Wednesday, May 13, 2026
Wednesday, May 13, 2026

ನೀರಿನ ಮೇಲೆ ನಡೆಯುತಾ… ಹಿಮದ ನಡುವೆ ಆಡುತಾ…

ಹ್ಯಾಮಿಲ್ಟನ್ ಹತ್ತಿರ ಟಿಫ್ಫನಿ ಫಾಲ್ಸ್ ಎಂಬ ಸಣ್ಣ ಜಲಪಾತವಿದೆ. ಈ ಜಲಪಾತ ಚಳಿಗಾಲದಲ್ಲಿ ಹಿಮದ ಗಡ್ಡೆಯಾಗಿರುತ್ತದೆ. ಕಾರು ನಿಲ್ಲಿಸಿ 360 ಮೀಟರ್ ದೂರ ನಡೆದರೆ ಈ ಜಲಪಾತ ಕಾಣಿಸುತ್ತದೆ. ನೀರು ಚಳಿಗಾಲದಲ್ಲಿ ಹಿಮದ ಗಡ್ಡೆಯಾಗಿರುವಾಗ ನಾವು ಅದರ ಮೇಲೆ ನಡೆಯಬಹುದು. ಜಲಪಾತದ ತನಕ ಹೋಗಬಹುದು.

  • ಆರ್‌. ಗುರುರಾಜ್‌

ಇದು ನಮ್ಮ ಜೀವನದ ಮೊದಲ ವಿದೇಶ ಪ್ರವಾಸ. ಕೆನಡಾಕ್ಕೆ ಬರಬೇಕೆಂದು ಮಗಳು, ಅಳಿಯ ಹೇಳಿದ್ದರು. ತಯಾರಿ ಏನು ಬೇಕು ಎಂದು ಹಲವರ ಸೂಚನೆ, ಸಲಹೆಗಳನ್ನು ಪಡೆದು ನಾವೂ ತಯಾರಾಗಿ ಹೊರಟು ಕೆನಾಡ ತಲುಪಿದ್ದೆವು.

ಕೆನಡಾದಲ್ಲಿ ನವೆಂಬರ್ -ಫೆಬ್ರವರಿ ಕೊನೆಯ ತನಕ ಚಳಿಗಾಲ. ಅದರಲ್ಲೂ ಡಿಸೆಂಬರ್ ಮಧ್ಯದಿಂದ ಫೆಬ್ರವರಿ ಮಧ್ಯದವರೆಗೆ ಕೊರೆಯುವ ಚಳಿ. ಹಿಮ ಸುರಿಯುತ್ತಿರುತ್ತದೆ. ಆ ಸಮಯದಲ್ಲಿ ನಾವು ಅಲ್ಲಿಗೆ ಬಂದರೆ ಚೆನ್ನಾಗಿರುತ್ತದೆ, ನೋಡಲೂ ಸಾಕಷ್ಟು ಸ್ಥಳಗಳು ಇರುತ್ತವೆ, ಕೆನಡಾವನ್ನು ಈ ಕಾಲದಲ್ಲಿ ಒಂದು ಬಾರಿ ನೋಡಲೇಬೇಕೆಂದು ನಮ್ಮ ಅಳಿಯ ನಮ್ಮನ್ನು ಅಲ್ಲಿಗೆ ಕರೆದಿದ್ದರು. ನಾವು ಡಿಸೆಂಬರ್ ಕೊನೆಯ ವಾರದಿಂದ ನಾಲ್ಕು ತಿಂಗಳುಗಳ ಕಾಲ ಅಲ್ಲಿರಬೇಕೆಂದು ನಿರ್ಧರಿಸಿ, ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಹೊರಟಿದ್ದೆವು.

