ್ಲಿ ಆಸ್ಟ್ರೇಲಿಯಾದ ಧ್ವಜ ಸದಾ ಹಾರುತ್ತಿರುತ್ತದೆ. ಆ ಧ್ವಜದ ನಿರ್ವಹಣೆಗೆ ಒಬ್ಬರನ್ನು ವಿಶೇಷವಾಗಿ ನೇಮಿಸಿದ್ದಾರೆ. ಇನ್ನೊಂದು ಕೊಠಡಿಯಲ್ಲಿ ಸಂಪೂರ್ಣ ಸಂಸತ್ ಭವನದ ಪ್ರತಿಕೃತಿಯನ್ನು ಲೆಗೋಗಳಿಂದ ನಿರ್ಮಿಸಿದ್ದಾರೆ. ಆದರೆ ಈ ಎಲ್ಲಕ್ಕಿಂತ ನನಗೆ ಹೆಚ್ಚು ಇಷ್ಟವಾದ ವಿಷಯ ಇನ್ನೊಂದಿದೆ. ಇಲ್ಲಿನ ಮಂತ್ರಿಗಳು ಮತ್ತು ಶಾಸಕರು ತಮ್ಮನ್ನು ದೊಡ್ಡವರಂತೆ ತೋರಿಸಿಕೊಳ್ಳದೇ, ಸಾಮಾನ್ಯ ಜನರಂತೆ ಎಲ್ಲರ ಜೊತೆಗೆ ಬೆರೆತು ಕೆಲಸ ಮಾಡುವುದು. ನಾವು ಭಾರತದಲ್ಲಿ ರಾಜಕೀಯ ನಾಯಕರನ್ನು ದೂರದಿಂದ ಮಾತ್ರ ನೋಡುತ್ತೇವೆ. ಆದರೆ ಇಲ್ಲಿನ ವ್ಯವಸ್ಥೆಯೊಳಗೆ ಪದವಿಗಿಂತ ಜವಾಬ್ದಾರಿಗೆ ಹೆಚ್ಚು ಮಹತ್ವ ನೀಡುತ್ತಾರೆ ಅನಿಸಿತು.

ಕ್ಯಾನ್ ಬೆರ್ರಾ ಪ್ರವಾಸ ಮಾಡಿದವರು ಆಸ್ಟ್ರೇಲಿಯನ್ ಪಾರ್ಲಿಮೆಂಟನ್ನು ಮಿಸ್ ಮಾಡದೆಯೇ ನೋಡಿ ಬನ್ನಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...