ಅಮೆರಿಕದ ಆಂಜನೇಯ- ಅಲೆಕ್ಸ್ ಹೊನ್ನಾಲ್ಡ್
ಹೊನ್ನಾಲ್ಡ್ ಮೂಲತಃ ಕ್ಯಾಲಿಫೋರ್ನಿಯದ ಸ್ಯಾಕ್ರಮೆಂಟೊ ಪಟ್ಟಣದವರು. ತನ್ನ ಐದನೆಯ ವಯಸ್ಸಿನಲ್ಲೇ 30 ಅಡಿ ಎತ್ತರವಿರುವ ರಚನೆಗಳನ್ನು ಕೆಲವೇ ನಿಮಿಷಗಳಲ್ಲಿ ಹತ್ತಲು ಕಲಿಯುತ್ತಾರೆ! ತನ್ನ ಶಾಲಾ ದಿನಗಳಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ಜರುಗುವ ಹಲವಾರು ರಾಷ್ಟ್ರೀಯ ಮಟ್ಟದ ಆರೋಹಣ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ಪಡೆಯುತ್ತಾರೆ.
-ಡಾ. ಕಾರ್ತಿಕ ಜೆ.ಎಸ್
ಇತ್ತೀಚೆಗೆ ತೈವಾನ್ ನಲ್ಲಿ ಜರುಗಿದ ವಿಶಿಷ್ಟ ನೇರಪ್ರಸಾರ ಕಾರ್ಯಕ್ರಮವೊಂದು ಜಗತ್ತಿನ ಗಮನ ಸೆಳೆಯಿತು.
ಇಲ್ಲಿನ ಜಗತ್ಪ್ರಸಿದ್ಧ 'ತೈಪೆ 101' ಗಗನಚುಂಬಿ ಕಟ್ಟಡದ ಸುತ್ತ ನೆರೆದ ಸಾವಿರಾರು ಪ್ರೇಕ್ಷಕರು ಆತಂಕಭರಿತ ಮನದಿಂದ ಆಕಾಶದತ್ತ ನೋಡುತ್ತಿದ್ದರು. ಜಗತ್ತಿನಾದ್ಯಂತ ಲಕ್ಷಾಂತರ ಜನರು ಟಿವಿ ಪರದೆ ಎದುರು ಉಸಿರು ಬಿಗಿ ಹಿಡಿದು ಕುಳಿತಿದ್ದರು. ಪರ್ವತಾರೋಹಿಯೊಬ್ಬರು ಸುರಕ್ಷತಾ ಸಾಧನಗಳಾದ ಹಗ್ಗ ಮತ್ತು ಸರಪಳಿ ಬಳಸದೆ 1667 ಅಡಿ (508 ಮೀಟರ್) ಎತ್ತರವಿರುವ ಕಟ್ಟಡವನ್ನು ಏರುತ್ತಿದ್ದಾರೆ. ಒಂದು ಕೈಯಲ್ಲಿ ಕಟ್ಟಡದ ಅಂಚನ್ನು ಹಿಡಿದಿದ್ದಾರೆ. ಇನ್ನೊಂದು ಕೈಯಿಂದ ತನ್ನ ಹಿಂಭಾಗದಲ್ಲಿ ಕಟ್ಟಿದ ಕೈ ಚೀಲದಲ್ಲಿರುವ ವಿಶೇಷ ಚಾಕ್ ಹುಡಿಯನ್ನು (ಮೆಗ್ನೀಷಿಯಂ ಕಾರ್ಬೋನೇಟ್) ತೆಗೆದು ಕೈ ಒರೆಸಿಕೊಳ್ಳುತ್ತಿರುತ್ತಾರೆ. ಕ್ಷಣ ಕ್ಷಣಕ್ಕೂ ಬೀಸುವ ಗಾಳಿ, ಸಹಸ್ರಾರು ಜನರ ಕರತಾಡನದ ಸದ್ದು, ಸಂಕೀರ್ಣ ರಚನೆಯುಳ್ಳ ಗೋಡೆಗಳು - ಇವೆಲ್ಲದರ ಮಧ್ಯೆ ಅವರು ನಗುತ್ತಾ, ಪ್ರೇಕ್ಷಕರೆಡೆಗೆ ಕೈ ಸನ್ನೆಯನ್ನೂ ಮಾಡುತ್ತಾರೆ! ಒಂದು ತಪ್ಪು ನಡೆ ಅವರ ಜೀವವನ್ನೇ ತೆಗೆಯಬಹುದು. ಅವರು ಇರುವ ಸನ್ನಿವೇಶ ನೋಡಿದರೆ ಎಂಥವರ ಎದೆಯೂ ಝಲ್ಲೆನಿಸಬಹುದು. ಕೇವಲ 92 ನಿಮಿಷಗಳಲ್ಲಿ ಕಟ್ಟಡದ ತುದಿ ತಲಪುತ್ತಾರೆ. ತುದಿಯ ಮೇಲೆ ನಿಂತು ನಮ್ಮತ್ತ ಕೈ ಬೀಸುವಾಗ ಅವರಲ್ಲಿ ಹತ್ತಿದ ಸಾರ್ಥಕತೆ ಕಾಣುತ್ತದೆ. ನೋಡಿದವರ ಕಣ್ಣಲ್ಲೂ ಆನಂದಬಾಷ್ಪ ಉಂಟಾಗುತ್ತದೆ.
ಇದನ್ನೂ ಓದಿ: ಡಿಜಿಟಲ್ ಮಾಯಾ ಬಜಾರ್!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಸುಂದರ, ಮೈನವಿರೇಳಿಸುವ, ಜತೆಯಲ್ಲೇ ಭಯವನ್ನೂ ಹುಟ್ಟಿಸುವ ನೇರ ಪ್ರಸಾರ ಕಾರ್ಯಕ್ರಮವೇ ನೆಟ್ ಫ್ಲಿಕ್ಸ್ ನ 'ಸ್ಕೈ ಸ್ಕ್ರಾಪರ್ ಲೈವ್'. ತನ್ನ ಅಸಾಧಾರಣ ಮನೋಸ್ಥೈರ್ಯದಿಂದ ಜಗತ್ತಿನ ಗಮನ ಸೆಳೆದ ಆ ಪರ್ವತಾರೋಹಿಯೇ 'ಅಲೆಕ್ಸ್ ಹೊನ್ನಾಲ್ಡ್'. ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಚಿತ್ರದುರ್ಗದ ಕೋಟೆಯನ್ನು ಮತ್ತು ಜೋಗ ಜಲಪಾತವನ್ನು ಬರಿಗೈಯಲ್ಲಿ ಹತ್ತಿರುವುದನ್ನು ನೋಡಿರುತ್ತೀರಿ. ಅಂಥ ಸಾಹಸವನ್ನು ವಿಶ್ವ ಮಟ್ಟದಲ್ಲಿ ಮಾಡಿದ ವ್ಯಕ್ತಿ ಇವರು.

40 ರ ಹರೆಯದ ಹೊನ್ನಾಲ್ಡ್ ಕಳೆದ ಎರಡು ದಶಕಗಳಿಂದ ಪರ್ವತಾರೋಹಣ ಸಮುದಾಯದಲ್ಲಿ ಚಿರಪರಿಚಿತ ವ್ಯಕ್ತಿ. 2017ರಲ್ಲಿ 3000 ಅಡಿ (914 ಮೀಟರ್) ಎತ್ತರದ ಅಮೆರಿಕದ ಯೋಸಮಿಟಿ ರಾಷ್ಟ್ರೀಯ ಉದ್ಯಾನವನ ದಲ್ಲಿರುವ 'ಎಲ್ ಕ್ಯಾಪಿಟಾನ್' ಎಂಬ ಬೃಹತ್ ಬಂಡೆಯನ್ನು ಬರಿಗೈಯಲ್ಲಿ ಹತ್ತಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು.