ಇದನ್ನೂ ಓದಿ: ಬ್ರಿಟನ್‌ ನೆಲದಲ್ಲಿ ರೈತರ ಸಾಕುಪ್ರಾಣಿಗಳ ಫಾರ್ಮ್‌

ನಾವು ಕೆನಡಾದಲ್ಲಿ ಇಳಿದಾಗ ಕೊರೆಯುವ ಚಳಿ ಹಾಗೂ ಮಳೆಯೂ ಇತ್ತು. ವಿಮಾನ ನಿಲ್ದಾಣದಿಂದ ಹೊರಗೆ ಬಂದು ಕಾರು ಹತ್ತುವಷ್ಟರಲ್ಲಿ ಕೆನಡಾದ ಚಳಿಯ ಪರಿಚಯವಾಯ್ತು. ಮಾರನೆಯ ದಿನ ಮನೆಯ ಹತ್ತಿರವೇ ಇದ್ದ ʻಓಂಟಾರಿಯೊ ಲೇಕ್‌ʼಗೆ ಹೋದೆವು. ಬಿಸಿಲು ಇದ್ದರೂ ಚಳಿ ಇತ್ತು. ಹಾಗಾಗಿ ಅದಕ್ಕೆ ಬೇಕಾದ ಉಡುಗೆಯನ್ನು ತೊಟ್ಟು ಕಾಲು ನಡಿಗೆಯಲ್ಲೇ ಹೋದೆವು. ಅಲ್ಲಿ ಜನರಿಗೆ ಓಡಾಡಲು, ಕುಳಿತಿಕೊಳ್ಳಲು ಹಾಗೂ ಅಲ್ಲಿಂದ ದ್ವೀಪಗಳಿಗೆ ಹೋಗಲು ದೋಣಿಯ ವ್ಯವಸ್ಥೆ ಮಾಡಿದ್ದಾರೆ. ಎಲ್ಲ ವ್ಯವಸ್ಥೆಯೂ ಬಹಳ ಅಚ್ಚುಕಟ್ಟು. ಅಲ್ಲಿಂದ ನಾವು ʻನಯಾಗರ ಆನ್‌ ದ ಲೇಕ್‌ʼ ಎಂಬ ಜಾಗಕ್ಕೆ.

Untitled design - 2026-05-13T191841.123

ʻನಯಾಗರ ಆನ್‌ ದ ಲೇಕ್‌ʼ

ಇದು ನಯಾಗರ ಫಾಲ್ಸ್ಗೆ ಹತ್ತಿರದಲ್ಲಿದೆ. ನಾವು ಡಿಸೆಂಬರ್ ಅಂತ್ಯಕ್ಕೆ ಹೋಗಿದ್ದರಿಂದ ಹೊಸ ವರ್ಷದ ಆಗಮನಕ್ಕೆ ಇಡೀ ಹಳ್ಳಿ ಸಿಂಗಾರಗೊಂಡಿತ್ತು. ಎಲ್ಲಿ ನೋಡಿದರೂ ಹಿಮ ತುಂಬಿದ ರಸ್ತೆಗಳು, ದೀಪಗಳಿಂದ ಅಲಂಕೃತ ರಸ್ತೆಗಳು, ಕಟ್ಟಡಗಳು ಎಲ್ಲವೂ ನಯನ ಮನೋಹರವಾಗಿತ್ತು. ಆ ಚಳಿಯಲ್ಲಿ, ಹಿಮ ತುಂಬಿದ ರಸ್ತೆಯ ಮೇಲೆ, ಬಿಸಿಬಿಸಿ ಕಾಫಿ ಹೀರುತ್ತಾ ಓಡಾಡುವುದು ಒಂದು ಹಿತವಾದ ಅನುಭವ.

