Friday, April 24, 2026
Friday, April 24, 2026

ಆಮ್‌ಸ್ಟರ್‌ಡಮ್‌... ಇದು ಪಾಪಿಗಳ ಲೋಕವಂತೆ… ಹೌದಾ?

ಈ ದೇಶಕ್ಕೆ ಹೋದ ಯಾವುದೇ ಕಾಫಿಪ್ರಿಯ ಪ್ರವಾಸಿಯೂ, ಕಾಫಿ ಕುಡಿಯಬೇಕೆನಿಸಿದಾಗ ದಯಮಾಡಿ ನಮ್ಮ ದೇಶದ ಹಾಗೆ ಕಾಫಿ ಶಾಪ್ ಎಲ್ಲಿದೆ ಎಂದು ಯಾರನ್ನೂ ಕೇಳಬೇಡಿ . ಯಾಕಂದ್ರೆ ಇಲ್ಲಿಕಾಫಿ ಶಾಪ್ ಎಂದರೆ ಡ್ರಗ್ಸ್‌, ಗಾಂಜಾ ಸಿಗುವ ವಸ್ತುಗಳು ದೊರೆಯುವ ಅಂಗಡಿಗಳೆಂದು ಅರ್ಥ.

  • ವಿನಯ ಪಾಂಡವಪುರ

ಆಮ್‌ಸ್ಟರ್‌ಡಮ್‌ ಎಂದು ಗೂಗಲ್ ಮಾಡಿದರೆ, ವಿಕಿಪೀಡಿಯಾ ಸಿನ್‌ಸಿಟಿ ಎಂಬ ಅಡ್ಡಹೆಸರು ತೋರಿಸುತ್ತದೆ. ಬಹುಶಃ ಗೂಗಲ್ ಕೂಡ ಈ ವಿಷಯದಲ್ಲಿ ಸಣ್ಣ ತಪ್ಪು ಹೆಜ್ಜೆ ಇಟ್ಟಿರಬಹುದು ಎಂದು ನನ್ನ ಅನಿಸಿಕೆ. ಈ ಪ್ರದೇಶದಲ್ಲಿ ಕಾನೂನಾತ್ಮಕವಾಗಿ ನಡೆಯುವ ವೇಶ್ಯಾವಾಟಿಕೆ ಮತ್ತು ಮಾದಕ ವಸ್ತುಗಳ ಅಂಶಗಳನ್ನಿಟ್ಟುಕೊಂಡು ಗೂಗಲ್ ಹಾಗೆ ದಾಖಲಿಸಿದ್ದಿರಬಹುದು.
ಆದರೆ ಇದನ್ನು ಹೊರತುಪಡಿಸಿದರೆ, ಆಮ್‌ಸ್ಟರ್‌ಡಮ್‌ನಲ್ಲಿ ಸಕಾರಾತ್ಮಕ ಅಂಶಗಳು ಬಹಳಷ್ಟಿವೆ ಮತ್ತು ಪ್ರವಾಸಿಗರು ಈ ದೇಶಕ್ಕೆ ಹೋಗಿ ಕಲಿತು ಬರಬೇಕಿರುವ ತುಂಬ ವಿಷಯಗಳಿವೆ. ಈ ಸ್ಥಳಕ್ಕೆ ಸಿನ್‌ಸಿಟಿ ಎಂಬ ಅಡ್ಡಹೆಸರಿಡುವ ಬದಲಿಗೆ ಹಸಿರನಾಡು, ರೈತಶ್ರೀಮಂತನಾಡು, ನೆಲ/ಜಲದ ವಿಷಯಗಳಲ್ಲಿ ವ್ಯವಸ್ಥಿತನಾಡು ಎಂದು ಹೆಸರಿಟ್ಟಿದ್ದರೆ ಸೂಕ್ತವಾಗುತ್ತಿತ್ತು.

ಆಮ್‌ಸ್ಟರ್‌ಡಮ್‌ ನೆದರ್ಲ್ಯಾಂಡ್ಸ್‌ನ ರಾಜಧಾನಿ. ಎಷ್ಟೋ ದೇಶಗಳ ಥರ ಈ ದೇಶ ಕೂಡ ಪರದೇಶಗಳಿಂದ ಆಕ್ರಮಣಗೊಂಡು ಸ್ವಾತಂತ್ರ್ಯ ರಹಿತವಾಗಿತ್ತು. ಬಹಳಷ್ಟು ಯುದ್ಧಗಳು ಕೂಡ ನಡೆದಿವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಕೇವಲ ಒಂದು ವರ್ಷದ ಹಿಂದೆ ಅಂದರೆ, 04.05.1946 ರಲ್ಲಿ ಇವರಿಗೆ ಸ್ವಾತಂತ್ರ್ಯ ದೊರಕಿತು.

