ಥರ ಥರ ಥರ ವಂತಾರ
ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಛಾಪು ಮೂಡಿಸಿರುವ ಕನ್ನಡದ ಮನೆ ಮಗಳಂತಿರುವ ನಟಿ ಪೂಜಾ ಗಾಂಧಿ. ಅಚ್ಚುಕಟ್ಟಾದ ಕನ್ನಡದಲ್ಲಿ ಮಾತನಾಡುವುದನ್ನು ಕಲಿಯುವುದರ ಜತೆಗೆ ಕನ್ನಡದಲ್ಲೇ ಸೋಗಸಾಗಿ ಬರೆಯುವದನ್ನು ರೂಢಿಸಿಕೊಂಡಿರುವ ಪೂಜಾ ಗಾಂಧಿ ಪ್ರವಾಸಿ ಪ್ರಪಂಚಕ್ಕೆ ವಿಶೇಷ ಲೇಖನ ಬರೆದಿದ್ದಾರೆ. ಪ್ರಕೃತಿ, ಪ್ರಾಣಿ, ಪಕ್ಷಿಗಳನ್ನು ಅಪರಿಮಿತವಾಗಿ ಪ್ರೀತಿಸುವ, ಸಕಲ ಜೀವ ರಾಶಿಯ ಬದುಕನ್ನು ಗೌರವಿಸುವ ನನಗೆ, ವಿಶ್ವದ ಅತಿದೊಡ್ಡ ಪ್ರಾಣಿ-ಪಕ್ಷಿಗಳ ನಿವಾಸಕವಾದ ವಂತಾರಕ್ಕೆ ಭೇಟಿ ನೀಡುವುದು ಒಂದು ವಿಶಿಷ್ಟ ಅನುಭವವಾಗಲಿದೆ ಎಂಬ ಭಾವನೆ ಮೂಡಿತು.
- ಪೂಜಾ ಗಾಂಧಿ
ವಂತಾರಕ್ಕೆ ಭೇಟಿ ನೀಡಲು ಇಚ್ಛೆ ಇದೆಯೇ ಎಂದು ತೀರ ಆತ್ಮೀಯ ಸ್ನೇಹಿತರೊಬ್ಬರ ಕರೆ ಬಂದಾಗ, ಮೊದಲಿಗೆ ನಂಬಲಾಗದೆ, ನಂತರ ಆಶ್ಚರ್ಯ ಮತ್ತು ಆನಂದದಿಂದ ಒಪ್ಪಿಕೊಂಡೆ. ನಾನು ವಂತಾರಕ್ಕೆ ಭೇಟಿ ನೀಡುವುದು ಖಚಿತವಾದ ದಿನದಿಂದಲೇ ನನ್ನಲ್ಲಿ ರೋಮಾಂಚನ ಮೂಡಿತ್ತು. ವಂತಾರ ಬಗ್ಗೆ ಬಹಳಷ್ಟು ಕೇಳಿದ್ದರಿಂದ, ಅದು ಹೇಗಿರಬಹುದು ಎಂಬ ಕನಸುಗಳು ಆಗಲೇ ಆರಂಭವಾಗಿದ್ದವು.