ನಯಾಗರ ಫಾಲ್ಸ್

ನಯಾಗರ ಫಾಲ್ಸ್, ಎಲ್ಲರಿಗೂ ತಿಳಿದಿರುವ ಜಾಗ. ಅದರ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು ಅನಿಸುತ್ತದೆ. ಡಿಸೆಂಬರ್ ಚಳಿ, ಎಲ್ಲಾ ಗಿಡಗಳ ಮೇಲೆ ಮಂಜು, ಹಿಮಚ್ಛಾದಿತ ರಸ್ತೆಗಳು, ಎಲ್ಲಿ ನೋಡಿದರೂ ಹಿಮ ಮತ್ತು ಮಂಜಿನ ರಾಶಿ, ನದಿಯಲ್ಲಿ ಅಲ್ಲಲ್ಲಿ ಹರಿದು ಹೋಗುತ್ತಿದ್ದ ಮಂಜು ಗಡ್ಡೆಗಳು, ನೀರಿನ ರಭಸಕ್ಕೆ ಮೇಲೆ ಚಿಮ್ಮುತ್ತಿದ್ದ ನೀರಿನ ಹನಿಗಳು ಇಂಥ ವಾತಾವರಣದಲ್ಲಿ ನಯಾಗರ ಫಾಲ್ಸ್ ನೋಡುವುದೇ ಚೆಂದ.

Untitled design - 2026-05-13T191848.526

ಬ್ಲೂ ಮೌಂಟೆನ್

ಸ್ಕೀಯಿಂಗ್ ಮಾಡುವವರಿಗೆ ಬ್ಲೂ ಮೌಂಟೆನ್‌ ಅದ್ಭುತ ತಾಣ. ಈ ಸಣ್ಣ ಪರ್ವತದ ಕೆಳಗೆ ಒಂದು ಸುಂದರ ಮತ್ತು ಪುಟ್ಟ ಹಳ್ಳಿಯಿದೆ. ಸ್ಕೀಯಿಂಗ್ ಮಾಡುವವರು ಟಿಕೆಟ್ ಪಡೆದು ಗೊಂಡೋಲದಲ್ಲಿ ಪರ್ವತದ ಮೇಲೆ ಹೋಗಬೇಕು. ಅಲ್ಲಿಂದ ಕೆಳಗೆ ಸ್ಕೀಯಿಂಗ್ ಮಾಡಿಕೊಂಡೇ ಬರಬೇಕು. ನಾವು ಇಂಥ ಸ್ಥಳವನ್ನು ಸಿನಿಮಾಗಳಲ್ಲಿ ನೋಡಿದ್ದೆವು. ಪ್ರತ್ಯಕ್ಷವಾಗಿ ನೋಡಿದ್ದು ಇದೇ ಮೊದಲು. ಸ್ಕೀಯಿಂಗ್‌ ಮಾಡದವರು ಈ ಹಳ್ಳಿಯ ರಸ್ತೆಗಳಲ್ಲಿ ಓಡಾಡಿ, ಅಂಗಡಿ ಮುಂಗಟ್ಟುಗಳನ್ನು ನೋಡುತ್ತಾ ಕಾಲ ಕಳೆಯಬಹುದು.

ಡಂಕನ್ಸ್‌ ಕೇವ್‌

ಬ್ಲೂ ಮೌಂಟೇನ್‌ನಿಂದ ಅನತಿ ದೂರದಲ್ಲಿ ಡಂಕನ್ಸ್ ಕೇವ್‌ ಇದೆ. ಇಲ್ಲಿ ಹಿಮ ತುಂಬಿದ ರಸ್ತೆಯಲ್ಲೆ ಕಾರುಗಳು ಹೋಗಬೇಕು. ಎಲ್ಲೆಡೆ ಹಿಮ ಹಾಗೂ ಮಂಜು ಗಡ್ಡೆಗಳು. ಇದರ ಮಧ್ಯೆ ನಾವು ಬೇಕಾದಷ್ಟು ದೂರ ನಡೆದು ಹೋಗಬಹುದು. ಒಂದು ನಿರ್ದಿಷ್ಟ ದಾರಿ ಇಲ್ಲ. ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ.

