-ಡಾ. ಲತಾ ಎಸ್

ಕಾಂಬೋಡಿಯಾ ದೇಶ, ದಕ್ಷಿಣ ಪೂರ್ವ ಏಷ್ಯಾದಲ್ಲಿದ್ದು, ಥೈಲ್ಯಾಂಡ್, ಲಾವೋಸ್ ಹಾಗೂ ವಿಯೆಟ್ನಾಂನಿಂದ ಸುತ್ತುವರಿದಿದೆ. ಇಂದು ಇದು ತನ್ನೆಲ್ಲ ರಾಜಕೀಯ ದುರಂತಗಳು, ಯುದ್ಧಗಳು, ಮತಾಂತರಗಳು, ನರಮೇಧ, ಲ್ಯಾಂಡ್ ಮೈನ್ಸ್ ಇನ್ನೂ ಹತ್ತು ಹಲವಾರು ಹಲ್ಲೆಗಳಿಂದ ತತ್ತರಿಸಿ ಕಳೆದ ಇಪ್ಪತ್ತು ವರ್ಷಗಳಿಂದ ಚೇತರಿಸಿಕೊಳ್ಳುತ್ತಿರುವ ಬಡ (ಬಡಪಾಯಿ?) ದೇಶ! ಆದರೆ ನನಗೆ ವೈಯಕ್ತಿಕವಾಗಿ ಮತ್ತು ನನ್ನಂಥ ಅನೇಕ ಪ್ರವಾಸಿಗರಿಗೆ ಇದು ಸೆಳೆಯುವುದು ಇದರ ಇತಿಹಾಸದಿಂದ, ಅದೂ ಹತ್ತು ಶತಮಾನಗಳ ಹಿಂದಿನ ಇತಿಹಾಸದಿಂದ. ಅದೇ ಇತಿಹಾಸ ಇಂದು ಇವರ ಮುಖ್ಯ ಜೀವನೋಪಾಯವೂ ಹೌದು.

ಇದನ್ನೂ ಓದಿ: ಸಹ್ಯಾದ್ರಿಯ ಶಿಖರದಲ್ಲಿ ಮಹಾಬಲೇಶ್ವರ ಸನ್ನಿದಾನ

ಬಹಳ ವರ್ಷಗಳಿಂದಲೇ ಕಾಂಬೋಡಿಯಾದಲ್ಲಿರುವ ಈ ಅಂಕೊರ್ ವಾಟ್ ನ ದೇವಾಲಯಗಳ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದೆ. ನಮ್ಮ ದಕ್ಷಿಣ ಭಾರತದ ರಾಜರು ಕಾಂಬೋಡಿಯಾದಷ್ಟು ದೂರಕ್ಕೆ ಹೋಗಿ ಒಂದಲ್ಲ ಎರಡಲ್ಲ, ಸಾವಿರಾರು ದೇಗುಲಗಳನ್ನು ಕಟ್ಟಿದ್ದು ಹೇಗೆ, ಯಾಕೆ? ಅಲ್ಲಿಯವರೆಗೆ ಸಾಮ್ರಾಜ್ಯ ಹರಡಿತ್ತೇ, ಅಷ್ಟು ದೂರ ಕಾಡಿನ ಮಧ್ಯೆ ಅಂಥ ಬೃಹತ್ ಕಲ್ಲುಗಳನ್ನು ಹೊತ್ತುಕೊಂಡು ಹೋಗಿದ್ದೆಂತು? ಎಷ್ಟು ಜನರು, ಆನೆ ಇತ್ಯಾದಿಗಳು ಇದಕ್ಕೆ ತಮ್ಮ ಜೀವ ತೆತ್ತಿರಬಹುದು ಹೀಗೆ ಹತ್ತು ಹಲವು ಪ್ರಶ್ನೆಗಳು ಈ ಜಾಗಕ್ಕೆ ಹೋಗಬೇಕೆಂಬ ಹಂಬಲವನ್ನು ಹೆಚ್ಚಿಸುತ್ತಿದ್ದವು. ಅದೇನೋ ಕಾಲ ಕೂಡಿ ಬಂದಿರಲಿಲ್ಲ. ಈ ವರ್ಷದ ಸಂಕ್ರಾಂತಿಯನ್ನು ಇಲ್ಲಿ ಆಚರಿಸಲು ಸಿಕ್ಕಿದ್ದು ಒಂದು ಸೌಭಾಗ್ಯ! ಮುಂಜಾವಿನಲ್ಲಿ ನಿಂತು ಅಂಕೊರ್ ವಾಟ್ ನ ಮುಖ್ಯ ದೇಗುಲದ ಹಿಂದಿನಿಂದ ಸೂರ್ಯೋದಯವನ್ನು ನೋಡಿದ ದೃಶ್ಯವಂತೂ ಅದ್ಭುತವಾಗಿತ್ತು. ಇದಕ್ಕಾಗಿಯೇ ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ಟೂರ್ ನಡೆಸುತ್ತಾರೆ. ಸೂರ್ಯರಶ್ಮಿಯು ದೇಗುಲದ ಕಲ್ಲುಗಳ ಮೇಲೆ ಹರಡಿ, ಸೂರ್ಯನ ಗೋಲವನ್ನು ಅವುಗಳ ಶಿಖರಗಳ ಮಧ್ಯೆ ನೋಡುವುದು ಒಂದು ದೈವಿಕ ಅನುಭವ.

Untitled design (32)

ಭಾರತೀಯ ಶಿಲ್ಪಿಗಳ ಕೈಚಳಕ?

ಇಲ್ಲೀಗ ಬಹುಪಾಲು ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಂಡು, ಕೆಲವು ದೇವಸ್ಥಾನಗಳಲ್ಲಿ ಬುದ್ಧನ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ. ಆದರೆ ಹೆಚ್ಚಾಗಿ ಕಾಣುವುದು ನಮ್ಮ ಹಂಪಿಯಂತೆ, ಪೂಜೆಯಿಲ್ಲದ.. ವಿಚ್ಛಿನ್ನ, ವಿರೂಪಗೊಂಡ ದೇಗುಲಗಳು ಮಾತ್ರ. ದೇವಾಲಯದ ಸುತ್ತ ಕಿಲೋಮೀಟರ್ ಗಳಷ್ಟು ಹರಡಿರುವ ಮಾನವನಿರ್ಮಿತ ಸರೋವರ, ನಮ್ಮ ಪೌರಾಣಿಕ ಕಥೆಗಳನ್ನು ಉದಾ: ಸಮುದ್ರ ಮಂಥನ, ರಾಮಾಯಣ, ಮಹಾಭಾರತ ಇತ್ಯಾದಿಗಳನ್ನು ಬಣ್ಣಿಸುವ ಕೆತ್ತನೆಗಳು, ಇವುಗಳನ್ನೆಲ್ಲ ಕಣ್ತುಂಬಿಸಿಕೊಳ್ಳುತ್ತಾ, ಗೈಡ್ ಹೇಳುತ್ತಿರುವ ಇತಿಹಾಸದ ಸೋಜಿಗದ ಹಾಗೂ ದುರಂತ ಕಥೆಗಳನ್ನು ಕೇಳುತ್ತಾ ಇದ್ದರೆ, ಸ್ವಲ್ಪ ಸಮಯ ನೀವು 10ನೆಯ ಶತಮಾನದಲ್ಲಿ ವಿಹರಿಸಿ ಬರುವುದಂತೂ ಖಂಡಿತ. 10-12ನೆಯ ಶತಮಾನದಲ್ಲಿ ರಾಜ ಸೂರ್ಯ ವರ್ಮನಿಂದ ಕಟ್ಟಲ್ಪಟ್ಟ ಈ ವಿಶಾಲ ದೇಗುಲಗಳ ಮೇಲೆ ಆಗಿನ ಚೋಳ ಹಾಗೂ ಚೇರರ ಶೈಲಿಯ ಪ್ರಭಾವವಿದೆ. ಇವುಗಳನ್ನು ಭಾರತೀಯ ರಾಜರೇ ಕಟ್ಟಿದರೇ ಅಥವಾ ಭಾರತೀಯ ಮೂಲದ ಖಮೇರ್ ವಂಶದ ರಾಜರು ಕಟ್ಟಿದರೇ ಎಂಬುದರ ಬಗ್ಗೆ ಇನ್ನೂ ಗೊಂದಲಗಳಿವೆ. ಕಾಲಕ್ರಮೇಣ ಬದಲಾದ ರಾಜರು, ಬೌದ್ಧ ಮತಾಂತರ ಹಾಗೂ ಬೌದ್ಧ ರಾಜರಿಂದಾದ ನಿರ್ಲಕ್ಷ್ಯ, ಥಾಯ್ ರಾಜರ ನಡುವಿನ ಯುದ್ಧ ಮುಂತಾದುವುಗಳಿಂದ ದೇಗುಲಗಳ ಮೇಲೆ ಕಾಳಜಿ ಇಲ್ಲದೇ ಮರಗಳು ಬೆಳೆದು, ಕೆಲವು ಆಕೃತಿಗಳು ನೀರಿನಿಂದ ಮುಚ್ಚಿಯೂ ಹೋದವು. 17-18ನೆಯ ಶತಮಾನದಲ್ಲಿ ಫ್ರೆಂಚ್ ಮತ್ತು ಪೋರ್ಚುಗೀಸ್ ಇತಿಹಾಸ ತಜ್ಞರ ಕಣ್ಣಿಗೆ ಬಿದ್ದು ಇವುಗಳಿಗೆ ಮತ್ತೆ ಜೀವ ತುಂಬಲಾಯಿತು. 1992ರಲ್ಲಿ ಇದನ್ನು ಯುನೆಸ್ಕೊ ವಿಶ್ವ ಹೆರಿಟೇಜ್ ಸೈಟ್ ಎಂದು ಘೋಷಿಸಲಾಯಿತು. ಈ ಅಂಕೊರ್ ವಾಟ್ ಇರುವ ಊರಾದ ಸಿಯಾಮ್ ರೀಪ್ ನಲ್ಲಿ ಮುಖ್ಯವಾದ ದೇವಾಲಯಗಳು ಕಾಣಸಿಗುತ್ತವೆ. ಇನ್ನು ಕೆಲವು ಸಿಯಾಮ್ ರೀಪ್ ನ ಹೊರಗಿವೆ. ಒಂದು ಉದಾಹರಣೆ- ಬಂತೆ ಸ್ರೇಯ್. ಕಾಂಬೋಡಿಯಾದ ರಾಜಧಾನಿ ನೋಮ್ ಪೆನ್ (Phnom Penh) ಆದರೂ, ಈ ದೇಗುಲಗಳನ್ನು ನೋಡಲು ನೀವು ಹೋಗುವುದಾದರೆ, ಸಿಯಾಮ್ ರೀಪ್ ಗೆ ಹೋಗುವುದು ಉತ್ತಮ.

ಲೇಡಿ ಜಕಣಾಚಾರಿಯ ಕುಸುರಿ!?

ಈ ದೇವಾಲಯಗಳ ವಿನ್ಯಾಸ ಬ್ರಹ್ಮಾಂಡದ ಪ್ರತಿಬಿಂಬ ಎನ್ನಲಾಗುತ್ತದೆ. ಸುತ್ತುವರಿದ ನೀರಿನ ಮಧ್ಯೆ ಇರುವ ಗೋಪುರಗಳು ಮೇರು ಶಿಖರವನ್ನು ಪ್ರತಿಬಿಂಬಿಸುತ್ತವೆ. ಪ್ರಮುಖ ಹಾಗೂ ಅತಿ ಪ್ರಸಿದ್ಧವಾದ 'ಅಂಕೊರ್ ವಾಟ್' ದೇವಾಲಯವನ್ನು ಸೇರಿ, 'ಬಯಾನ್', 'ತಾ ಪ್ರಾಮ್', 'ಬಂತೆ ಸ್ರೇಯ್', 'ಪ್ರೆಹ್ ಕಾನ್' ಎಂಬ ಇನ್ನಿತರ ದೇವಾಲಯಗಳೂ ಪ್ರವಾಸಿಗರಲ್ಲಿ ಪ್ರಸಿದ್ಧ.

Untitled design (34)