ಜಾಮ್ ನಗರ್ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ, ನಮಗಾಗಿ ಕಾಯುತ್ತಿದ್ದ ವಾಹನ ಮತ್ತು ಸಿಬ್ಬಂದಿಯೊಂದಿಗೆ ಹೊರಟೆವು. ಮುಂದಿನ ನಾಲ್ಕು ದಿನಗಳಲ್ಲಿ ವಿಶೇಷ ಅನುಭವ ಅದ್ಭುತವಾಗಿತ್ತು. ರಿಲಯನ್ಸ್ ಸಂಸ್ಥೆಯ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಘಟಕ, ಸಾವಿರಾರು ನೌಕರರಿಗಾಗಿ ನಿರ್ಮಿಸಲಾದ ಪಂಚತಾರಾ ಸೌಲಭ್ಯಗಳನ್ನು ಹೊಂದಿರುವ ರಿಲಯನ್ಸ್ ಗ್ರೀನ್ ಟೌನ್‌ಶಿಪ್, ಬೃಹದಾಕಾರದ ಹತ್ತಾರು ಅತಿಥಿ ಗೃಹಗಳು, ಇಪ್ಪತ್ತಾಲ್ಕು ಗಂಟೆಗಳ ಅತಿಥಿ ಸತ್ಕಾರಕ್ಕಾಗಿ ಮೀಸಲಾದ ಅಡುಗೆಮನೆ, ಸಲೂನ್, ವೈದ್ಯಕೀಯ ಸೌಲಭ್ಯಗಳು ಹಾಗೂ ಅತಿಥಿ ಗೃಹಗಳ ಸುತ್ತಲಿನ ವಿಶಾಲ ಉದ್ಯಾನಗಳು- ಅಂಬಾನಿ ಕುಟುಂಬದ ಕಾರ್ಯತತ್ಪರತೆ, ಅತಿಥಿ ಸತ್ಕಾರದ ವೈಭವವನ್ನು ಅನಾವರಣಗೊಳಿಸುತ್ತಿದ್ದವು.
ಇದನ್ನೂ ಓದಿ: ಧುರಂಧರ್ ಮದುವೆಯಲ್ಲಿ ಇವರದ್ದೇ ನಳಪಾಕ!
ಪ್ರವೇಶ ದ್ವಾರದಲ್ಲೇ ನಾನು ಊಹಿಸಿದ್ದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿನ ವೈಭವವನ್ನು ಕಂಡು ಇದು ಕಲ್ಪನೆಗೂ ಮೀರಿದ ಸೌಲಭ್ಯಗಳನ್ನು ಹೊಂದಿರುವ ಅದ್ಭುತ ಲೋಕವೆಂಬುದು ಅರಿವಾಯಿತು.

ಪ್ರಾಣಿಗಳ ಸ್ವರ್ಗ:
ನಮ್ಮ ಮೊದಲ ಡ್ರೈವ್ ಟಿಎಂಸಿ- 18 ರೆಸ್ಕೂ ಮತ್ತು ರಿಹ್ಯಾಬಿಲಿಟೇಶನ್ ಕೇಂದ್ರದ ಮೂಲಕ ಆರಂಭವಾಯಿತು. ಹತ್ತಾರು ದೇಶಗಳಿಂದ ರಕ್ಷಿಸಲ್ಪಟ್ಟ ಸಿಂಹಗಳು, ಹುಲಿಗಳು, ಚಿಂಪಾಂಜಿಗಳು, ಜಿರಾಫೆಗಳು, ಜೀಬ್ರಾಗಳು ಹಾಗೂ ಕಾಡೆಮ್ಮೆಗಳನ್ನು ವೀಕ್ಷಿಸುವ ಭಾಗ್ಯ ನಮ್ಮದಾಯಿತು.
ನಂತರದ ಎರಡು ದಿನಗಳಲ್ಲಿ, ಹಲವಾರು ದೇಶಗಳ ಚಿರತೆಗಳು, ಎರಡು ಸಾವಿರಕ್ಕೂ ಹೆಚ್ಚು ಮೊಸಳೆಗಳು, 300ಕ್ಕೂ ಹೆಚ್ಚು ಆನೆಗಳು, ಸಾವಿರಾರು ಮೀನುಗಳು, ಹತ್ತಾರು ಜಾತಿಯ ಸರ್ಪಗಳು, ರೈನೋಗಳು, ಹಿಪ್ಪೋಗಳು, ಸಾವಿರಾರು ಜಾತಿಯ ಪಕ್ಷಗಳು, ನೂರಾರು ಕುದುರೆಗಳು ಮತ್ತು ಸಾವಿರಾರು ತಳಿಯ ನಾಯಿಗಳು, ಸುಮಾರು 700 ಎಕರೆ ವ್ಯಾಪ್ತಿಯಲ್ಲಿ ವಿಶ್ವದ ವಿವಿಧ ಜಾತಿಯ ಮಾವಿನ ಮರಗಳು, ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿದ ಸಿಹಿನೀರಿನ ಮತ್ತು ಸಮುದ್ರದಲ್ಲಿರುವ ವೈವಿಧ್ಯಮಯ ಸಸ್ಯಗಳನ್ನು ವೀಕ್ಷಿಸಿದಾಗ, ಇದು ಪ್ರಾಣಿಲೋಕಕ್ಕಾಗಿ ಕಲ್ಪಿಸಿಕೊಂಡ ಸ್ವರ್ಗವೇ ಸರಿ ಎಂಬ ಭಾವನೆ ಮೂಡಿತು.
ಅದ್ಭುತ ವಿಸ್ತಾರ:
3500 ಎಕರೆ ಪ್ರದೇಶದಲ್ಲಿ ಹರಡಿರುವ ಈ ವಂತಾರದಲ್ಲಿ, 2500ಕ್ಕೂ ಹೆಚ್ಚು ಜಾತಿಗಳ, ಸುಮಾರು ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಆಶ್ರಯ ಪಡೆದಿರುವ ಜಾಗವಿದು. ಸಮೃದ್ಧ ಹಸಿರಿನ ಸುಂದರ ಉದ್ಯಾನಗಳು ಮತ್ತು ವಿಶಾಲ ರಸ್ತೆಗಳು, ಪ್ರಾಣಿಗಳಿಗಾಗಿಯೇ ನಿರ್ಮಿಸಲಾದ ಲಕ್ಷುರಿ ನಗರದಂತೆ ಅನಿಸುತ್ತದೆ. ಪ್ರಾಣಿಗಳ ದಿನಚರಿಗೆ ಪೂರಕವಾಗಿರುವ ಆವರಣ, ಪ್ರಾಣಿ-ಪಕ್ಷಗಳಿಗೂ ಹವಾನಿಯಂತ್ರಿತ ಮಲಗುವ ಕೋಣೆಗಳು, ಅತ್ಯಂತ ಶ್ರೇಷ್ಠ ಗುಣಮಟ್ಟದ ಆಹಾರ ಪೂರೈಕೆ ಇಲ್ಲಿ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ರಾಣಿಗಳ ಆರೈಕೆಗೆ ಪರಿಣಿತ ಜೀವಶಾಸ್ತ್ರಜ್ಞರು, ಅಗತ್ಯವಾದ ಔಷಧಗಳು, ಪ್ರಾಣಿಗಳ ಚಲನವಲನ ಮತ್ತು ಆರೋಗ್ಯದ ಮೇಲೆ ನಿಗಾ ವಹಿಸಲು ಸಿಬ್ಬಂದಿ ವರ್ಗ ಇಲ್ಲಿ ನಿತ್ಯ ಕಾಣಬಹುದು. ಪ್ರಾಣಿಗಳಿಗೆ ಹೊಸ ಚೈತನ್ಯ ತುಂಬುವ ಸಲುವಾಗಿ ಹೊಸ ವಿನ್ಯಾಸದ ಮರದ ಗೂಡುಗಳು, ಎತ್ತರದ ಕಂಬಗಳು, ಬಂಡೆಗಳು ಹಾಗೂ ನೀರಿನ ಆಶ್ರಯ ಸ್ಥಳಗಳನ್ನು ನಿರ್ಮಿಸಲಾಗಿದೆ.

