ಜಪಾನ್‌ನಲ್ಲಿದೆ ಭೂಕಂಪಕ್ಕೂ ಬಗ್ಗದ ಗೋಪುರ
ಜಪಾನ್ ಭೂಕಂಪ ಪೀಡಿತ ಪ್ರದೇಶ. ಹಾಗಾಗಿ ಈ ಗೋಪುರವನ್ನು ಭೂಕಂಪಗಳನ್ನು ತಡೆದುಕೊಳ್ಳುವಂತೆ ಅತ್ಯಾಧುನಿಕ 'ಶಿಂಬಾಶಿರಾ-ಸೇವಿಂಗ್' (Shinbashira-seishi) ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಭೂಕಂಪಕ್ಕೂ ಅಲುಗಾಡದಂತೆ ಮತ್ತು ಅದಕ್ಕೆ ಪ್ರತಿರೋಧಕವಾಗಿ ನಿರ್ಮಾಣವಾಗಿರುವ ಈ ಗೋಪುರ ಇಲ್ಲಿನ ಅತ್ಯಾಧುನಿಕ ಎಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿಯಾಗಿದ್ದು, ರಾತ್ರಿ ಹೊತ್ತಿಗೆ ಸಾಂಪ್ರದಾಯಿಕ ಜಪಾನಿ ಸೌಂದರ್ಯದೊಂದಿಗೆ ನೀಲಿ ಮತ್ತು ನೇರಳೆ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುತ್ತದೆ.
- ಸಹನಾ ಪ್ರಸಾದ್
ಜಪಾನ್ ತನ್ನ ತಾಂತ್ರಿಕ ಪ್ರಗತಿ ಮತ್ತು ಸುಂದರ ವಾಸ್ತುಶಿಲ್ಪಕ್ಕೆ ಜಗತ್ತಿನಾಧ್ಯಂತ ಹೆಸರುವಾಸಿಯಾಗಿರುವ ದೇಶ. ಇಲ್ಲಿನ 'ಟೋಕಿಯೋ ಸ್ಕೈ ಟ್ರೀ' ಸಾಕಷ್ಟು ಪ್ರಸಿದ್ಧಿ ಗಳಿಸಿದೆ. ಇದು ಕೇವಲ ಒಂದು ಗೋಪುರವಾಗಿ ಕಂಡರೂ ಜಪಾನಿನ ಆಧುನಿಕತೆಯ ಸಂಕೇತವಾಗಿದೆ.
ಜಪಾನಿನ ರಾಜಧಾನಿ ಟೋಕಿಯೋದ ಸುಮಿದಾ ಎಂಬಲ್ಲಿ ಈ ಗೋಪುರವಿದ್ದು, ವಿಶ್ವದ ಅತಿ ಎತ್ತರದ ಸೆಲ್ಫ್ ಸಪೋರ್ಟಿಂಗ್ ಟವರ್‌ಗಳಲ್ಲಿ ಒಂದಾಗಿದೆ. ಇದರ ಎತ್ತರ ಒಟ್ಟು 634 ಮೀಟರ್‌ಗಳು! 2012ರಿಂದ ಈ ಗೋಪುರಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: ಮಾಲ್ ಮಾಲ್ ಮಾಲ್..ಎಲ್ನೋಡಿ ಮಾಲ್
'634' ಎಂಬ ಸಂಖ್ಯೆಯನ್ನು ಜಪಾನಿ ಭಾಷೆಯಲ್ಲಿ 'ಮು-ಸಾ-ಶಿ' ಎಂದು ಉಚ್ಚರಿಸಲಾಗುತ್ತದೆ. ಇದು ಈ ಪ್ರದೇಶದ ಹಳೆಯ ಹೆಸರೂ ಹೌದು. ಹಾಗಾಗಿ ಈ ಹೆಸರಿಡುವ ಮೂಲಕವೇ 'ಮುಸಾಶಿ'ಯನ್ನು ಸ್ಮರಿಸಲಾಗುತ್ತಿದೆ.

