• ಸಿ. ಆರ್‌. ಮಂಜುನಾಥ್

ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ನೆವಾಡಾ ರಾಜ್ಯದ ಪ್ರಸಿದ್ದ ನಗರ ಲಾಸ್‌ ವೇಗಸ್. ಸುಡುಬೆಟ್ಟಗಳ ನಡುವೆ ಪ್ರಕೃತಿಗೆ ಸವಾಲೆಂಬಂತೆ ಅರಳಿನಿಂತಿರುವ ಪ್ರಪಂಚದ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಗರವಿದು. ಇದಕ್ಕೆ ಮತ್ತೊಂದು ಹೆಸರು ಮಲಗದ ನಗರ (Sleepless City). ಇಲ್ಲಿ ಹಗಲು-ರಾತ್ರಿ ಎನ್ನದೆ ಜೂಜು, ಮೋಜು-ಮಸ್ತಿ, ಸಂಗೀತ ಕ್ರೀಡೆ ಎಗ್ಗಿಲ್ಲದೆ ನಡೆಯುತ್ತಿರುತ್ತದೆ. ಅದಕ್ಕಾಗಿಯೇ ಇದನ್ನು ಮನರಂಜನೆಯ ರಾಜಧಾನಿ ಎಂಬುದಾಗಿಯೂ ಕರೆಯುತ್ತಾರೆ.

ಲಾಸ್‌ ವೇಗಸ್‌ ಪ್ರದೇಶದ ಇತಿಹಾಸ ಸುಮಾರು 19ನೇ ಶತಮಾನದ ಆರಂಭದಿಂದ ಶುರುವಾಗುತ್ತದೆ. 1829ರಲ್ಲಿ ಮೆಕ್ಸಿಕೋನಿಂದ ಬರುವ ವ್ಯಾಪಾರಸ್ತರು ಇಲ್ಲಿರುವ ನೀರಿನ ಸೆಲೆಗಳನ್ನು ಕಂಡು ಇಲ್ಲಿ ತಂಗಲು ಆರಂಭಿಸುತ್ತಾರೆ. ನಂತರ ಮರಳುಗಾಡಿನ ಮಾರ್ಗ ಮಧ್ಯೆ ಇದು ವಿಶ್ರಾಂತಿಯ ತಾಣವಾಗಿ ಬದಲಾಗುತ್ತದೆ. 1905ರಲ್ಲಿ ಯೂನಿಯನ್ ಪ್ಯಾಸಿಫಿಕ್ ರೈಲ್ವೆ ಲಾಸ್ ವೇಗಸ್‌ ಪ್ರದೇಶಕ್ಕೆ ತನ್ನ ಮಾರ್ಗವನ್ನು ವಿಸ್ತರಿಸಿ ಹೊಸ ರೈಲ್ವೆ ಪಟ್ಟಣವನ್ನು ಸ್ಥಾಪಿಸಿತು. ಇದರ ಜತೆಗೆ ಅಲ್ಲಿರುವ ಉಷ್ಣಪ್ರದೇಶದ ಜಲಸಂಪತ್ತನ್ನು ಕಸಿದುಕೊಳ್ಳುವ ಉದ್ದೇಶದಿಂದ ಹೂವರ್ ಡ್ಯಾಮ್ ನಿರ್ಮಾಣ ಇಲ್ಲಿ ಪ್ರಾರಂಭವಾಯಿತು.