ಇದನ್ನೂ ಓದಿ: ಇದು ಅಮೆರಿಕದ ಅದ್ಭುತ

ಈ ದೇಶ ಸಂಪೂರ್ಣ ಸಮತಟ್ಟಾಗಿದೆ . ಬೆಟ್ಟ ಗುಡ್ಡ ಇಲ್ಲದ ದೇಶವಿದು. ಎಲ್ಲೆಲ್ಲಿ ನೋಡಿದರೂ ಹಚ್ಚಹಸಿರಿನ ವ್ಯವಸಾಯ ಭೂಮಿ. ಪಟ್ಟಣದ ಒಳಗಡೆ ಕಿಮೀ ಗಟ್ಟಲೆ ಉದ್ದದ ಕಾಲುವೆಗಳಿವೆ. ದೋಣಿ ವ್ಯವಸ್ಥೆಗಳಿವೆ. ಕಾಲುವೆಯ ಒಂದು ಅಂಚಿನಲ್ಲಿ ಉದ್ದಕ್ಕೂ ಜನರು ವಾಸಿಸುವ ದೋಣಿ ಮನೆಗಳಿವೆ. ಅವುಗಳ ಒಳವಿನ್ಯಾಸಗಳು ಯಾವ ಶ್ರೀಮಂತರ ಮನೆಗೂ ಕಡಿಮೆಯಿಲ್ಲ.

ಈ ದೇಶ ಸಮುದ್ರ ಮಟ್ಟಕ್ಕಿಂತ 5.5 ಮೀಟರ್ ಕೆಳಮಟ್ಟದಲ್ಲಿದೆ. ಹಾಗಾಗಿ ವರ್ಷದ ಬಹುಪಾಲು ತಿಂಗಳುಗಳಲ್ಲಿ ಚಳಿ, ಗಾಳಿ, ಮಳೆ ಜಾಸ್ತಿ.

Untitled design - 2026-04-24T120012.373

ಕಾರ್‌ಗಿಂತ ಸೈಕಲ್‌ ಜಾಸ್ತಿ!

ನಮ್ಮ ದಕ್ಷಿಣ ಭಾರತದ ಕೆಲವೊಂದು ಸಿನಿಮಾಗಳಲ್ಲಿ ನಾಯಕ ಅವರವರ ಊರಿಗೆ ಬಂದಾಗ ನೆಲಕ್ಕೆ, ನೆಲದ ಮಣ್ಣಿಗೆ ಮುತ್ತು ಕೊಡುವ ಬಿಲ್ಡ್ ಅಪ್ ಸೀನ್ ಬರುತ್ತಲ್ಲ, ಈ ದೇಶದಲ್ಲಿ ಧಾರಾಳವಾಗಿ ಹಾಗೆ ಮಾಡಬಹುದು. ಅಷ್ಟು ಅಚ್ಚುಕಟ್ಟಾದ ಸ್ವಚ್ಛತಾ ವ್ಯವಸ್ಥೆ ಇಲ್ಲಿದೆ.
ಧೂಮಪಾನವನ್ನು ದೇಶದ ಬಹಳಷ್ಟು ಜಾಗದಲ್ಲಿ ನಿರಾಳವಾಗಿ ಮಾಡಬಹುದು. ಆದರೆ ಅದನ್ನು ಎಲ್ಲೆಂದರಲ್ಲಿ ಬಿಸಾಕಿದರೆ 50 ಯುರೋ ದಂಡ ಕಟ್ಟಬೇಕಾಗುತ್ತದೆ. ರಸ್ತೆಗಳ ವ್ಯವಸ್ಥೆ ಅದ್ಭುತವಾಗಿದೆ. ವಾಹನಗಳು ಓಡಾಡುವ ಯಾವ ರಸ್ತೆಯಲ್ಲೂ ಎಲ್ಲಿ ನೋಡಿದರೂ ಒಂದು ಹಿಡಿ ಮಣ್ಣು ಕೂಡ ಸಿಗುವುದಿಲ್ಲ. ವಾಹನಗಳು ಓಡಾಡಲು ರಸ್ತೆ, ಪಕ್ಕದಲ್ಲಿ ಜನಗಳು ಓಡಾಡಲು, ಅದೇ ರಸ್ತೆಯಲ್ಲಿಯೇ ಪುಟ್ಟ ರೈಲಿನಂಥ್ ಟ್ರಾಮ್ ಎನ್ನುವ ವಾಹನ. ಎಲ್ಲೆಂದರಲ್ಲಿ ಇರುವೆಗಳ ಸಾಲಿನಂತೆ ಬೈಸಿಕಲ್‌ಗಳ ಸಾಲು. ಆದರೆ ದ್ವಿಚಕ್ರ ಬೈಕ್‌ಗಳೇ ಇಲ್ಲ! ಸೈಕಲ್ ಓಡಿಸುತ್ತಿರುವವರು ಶಾರ್ಟ್ ಚಡ್ಡಿಯಿಂದ ಹಿಡಿದು ಸೂಟ್ ಬೂಟ್ ಕೂಡ ಹಾಕಿರುತ್ತಾರೆ.
ಈ ದೇಶದಲ್ಲಿ ಮನೆಗೊಂದೇ ಕಾರು ಎನ್ನುವ ನಿಯಮವಿದೆ. ಈ ಕಾರಣಕ್ಕೂ ಇಲ್ಲಿ ಬೈಸಿಕಲ್‌ಗಳ ಸಂಖ್ಯೆ ಹೆಚ್ಚು.
ಇಲ್ಲಿ ಹೊಸ ಕಾರನ್ನು ಖರೀದಿಸಲು ಶೋರೂಮ್ ಗೆ ಹೋಗಿ ಬುಕ್ ಮಾಡಿದರೆ, ಆರು ತಿಂಗಳಾದ ನಂತರವೇ ಡೆಲಿವರಿ ಸಿಗುವುದು.
ಇಲ್ಲಿನ ದೇಶದ ಕಾನೂನು ವ್ಯವಸ್ಥೆ, ತೆರಿಗೆ ವ್ಯವಸ್ಥೆ, ಸಂಸ್ಕೃತಿ, ದುಬಾರಿ ಪೆಟ್ರೋಲ್- ಡಿಸೇಲ್ ದರ ಮತ್ತು ದೇಶ ಸದಾಕಾಲಕ್ಕೂ ಸುವ್ಯವಸ್ಥೆಯಾಗಿರಬೇಕು ಎಂಬುದು ಈ ವ್ಯವಸ್ಥೆಯ ಹಿಂದಿರುವ ಸದುದ್ದೇಶ. ಕಾರಿನ ಪಾರ್ಕಿಂಗ್ ವೆಚ್ಚ ಕೂಡ ದುಬಾರಿ ಇರುವ ಕಾರಣ ಇಲ್ಲಿ ಸೈಕಲ್ ಬಳಕೆ ಹೆಚ್ಚು. ಒಂದು ಗಂಟೆಗೆ ಕಾರ್ ಪಾರ್ಕ್ ಮಾಡಲು ಸುಮಾರು 8-20 ಯುರೋ ತೆರಬೇಕಾಗುತ್ತದೆ.
ಪ್ರಪಂಚದ ಅತಿ ದುಬಾರಿ ಇಂಧನ ದರ ಇರುವ ದೇಶ ಮೊನಾಕೊ. ನಂತರದ ಸ್ಥಾನ ಆಮ್‌ಸ್ಟರ್‌ಡಮ್‌ಗಿದೆ. ಭಾರತೀಯ ಕರೆನ್ಸಿ ಪ್ರಕಾರ ಇಲ್ಲಿ ಪೆಟ್ರೋಲ್‌ಗೆ 190-220 ರು, ಡೀಸೆಲ್‌ಗೆ 160-190 ರು ಇದೆ.