ನೀರಿನ ಮೇಲೆ ನಡೆಯಬಹುದು

ಹ್ಯಾಮಿಲ್ಟನ್ ಹತ್ತಿರ ಟಿಫ್ಫನಿ ಫಾಲ್ಸ್ ಎಂಬ ಸಣ್ಣ ಜಲಪಾತವಿದೆ. ಈ ಜಲಪಾತ ಚಳಿಗಾಲದಲ್ಲಿ ಹಿಮದ ಗಡ್ಡೆಯಾಗಿರುತ್ತದೆ. ಕಾರು ನಿಲ್ಲಿಸಿ 360 ಮೀಟರ್ ದೂರ ನಡೆದರೆ ಈ ಜಲಪಾತ ಕಾಣಿಸುತ್ತದೆ. ನೀರು ಚಳಿಗಾಲದಲ್ಲಿ ಹಿಮದ ಗಡ್ಡೆಯಾಗಿರುವಾಗ ನಾವು ಅದರ ಮೇಲೆ ನಡೆಯಬಹುದು. ಜಲಪಾತದ ತನಕ ಹೋಗಬಹುದು. ನಾವು ಅಲ್ಲಿಗೆ ಹೋದಾಗ ಸಾಹಸಿಗರು ಜಲಪಾತವನ್ನು ಹತ್ತುತ್ತಿದ್ದರು.

ಹಿರಿಯ ನಾಗರಿಕರ ದ್ವೀಪ

ನಮ್ಮ ಮನೆಯ ಹತ್ತಿರವೇ ಇದ್ದ ವಾರ್ಡ್ಸ್‌ ದ್ವೀಪಕ್ಕೆ ದೋಣಿಯಲ್ಲಿ ಹೋಗಿದ್ದೆವು. ಬಿಸಿಲು ಇದ್ದರೂ ಮೈ ಕೊರೆಯುವ ಚಳಿ. ದ್ವೀಪ ತಲುಪಲು 20 ನಿಮಿಷಗಳು ಬೇಕು. ಅಲ್ಲಿ ವಾತಾವರಣ ಚೆನ್ನಾಗಿದ್ದರೆ ಸೂರ್ಯಸ್ತವನ್ನು ಆನಂದಿಸಬಹುದು. ಇಲ್ಲದಿದ್ದರೆ ದ್ವೀಪದ ಮೇಲೆ ಹಾಯಾಗಿ ಓಡಾಡಿಕೊಂಡು ಕಾಲ ಕಳೆಯಬಹುದು. ದ್ವೀಪದಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು ಇದ್ದಾರಂತೆ. ಇಲ್ಲಿ ಮನೆಯನ್ನು ಕೊಂಡುಕೊಳ್ಳಬೇಕಾದರೆ, ಇಂದಿನಿಂದ ಸುಮಾರು 80 ವರ್ಷ ಕಾಯಬೇಕಂತೆ.

ನೀರು ಮಂಜು ಗಡ್ಡೆಯಾಗಿದ್ದರಿಂದ ನಮ್ಮ ದೋಣಿಯ ಮುಂದೆ ಮತ್ತೊಂದು ದೋಣಿ ಆ ಮಂಜು ಗಡ್ಡೆಯನ್ನು ಒಡೆದುಕೊಂಡು ನಮ್ಮ ದೋಣಿಗೆ ದಾರಿ ಮಾಡಿಕೊಡುತ್ತದೆ. ಅದೇ ದಾರಿಯಲ್ಲಿ ನಮ್ಮ ದೋಣಿ ಹೋಗಬೇಕು. ದ್ವೀಪದಿಂದ ದೋಣಿಯಲ್ಲಿ ಹಿಂದಿರುಗುವಾಗ ನಮಗೆ ಟೊರೊಂಟೊ ನಗರದ ದೃಶ್ಯ ಕಾಣಿಸುತ್ತದೆ.