ಈ ಅದ್ವಿತೀಯ ಸಾಧನೆಯನ್ನು ಆಧರಿಸಿ ನಿರ್ಮಿಸಲಾದ 'ಫ್ರೀ ಸೋಲೋ' ಸಾಕ್ಷ್ಯ ಚಿತ್ರ 2018 ನೇ ಸಾಲಿನ ಅತ್ಯುತ್ತಮ ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡದ್ದು ಅವರ ಸಾಧನೆಗೆ ಹಿಡಿದ ಕೈಗನ್ನಡಿ.
ಬರಿಗೈಯಲ್ಲಿ ತೈಪೆ 101 ಕಟ್ಟಡ ಏರುವುದು ಅವರ ದಶಕದ ಕನಸಾಗಿತ್ತು. ಜಗತ್ತಿನ ಎಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದು ಎಂದೇ ಹೆಸರಾದ ತೈಪೆ ಕಟ್ಟಡವು ಒಟ್ಟು 101 ಮಹಡಿಗಳನ್ನು ಹೊಂದಿದೆ. 'ಬ್ಯಾಂಬೂ ಬಾಕ್ಸ್' ಗಳೆಂದು ಕರೆಯಲ್ಪಡುವ ಕಟ್ಟಡದ ಮಧ್ಯಭಾಗದಲ್ಲಿರುವ 64 ಮಹಡಿಗಳು ವಿಶಿಷ್ಟ ವಿನ್ಯಾಸ ಹೊಂದಿದೆ. ಇದು ಆರೋಹಣದ ಕಠಿಣ ಹಂತವೂ ಹೌದು.
ಅಸಾಧಾರಣ ಮನೋಸ್ಥೆರ್ಯ ಬೇಡುವ ಆರೋಹಣಕ್ಕೆ ದೈಹಿಕ ಮತ್ತು ಮಾನಸಿಕ ತಯಾರಿ ಅತ್ಯವಶ್ಯಕ. ಹೊನ್ನಾಲ್ಡ್ ಅವರು ತನ್ನ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಅಮೆರಿಕದ ನೆವಾಡಾ ಪರ್ವತಗಳಲ್ಲಿ ಕಠಿಣ ತರಬೇತಿ ಪಡೆಯುತ್ತಾರೆ. ನೇರವಾಗಿ ಹತ್ತುವ ಮೊದಲು ಎರಡರಿಂದ ಮೂರು ಬಾರಿ ಕಟ್ಟಡವನ್ನು ಏರಿ ದಾರಿಯ ಗುರುತನ್ನು ಮಾಡಿಕೊಳ್ಳುತ್ತಾರೆ. ನೆಟ್ ಫ್ಲಿಕ್ಸ್ ತಂಡ ಒದಗಿಸಿದ ಕಟ್ಟಡದ ವಿಡಿಯೋ, ಫೊಟೋಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪ್ರತಿಯೊಂದು ಹೆಜ್ಜೆಯನ್ನು ಎಲ್ಲಿ ಇಡಬೇಕೆಂಬುದನ್ನು ಮನನ ಮಾಡಿಕೊಳ್ಳುತ್ತಾರೆ.

ಹೊನ್ನಾಲ್ಡ್ ಮೂಲತಃ ಕ್ಯಾಲಿಫೋರ್ನಿಯದ ಸ್ಯಾಕ್ರಮೆಂಟೊ ಪಟ್ಟಣದವರು. ತನ್ನ ಐದನೆಯ ವಯಸ್ಸಿನಲ್ಲೇ 30 ಅಡಿ ಎತ್ತರವಿರುವ ರಚನೆಗಳನ್ನು ಕೆಲವೇ ನಿಮಿಷಗಳಲ್ಲಿ ಹತ್ತಲು ಕಲಿಯುತ್ತಾರೆ! ತನ್ನ ಶಾಲಾ ದಿನಗಳಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ಜರುಗುವ ಹಲವಾರು ರಾಷ್ಟ್ರೀಯ ಮಟ್ಟದ ಆರೋಹಣ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ಪಡೆಯುತ್ತಾರೆ. ಕೇವಲ 19 ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ತನ್ನ ಶಾಲಾಜೀವನ ತ್ಯಜಿಸುವ ಅವರಿಗೆ
ತಾಯಿಯೊಂದಿಗೆ ಪುಟ್ಟ ವ್ಯಾನ್ ನಲ್ಲಿ ವಾಸಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಒಂದು ರೀತಿಯಲ್ಲಿ ಅಸಾಂಪ್ರದಾಯಿಕ ಜೀವನಶೈಲಿ ಅವರದ್ದು. ಶಾಂತ ಸ್ವಭಾವದವರಾದ ಹೊನ್ನಾಲ್ಡ್, ಒಬ್ಬ ಅಲೆಮಾರಿಯಂತೆ ಬರಿಗೈಯಲ್ಲಿ ಅನೇಕ ಸಣ್ಣ ಪರ್ವತಗಳನ್ನು ಹತ್ತುತ್ತಾ ಜೀವನ ಕಳೆಯುತ್ತಾರೆ. ಮುಂದೆ ಅವರ ಈ ಅನುಭವವೇ ಅತ್ಯಂತ ಎತ್ತರದ ಪರ್ವತಗಳನ್ನು, ಗಗನಚುಂಬಿ ಕಟ್ಟಡಗಳನ್ನು ಏರಲು ಇರಬೇಕಾದ ಮನಸ್ಥಿತಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟಿತು.

ಹೊನ್ನಾಲ್ಡ್ ಕೇವಲ ಒಬ್ಬ ಸಾಹಸಿಯಲ್ಲ, ಒಬ್ಬ ಅಪ್ಪಟ ಪರಿಸರಪ್ರೇಮಿ ಮತ್ತು ಮಾನವತಾವಾದಿ.
'ಹೊನ್ನಾಲ್ಡ್ ಫೌಂಡೇಶನ್' ಎಂಬ ಹೆಸರಿನ ಸಂಸ್ಥೆ ಪ್ರಾರಂಭಿಸಿರುವ ಇವರು ತನ್ನ ಸಂಪತ್ತಿನ ಮೂರನೇ ಒಂದು ಭಾಗವನ್ನು ನವೀಕರಿಸಬಹುದಾದ ಇಂಧನ ಮೂಲವಾದ ಸೌರಶಕ್ತಿ ಯೋಜನೆಗಳಿಗೆ ಧಾರೆ ಎರೆದಿದ್ದಾರೆ.
ಪ್ರತಿಯೊಬ್ಬರ ಬದುಕಿನಲ್ಲೂ ಅವರದ್ದೇ ಆದ ಸವಾಲುಗಳು ಮತ್ತು ಗುರಿಗಳು ಇರುತ್ತವೆ. ಅವುಗಳನ್ನು ಈಡೇರಿಸಲು ಅಚಲವಾದ ಮನೋಸ್ಥೈರ್ಯ ಹಾಗೂ ನಿರಂತರ ಪ್ರಯತ್ನ ಅತ್ಯವಶ್ಯಕ. ಹೊನ್ನಾಲ್ಡ್ ರ ಈ ಅಸಾಮಾನ್ಯ ಸಾಹಸ ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಕನಸುಗಳನ್ನು ಬೆನ್ನಟ್ಟುವ ಪ್ರತಿಯೊಬ್ಬರಿಗೂ ದಾರಿದೀಪವಾಗುವುದರಲ್ಲಿ ಸಂಶಯವಿಲ್ಲ.
(ಲೇಖಕರು: ಉಪನ್ಯಾಸಕರು/ ಹವ್ಯಾಸಿ ಬರಹಗಾರರು)