ಉಚಿತ ಭಾಗ್ಯಗಳೇ ಇಲ್ಲ!

ಇಲ್ಲಿ ಆಮ್ಲಜನಕವನ್ನು ಬಿಟ್ಟು ಮಿಕ್ಕ ಯಾವುದೂ ಉಚಿತವಿಲ್ಲ. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೌಲಭ್ಯವಿದ್ದರೂ, ಪೋಷಕರಿಂದ ಕೊಡುಗೆಯ ರೂಪದಲ್ಲಿ ಹಣ ಸಂದಾಯ ಮಾಡಿಸಿಕೊಳ್ಳುತ್ತಾರೆ. ಇನ್ನು ಕಾಲೇಜು ವ್ಯಾಸಂಗ, ಟ್ಯೂಷನ್ ಮತ್ತೆಲ್ಲ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಎಲ್ಲವೂ ಹಣ ಪಾವತಿ ಮಾಡಿಯೇ ಪಡೆಯಬೇಕು. ಇಲ್ಲಿ ಶಾಲಾ ವಾಹನಗಳಿಲ್ಲ. ಬೈಸಿಕಲ್‌ನಲ್ಲಿಯೇ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಇಲ್ಲವಾದಲ್ಲಿ ಸರ್ಕಾರಿ ಬಸ್, ರೈಲು, ಮೆಟ್ರೊ ಬಳಸುತ್ತಾರೆ.

Untitled design - 2026-04-24T120019.717

ಆರೋಗ್ಯ ವ್ಯವಸ್ಥೆ ಕೂಡ ಇಲ್ಲಿ ಉಚಿತವಿಲ್ಲ. ಆದರೆ ದೇಶದ ಪ್ರತಿಯೊಬ್ಬ ಪ್ರಜೆ ಆರೋಗ್ಯವಿಮೆ ಪಡೆದುಕೊಳ್ಳಲೇಬೇಕು. ಅದು ಕೂಡ ಅವರವರ ಹಣದಿಂದ. ಸರ್ಕಾರದಿಂದಲ್ಲ.

ಟ್ಯಾಕ್ಸು ಫಿಕ್ಸು!