Untitled design - 2026-05-13T191834.190

ಯುನೆಸ್ಕೋ ಪಾರಂಪರಿಕ ಪಟ್ಟಿಯ ಕಾಲುವೆ

ಒಟ್ಟಾವ, ಕೆನಡಾದ ರಾಜಧಾನಿ. ಪಾರ್ಲಿಮೆಂಟ್ ಭವನದ ಸುತ್ತ -4 ಡಿಗ್ರಿ ಚಳಿಯಲ್ಲಿ ಸುತ್ತಾಡಿ ಅಲ್ಲಿಂದ ಸುಮಾರು 5 ಕಿಮೀ ದೂರದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಒಂದು ಕಾಲುವೆ ನೋಡಲು ಹೋದೆವು. ಚಳಿಗಾಲದಲ್ಲಿ ಈ ಕಾಲುವೆಯ ನೀರು ಹೆಪ್ಪುಗಟ್ಟುತ್ತದೆ. ಅದರ ಮೇಲೆ ಸ್ಕೀಯಿಂಗ್‌ ಆಡಲು ಮಕ್ಕಳು ಹಾಗೂ ದೊಡ್ಡವರಾದಿಯಾಗಿ ಸಂಸಾರ ಸಮೇತ ಬರುತ್ತಾರೆ. ಇದರ ಆಳ ಸುಮಾರು 60 ಅಡಿ ಎಂದು ಹೇಳಲಾಗುತ್ತದೆ. ನೀರು ಹೆಪ್ಪುಗಟ್ಟಿದ ಮೇಲೆ ಓಡಾಡಲು ಹಾಗೂ ಆಟವಾಡಲು ಒಳ್ಳೆಯ ಮೈದಾನದಂತಾಗುತ್ತದೆ. ತಿಂಡಿಯ ಮಳಿಗೆಗಳೂ ಇರುತ್ತವೆ. ಬಿಸಿಬಿಸಿ ತಿಂಡಿ ಹಾಗೂ ಪೇಯಗಳನ್ನು ಸವಿಯುತ್ತಾ ಸ್ಕೀಯಿಂಗ್‌ ಮತ್ತು ಸುಂದರ ಸೂರ್ಯಸ್ತ ನೋಡುವ ಅನುಭವ ಅದ್ಭುತವಾಗಿರುತ್ತದೆ.

ಒಮೆಗಾ ವನ್ಯಜೀವಿ ಉದ್ಯಾನ

ಕಾಲುವೆಯ ನಂತರ ನಾವು ನೋಡಲು ಹೋಗಿದ್ದು ಪಾರ್ಕ್ ಒಮೇಗಾಕ್ಕೆ. ಇದು ಮಾಂಟ್ರಿಯಲ್ ಬಳಿ ಇರುವ ಒಂದು ವನ್ಯಜೀವಿ ಉದ್ಯಾನ. ಇಲ್ಲಿ ಬನ್ನೇರುಘಟ್ಟ ಸಫಾರಿ ನೆನಪಿಗೆ ಬರುತ್ತದೆ. ಇಲ್ಲಿ ಸುಮಾರು 13 ಕಿಮೀ ಸಫಾರಿ ಮಾಡಬಹುದು. ನಮ್ಮ ಕಾರಿನಲ್ಲೇ ಹೋಗಬಹುದು. ಒಳಗೆ ಹೋದ ತಕ್ಷಣ ಜಿಂಕೆಗಳು ನಮ್ಮ ಕಾರ್‌ನ ಹತ್ತಿರವೇ ಬರುತ್ತವೆ. ನಾವು ಅವುಗಳಿಗೆ ಗಜ್ಜರಿ ತಿನ್ನಿಸಬಹುದು. ಗಜ್ಜರಿಯನ್ನು ಇಲ್ಲೇ ಮಾರುತ್ತಾರೆ. ಜಿಂಕೆಗಳ ಜತೆಗೆ ಇಲ್ಲಿ ಕಾಡೆಮ್ಮೆ, ಕರಡಿ, ಕುದುರೆ, ದೊಡ್ಡ ಅಳಿಲುಗಳು ಹಾಗೂ ತೊಳಗಳನ್ನು ದೊಡ್ಡ ಪ್ರದೇಶದಲ್ಲಿ ಬೇಲಿ ಹಾಕಿ ಬಿಟ್ಟಿರುತ್ತಾರೆ. ಇಲ್ಲಿ ನಾವು ಗಾಜಿನ ಮನೆಯಲ್ಲಿ ನಿಂತು ಪಕ್ಕದಲ್ಲೇ ನಿಂತಿರುವ ತೊಳಗಳನ್ನು ನೋಡಬಹುದು. ಮಹಡಿ ಹತ್ತಿಯೂ ನೋಡಬಹುದು. ಹಿಮದ ರಾಶಿಯ ಮಧ್ಯದಲ್ಲಿ, ನಮ್ಮ ಕಾರಿನಲ್ಲೇ ಬೆಚ್ಚಗೆ ಕುಳಿತು ಈ ಪ್ರಾಣಿಗಳನ್ನು ನೋಡುವುದು ಒಂದು ಅದ್ಭುತವಾದ ಅನುಭವ ನೀಡುತ್ತದೆ.