los  vegas 1

ಜೂಜಿನ ಅಡಿಪಾಯ

1931ರಲ್ಲಿಯೇ ಲಾಸ್ ವೇಗಸ್‌ನ ಭವಿಷ್ಯ ರೂಪುಗೊಳ್ಳತೊಡಗಿತು. ಅಮೆರಿಕಾದ ನೆವಾಡಾ ರಾಜ್ಯವು ಜೂಜು (gambling) ಕಾನೂನುಬದ್ಧವಾಗಿ ಘೋಷಿಸಿದ ಮೊದಲ ಮತ್ತು ಏಕೈಕ ರಾಜ್ಯವಾಯಿತು. ಇದರಿಂದಾಗಿ ಲಾಸ್ ವೇಗಸ್‌ಗೆ ದೇಶದಾದ್ಯಂತದಿಂದ ಸಾಮಾನ್ಯ ಜನರು, ಉದ್ಯಮಿಗಳು ಮತ್ತು ಹೂಡಿಕೆದಾರರು ಹರಿದುಬಂದರು. ಯಾವಾಗ ಇಲ್ಲಿ ಜೂಜು ಕಾನೂನುಬದ್ಧವಾಯಿತೋ ಅಲ್ಲಿಂದ ಇದರ ಬೆಳವಣಿಗೆ ಅಷ್ಟೇ ಚುರುಕು ಹಾಗೂ ಶೀಘ್ರಗತಿಯನ್ನು ಪಡೆದುಕೊಂಡಿತು. 1940–50ರ ದಶಕದಲ್ಲಿ, ಮಾಫಿಯಾಗಳು, ಖಾಸಗಿ ಹೂಡಿಕೆದಾರರ ಸಹಕಾರದಿಂದ ಬೃಹತ್ ಹೊಟೇಲ್‌ಗಳು, ಕ್ಯಾಸಿನೋಗಳು ಮತ್ತು ಶೋ ರೂಂಗಳ ನಿರ್ಮಾಣ ಜೋರಾಯಿತು. ಲಾಸ್ ವೇಗಸ್ ಡೌನ್‌ಟೌನ್‌ನ ಹೊರವಲಯದಲ್ಲಿ “The Strip” ಎಂಬ ಹೆಸರಿನಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಅಭಿವೃದ್ಧಿ ಪಡೆದವು.

1970ರ ನಂತರ ಲಾಸ್ ವೇಗಸ್ ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ದೊಡ್ಡ ತಾಣವಾಗಿ ಮಾರ್ಪಾಡಾಗಿದೆ. ಅದ್ಧೂರಿ ವಿವಾಹಗಳು, ಕಾರ್ಪೊರೇಟ್‌ ಸಭೆಗಳು, ಬಿಸಿನೆಸ್ ಇವೆಂಟ್‌ಗಳು ಮತ್ತು ಖಾಸಗಿ ಸಂಭ್ರಮಾಚರಣೆಗಳು ಇಲ್ಲಿ ನಡೆಯತೊಡಗಿದವು. 1990ರಿಂದ ನಂತರ ಲಾಸ್ ವೇಗಸ್ ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರಗಳತ್ತ ಬಲವಾಗಿ ಹೆಜ್ಜೆ ಇಟ್ಟಿತು.

ಇಂದು ಲಾಸ್‌ ವೆಗಸ್‌ ಸಂಪೂರ್ಣವಾಗಿ ಬದಲಾಗಿದೆ ಜಗತ್ತಿನಲ್ಲಿ ಅತೀ ಹೆಚ್ಚಿನ ಹಾಗು ಅತೀ ದುಬಾರಿ ಹೊಟೇಲ್‌ ಗಳು ಈಗ ಲಾಸ್‌ ವೇಗಸ್‌ ನಲ್ಲಿವೆ. ಸಾವಿರದಿಂದ ಏಳು ಸಾವಿರ ಕೊಠಡಿಗಳ ಬೃಹತ್‌ ಹೊಟೇಲ್‌ಗಳು ಇಲ್ಲಿ ತಲೆ ಎತ್ತಿ ನಿಂತಿವೆ. ಹೊಟೇಲ್‌ ಕ್ಷೇತ್ರದಲ್ಲಿ ಹೆಸರು ಮಾಡಿದವರು ಇಲ್ಲಿ ಬಂದು ಒಂದು ಹೊಟೇಲ್‌ ಮಾಡುವುದೆಂದರೆ ಅದು ಅವರ ಘನತೆಗೆ ಮತ್ತೊಂದು ಗರಿ ಇದ್ದಂತೆ ಎಂದು ಕೊಂಡಿದ್ದಾರೆ. ಹಾಗಾಗಿಯೇ ಪ್ರಪಂಚದ ಟಾಪ್‌ ಹೊಟೇಲ್‌ ಆ್ಯಂಡ್‌ ರೆಸಾರ್ಟ್, ಕಂಪನಿಗಳು ಇಲ್ಲಿ ತಮ್ಮದೇ ಶೈಲಿಯಲ್ಲಿ ಗಗನಚುಂಬಿ ಹೊಟೇಲ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.