ಇಲ್ಲಿ ಆದಾಯ ತೆರಿಗೆ ನಲವತ್ತರಿಂದ ಐವತ್ತು ಪರ್ಸೆಂಟ್ ತನಕ ಇದೆ. ಪ್ರಜೆಗಳು ತೆರಿಗೆ ಕದಿಯುವುದಿಲ್ಲ. ಕದಿಯಲು ಸಾಧ್ಯವೂ ಇಲ್ಲ.

ಇಲ್ಲಿಯೂ ತೆರಿಗೆ ಪಾವತಿ ಉಳಿಸಲು ಜನರು, ಹಲವು ಮಾರ್ಗ ಬಳಸುತ್ತಾರೆ. ಆದರೆ ಇವುಗಳಿಂದ ಕಡಿಮೆ ತೆರಿಗೆ ಪಾವತಿ ಮಾಡಬಹುದೇ ಹೊರತು ಶೂನ್ಯ ತೆರಿಗೆ ಪಾವತಿ ಅಸಾಧ್ಯ.

ತೆರಿಗೆ ವಿಚಾರದಲ್ಲಿ ನಮ್ಮ ಭಾರತ ದೇಶದವರಿಗೆ ವಿಶೇಷ ಸೌಲಭ್ಯವಿದೆ. ಇಲ್ಲಿಗೆ ಬಂದು ಕೆಲಸ ಮಾಡುವ ಎಂಜಿನಿಯರ್‌ಗಳಿಗೆ ಮಾತ್ರ ಕೇವಲ 20% ತೆರಿಗೆ ಹೇರಿಕೆ ಇದೆ.

ಶೆಲ್‌ ಪೆಟ್ರೋಲ್‌ ಇವರದ್ದೇ!

ಇಲ್ಲಿ ಬಹಳಷ್ಟು ವರ್ಷಗಳಿಂದ ರಾಜಮನೆತನವಿದೆ. ಆದರೆ ಅವರಿಗೆ ಸರಕಾರ, ರಾಜಕೀಯ ವ್ಯಕ್ತಿಗಳಿಗಿರುವ ಅನುಕೂಲಗಳು ಇರುವುದಿಲ್ಲ. ಕಾನೂನು ವ್ಯವಸ್ಥೆಗಳಲ್ಲಿ, ದೇಶಕ್ಕೆ ಸಂಬಂಧಪಟ್ಟ ಸರಕಾರದ ನಿಲುವುಗಳಲ್ಲಿ ಇವರಿಗೆ ಪವರ್ ಇರುವುದಿಲ್ಲ. ಕಾನೂನಾತ್ಮಕವಾಗಿ ಇವರಿಗಿರುವ ಒಂದೇ ಒಂದು ಅನುಕೂಲ ಏನೆಂದರೆ ರಾಜಮನೆತನದವರು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವಂತಿಲ್ಲ.
ಶೆಲ್ ಪೆಟ್ರೋಲ್ ಬಂಕ್‌ನ ಪ್ರಪಂಚದ ಎಲ್ಲ ಶಾಖೆಗಳ 53% ಮಾಲೀಕತ್ವದ ಪಾಲುದಾರಿಕೆ ಈ ದೇಶದ ರಾಜಮನೆತನದ್ದು. ಅವರದೇ ಮಾಲೀಕತ್ವ ಇದ್ದಾಗಲೂ ಆ ದೇಶದ ಇಂಧನ ಹೆಚ್ಚು ದುಬಾರಿ.

ನೋಡಲೇಬೇಕಾದ ಜಾಗಗಳು

De Haar Castle - ಇದು Netherlands ನ ಹೊರಭಾಗದ Utrecht ನಲ್ಲಿರುವುದು. Netherlandsನ ಅತ್ಯಂತ ದೊಡ್ಡ ಕೋಟೆ ಇದು. ರಾಜಮನೆತನದ ಅರಮನೆ ಮತ್ತು ಅವರು ನಡೆಸಿದ ವೈಭೋಗಗಳನ್ನು ಇಲ್ಲಿ ಕಾಣಬಹುದು. 1892-1907 ಇಸವಿಯಲ್ಲಿ ಕಟ್ಟಿರುವ ಇದರಲ್ಲಿ 200 ಮಲಗುವ ಕೋಣೆಗಳು ಮತ್ತು 30 ಸ್ನಾನದ ಮನೆಗಳಿವೆ ಎಂದರೆ ರಾಜಮನೆತನದ ವೈಭೋಗ ಹೇಗಿತ್ತು ಮತ್ತು ಈ ಕೋಟೆ ಅದೆಷ್ಟು ದೊಡ್ಡದಿರಬಹುದು ಎಂದು ಅಂದಾಜು ಮಾಡಿ. ಈ ಸ್ಥಳವನ್ನು ಮತ್ತಷ್ಟು ಆಕರ್ಷಕಗೊಳಿಸಲು ಇತ್ತೀಚೆಗೆ 7000 ಬೆಳೆದ ಮರಗಳನ್ನು ತರಿಸಿ ನೆಡಲಾಗಿದೆ.