ಮಾಂಟ್‌ಮೆರೆನ್ಸಿಯ ಮಾಯಾನೋಟ

ಕ್ಯುಬೆಕ್‌, ಇದನ್ನು ನೋಡಲು 2-3 ದಿನ ಬೇಕು. ಸೇಂಟ್ ಲಾರೆನ್ಸ್ ಎಂಬ ನದಿಯ ದಡದಲ್ಲಿ ಈ ನಗರವಿದೆ. ಸಿಂಗಾರಗೊಂಡಿರುವ ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಓಡಾಡುತ್ತಾ, ಫೈರ್‌ಮೌಂಟ್‌ ಎಂಬ ಪ್ರಸಿದ್ಧ ಹೊಟೇಲ್ಗೆ ಹೋದೆವು. ಮಾರನೆಯ ದಿನ ಮಾಂಟ್‌ಮೆರೆನ್ಸಿ ಎಂಬ ಒಂದು ಸುಂದರವಾದ ಸಣ್ಣ ಜಲಪಾತವನ್ನು ನೋಡಲು ಹೋದೆವು. ಜಲಪಾತದ ಮೇಲೆ ಹೋಗಲು ನಮ್ಮ ಕಾರಿನಲ್ಲೇ ಹೋಗಬಹುದು. ಕೇಬಲ್ ಕಾರ್ ಮುಖಾಂತರವೂ ಹೋಗಬಹುದು. ನಾವು ಕೇಬಲ್ ಕಾರಿನಲ್ಲಿ ಜಲಪಾತ, ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಹೋದೆವು. ಅಲ್ಲಿ ನದಿಯ ಮೇಲೆ ಒಂದು ತೂಗು ಸೇತುವೆ ಇದೆ. ಅದರ ಮೇಲೆ ನಿಂತು ಜಲಪಾತವನ್ನು ಮೇಲಿನಿಂದ ಕೆಳಗಿನ ತನಕ ನೋಡಬಹುದು. ನದಿಯ ರಭಸವನ್ನೂ ಆಸ್ವಾದಿಸಬಹುದು. ಜಲಪಾತವನ್ನು ಬೇರೆ ಬೇರೆ ಕೋನಗಳಿಂದ ನೋಡಲು ಕಾಲುದಾರಿಯೂ ಇದೆ. ನಾವು ಹೋದ ಹಿಂದಿನ ದಿನ ಹಿಮಪಾತವಾಗಿದ್ದರಿಂದ. ಆ ಹಿಮದಲ್ಲಿ ಆಟವಾಡಿ, ಜಲಪಾತವನ್ನು ಕಂಡು ಅಲ್ಲಿಂದ ತುಸು ದೂರದಲ್ಲಿದ್ದ ಕೆನಡಾ-22 ಮಿಲಿಟರಿ ರೆಜಿಮೆಂಟ್‌ ಇರುವ ಕೋಟೆಗೆ ಹೋದೆವು. ಗೈಡ್ ಸಹಾಯ ಪಡೆದು ಎಲ್ಲವನ್ನೂ ನೋಡಲು ಸುಮಾರು ಒಂದು ಗಂಟೆ ಬೇಕಾಗುತ್ತದೆ.

