ಹರಿಯಾಣದಲ್ಲಿ ಪ್ರವಾಸೋದ್ಯಮಕ್ಕೆ 90 ಕೋಟಿ ರು. ಬೃಹತ್ ಹೂಡಿಕೆ
ಪಿಂಜೋರ್ ಯಾದವೀಂದ್ರ ಉದ್ಯಾನ ಹಾಗೂ ಮೊರ್ನಿ ಬೆಟ್ಟಗಳ ಟಿಕ್ಕರ್ ತಾಲ್ಗೆ ಅಂತಾರಾಷ್ಟ್ರೀಯ ಮಟ್ಟದ ರೂಪ ನೀಡಲು ಚಿಂತನೆ
ಹರಿಯಾಣ ಸರಕಾರವು ರಾಜ್ಯದ ಎರಡು ಪ್ರಮುಖ ಪ್ರವಾಸಿ ತಾಣಗಳಾದ ಪಿಂಜೋರ್‌ನ ಯಾದವೀಂದ್ರ ಉದ್ಯಾನ ಮತ್ತು ಮೊರ್ನಿ ಬೆಟ್ಟಗಳ ಟಿಕ್ಕರ್ ತಾಲ್ ಅಭಿವೃದ್ಧಿಗೆ ಸುಮಾರು 90 ಕೋಟಿ ರು. ಹೂಡಿಕೆ ಮಾಡಲು ನಿರ್ಧರಿಸಿದೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ರಾಜ್ಯದ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಕುರಿತು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಯೋಜನೆಯಡಿ ಪಿಂಜೋರ್‌ನ ಐತಿಹಾಸಿಕ ಯಾದವೀಂದ್ರ ಉದ್ಯಾನವನ್ನು ಅದರ ಪರಂಪರೆ ಹಾಗೂ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಉಳಿಸಿಕೊಂಡೇ ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ‘Wed in India’ ಪರಿಕಲ್ಪನೆಗೆ ಅನುಗುಣವಾಗಿ ಇಲ್ಲಿ ವಿಶ್ವಮಟ್ಟದ ‘ಒನ್-ಸ್ಟಾಪ್ ವೆಡ್ಡಿಂಗ್ ಡೆಸ್ಟಿನೇಶನ್’ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಆಧುನಿಕ ಕನ್ವೆನ್ಷನ್ ಸೆಂಟರ್, ಎಕ್ಸಿಬಿಷನ್ ಸೆಂಟರ್ ಸೇರಿದಂತೆ ಮದುವೆ ಹಾಗೂ ಸಮಾರಂಭಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಇದರ ಜತೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಐಷಾರಾಮಿ ಹೊಟೇಲ್ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಈ ಹೊಟೇಲ್‌ನಲ್ಲಿ ಮೇಲ್ಛಾವಣಿಯ ಹೆಲಿಪ್ಯಾಡ್ ವ್ಯವಸ್ಥೆಯೂ ಇರಲಿದ್ದು, ದೇಶ-ವಿದೇಶಗಳಿಂದ ಬರುವ ಅತಿಥಿಗಳಿಗೆ ಸೌಲಭ್ಯಕಲ್ಪಿಸುವ ಉದ್ದೇಶ ಹೊಂದಿದೆ.

ಹರಿಯಾಣದ ಪರಂಪರೆ ಮತ್ತು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಹಾಗೂ ಕಾರ್ಯದರ್ಶಿ ಡಾ. ಅಮಿತ್ ಅಗರವಾಲ್ ಅವರ ಪ್ರಕಾರ, ಉದ್ಯಾನದ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಸಂಗೀತ ಕಾರಂಜಿ, ಚಿಟ್ಟೆ ಉದ್ಯಾನ, ಅಕ್ವೇರಿಯಂ ಹಾಗೂ ರಾತ್ರಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಶೇಷ ಬೆಳಕಿನ ವ್ಯವಸ್ಥೆ ಸೇರಿದಂತೆ ಹಲವು ಹೊಸ ಆಕರ್ಷಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಇನ್ನೊಂದೆಡೆ, ಮೊರ್ನಿ ಬೆಟ್ಟಗಳಲ್ಲಿರುವ ಟಿಕ್ಕರ್ ತಾಲ್ ಪ್ರವಾಸಿ ತಾಣಕ್ಕೂ ಸಮಗ್ರ ನವೀಕರಣ ಕೈಗೊಳ್ಳಲಾಗುತ್ತದೆ. ಸಾಹಸ ಕ್ರೀಡಾ ಉದ್ಯಾನ, ಬೋಟಿಂಗ್ ಸೌಲಭ್ಯ, ಹಾಂಟೆಡ್ ಹೌಸ್ ಹಾಗೂ ಇತರ ಮನೋರಂಜನಾ ಸೌಲಭ್ಯಗಳನ್ನು ಆಧುನೀಕರಿಸುವ ಮೂಲಕ ಈ ಪ್ರದೇಶವನ್ನು ಉತ್ತರ ಭಾರತದ ಪ್ರಮುಖ ಸಾಹಸ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.
ಈ ಅಭಿವೃದ್ಧಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುವುದರ ಜತೆಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಹರಿಯಾಣದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿದೆ ಎಂಬ ನಿರೀಕ್ಷೆಗಳಿವೆ.