ಗುಂಪಿನ ಹಿರಿಯ ಪ್ರಾಣಿಗೆ ವಿಶೇಷ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಿದೆ. ಪ್ರಾಣಿ-ಪಕ್ಷಿಗಳಿಗೆ ಅಗತ್ಯವಿರುವ ಯಾವ ವಿಷಯದಲ್ಲೂ ಕಡಿಮೆ ಮಾಡದೆ ಅಚ್ಚುಕಟ್ಟಾಗಿ ಯೋಜನೆ ರೂಪಿಸಿರುವುದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವಿಶ್ವದ ಅತ್ಯುತ್ತಮ ವಿನ್ಯಾಸಕಾರರು ಹಾಗೂ ಕ್ಯೂರೇಟರ್‌ಗಳ ಸಾಧನೆಯೇ ಸರಿ!
ಜಕೂಜಿ, ನೀರಿನ ಸ್ಪ್ರಿಂಕ್ಲರ್ ವ್ಯವಸ್ಥೆಗಳು, ಲೇಸರ್ ಚಿಕಿತ್ಸೆ, ಎಂಆರ್‌ಐ, ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ವಂತಾರದಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ. ಪ್ರಾಣಿಗಳಿಗೆಂದೇ ಮೀಸಲಿಟ್ಟ ಅಡುಗೆಮನೆಗಳನ್ನು, ಪದಾರ್ಥಗಳನ್ನು ಹಾಗೂ ಅಲ್ಲಿನ ಶುದ್ಧತೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.
ಧ್ಯೇಯ ಮತ್ತು ಅಂತಃಕರಣ:
ನನ್ನ ಮನಸ್ಸಿಗೆ ಅತಿ ಹೆಚ್ಚು ಮುದ ನೀಡಿದ್ದು ವಂತಾರ ಹಿಂದಿರುವ ಧ್ಯೇಯ ಮತ್ತು ಅಂತಃಕರಣ. ಜಾಮ್ ನಗರದಲ್ಲಿರುವ ವಂತಾರ, ಬದುಕುವ ಹಂಬಲವನ್ನೇ ಕಳೆದುಕೊಂಡಿರುವ ಅನೇಕ ಪ್ರಾಣಿಗಳಿಗೆ ಹೊಸ ಆಶ್ರಯ ನೀಡುತ್ತದೆ. ಸರ್ಕಸ್‌ಗಳಲ್ಲಿ ಹಿಂಸೆಗೆ ಒಳಗಾಗಿರುವ, ಕಾಡಿನಲ್ಲಿ ಗಾಯಗೊಂಡಿರುವ, ಕ್ರೂರ ಮಾಲೀಕರ ಒಡೆತನದಲ್ಲಿ ನರಳುತ್ತಿರುವ, ಪ್ರವಾಸಿ ಸ್ಥಳಗಳಲ್ಲಿ ಮಿತಿ ಮೀರಿ ದುಡಿಸಿಕೊಳ್ಳುತ್ತಿರುವ, ವಯಸ್ಸಾದ ಅಥವಾ ಅನಾರೋಗ್ಯ ಕಾರಣಕ್ಕೆ ತಿರಸ್ಕರಿಸಲ್ಪಟ್ಟ, ಕಾಡುಗಳ್ಳರಿಂದ ರಕ್ಷಣೆ ಮಾಡಿದ, ಮಾನವಭಕ್ಷಕರಾಗಿ ಮಾರ್ಪಟ್ಟಿರುವ ಅಥವಾ ಇತರ ಪ್ರಾಣಿಗಳೊಂದಿಗೆ ನಡೆದ ಸಂಘರ್ಷಗಳಲ್ಲಿ ಗಾಯಗೊಂಡಿರುವ, ಅಂತಾರಾಷ್ಟ್ರೀಯ ಪ್ರಾಣಿ ಮಾರಾಟ ಜಾಲಗಳಿಗೆ ಬಲಿಯಾಗಿರು ಅಥವಾ ಇನ್ಯಾವುದೇ ರೀತಿಯ ಕಷ್ಟಗಳಿಗೆ ಒಳಗಾದ ಪ್ರಾಣಿಗಳನ್ನು ರಕ್ಷಿಸಿ, ಅವುಗಳಿಗೆ ಹೊಸ ಆಶ್ರಯ ಮತ್ತು ಹೊಸ ಜೀವನವನ್ನು ನೀಡುವುದೇ ಇಲ್ಲಿನ ಧ್ಯೇಯ.