ಸಿಎನ್ ಟವರ್‌ನ 114ನೆಯ ಮಹಡಿಯಿಂದ

ಈ ಟವರ್‌ನ 114ನೆಯ ಮಹಡಿಗೆ ಲಿಫ್ಟ್‌ನಲ್ಲಿ ಹೋಗಲು ಹಿಡಿಯುವ ಸಮಯ 58 ಸೆಕೆಂಡ್ ಮಾತ್ರ. ವಾತಾವರಣ ಚೆನ್ನಾಗಿದ್ದರೆ ಅಲ್ಲಿಂದ ಸುಮಾರು 160 ಕಿಮೀ ದೂರದವರೆಗೆ ಟೊರೊಂಟೊ ನಗರವನ್ನು ನೋಡಬಹುದು. ಇದರಲ್ಲಿ ಒಂದು ಸುತ್ತು ಹಾಕಿ, ಅದರಲ್ಲೇ ಇರುವ ತಿರುಗುವ ಹೊಟೇಲಿನಲ್ಲಿ ಟೊರೊಂಟೊ ನಗರವನ್ನು ನೋಡುತ್ತಾ ತಿನಿಸುಗಳನ್ನು ಸವಿಯಬಹುದು. 114ನೆಯ ಮಹಡಿಯಲ್ಲಿ ಒಂದು ಗಾಜಿನ ಫ್ಲೋರ್‌ ಇದೆ. ಅದರ ಮೇಲೆ ನಿಂತು ಕೆಳಗಿನ ರಸ್ತೆ, ಅಲ್ಲಿ ಓಡಾಡುವ ವಾಹನ ಹಾಗೂ ಜನಗಳನ್ನು ನೋಡಬಹುದು. ಫೊಟೋ ತಗೆಸಿಕೊಳ್ಳಬಹುದು. ಮೈಗೆ ಹಗ್ಗ ಕಟ್ಟಿಸಿಕೊಂಡು ಕಟ್ಟಡದ ತುದಿಯಲ್ಲಿ ಓಡಾಡಲೂಬಹುದು.

ಈ ಪ್ರವಾಸಕ್ಕೆ ಯೋಜನೆ ಮಾಡಿದ್ದು ನಮ್ಮ ಅಳಿಯ, ಮಗಳು. ನಾವು ಯಾವಾಗ, ಯಾವ ಸ್ಥಳಕ್ಕೆ ಹೋಗಬೇಕು, ಎಲ್ಲಿ ಉಳಿದಿಕೊಳ್ಳಬೇಕು, ದಾರಿ ಹೇಗೆ, ಸಸ್ಯಾಹಾರ ಎಲ್ಲಿ ಸಿಗುತ್ತದೆ, ಉಡುಗೆ-ತೊಡುಗೆ ಹೀಗೆ ಎಲ್ಲವನ್ನೂ ವ್ಯವಸ್ತಿತವಾಗಿ ನೋಡಿಕೊಂಡು ಸುತ್ತಿಸಿದ್ದಾರೆ. ಕೆನಡಾದಲ್ಲಿ ಇವರ ಸ್ನೇಹಿತರು ತೋರಿದ ಪ್ರೀತಿ ಹಾಗೂ ವಿಶ್ವಾಸವನ್ನೂ ನಾವು ಮರೆಯುವಂತಿಲ್ಲ. ಈ ಎಲ್ಲಾ ಸುಂದರ ಅನುಭವವನ್ನು ಹೃದಯದಲ್ಲಿ ತುಂಬಿಕೊಂಡು ವಾಪಸ್ಸು ಹೊರಟೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...