Tuesday, November 11, 2025
Tuesday, November 11, 2025

ಇನ್ನೂ ಬಿದ್ದಿಲ್ಲ ಲಂಡನ್ ಸೇತುವೆ !

ಥೇಮ್ಸ್ ನದಿಯ ತೀರದೆಡೆ ಸಾಗಿದರೆ, ದಾರಿಯಲ್ಲಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ನೇರವಾದ ರಸ್ತೆಗಳಲ್ಲಿ ಹೆಚ್ಚೂ ಕಡಿಮೆ ಒಂದೇ ಬಣ್ಣದ (English color) ಆಕರ್ಷಣೀಯ, ಕ್ರಮಬದ್ಧ, ಒಂದೇ ವಿನ್ಯಾಸದ ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸುತ್ತವೆ. ವಿಶೇಷವೆಂದರೆ ಪ್ರತಿ ಕಟ್ಟಡದ ಗೋಡೆಯೂ ಚಿಕ್ಕ ಚಿಕ್ಕ ಇಟ್ಟಿಗೆ ಗಾತ್ರದ ಮಾದರಿಯ ಟೈಲ್ಸ್‌ನಲ್ಲೇ ಕಾಣಿಸುತ್ತದೆ. ರೋಮನ್ನರು ತಾವು ಆಳ್ವಿಕೆಗೆ ಒಳಪಡಿಸಿದ್ದ ಪ್ರದೇಶದ ಕುರುಹಾಗಿ ಈ ವಿನ್ಯಾಸವನ್ನು ಬಳಸಿದ್ದರಂತೆ.

  • ವತ್ಸಲಾ ಶ್ರೀಧರ್

ವಿದೇಶಗಳಲ್ಲಿರುವ ಸುