ಹೋಗುವ ಹೋಗುವ ಅಮೆರಿಕ...ನೋಡುವ ನೋಡುವ ಟೈಟಾನಿಕ!
1990ರ ಆರಂಭದಲ್ಲಿ ಅಮೆರಿಕ ಟೈಟಾನಿಕ್ ಹಡಗಿನ ವಿಶೇಷ ರಕ್ಷಣಾ ಹಕ್ಕುಗಳನ್ನು ಟೈಟಾನಿಕ್ ವೆಂಚರ್ಸ್‌ಗೆ ನೀಡಿತು. 1993, 1994 ಮತ್ತು 1996ರಲ್ಲಿ RMS ಕಂಪನಿ ಈ ಭಾಗಕ್ಕೆ ಹೆಚ್ಚುವರಿ ಪ್ರವಾಸ ಮಾಡಿ ಸುಮಾರು 2200 ವಸ್ತುಗಳನ್ನು ಹೊರಕ್ಕೆ ತಂದಿತು. ಈ ರೀತಿ ತಂದ ವಸ್ತುಗಳನ್ನು ಸರಿಯಾಗಿ ರಕ್ಷಣೆ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು.
- ಬ್ರಿಜೇಶ್ ಎ. ಪಿ.
ಅದು 1912ರ ಏಪ್ರಿಲ್ ತಿಂಗಳು. ಸೌತಾಂಪ್ಟನ್ನಿಂದ ನ್ಯೂಯಾರ್ಕ್ ನಗರಕ್ಕೆ RMS ಟೈಟಾನಿಕ್ ಹಡಗು ಹೊರಟಿತ್ತು. ಇದರಲ್ಲಿ 2,224 ಜನರು ಇದ್ದರು. ಎಲ್ಲರೂ ಪ್ರವಾಸದ ಉತ್ಸಾಹದಲ್ಲಿ ಇದ್ದರು. ಇಲ್ಲಿ ತೆರಳಿದ್ದ ಅನೇಕರಲ್ಲಿ ಮಿಲಿಯನೇರ್ಗಳು ಕೂಡ ಇದ್ದರು. ಆದರೆ, ಇದೇ ತಮ್ಮ ಕೊನೆಯ ಪ್ರವಾಸ ಆಗಲಿದೆ ಎಂದು ಅಲ್ಲಿದ್ದ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಲಕ್ಸುರಿಗೆ ಹೆಸರುವಾಸಿಯಾಗಿದ್ದ ಈ ಹಡಗು ಉತ್ತರ ಅಟ್ಲಾಂಟಿಕಾದಲ್ಲಿ ಸಾಗುವಾಗ ಐಸ್ಗೆ ಡಿಕ್ಕಿ ಹೊಡೆದು ಮುಳುಗೇ ಹೋಯಿತು. ಈ ಘಟನೆಯಲ್ಲಿ 1500 ಜನರು ಮೃತಪಟ್ಟರು. ಇದು ಇತಿಹಾಸದಲ್ಲಿ ನಡೆದ ಅತ್ಯಂತ ಘೋರ ಹಡಗು ದುರಂತಗಳಲ್ಲಿ ಒಂದು. ಈ ಹಡಗಿನ ಅವಶೇಷ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ..
ಅವಶೇಷ ಹುಡುಕಲು ಬೇಕಾಯ್ತು 73 ವರ್ಷ..
ಟೈಟಾನಿಕ್ ಮುಳುಗಿದ್ದು 1912ರಲ್ಲೇ ಆದರೂ ಇದರ ಅವಶೇಷ ಪತ್ತೆ ಹಚ್ಚಲು ಸುಮಾರು 73 ವರ್ಷಗಳೇ ಬೇಕಾದವು. 1985ರಲ್ಲಿ ಟೈಟಾನಿಕ್ ಹಡಗಿನ ಅವಶೇಷ ಪತ್ತೆ ಆದವು. ‘ಫ್ರೆಂಚ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ದಿ ಎಕ್ಸ್‌ಪ್ಲೋಯಿಟೇಶನ್ ಆಫ್ ದಿ ಸೀ’ನಲ್ಲಿ ಕೆಲಸ ಮಾಡುತ್ತಿದ್ದ ರಾಬರ್ಟ್ ಬಲ್ಲಾರ್ಡ್ ಈ ಶೋಧದ ನೇತೃತ್ವ ಹೊಂದಿದ್ದರು. ಟೈಟಾನಿಕ್ ಹಡಗಿನ ಅವಶೇಷ 3.9 ಕಿಲೋ ಮೀಟರ್ ಆಳದಲ್ಲಿ ಪತ್ತೆ ಆಯ್ತು.

ಕಲಾಕೃತಿ ಹೊರತೆಗೆದರು..
1990ರ ಆರಂಭದಲ್ಲಿ ಅಮೆರಿಕ ಟೈಟಾನಿಕ್ ಹಡಗಿನ ವಿಶೇಷ ರಕ್ಷಣಾ ಹಕ್ಕುಗಳನ್ನು ಟೈಟಾನಿಕ್ ವೆಂಚರ್ಸ್‌ಗೆ ನೀಡಿತು. 1993, 1994 ಮತ್ತು 1996ರಲ್ಲಿ RMS ಕಂಪನಿ ಈ ಭಾಗಕ್ಕೆ ಹೆಚ್ಚುವರಿ ಪ್ರವಾಸ ಮಾಡಿ ಸುಮಾರು 2200 ವಸ್ತುಗಳನ್ನು ಹೊರಕ್ಕೆ ತಂದಿತು. ಈ ರೀತಿ ತಂದ ವಸ್ತುಗಳನ್ನು ಸರಿಯಾಗಿ ರಕ್ಷಣೆ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು.