ಪ್ರಾಣಿಗಳಿಗೆ ಕೇವಲ ದೈಹಿಕ ಆರೈಕೆ ಮಾತ್ರವಲ್ಲ, ಭಾವನಾತ್ಮಕ ಬೆಂಬಲವೂ ನೀಡಲಾಗುತ್ತಿದೆ. ಪ್ರತಿ ಪ್ರಾಣಿಗೂ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಆಹಾರ ಮತ್ತು ಆರೈಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಪ್ರಾಣಿಗಳು ಇಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿವೆ. ಕೆಲವು ಪ್ರಾಣಿಗಳು ಸೂರ್ಯನ ಬೆಳಕನ್ನೇ ಕಾಣದ ಪರಿಸ್ಥಿತಿಯಲ್ಲಿ ಇಲ್ಲಿಗೆ ಬಂದ ವಿವರಗಳನ್ನು ತಿಳಿದು ಮನಕಲುಕಿತು. ಇದು ಕೇವಲ ಒಂದು ರಕ್ಷಣಾ ಕೇಂದ್ರವಲ್ಲ, ಜೀವಗಳಿಗೆ ಗೌರವ ನೀಡುವ ಮಾನವೀಯತೆಯ ಪ್ರತಿಬಿಂಬ.

ಮುಂದಿನ ದಾರಿ:
ಇನ್ನೂ ಐದು ವರ್ಷಗಳೊಳಗೆ, ವಂತಾರ ಇನ್ನಷ್ಟು ವಿಶೇಷವಾಗಿ ಅಭಿವೃದ್ಧಿ ಹೊಂದಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾಡಲು, ಪ್ರಾಣಿಗಳ ವರ್ತನೆ, ಆಹಾರ ಪದ್ಧತಿ ಹಾಗೂ ರೋಗಗಳ ಕುರಿತು ಅಧ್ಯಯನ ನಡೆಸುವ ವಿಶ್ವದ ಅತಿದೊಡ್ಡ ಸಂಶೋಧನಾ ಕೇಂದ್ರವಾಗಬಹುದು. ಅರಣ್ಯಾಧಿಕಾರಿಗಳಿಗೆ ತರಬೇತಿ ನೀಡುವ ಸ್ಥಳವಾಗಬಹುದು. ಇತರ ಸಿಬ್ಬಂದಿಗೆ ತರಬೇತಿ ನೀಡಿ ಜಗತ್ತಿನ ಇತರ ಉದ್ಯಾನಗಳಿಗೆ ಕಳುಹಿಸುವ ಸಂಸ್ಥೆಯಾಗಬಹುದು. ಜಗತ್ತಿನ ಅತಿದೊಡ್ಡ ಜೀನ್ ಬ್ಯಾಂಕ್ ಆಗಬಹುದು. ವಿನಾಶದ ಅಂಚಿನಲ್ಲಿರುವ ಸಾವಿರಾರು ಪ್ರಭೇದಗಳ ಉಳಿವಿಗೆ ಕಾರಣವಾಗಬಹುದು. ಪ್ರಾಣಿಗಳಿಗಾಗಿ ಅತ್ಯಾಧುನಿಕ ಔಷಧ ಹಾಗೂ ಚಿಕಿತ್ಸಾ ವಿಧಾನಗಳ ಅನ್ವೇಷಣೆ, ಅಭಿವೃದ್ಧಿ ಮತ್ತು ಉತ್ಪಾದನೆಯ ಘಟಕವಾಗಬಹುದು. ಏಕೆಂದರೆ, ಇಲ್ಲಿ ಈಗಾಗಲೇ ಅಷ್ಟು ಕೆಲಸಗಳು ನಡೆಯುತ್ತಿವೆ. ನಿತ್ಯವೂ ವಿಶ್ವದ ವಿವಿಧ ಭಾಗಗಳಿಂದ ಪ್ರಾಣಿಗಳು ಬರುತ್ತಿವೆ. ನಿರಂತರವಾಗಿ ವಂತಾರ ವಿಸ್ತಾರಗೊಳ್ಳುತ್ತಿದೆ. ಇದಕ್ಕಾಗಿ ನೂರಾರು ಕೋಟಿ ರುಪಾಯಿಗಳು ವ್ಯಯವಾಗುತ್ತಿದೆ. ಇದನ್ನೆಲ್ಲ ಕಂಡು ಆಶ್ಚರ್ಯಗೊಂಡು, ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ಅಲ್ಲಿಯೇ ಕಾರ್ಯನಿರತ ಕನ್ನಡದ ಹಿರಿಯ ವಿಜ್ಞಾನಿಯೊಬ್ಬರೊಂದಿಗೆ ಹಂಚಿಕೊಂಡೆ. ಅದಕ್ಕೆ ಅವರು ಮುಗುಳಗುತ್ತಾ, “ನಮ್ಮ ಚಿಂತನೆಗಳು ಕೊನೆಗೊಳ್ಳುವಲ್ಲಿ ಅಂಬಾನಿಗಳ ಕನಸುಗಳು ಪ್ರಾರಂಭವಾಗುತ್ತವೆ” ಎಂದರು. ಮುಂದೆ ಏನೆಲ್ಲಾ ಆಗಬಹುದು ಎಂದು ಯೋಚಿಸಿ ಆಶ್ಚರ್ಯಗೊಂಡೆ.
ವಂತಾರ ಪ್ರಾಣಿಗಳಿಗಾಗಿ ನಿರ್ಮಿತವಾದ ಮಾನವೀಯತೆಯ ಸ್ವರ್ಗ. ಮಾನವನ ಬುದ್ಧಿ, ಉತ್ಸಾಹ, ಪರಿಶ್ರಮಗಳನ್ನು ಸಾಧನೆಗೆ ಮಾನದಂಡ ಎಂದು ನಾವು ಮಾತನಾಡುತ್ತೇವೆ. ಆದರೆ, ಇಷ್ಟೇ ಸಾಲದು. ಇದಕ್ಕಿಂತ ಮಿಗಿಲಾಗಿ ಸಹಾನುಭೂತಿ ಬೇಕು. ಮನುಷ್ಯನಲ್ಲಿರುವ ಸಹಾನುಭೂತಿಗೆ ಈ ವಂತಾರ ಜ್ವಲಂತ ಉದಾಹರಣೆ. ಪ್ರಾಣಿಗಳ ಆರೈಕೆ ಮತ್ತು ಸಂರಕ್ಷಣೆಗೆ ಹೊಸ ಆಯಾಮ ನೀಡಿರುವ “ವಂತಾರ” ದೇಶದಷ್ಟೇ ಅಲ್ಲ, ವಿಶ್ವದ ಗಮನ ಸೆಳೆಯುತ್ತಿದೆ. ಈ ಅಸಾಧಾರಣ ಕೇಂದ್ರಕ್ಕೆ ಭೇಟಿ ನೀಡಿದ ಅನುಭವವು ಕೇವಲ ಒಂದು ಪ್ರವಾಸವಲ್ಲ, ಮನಸ್ಸನ್ನು ಆಳವಾಗಿ ಸ್ಪರ್ಶಿಸುವ ಪರಿವರ್ತನೆಯ ಕ್ಷಣಗಳು.
ಲೇಖಕರು: ಖ್ಯಾತ ಚಲನಚಿತ್ರ ಕಲಾವಿದೆ