Untitled design - 2026-04-24T115852.039

Giethoorn - ಇದೊಂದು ದೊಡ್ಡ ಕೆರೆ ಮತ್ತು ಒಳನಾಲೆಗಳಿರುವ ಸುಂದರ ಸ್ಥಳ. ಸುಮಾರು 150 ರೂಮ್‌ಗಳನ್ನು ಕಟ್ಟಿದ್ದಾರೆ. ಅವುಗಳ ಸುತ್ತಮುತ್ತ ಕೇವಲ ಕೆರೆ ಮತ್ತು ನಾಲೆ. ಓಡಾಡಲು ಪ್ರತಿ ರೂಮಿಗೆ ಪ್ರತ್ಯೇಕ ದೋಣಿಗಳಿವೆ. ಊಟಕ್ಕೆ ಹೊಟೇಲ್‌ಗಳಿವೆ. 24 ಗಂಟೆ ಇಲ್ಲಿ ಉಳಿದುಕೊಳ್ಳಲು ಸುಮಾರು 450-500 ಯುರೋ ಆಗುತ್ತದೆ

Volendam - ಇದೊಂದು ಪಟ್ಟಣದ ಹೆಸರು. ಇದನ್ನು ನೀರಿನ ಮೇಲೆ ಕಟ್ಟಲಾಗಿದೆ. ಈ ಪಟ್ಟಣವನ್ನು ನೋಡಲು ಸುಮಾರು 50-100 ಜನರನ್ನು ಕೊಂಡೊಯ್ಯುವ ದೊಡ್ಡ ದೋಣಿಗಳಿವೆ. ಇಲ್ಲಿ ಕಟ್ಟಿರುವ ಮನೆಗಳು ವಿವಿಧ ಬಣ್ಣಬಣ್ಣಗಳದ್ದು ಮತ್ತು ಇದನ್ನು ಮರಗಳಿಂದ ಕಟ್ಟಿರುತ್ತಾರೆ. ಹಾಗಾಗಿ ಇದು ಹೆಚ್ಚು ಆಕರ್ಷಕ.

Zaanse Schans - ಇದು ಡಚ್ ಪಟ್ಟಣವಾದ Zaandam ನಲ್ಲಿದೆ. ಐತಿಹಾಸಿಕ ವಿಂಡ್ ಮಿಲ್‌ಗಳು , ಚೀಸ್ ತಯಾರಿಸುವ ಫ್ಯಾಕ್ಟರಿಗಳು ಇಲ್ಲಿವೆ. ಪ್ರಪಂಚದ ಅತಿ ಹೆಚ್ಚು ಚೀಸ್‌ ತಯಾರಿಸುವ ದೇಶಗಳಲ್ಲಿ ಈ ದೇಶವೂ ಒಂದು.

City Canal Boating - ಪಟ್ಟಣದ ಒಳಗೆ ಕಿಮೀ ಗಳಷ್ಟು ಉದ್ದವಿರುವ ಒಂದು ನಾಲೆಯಲ್ಲಿ ಅಲ್ಲಿಗೆ ಬರುವ ಪ್ರವಾಸಿಗರನ್ನು ದೋಣಿಯಲ್ಲಿ ಕೂರಿಸಿ ಪಟ್ಟಣವನ್ನು ತೋರಿಸಲಾಗುತ್ತದೆ.

Heineken Experience - Heineken ಎಂಬ ಬಿಯರ್ ಬ್ರಾಂಡ್ ಈ ದೇಶದಲ್ಲಿ ಶುರುವಾದದ್ದು ಹೇಗೆ , ಶುರುವಾದಾಗ ಹೇಗಿತ್ತು , ಈ ಬಿಯರ್ ಅನ್ನು ತಯಾರಿಸುವ ಬಗೆ ಇವುಗಳನ್ನು ಒಂದು ದೊಡ್ಡ ಕಟ್ಟಡದಲ್ಲಿ Museum ನ ರೂಪದಲ್ಲಿ ಪರಿಚಯಿಸುತ್ತಾರೆ. ಬಿಯರ್ ಪ್ರಿಯರಿಗೆ ಈ ಜಾಗ ತುಂಬಾ ಇಷ್ಟವಾಗುತ್ತದೆ.

This is Holland - 5G Experience - ಇದೊಂದು ಅದ್ಭುತ ಅನುಭವ ಕೊಡುವ ಸ್ಥಳ. ಮೊದಲೆರಡು ಹಂತಗಳಲ್ಲಿ ಬೇರೆ ಬೇರೆ ರೂಮಿನಲ್ಲಿ ಪರದೆಯ ಮೇಲೆ ದೇಶ ಮತ್ತು ದೇಶದ ಇತಿಹಾಸದ ಬಗ್ಗೆ ವಿವರಿಸುತ್ತಾರೆ. ನಂತರ ಒಂದು ಥೀಯೆಟರ್‌ನಲ್ಲಿ ಕುರ್ಚಿಯಲ್ಲಿ ಗಟ್ಟಿಯಾಗಿ ಬೀಳದಂತೆ ಕೂರಿಸಿ ಶೋ ಶುರುಮಾಡುತ್ತಾರೆ. ನಂತರ ಇಡೀ ದೇಶವನ್ನು 5G ವಿಡಿಯೋ ರೂಪದಲ್ಲಿ ಒಂದೊಂದಾಗಿ ತೋರಿಸುತ್ತಾರೆ. ಈ ಅನುಭವವನ್ನು ಪ್ರತಿಯೊಬ್ಬರೂ ಅವರ ಜೀವಮಾನದಲ್ಲಿ ತಪ್ಪದೆ ಅನುಭವಿಸಬೇಕು. ಅಷ್ಟು ಅತ್ಯದ್ಭುತವಾಗಿದೆ.

Untitled design - 2026-04-24T120032.692

ಇಲ್ಲಿಯ ರೈತ ಬಡರೈತನಲ್ಲ!

ಈ ದೇಶದ ತುಂಬಾ ವಿಶೇಷವಾದ ವಿಷಯ ಏನೆಂದರೆ ‘ಈ ದೇಶದ ಅತಿ ಶ್ರೀಮಂತರುಗಳ ಪಟ್ಟಿಯಲ್ಲಿ ರೈತರು ಮುಂಚೂಣಿಯಲ್ಲಿದ್ದಾರೆ’. ಕಾರಣ ಈ ದೇಶ ಅತಿ ಹೆಚ್ಚು Dairy ಉತ್ಪನ್ನಗಳನ್ನು ಪ್ರಪಂಚದ ನಾನಾಭಾಗಗಳಿಗೆ ರಫ್ತು ಮಾಡುತ್ತದೆ. ಚೀಸ್ ಅತಿ ಹೆಚ್ಚು ರಫ್ತಾಗುತ್ತದೆ. ಇಲ್ಲಿ 18-20 ಲಕ್ಷ ಹಸುಗಳನ್ನು ಸಾಕುತ್ತಾರೆ.

ಬಹಳಷ್ಟು ದೇಶದಲ್ಲಿ ಸಿಗದ , ಕುರಿ ಮಟನ್ ಈ ದೇಶದಲ್ಲಿ ಎಲ್ಲಾ ಭಾಗಗಳಲ್ಲೂ ಸಿಗುತ್ತದೆ. ಲಕ್ಷಾಂತರ ಕುರಿಗಳನ್ನು ಇಲ್ಲಿ ಮಾಂಸ ಮತ್ತು ವುಲ್ಲನ್‌ಗಾಗಿ ಸಾಕುತ್ತಾರೆ.

ಈ ದೇಶದ ನೀರಿನ ವ್ಯವಸ್ಥೆ ಅದ್ಭುತ. ಇದರ ಬಗ್ಗೆ ವ್ಯಾಸಂಗ ಮಾಡಲು ಪ್ರಪಂಚದ ನಾನಾ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಾರೆ.
ಇಲ್ಲಿ 1200 Wind Mills ಗಳಿವೆ. ಇವುಗಳು ದೇಶದ ನಾನಾ ಭಾಗಗಳಿಗೆ ನೀರಿನ ಸರಬರಾಜು ಮಾಡಲು , ನೀರನ್ನು ಮೇಲೆತ್ತಲು ಮತ್ತು ಅದನ್ನು ವ್ಯವಸಾಯಕ್ಕೆ ಉಪಯೋಗಿಸಲು ಆ WindMill ಗಳನ್ನು ಬಳಸುತ್ತಾರೆ. ಪ್ರಪಂಚದ ಅತೀ ದೊಡ್ಡ Steem Pumping Stations ಗಳಿವೆ.

Holika Memorial - 17 ನೇ ಶತಮಾನದ ಕಟ್ಟಡ. ಇದರಲ್ಲಿರುವ ಪ್ರತೀ ಇಟ್ಟಿಗೆಯಲ್ಲಿ ಈ ದೇಶಕ್ಕಾಗಿ ಯುದ್ದದ ಸಮಯದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರುಗಳ ಹೆಸರುಗಳನ್ನು ಇತ್ತೀಚೆಗೆ ಬರೆಸಿ ನವೀಕರಿಸಿದ್ದಾರೆ.

ದೇಶದ ದೊಡ್ಡ ರಂಗಮಂದಿರ ವಾದ National Opera & ballet ಇಲ್ಲಿದೆ.

ಕಾಫಿ ಕೇಳಿದ್ರೆ ಅಪಾಯ!

