Thursday, April 9, 2026
Thursday, April 9, 2026

ಅಮೆರಿಕದ ಸಂತೆಯಲ್ಲಿ ರಂಗು ರಂಗಿನ ತರಕಾರಿ

ಬಣ್ಣ ಬಣ್ಣದ ತರಕಾರಿಗಳನ್ನು ಮಾರುವ ಜಾಗದಲ್ಲಿ ಒಂದು ಸುತ್ತು ಹಾಕಿ ಬಂದರೆ ತರಕಾರಿಗಳಲ್ಲೂ ಇಷ್ಟು ವೈವಿಧ್ಯಗಳಿವಯೇ? ಎಂದೆನಿಸುವುದು ಹೌದು. ಅಂಥದ್ದೊಂದು ಅನುಭವ ನೀಡಿದ್ದು ಅಮೆರಿಕದ ಮಿನಿಯಾಪೊಲೀಸ್‌ ನಗರದ ರೈತರ ಸಂತೆ.

- ಪಿ. ಶ್ರೀಧರ್ ನಾಯಕ್

ಮಿನಸೋಟ ರಾಜ್ಯದ ಮಿನಿಯಾಪೊಲೀಸ್ ನಗರದ ರೈತರ ಸಂತೆ ಎಂದರೆ ಅದೊಂದು ಬಣ್ಣದ ಮೇಳ. ಅಮೆರಿಕಕ್ಕೆ ಹೋದ ಮರುದಿನ ಬೆಳಗ್ಗೆ ಅಲ್ಲಿಗೆ ಹೋದ ನನಗೆ ಹೂವಿನ ಬಣ್ಣದ ತರಕಾರಿ ಮತ್ತು ಅಪರೂಪದ ಹಣ್ಣುಗಳನ್ನು ಒಂದೇ ಕಡೆ ನೋಡಿದ ಅನುಭವವಾಯಿತು.

ಬಣ್ಣದ ಲೋಕ:

ಇಲ್ಲಿ ಮಾರಾಟಕ್ಕೆ ಇಟ್ಟ ಆಲೂಗಡ್ಡೆಯಲ್ಲೂ ಎಷ್ಟೊಂದು ಬಣ್ಣ, ಆಕಾರ. ಕೆಂಪು ಬಣ್ಣದ ಆಲೂಗಡ್ಡೆಯನ್ನು ಇದೇ ಮೊದಲ ಬಾರಿಗೆ ಇಲ್ಲಿ ನೋಡಿದೆ. ಸಣ್ಣ ಬುಟ್ಟಿಯಲ್ಲಿ ಮತ್ತು ಸಣ್ಣ ಬಕೆಟ್ ಗಳಲ್ಲಿ ತುಂಬಿಸಿಟ್ಟಿದ್ದರು. ಇಲ್ಲಿ ಕೆಜಿ ಲೆಕ್ಕದಲ್ಲಿ ಅಲ್ಲ, ಬುಟ್ಟಿ ಅಥವಾ ಬಕೆಟ್ ಲೆಕ್ಕದಲ್ಲಿ ಮಾರಾಟಕ್ಕೆ ಇಟ್ಟಿದ್ದರು. ನಮ್ಮ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ನಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸಣ್ಣ ರಾಶಿ ಹಾಕಿ ಮಾರಾಟಕ್ಕೆ ಇಡುತ್ತಿರುವುದು ನೆನಪಿಗೆ ಬಂತು.

ಇದನ್ನೂ ಓದಿ: ಇತಿಹಾಸ ಪುಟ್ಟದಾದರೂ ಕಥೆ ದೊಡ್ಡದು

ಈರುಳ್ಳಿಯಲ್ಲಿಯೂ ಇದೇ ರೀತಿ. ಗುಲಾಬಿ ಮತ್ತು ಬಿಳಿ ಈರುಳ್ಳಿ ನಮ್ಮಲ್ಲೂ ಇದೆ. ಆದರೆ ಈ ಗಾತ್ರದಲ್ಲಿ ಅಲ್ಲ. ಎರಡೂ ಬೊಗಸೆ ಸೇರಿಸಿ ಮಾತ್ರ ಹಿಡಿಯಲು ಸಾಧ್ಯವಿರುವ ದೊಡ್ಡ ಗಾತ್ರದ ಬಿಳಿ ಈರುಳ್ಳಿಗಳು ಇದ್ದವು. ಖಾರ ಕಡಿಮೆ. ಸಲಾಡ್ ಮಾಡಲು ಇದನ್ನು ಬಳಸುತ್ತಾರೆ ಎಂದು ಮಗ ರಾಹುಲ್ ವಿವರಿಸಿದ. ಟೊಮ್ಯಾಟೊಗಳಲ್ಲೂ ಎಷ್ಟೊಂದು ಆಕಾರಗಳಿದ್ದವು. ಕೆಲವು ಉದ್ದ, ಕೆಲವು ದುಂಡಗೆ, ಇನ್ನೂ ಕೆಲವು ದೊಡ್ಡ ಗಾತ್ರದವು. ದೊಣ್ಣೆ ಮೆಣಸೂ ಬಣ್ಣ ಮತ್ತು ಗಾತ್ರದಿಂದ ವಿಭಿನ್ನವಾಗಿದ್ದವು. ಇದೊಂದು ಬಣ್ಣದ ಲೋಕ.