ಜಪಾನ್ ಭೂಕಂಪ ಪೀಡಿತ ಪ್ರದೇಶ. ಹಾಗಾಗಿ ಈ ಗೋಪುರವನ್ನು ಭೂಕಂಪಗಳನ್ನು ತಡೆದುಕೊಳ್ಳುವಂತೆ ಅತ್ಯಾಧುನಿಕ 'ಶಿಂಬಾಶಿರಾ-ಸೇವಿಂಗ್' (Shinbashira-seishi) ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಭೂಕಂಪಕ್ಕೂ ಅಲುಗಾಡದಂತೆ ಮತ್ತು ಅದಕ್ಕೆ ಪ್ರತಿರೋಧಕವಾಗಿ ನಿರ್ಮಾಣವಾಗಿರುವ ಈ ಗೋಪುರ ಇಲ್ಲಿನ ಅತ್ಯಾಧುನಿಕ ಎಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿಯಾಗಿದ್ದು, ರಾತ್ರಿ ಹೊತ್ತಿಗೆ ಸಾಂಪ್ರದಾಯಿಕ ಜಪಾನಿ ಸೌಂದರ್ಯದೊಂದಿಗೆ ನೀಲಿ ಮತ್ತು ನೇರಳೆ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುತ್ತದೆ.
ಸ್ಕೈ ಟ್ರೀನಲ್ಲಿ ಎರಡು ಪ್ರಮುಖ ವೀಕ್ಷಣಾ ವೇದಿಕೆಗಳಿವೆ (Observation Decks)
ಟೆಂಬೋ ಡೆಕ್ (Tembo Deck): ಇದು 350 ಮೀಟರ್ ಎತ್ತರದಲ್ಲಿದ್ದು, ಇಡೀ ಟೋಕಿಯೋ ನಗರದ ವಿಹಂಗಮ ನೋಟವನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು.
ಟೆಂಬೋ ಗ್ಯಾಲರಿ (Tembo Galleria): ಇದು 450 ಮೀಟರ್ ಎತ್ತರದಲ್ಲಿದೆ. ಇಲ್ಲಿ ಒಂದು ಗಾಜಿನ ಸುರಂಗ ಮಾರ್ಗವಿದ್ದು, ಅದರಲ್ಲಿ ನಡೆಯುವುದು ಪ್ರವಾಸಿಗರಿಗೆ ಆಕಾಶದಲ್ಲಿ ನಡೆಯುತ್ತಿರುವಂಥ ಅನುಭವ ನೀಡುತ್ತದೆ.
ನೀವು ಎಂದಾದರೂ ಜಪಾನ್‌ಗೆ ಭೇಟಿ ನೀಡಿದರೆ, ಈ ಅದ್ಭುತ ಸ್ಕೈ ಟ್ರೀಗೆ ಭೇಟಿ ನೀಡಲು ಮರೆಯಬೇಡಿ. ಇದು ಆಧುನಿಕ ಎಂಜಿನಿಯರಿಂಗ್ ಮತ್ತು ಜಪಾನಿನ ಸಂಸ್ಕೃತಿಯ ಅಪೂರ್ವ ಸಮ್ಮಿಲನ. ಹಾ , ಇಲ್ಲಿನ ಲಿಫ್ಟ್ ಹತ್ತಿದ ತಕ್ಷಣ ಕಿವಿಯಲ್ಲಿ ಗುಯ್ ಎನ್ನುವ ಸದ್ದು ಕೇಳುತ್ತದೆ ಅದಕ್ಕೆ ಗಾಬರಿಗೊಳ್ಳುವ ಅಗತ್ಯವಿಲ್ಲ. ನಿಮಿಷಕ್ಕೆ 600 ಮೀಟರ್ಸ್ ವೇಗದಲ್ಲಿ ಈ ಲಿಫ್ಟ್ ಚಲಿಸುತ್ತದೆ. 50 ಸೆಕೆಂಡುಗಳಲ್ಲಿ ನಿಮ್ಮನ್ನು 350 ಮೀಟರ್ಸ್ ಮೇಲಕ್ಕೆ ತಲುಪಿಸುತ್ತದೆ. ಈ ವೇಗದಿಂದಾಗಿ ಈ ಥರದ ಅನುಭವ ಆಗುವುದು ಸಹಜ.

ಸಂದರ್ಶನಕ್ಕೆ ಉತ್ತಮ ಸಮಯ
ಹವಾಮಾನವು ಸ್ಪಷ್ಟವಾಗಿದ್ದಾಗ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಆಗ ಇಲ್ಲಿಂದ ಜಪಾನಿನ ಪವಿತ್ರ ಪರ್ವತವಾದ 'ಮೌಂಟ್ ಫ್ಯೂಜಿ' (Mount Fuji) ಅನ್ನು ನೋಡಬಹುದು. ರಾತ್ರಿಯ ಸಮಯದಲ್ಲಿ ನಗರದ ದೀಪಗಳ ಅಲಂಕಾರವನ್ನು ಕಣ್ತುಂಬಿಕೊಳ್ಳಲೆಂದೇ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.