ಮೊದಲೇ ಹೇಳಿದಂತೆ, ಇದು ಪ್ರವಾಸಿಗರ ಸ್ವರ್ಗ. ಈ ವರ್ಷದ ಕಳೆದ ಆರು ತಿಂಗಳಲ್ಲಿ ಲಾಸ್ ವೇಗಸ್‌ಗೆ 24.3 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಲಾಸ್ ವೇಗಸ್ ಕನ್ವೆನ್ಶನ್ ಮತ್ತು ವಿಸಿಟರ್ಸ್ ಅಥಾರಿಟಿ (LVCVA) ಮಾಹಿತಿಯನ್ನು ಪ್ರಕಟಿಸಿದೆ. ಅದರಲ್ಲೂ ಚೀನಾ, ದಕ್ಷಿಣ ಕೊರಿಯಾ, ಭಾರತ, ಮತ್ತು ಯುರೋಪ್ ದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಪ್ರವಾಸಿಗರನ್ನು ಆಕರ್ಷಿಸುತ್ತಿರುವುದೇಕೆ ?

  • ಪ್ರಸಿದ್ಧವಾದ ಲಾಸ್ ವೇಗಸ್ ಸ್ಟ್ರೀಟ್‌ಗಳಲ್ಲಿ ನಡೆಯುವ ಹೈ-ಪ್ರೊಫೈಲ್ ಮ್ಯೂಸಿಕ್‌ ಪ್ರೋಗ್ರಾಂಗಳು
  • ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ನೈಟ್‌ ಕ್ಲಬ್‌ಗಳು ಮತ್ತು ಕ್ಯಾಬರೇ, ಫ್ಯಾಷನ್‌ ಶೋಗಳು
  • ಇ-ಸ್ಪೋರ್ಟ್ಸ್ ಮತ್ತು ಡಿಜಿಟಲ್ ಗೇಮಿಂಗ್ ಇವೆಂಟ್‌ಗಳು
  • ಹೈ ರೋಲರ್‌ಗಳು, ಬೆಟ್ಟಿಂಗ್ ಮತ್ತು ಕ್ಯಾಸಿನೋ ಪ್ರವೃತ್ತಿಗೆ ತಿರುಗಿ ಬಂದಿರುವುದು

ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ

2025ರಲ್ಲಿ ಲಾಸ್ ವೇಗಸ್‌ನ ಆರ್ಥಿಕ ಬೆಳವಣಿಗೆ 6.7% ಆಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣವಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಐಷಾರಾಮಿ ಹೊಟೇಲ್‌ಗಳು ಮತ್ತು ಬಿಸಿನೆಸ್ ಕಾಂಪ್ಲೆಕ್ಸ್‌ಗಳು ಅವರಿಗೆ 35,000 ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ. ತಂತ್ರಜ್ಞಾನ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಇಲ್ಲಿ ತಮ್ಮ ವಿಸ್ತರಣೆಯತ್ತ ಗಮನ ಹರಿಸುತ್ತಿದ್ದು, ಲಾಸ್ ವೇಗಸ್ ಇದೀಗ ಒಂದು “ಟೆಕ್ ಹಬ್" ಆಗಿಯೂ ಪರಿವರ್ತನೆಗೊಳ್ಳುತ್ತಿದೆ.