ಈ ದೇಶಕ್ಕೆ ಹೋದ ಯಾವುದೇ ಕಾಫಿಪ್ರಿಯ ಪ್ರವಾಸಿಯೂ, ಕಾಫಿ ಕುಡಿಯಬೇಕೆನಿಸಿದಾಗ ದಯಮಾಡಿ ನಮ್ಮ ದೇಶದ ಹಾಗೆ ಕಾಫಿ ಶಾಪ್ ಎಲ್ಲಿದೆ ಎಂದು ಯಾರನ್ನೂ ಕೇಳಬೇಡಿ . ಯಾಕಂದ್ರೆ ಇಲ್ಲಿಕಾಫಿ ಶಾಪ್ ಎಂದರೆ ಡ್ರಗ್ಸ್‌, ಗಾಂಜಾ ಸಿಗುವ ವಸ್ತುಗಳು ದೊರೆಯುವ ಅಂಗಡಿಗಳೆಂದು ಅರ್ಥ. 17ನೆಯ ಶತಮಾನದಿಂದಲೂ ಈ ಸಂಸ್ಕೃತಿ ಜಾರಿಯಲ್ಲಿದೆ.
ಈ ದೇಶದ ಅಫಿಷಿಯಲ್‌ ಡ್ರಿಂಕ್‌ನ ಹೆಸರು ಜನೇವಾ. KOPSTWOT ಎನ್ನುವ ಮದ್ಯವೂ ಪ್ರಖ್ಯಾತವೇ. ಅಭ್ಯಾಸವಿಲ್ಲದವರು ಒಂದೋ ಎರಡೋ ಪೆಗ್ ಕುಡಿದರೂ ಎಚ್ಚರವಾಗಲು ಒಂದು ದಿನ ಬೇಕು.

ಮುಕ್ತ ವೇಶ್ಯಾವಾಟಿಕೆ!

ಈ ದೇಶ ಕೂಡ ನೈಟ್ ಲೈಫ್‌ಗೆ ವಿಶ್ವವಿಖ್ಯಾತಿ. ವಾರದ ಪ್ರತಿರಾತ್ರಿ ವೈಶ್ಯಾವಾಟಿಕೆ ದಂಧೆ, ಬೆತ್ತಲೆ ಶೋ, ಪಾರ್ಟಿ ಬಾರ್‌ಗಳು ನಡೆಯುತ್ತವೆ. ಸೆಕ್ಸ್ ಮ್ಯೂಸಿಯಂಗಳು ಕೂಡ ಇಲ್ಲಿವೆ. ಸರ್ವರಿಗೂ ಮುಕ್ತ ಆಹ್ವಾನ ಕೂಡ ಇದೆ.
ವೈಶ್ಯಾವಾಟಿಕೆಯಂತೂ ಇಲ್ಲಿ, ಜನಗಳು ವಾಸಿಸುವ, ಶಾಲೆಗಳಿರುವ ಏರಿಯಾಗಳಲ್ಲೇ ಮುಕ್ತವಾಗಿ ರಾತ್ರಿಪೂರ್ತಿ ನಡೆಯುತ್ತವೆ. ದೇಶದ ಆದಾಯದಲ್ಲಿ ಇದು ಕೂಡ ಬಹುಮುಖ್ಯ ಪಾತ್ರವಹಿಸುತ್ತದೆ. ವೇಶ್ಯೆಯರೂ ಇಲ್ಲಿ ತೆರಿಗೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಇದು ಕಾನೂನಾತ್ಮವಾಗಿ ನಡೆಯುತ್ತವೆ.

Untitled design - 2026-04-24T120003.075

ಬಾಗಿಲ ಬಣ್ಣವೇ ಮಾನದಂಡ!

ಇಲ್ಲಿನ ಮನೆಗಳ ಬಾಗಿಲು, ಅದರ ಗಾತ್ರ, ಎತ್ತರ, ಮನೆ ಅಂತಸ್ತುಗಳು, ಮನೆ ಮತ್ತು ಮನೆ ಬಾಗಿಲುಗಳ ಬಣ್ಣಗಳನ್ನು ಆಧರಿಸಿ ಯಾರು ಹೆಚ್ಚು ಶ್ರೀಮಂತರು ಯಾರು ಕಡಿಮೆ ಶ್ರೀಮಂತರು ಎಂದು ತೀರ್ಮಾನಿಸುತ್ತಾರೆ. ಇವೆಲ್ಲವೂ ಆ ದೇಶದ ಕಾನೂನು ಮತ್ತು ಸಂಸ್ಕೃತಿಯ ವಿಷಯಗಳಲ್ಲಿ ಬರುತ್ತವೆ. ದೊಡ್ಡ ಬಾಗಿಲುಗಳಿದ್ದರೆ, ನೀಲಿ ಬಣ್ಣದ್ದಿದ್ದರೆ ಹೆಚ್ಚು ಶ್ರೀಮಂತರು ಮತ್ತು ಚಿಕ್ಕ ಬಾಗಿಲುಗಳಿದ್ದರೆ, ಕಪ್ಪು ಮತ್ತು ಹಸಿರು ಬಣ್ಣದ್ದಾಗಿದ್ದರೆ ಅವರು ಕಡಿಮೆ ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ಬುದ್ಧಿವಂತರು ಮನೆ ದೊಡ್ಡದಾಗಿ ಕಟ್ಟಿಕೊಂಡು ಬಾಗಿಲುಗಳನ್ನು ಚಿಕ್ಕದಾಗಿ ಬೇಕಾದಷ್ಟು ಮಾತ್ರ ಮಾಡಿಕೊಂಡಿರುತ್ತಾರೆ.
ಬಹಳಷ್ಟು ಮನೆಗಳಲ್ಲಿ ಮೊದಲನೆಯ ಮಹಡಿಯಿಂದ ಒಂದು ಫಿಕ್ಸೆಡ್ ದಾರವನ್ನು ಅಥವಾ ಒಂದು ರೀತಿಯ ಉಪಕರಣವನ್ನು ಇಳಿ ಬಿಟ್ಟಿರುತ್ತಾರೆ. ಅದರ ಸಹಾಯದಿಂದಲೇ ತಮ್ಮ ಮನೆಗೆ ಬೇಕಾದ ಮನೆಯೊಳಗೆ ತೆಗೆದುಕೊಂಡು ಹೋಗುತ್ತಾರೆ.

ಇದನ್ನೂ ಓದಿ: ಜಪಾನ್‌ನಲ್ಲಿದೆ ಭೂಕಂಪಕ್ಕೂ ಬಗ್ಗದ ಗೋಪುರ

ಚರ್ಚು ಮಾರಾಟಕ್ಕಿವೆ!

ಧಾರ್ಮಿಕವಾಗಿ ಇಲ್ಲಿ ಹುಚ್ಚು ಕಿತ್ತಾಟಗಳಿಲ್ಲ. ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಪ್ರಾಮುಖ್ಯವಿದೆ. ಜನಸಂಖ್ಯೆಯಲ್ಲಿ ಕ್ಯಾಥೊಲಿಕ್ ಧರ್ಮವು ಡಾಮಿನೇಟ್ ಮಾಡುತ್ತದೆ. ದೇವಾಲಯಗಳಿವೆ, ಚರ್ಚುಗಳಿವೆ, ಮಸೀದಿಗಳಿವೆ. ಪ್ಯಾರಿಸ್‌ನಲ್ಲಿ ಇರುವ ಸುಮಾರು 1600 ಚರ್ಚುಗಳು ಮಾರಾಟಕ್ಕಿವೆಯಂತೆ. ಇಲ್ಲಿಯೂ ಬಹಳಷ್ಟು ಚರ್ಚುಗಳು ಮಾರಾಟಕ್ಕಿವೆ. ಜನರ ನಾಸ್ತಿಕತೆ ಇದಕ್ಕೆ ಕಾರಣ.

ಈ ವಿಷಯ ಗೊತ್ತಾ?

-ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು Schiphol Airport ಎನ್ನುತ್ತಾರೆ. ಕಾರಣ ಈ ನಿಲ್ದಾಣದ ನಿರ್ಮಾಣ ಕಾರ್ಯ ಆಗುತ್ತಿರುವಾಗ ಹೆಚ್ಚು ಕುರಿಗಳ ರಾಶಿರಾಶಿ ಹೆಣಗಳು.

-ಪ್ರಪಂಚದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಎತ್ತರದ ಜನಗಳು ಈ ದೇಶದಲ್ಲಿದ್ದಾರೆ.

-ನಾವು ಹಗಲು ರಾತ್ರಿ ಎನ್ನದೆ ಉಪಯೋಗಿಸುವ ಬ್ಲೂಟೂತ್‌ ಕಂಡುಹಿಡಿದ ಹೆಗ್ಗಳಿಕೆ ಈ ದೇಶಕ್ಕಿದೆ.

-ಫಿಲಿಪ್ಸ್ ಸಂಸ್ಥೆಯ ಮೂಲ ಈ ದೇಶದಲ್ಲಿದೆ.

-ದೇಶದ ಅತಿ ದೊಡ್ಡ ಆನ್‌ಲೈನ್ ಹೊಟೇಲ್ ಬುಕಿಂಗ್ ವೆಬ್‌ಸೈಟ್ Booking.com ಕೂಡ ಈ ದೇಶದ್ದೇ.

-ಈ ದೇಶದಿಂದ ರಫ್ತಾಗುವ ವಸ್ತುಗಳಲ್ಲಿ ಟೂಲಿಪ್ಸ್‌ ಕೂಡ ಒಂದು.

-ಕೊಕೋ ಚಾಕೊಲೆಟ್ ಪೌಡರ್ ಕಂಡುಹಿಡಿದದ್ದು ಈ ದೇಶ.
-ನೆದರ್‌ಲೆಂಡ್ಸ್‌ನಲ್ಲಿಒಟ್ಟು 600 ಮ್ಯೂಸಿಯಂಗಳಿದ್ದರೆ, ಆಮ್‌ಸ್ಟರ್‌ಡಮ್‌ನಲ್ಲಿ 41 ಮ್ಯೂಸಿಯಂಗಳಿವೆ.
ಅಪರಾಧ ಕೃತ್ಯಗಳು ಬಹುಪಾಲು ಶೂನ್ಯ . ಸೆರೆಮನೆಗಳು ಬಹುಪಾಲು ಸಮಯ ಖಾಲಿ ಇರುತ್ತವೆ.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...