Thursday, April 9, 2026
Thursday, April 9, 2026

ಇತಿಹಾಸ ಪುಟ್ಟದಾದರೂ ಕಥೆ ದೊಡ್ಡದು

ಜೋಸ್ಲೆನ್‌ ವಸ್ತು ಸಂಗ್ರಹಾಲಯದಲ್ಲಿ ಪುರಾತನ ವಸ್ತುಗಳು, ಯುರೋಪಿಯನ್, ಅಮೆರಿಕನ್, ಏಷಿಯಾ ಹಾಗೂ ಸ್ಪಾನಿಷ್ ಚಿತ್ರಕಲೆಗಳ ಝಲಕ್‌ ಹಾಗೂ ಏಷಿಯಾ ಖಂಡದ ಇತಿಹಾಸಕ್ಕೂ ಗೌರವ ಸಮರ್ಪಿಸುವುದನ್ನು ಕಾಣಬಹುದು. ವಿವಿಧ ಸಂಸ್ಕೃತಿ, ಆಹಾರ, ವಿಹಾರಗಳ ಪರಿಚಯ ಇಲ್ಲಿನ ಮ್ಯೂಸಿಯಂ ಮೂಲಕ ಉಂಟಾಗುತ್ತದೆ.

ಅಮೆರಿಕಾರ ಮೃಗಾಲಯಕ್ಕೆ ಹೆನ್ರಿ ಡೂರ್ಲೀ ಎಂಬಾತನ ಪತ್ನಿ ಆತನ ಸಂಸ್ಮರಣೆಗೆಂದು ಹೇರಳ ದಾನ ನೀಡಿದರೆ, ವಸ್ತು ಸಂಗ್ರಹಾಲಯವನ್ನು ಜಾರ್ಜ್ ಜೋಸ್ಲೆನ್ ಸ್ಮರಣಾರ್ಥವಾಗಿ ನಿರ್ಮಿಸಲು ಶ್ರೀಮತಿ ಜೋಸ್ಲೆನ್ ನೆರವು ನೀಡಿದ್ದಾಳೆ.

ಅತ್ಯಂತ ಆಧುನಿಕವಾದ, ವಿಶಾಲವಾದ ವಸ್ತು ಸಂಗ್ರಹಾಲಯವಿದು. ಈ ನಗರದ ಜನರ ಐತಿಹಾಸಿಕ ಪ್ರಜ್ಞೆಯ ದ್ಯೋತಕದಂತೆ ವೈಭವೋಪೇತವಾಗಿದ್ದರೂ, ಸಂಗ್ರಹಣೆಯ ದೃಷ್ಟಿಯಿಂದ ತೀರ ಬಡವಾಗಿದೆ. ಇಡೀ ದೇಶದ ಇತಿಹಾಸ ಮುನ್ನೂರು ವರ್ಷಗಳನ್ನು ದಾಟಿಲ್ಲವಾದ್ದರಿಂದ, ಅಮೆರಿಕದ್ದೆಂದು ಹೇಳಿಕೊಳ್ಳಬಹುದಾದ ಇಲ್ಲಿರುವ ಅತ್ಯಂತ ಪುರಾತನ ವಸ್ತುವೆಂದರೆ ಅಮೆರಿಕನ್-ಇಂಡಿಯನ್ನರು ಧರಿಸುತ್ತಿದ್ದ ಬಟ್ಟೆಗಳ ಮಾದರಿ ಮತ್ತು ಆಯುಧಗಳು. ಇದು ವಲಸೆಗಾರರ ದೇಶವಾಗಿರುವುದರಿಂದ ವಿವಿಧ ಸಂಸ್ಕೃತಿ, ಆಹಾರ, ವಿಹಾರಗಳ ಪರಿಚಯ ಇಲ್ಲಿನ ಮ್ಯೂಸಿಯಂ ಮೂಲಕ ಉಂಟಾಗುತ್ತದೆ.