ನಮ್ಮ ಬೇಲೂರು, ಹಳೇಬೀಡಿನ ಕೆತ್ತನೆಯ ಚಾಕಚಕ್ಯತೆಯಿಲ್ಲದಿದ್ದರೂ, ತಮ್ಮ ಬೃಹತ್ ಆಕಾರದಿಂದ ಹಾಗೂ ಎಲ್ಲ ಪ್ರತಿಕೂಲತೆಗೂ ಸೆಡ್ಡುಗೊಟ್ಟು ನಿಂತ ಪರಿಯಿಂದ ಮೋಡಿ ಮಾಡುತ್ತವೆ. ‘ಬಂತೆ ಸ್ರೇಯ್’ ಎಂಬಂಥ ಕೆಲವು ದೇಗುಲಗಳಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆಗಳು ಕಾಣಸಿಕ್ಕವು. ಇದು ಇಷ್ಟು ಸೂಕ್ಷ್ಮವಾಗಿರುವುದರಿಂದ ಯಾರೋ ಹೆಣ್ಣು ಶಿಲ್ಪಿಯ ಕೆತ್ತನೆಯೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರಂತೆ! ಅವನು ನಮ್ಮ ಜಕಣಾಚಾರಿಯ ಕೆಲಸ ನೋಡಿರಲಿಕ್ಕಿಲ್ಲ. ನೋಡಿದ್ದಿದ್ದರೆ ಅವರ ಅಭಿಪ್ರಾಯ ಬದಲಾಗಿರುತ್ತಿತ್ತು. ಆದರೆ ಇಲ್ಲಿನ ಗೈಡ್ ಇದು ಹೆಣ್ಣು ಶಿಲ್ಪಿಯ ಕೆಲಸ ಎಂಬುದಕ್ಕೆ ಇನ್ನಷ್ಟು ಕಾರಣಗಳನ್ನು ಕೊಡುತ್ತಾರೆ. ಎಲ್ಲ ದೇವಸ್ಥಾನಗಳು ಕಪ್ಪು ಶಿಲೆಯಾದರೆ, ಇದು ಗುಲಾಬಿ ಬಣ್ಣದಲ್ಲಿದೆ. ಹಾಗೇ ಹೆಂಗಸಿನಂತೆ ಸಣ್ಣ ಆಕಾರ ಹೊಂದಿದೆ. ಇವೆಲ್ಲ ಹೆಣ್ಣು ಶಿಲ್ಪಿಯ ಕೆಲಸ ಎಂಬುದಕ್ಕೆ ಸಾಕ್ಷಿ ಅನುತ್ತಾನೆ ಗೈಡ್. ಆದರೆ ಅವು ಸಮಂಜಸ ಪುಷ್ಟೀಕರಣ ಅನಿಸುವುದಿಲ್ಲ. ಏನೇ ಇರಲಿ, ಈ ದೇವಾಲಯ ಬೇರೆಲ್ಲ ದೇಗುಲಗಳಿಗಿಂತ ಹೆಚ್ಚು ಕುಸುರಿ ಕೆಲಸ ಹೊಂದಿದ್ದು ಹೆಚ್ಚಾಗಿ ಛಿದ್ರವಾಗದೇ ಉತ್ತಮ ಸ್ಥಿತಿಯಲ್ಲಿತ್ತು. ಆಕರ್ಷಣೀಯವಾಗಿದೆ.

ಪುನರುಜ್ಜೀವನಕ್ಕೆ ಭಾರತ ಸಾಥ್!

ಅತಿ ಹೆಚ್ಚು ಧ್ವಂಸವಾದ ಇನ್ನೊಂದು ದೇವಾಲಯ ಅಂದ್ರೆ ಅದು ‘ತಾ ಪ್ರೊಮ್’. ಏಂಜೆಲಿನಾ ಜೂಲಿ ನಟಿಸಿದ ಟೂಂಬ್ ರೈಡರ್ ನಿಂದ ಹೆಚ್ಚು ಪ್ರಸಿದ್ಧಿ ಪಡೆದ ಈ ದೇಗುಲ ನಿಜಕ್ಕೂ ವಿಭಿನ್ನ ರೀತಿಯಲ್ಲಿ ಮನಸೆಳೆಯುತ್ತದೆ. ತನ್ನ ಕಬಂಧ ಬಾಹುಗಳಿಂದ ಮರಗಳು ಆ ದೇಗುಲವನ್ನು ಅಪ್ಪಿ ಹಿಡಿದಿವೆಯೇ, ಕತ್ತು ಹಿಸುಕುತ್ತಿವೆಯೋ, ಎಂಬಂತೆ ಕಾಣುತ್ತದೆ. ಕಣ್ಣರಳಿಸಿ ನೋಡುವಂತೆ ಮಾಡುತ್ತವೆ!ಇಲ್ಲಿನ ಮರಗಳ ಕಾಂಡಗಳು ‘ಅನಕೊಂಡ’ ಹಾವನ್ನು ನೆನಪಿಸುವಷ್ಟು ಬೃಹತ್ತಾಗಿವೆ.

ಎರಡು ನಾಗಗಳು ಪರಸ್ಪರ ಸುತ್ತಿಕೊಂಡು, ಸುತ್ತ ನೀರಿನಿಂದ ಆವೃತವಾಗಿರುವ 'ನೀಕ್ ಪಿಯಾನ್' ಎಂಬ ಇನ್ನೊಂದು ದೇವಸ್ಥಾನ ಬಹಳ ವಿಶಿಷ್ಟವಾಗಿದೆ. ಇಲ್ಲಿ ನಾಲ್ಕು ದಿಕ್ಕಿನಲ್ಲಿ ಒಂದೊಂದು ಪ್ರಾಣಿ(ಮಾನವಮುಖ, ಕುದುರೆ, ಸಿಂಹ ಹಾಗೂ ಆನೆ)ಯನ್ನಿರಿಸಿ, ಪೃಥ್ವಿ ಅಗ್ನಿ ಜಲ ಹಾಗೂ ವಾಯು ತತ್ತ್ವವನ್ನು ದರ್ಶಿಸಲಾಗಿದೆ. ಒಟ್ಟಿನಲ್ಲಿ ಇಂಥ ಅನೇಕ ವಿಭಿನ್ನ ದೇವಾಲಯಗಳನ್ನು ನೋಡುತ್ತಾ, ಗೈಡ್ ಇವುಗಳ ಪುನರುಜ್ಜೀವನಕ್ಕೆ (restoration) ಹೇಗೆ ಭಾರತ ಸಹಾಯ ಮಾಡುತ್ತಿದೆ ಎಂದು ಹೇಳುವುದನ್ನು ಕೇಳುವಾಗ ಭಾರತೀಯರಿಗೆ ಸಂತಸವಾಗುವುದು ಸಹಜ.

Untitled design (33)

ದೈಹಿಕ ಕ್ಷಮತೆ ಕಡ್ಡಾಯ!

‘ಬಂತೆ ಸ್ರೇಯ್’ ಎಂಬಂಥ ಕೆಲವು ದೇಗುಲಗಳಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆಗಳು ಕಾಣಸಿಕ್ಕವು. ಇದು ಇಷ್ಟು ಸೂಕ್ಷ್ಮವಾಗಿರುವುದರಿಂದ ಯಾರೋ ಹೆಣ್ಣು ಶಿಲ್ಪಿಯ ಕೆತ್ತನೆಯೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರಂತೆ! ಅವನು ನಮ್ಮ ಜಕಣಾಚಾರಿಯ ಕೆಲಸ ನೋಡಿರಲಿಕ್ಕಿಲ್ಲ. ನೋಡಿದ್ದಿದ್ದರೆ ಅವರ ಅಭಿಪ್ರಾಯ ಬದಲಾಗಿರುತ್ತಿತ್ತು. ಆದರೆ ಇಲ್ಲಿನ ಗೈಡ್ ಇದು ಹೆಣ್ಣು ಶಿಲ್ಪಿಯ ಕೆಲಸ ಎಂಬುದಕ್ಕೆ ಇನ್ನಷ್ಟು ಕಾರಣಗಳನ್ನು ಕೊಡುತ್ತಾರೆ.

ಕೆಲವರಿಗೆ ಬರೀ ಛಿದ್ರವಾದ, ವಿರೂಪಗೊಂಡ ಕಲ್ಲುಗಳೆನಿಸಬಹುದು. ಆದರೆ ಕಲ್ಲುಗಳು ಹೇಳುವ ಕಥೆಗಳಿಗೆ ಕಿವಿ ಕೊಡುವವರಿಗೆ ಇದೊಂದು ಅದ್ಭುತ ಸ್ಥಳ. ದಿನವೂ ಅಂದಾಜು 12000 ಸ್ಟೆಪ್ಸ್ ನಡೆದು ಇವೆಲ್ಲವನ್ನೂ ನೋಡಬೇಕೆಂಬ ಅರಿವು ಪ್ರವಾಸಿಗರು ತಿಳಿದಿರುವುದು ಅತ್ಯಗತ್ಯ. ಬರೀ ಅನುಭವ/ಅನುಭೂತಿಯಷ್ಟೇ ಅಲ್ಲ, ಕಾಡಿನ ಮರಗಳು, ಹಸಿರೆಲೆಗಳು, ಕಲ್ಲುಗಳ ಬಣ್ಣ, ಮೇಲೆ ಕಟ್ಟಿದ ಪಾಚಿ, ನೀರಲ್ಲಿ ಪ್ರತಿಫಲನ ಎಲ್ಲವೂ ನಿಮಗೆ ಉತ್ತಮ ಛಾಯಾಚಿತ್ರಗಳನ್ನು ದೊರಕಿಸುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಈ ದೇವಾಲಯಗಳು ಕೇವಲ ಅವಶೇಷಗಳಲ್ಲ. ಕಾಂಬೋಡಿಯಾದ ಇತಿಹಾಸವೆಂಬುದು, ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಮೆಟ್ಟಿ ನಿಲ್ಲುವ ಸ್ಥೈರ್ಯ ಹಾಗೂ ಜೀವನಪ್ರೀತಿಯ ದ್ಯೋತಕವೂ ಹೌದು.

ಲೇಖಕರು: ವೈದ್ಯರು ಮತ್ತು ಗಾಲ್ಫ್ ಪಟು