ಶುರುವಾಯ್ತು ಪ್ರವಾಸ..
1998ರಲ್ಲಿ ‘ಡೀಪ್ ಓಷನ್ ಎಕ್ಸ್‌ಪೆಡಿಶನ್ಸ್’ ಎಂಬ ಬ್ರಿಟಿಷ್ ಕಂಪನಿಯು ಒಪ್ಪಿಗೆ ಪಡೆದು ಸಬ್‌ಮರ್ಸಿಬಲ್ ಮೂಲಕ ಟೈಟಾನಿಕ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತು. ಒಬ್ಬರಿಗೆ ಸುಮಾರು 32 ಸಾವಿರ ಡಾಲರ್ಗೆ (ಇಂದಿನ ಬೆಲೆ 28 ಲಕ್ಷ ರುಪಾಯಿ) ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಆರ್‌ಎಂಎಸ್ ಟೈಟಾನಿಕ್ ಇವುಗಳನ್ನು ತಡೆಯಲು ಮೊಕದ್ದಮೆ ಹೂಡಿತು. ಆಗ ನ್ಯಾಯಾಲಯವು ಆರ್‌ಎಂಎಸ್ ಟೈಟಾನಿಕ್ ಪರವಾಗಿ ನಿಂತಿತು. ಆದರೆ, ಇದನ್ನು ಮೇಲಿನ ಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಈ ವೇಳೆ ಕೆಳ ಹಂತದ ಕೋರ್ಟ್ ಆದೇಶವನ್ನು ಮೇಲಿನ ಕೋರ್ಟ್ ರದ್ದು ಮಾಡಿತು. 2001ರಲ್ಲಿ, ಟೈಟಾನಿಕ್ ಸಮೀಪ ಸಬ್‌ಮರ್ಸಿಬಲ್ ಒಳಗೆ ರಷ್ಯಾ ದಂಪತಿ ವಿವಾಹ ಕೂಡ ಆದರು.

100 ವರ್ಷ ಪೂರೈಸಿದ ಬಳಿಕ..
2012ಕ್ಕೆ ಈ ದುರ್ಘಟನೆಗೆ 100 ವರ್ಷಗಳು ಪೂರ್ಣಗೊಂಡವು. ಈ ವೇಳೆ ಈ ಹಡಗಿನ ಪಳಯುಳಿಕೆ ಯುನೆಸ್ಕೋ ಅಡಿಯಲ್ಲಿ ರಕ್ಷಣೆಗೆ ಅರ್ಹತೆ ಪಡೆಯಿತು. ಟೈಟಾನಿಕ್ ಅವಶೇಷ ಕಲಾಕೃತಿಗಳನ್ನು ಲೂಟಿ ಮಾಡುವುದು, ಮಾರಾಟ ಮಾಡುವುದು ಅಥವಾ ನಾಶಪಡಿಸುವುದರ ವಿರುದ್ಧ ಕಾನೂನುಗಳನ್ನು ಜಾರಿಗೆ ತರಬಹುದಿತ್ತು. ಆದರೆ, ಇದನ್ನು ಅಮೆರಿಕ, ಇಂಗ್ಲೆಂಡ್, ಕೆನಾಡ ಒಪ್ಪಲಿಲ್ಲ.
ನೋಡಲು ಹೋದವರ ದುರಂತ..
ಟೈಟಾನಿಕ್ ಅವಶೇಷಗಳ ನೋಡಲು ಪ್ರವಾಸ ತೆರಳುವುದು ಅದರ ಪಳೆಯುಳಿಕೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಹೇಳುತ್ತಲೇ ಬರಲಾಯಿತು. ಆದರೆ, ಯಾರೂ ಅದನ್ನು ಕೇಳಲಿಲ್ಲ. 2023ರ ಜೂನ್ನಲ್ಲಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಸಂಸ್ಥೆಯು ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿ ಐದು ಜನರನ್ನು ಇಲ್ಲಿಗೆ ಕರೆದುಕೊಂಡು ಹೋಗಿತ್ತು. ಅದು ನೀರಿನ ಒತ್ತಡಕ್ಕೆ ಸಿಲುಕಿ ಸ್ಫೋಟಗೊಂಡಿದ್ದರಿಂದ ಅದರಲ್ಲಿ ಇದ್ದ ಐವರು ಸಾವನಪ್ಪಿದ್ದರು. ಈ ಪ್ರವಾಸಕ್ಕೆ ಪ್ರತಿಯೊಬ್ಬರೂ ಪಾವತಿ ಮಾಡಿದ್ದು ಸುಮಾರು 2 ಕೋಟಿ ರೂಪಾಯಿ. ಕೆಲವು ದಿನಗಳ ಬಳಿಕ ಸಮುದ್ರ ಮೇಲ್ಭಾಗದಿಂದ 4 ಕಿಮೀ ಆಳದಲ್ಲಿ, ಸಬ್‌ಮರ್ಸಿಬಲ್ ಟೈಟಾನಿಕ್ ನ ಅವಶೇಷದ ತುಂಡು ಪತ್ತೆ ಆದವು.