Untitled design - 2026-04-09T150149.298

ಏನುಂಟು, ಏನಿಲ್ಲ!

ರೈತರು ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡಲು ಇಲ್ಲಿ ಮುಕ್ತ ಅವಕಾಶವಿದೆ. ಈ ಸಂತೆಗೆ ಬರುವರು ಕಾರು ಪಾರ್ಕ್ ಮಾಡಲು ದುಡ್ಡು ತೆರಬೇಕಾಗಿಲ್ಲ. ಮನೆಯ ಹಿತ್ತಲಿನಲ್ಲಿ ಮತ್ತು ಹೊಲಗಳಲ್ಲಿ ಬೆಳೆದ ತರಕಾರಿಗಳನ್ನು ಮಿನಿ ಲಾರಿಗಳಲ್ಲಿ ತಂದು ಮಾರಾಟಕ್ಕೆ ಇಡುತ್ತಾರೆ. ರೈತ ಕುಟುಂಬದ ಸದಸ್ಯರು ಇಲ್ಲಿ ಮಾರಾಟಕ್ಕೆ ಕುಳಿತುಕೊಳ್ಳುತ್ತಾರೆ. ಅಪ್ಪ, ಅಮ್ಮ, ಮಗ ಅಥವಾ ಮಗಳು ಇಲ್ಲಿ ವ್ಯಾಪಾರಿಗಳು. ಇಲ್ಲಿ ತರಕಾರಿ, ಹಣ್ಣು ಹಂಪಲು, ಕೆಲವರು ಸಿದ್ಧ ಉಡುಪು, ಪಿಂಗಾಣಿಯ ಗೊಂಬೆಗಳು, ಪಿಂಗಾಣಿಯ ಬಟ್ಟಲು, ಕಾಫಿ-ಟೀ ಕಪ್, ಬಣ್ಣದ ಹೂವಿನ ಗಿಡಗಳ ಹೂವಿನ ಕುಂಡಗಳು ಏನುಂಟು, ಏನಿಲ್ಲ!

ಎಲ್ಲ ಥರದ ಮೆಣಸುಗಳು ಇಲ್ಲಿದ್ದವು. ನನ್ನನ್ನು ಸೆಳೆದದ್ದು ಅವುಗಳ ಬಣ್ಣ. ಬ್ರಷ್ ಬಳಸಿ ಬಣ್ಣ ಹಚ್ಚಿದಂತೆ ಇದ್ದವು. ಪ್ರಕೃತಿ ದೊಡ್ಡ ಕಲಾವಿದ. ಕೇವಲ ಹೂಗಳಿಗೆ ಮಾತ್ರವಲ್ಲ, ತರಕಾರಿಗಳಿಗೂ ಬಳಿದ ಬಣ್ಣ ಒಂದೆರಡು ಅಲ್ಲ. ಅವನ್ನು ನೋಡಿಯೇ ಸವಿಯಬೇಕು. ಇಲ್ಲಿ ತರಕಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ದೊಡ್ಡ ಗಾತ್ರದವುಗಳನ್ನು ಬೆಳೆಯಲು ಆಧುನಿಕ ತಂತ್ರಜ್ಞಾನ ಬಳಸಿದ್ದು ಸ್ಪಷ್ಟ. ಸಂತೆ ಅಂದ ಬಳಿಕ ಲಘು ಪಾನೀಯ, ಹಣ್ಣಿನ ರಸ, ಕಿವಿಯ ಆಭರಣ, ಕತ್ತಿನ ಸರ ಇರಬೇಕು ತಾನೆ? ಇಲ್ಲಿ ಅವೂ ಇದ್ದವು. ಇಲ್ಲಿನ ದರ ಮಾತ್ರ ಅಂಗಡಿಗಳಿಗಿಂತ ದುಬಾರಿ.

Untitled design (100)

ಬಣ್ಣ ಬಣ್ಣದ ಕಲ್ಲು ಮತ್ತು ಕೃತಕ ಆಭರಣಗಳನ್ನು ಮಾರಾಟಕ್ಕೆ ಇಟ್ಟವಳು ನಮ್ಮನ್ನು ನೋಡಿ 'ಇಂಡಿಯಾ?' ಎಂದು ಕೇಳಿದಳು. ನನ್ನ ಪತ್ನಿ 'ಹೌದು' ಎಂದಾಗ 'ನಾನು ದೆಹಲಿಯವಳು. 45 ವರ್ಷಗಳಿಂದ ಇಲ್ಲಿ ಇದ್ದೇನೆ.' ಎಂದಳು.

ಬೆಳಗ್ಗೆ ಬೇಗನೇ ಬಂದ ಕಾರಣ ಮಗನ ಕಾರಿಗೆ ನಿಲುಗಡೆಗೆ ಜಾಗ ಸಿಕ್ಕಿತ್ತು. ಬಿಸಿಲು ಏರುತ್ತಿದಂತೆ ಜನರೂ ಹೆಚ್ಚುತ್ತಲೇ ಹೋಗಿ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಲು ಅಸಾಧ್ಯ.

ಲೇಖಕರು: ಹಿರಿಯ ಪತ್ರಕರ್ತರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...