ಇದನ್ನೂ ಓದಿ: ಥರ ಥರ ಥರ ವಂತಾರ

ಜೋಸ್ಲೆನ್ ವಸ್ತು ಸಂಗ್ರಹಾಲಯದಲ್ಲಿ ಪುರಾತನ ವಸ್ತುಗಳು, ಯುರೋಪಿಯನ್, ಅಮೆರಿಕನ್, ಏಷಿಯಾ ಹಾಗೂ ಸ್ಪಾನಿಷ್ ಚಿತ್ರಕಲೆಗಳೆಂದು ವಿಂಗಡಿಸಿದ್ದಾರೆ. ಚಿತ್ರಗಳಲ್ಲಿ ನಮ್ಮನ್ನು ಆಕರ್ಷಿಸುವ ಭಾಗವೆಂದರೆ ಗ್ರೀಸ್ ದೇಶದ ಕಲೆ, ಕುಂಬಾರಿಕೆಯ ವಸ್ತುಗಳು ಹಾಗೂ ನಾಣ್ಯಗಳು. ಅವು ಇಲ್ಲಿನ ಅತ್ಯಂತ ಪುರಾತನ ವಸ್ತುಗಳೆನ್ನಬಹುದು. ವಾಸ್ತವ ಶೈಲಿಯಲ್ಲಿರುವ ಕಂಚಿನ ಕೆಲವೇ ಶಿಲ್ಪಗಳು, ಅಮೂರ್ತ ಶಿಲ್ಪಗಳು ಆಕರ್ಷಣೀಯವಾಗಿವೆ. ಷಹರಾನ್ ಪುರದ ಕ್ಷೌರಿಕರು ಎಂಬ ಚಿತ್ರದಲ್ಲಿ ಭಾರತದ ಅಂದಿನ ಜೀವನ ಶೈಲಿ ಸುಂದರವಾಗಿ ವ್ಯಕ್ತವಾಗಿದೆ. ಇಲ್ಲೊಂದು ಸುಂದರ ಚಿತ್ರದಲ್ಲಿ ಸತ್ತು ಮಲಗಿರುವ ತನ್ನ ಮುದ್ದಿನ ಹುಲಿಯ ಎದುರು ಶೋಕಿಸುತ್ತಿರುವ ಪಾಷಾ, ಹುಲಿಗೆ ಹೂವನ್ನು ಹರಡಿ ಅಂತಿಮ ಗೌರವ ಸಲ್ಲಿಸುತ್ತಿದ್ದಾನೆ. ಹೂವು-ಹುಲಿ ಎರಡೂ ಪರಸ್ಪರ ವಿರುದ್ಧ ಸಂಕೇತಗಳು ಎನ್ನಿಸಬಹುದಾದರೂ, ಪ್ರೀತಿಗೆ ಪರ್ಯಾಯವಿಲ್ಲ ಎನ್ನುವ ಸಂದೇಶ ಇಲ್ಲಿದೆ. ನೈಜವಾಗಿ ಕಾಣುತ್ತಿರುವ ನೆಲಹಾಸು, ಬೃಹದಾಕಾರದ ಮೇಣದಬತ್ತಿಗಳು, ಪಾಷಾನ ಶೋಕತಪ್ತ ಬಿಂಬಗಳು ಚಿತ್ರದ ನೈಜತೆಯನ್ನು ಹೆಚ್ಚಿಸಿವೆ.

Untitled design (98)

ಏಷಿಯನ್ ವಿಭಾಗದಲ್ಲಿರುವ ಭಾರತದ ಬಲಮುರಿ ಗಣಪತಿಯ ಅಮೃತಶಿಲೆಯ ವಿಗ್ರಹ 300 ವರ್ಷಗಳಷ್ಟು ಹಳೆಯದು. ವಿಶೇಷವೆಂದರೆ ಈ ಗಣಪತಿಯ ಬಲ ಕೈಯಲ್ಲಿ ಜಪಮಾಲೆಯನ್ನು ನೀಡಲಾಗಿದೆ. ಇದರಲ್ಲಿ ಗ್ರೀಸ್, ಚೀನಾ, ಜಪಾನ್ ಮುಂತಾದ ಏಷಿಯಾ ಖಂಡದ ವಸ್ತುಗಳು ಸೇರಿಕೊಂಡಿದ್ದರೂ, ಅವಾವೂ ತೀರ ಹಳೆಯದೇನಲ್ಲ. ತಮ್ಮ ಮುನ್ನೂರು ವರ್ಷದ ಸಂಗ್ರಹದ ಬಗ್ಗೆ ಹೆಮ್ಮೆಯಿರುವಂತೆಯೇ, ಏಷಿಯಾ ಖಂಡದ ಮೂರೂವರೆ ಸಾವಿರ ವರ್ಷಗಳ ಇತಿಹಾಸವನ್ನು ಹೆಚ್ಚು ಗೌರವಿಸಿರುವುದನ್ನು ಅಲ್ಲಿನ ಬರಹಗಳಲ್ಲಿ ಗಮನಿಸಬಹುದು. ಜೀವನದ ಎಲ್ಲ ವಿಷಯಗಳನ್ನೂ ಸೂಕ್ಷ್ಮವಾಗಿ ಗಮನಿಸಿ, ಅದನ್ನು ತಮ್ಮ ಕಲೆ, ಚಿತ್ರಗಳಲ್ಲಿ ಅಳವಡಿಸಿ ದಾಖಲಿಸಿರುವುದರಿಂದಲೇ, ಏಷಿಯಾದ ಹಿರಿಮೆಯನ್ನು ಸಾರುವ ಇಂಥ ವಸ್ತುಗಳನ್ನು ಹೊಂದಿರುವುದು ನಮಗೆ ಹೆಮ್ಮೆಯ ವಿಷಯವೆಂದು ಹೇಳಿಕೊಂಡಿದ್ದಾರೆ.

ಭೂದೇವಿಯು ಸಾಧಾರಣವಾಗಿ ಭೂ-ವರಾಹ ಶಿಲ್ಪಗಳಲ್ಲಿ ಕಂಡುಬರುವುದೇ ಹೆಚ್ಚು. ಆದರೆ ಆಕೆಯ ಪ್ರತ್ಯೇಕ ವಿಗ್ರಹ ಇಲ್ಲಿ ಲಭ್ಯವಿದ್ದು ಅದು ಸುಮಾರು ನಾಲ್ಕು ಅಡಿ ಎತ್ತರವಿದೆ.

ಸಂಜೆಯಾದೊಡನೆ ಈ ಕಟ್ಟಡವೂ ಸೇರಿದಂತೆ ಸುತ್ತಣ ಇತರ ಕಟ್ಟಡಗಳು ಮತ್ತು ಕಾರಂಜಿಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿರುತ್ತಾರೆ. ಬೇಸಿಗೆಯಲ್ಲಿ ಸೂರ್ಯಾಸ್ತವಾಗುವಾಗ ರಾತ್ರಿ 9-30 ಆಗಿರುತ್ತದೆಯಾಗಿ ಅದರ ನಂತರವಷ್ಟೇ ಈ ದೃಶ್ಯಗಳು ಮನೋಹರವಾಗಿ ಕಾಣುತ್ತವೆ.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...