ಹೆಚ್ಚುತ್ತಿರುವ ಪ್ರವಾಸಿಗರು ಮತ್ತು ತಾಪಮಾನವನ್ನು ಗಮನದಲ್ಲಿಟ್ಟುಕೊಂಡು, ಇಲ್ಲಿಯ ನಗರ ಆಡಳಿತ ಅಷ್ಟೇ ಅಚ್ಚುಕಟ್ಟಾಗಿ ನಗರವನ್ನು ನಿರ್ವಹಣೆ ಮಾಡುತ್ತಿದೆ. ವಿಶಾಲವಾದ ರಸ್ತೆಗಳು, ನಗರ ಪ್ರದಕ್ಷಿಣೆ ಹಾಕುವವರಿಗೆ ಯಾವುದೇ ಅಡೆ ತಡೆ ಇಲ್ಲದ ಸುಂದರವಾದ ಫುಟ್‌ಪಾತ್‌ಗಳು, 100% ಸೌರಶಕ್ತಿಯ ಆಧಾರಿತ ಲೈಟ್‌ಪೋಲ್‌ಗಳು, ಸ್ವಯಂಚಾಲಿತ ನೀರಿನ ಮರುಬಳಕೆ ವ್ಯವಸ್ಥೆ ಅಲ್ಲದೆ ಸ್ಮಾರ್ಟ್ ಟ್ರಾಫಿಕ್ ಮತ್ತು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಯೋಜನೆಗಳು ಇಲ್ಲಿನ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ. ಹೊರಗೆ 40 ಡಿಗ್ರಿ ಬಿಸಿಲಿನ ತಾಪವಿದ್ದರೂ ಮನದೊಳಗೆ ಮುದನೀಡುವ ಸೌಂದರ್ಯವೇ ಸುತ್ತಲೂ ಕಾಣಿಸುತ್ತದೆ.

ದುಡ್ಡಿರುವವನೇ ದೊಡ್ಡವನಿಲ್ಲಿ...

ಇಲ್ಲಿ ಈಗ ಕ್ಯಾಸಿನೋಗಳ ಆಟ ಮಾತ್ರವಲ್ಲ – ಈ ನಗರವು ಹೊಸ ತಲೆಮಾರಿಗೆ ಸೃಜನಶೀಲತೆಯ ವೇದಿಕೆಯಾಗಿದೆ. ಜಗತ್ತಿನ ಉನ್ನತ ಇವೆಂಟ್‌ಗಳು, ಫ್ಯಾಷನ್ ಶೋಗಳು, ಫಾರ್ಮುಲಾ-1 ಗ್ರ್ಯಾಂಡ್ ಪ್ರಿ, ಮತ್ತು ಇ-ಸ್ಪೋರ್ಟ್ಸ್ ಟೂರ್ನಿಗಳು ಇಲ್ಲಿ ನಿತ್ಯ ನಡೆಯುತ್ತಿರುತ್ತಲೇ ಇರುತ್ತವೆ. ಆದರೆ ಇಲ್ಲಿ ಕ್ಯಾಸಿನೋ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗಿ ಬೀದಿಗೆ ಬಂದವರೇ ಹೆಚ್ಚು ಎನ್ನುತ್ತದೆ ಅಲ್ಲಿಯ ಇತಿಹಾಸ.ಅಮೆರಿಕ ಪ್ರವಾಸ ಮಾಡುವವರು ತಪ್ಪದೇ ನೋಡಲೇ ಬೇಕಾದ ಸ್ಥಳ ಲಾಸ್‌ ವೇಗಸ್‌. ಆದರೆ ಅದರ ಸೊಬಗನ್ನು ನೋಡಬೇಕೆ ಹೊರತು ಅದರ ಅಮಲಿನಲ್ಲಿ ಸಿಕ್ಕಿಕೊಂಡರೆ ಹೊರಬರುವುದು ಸುಲಭದ ಮಾತಲ್ಲ.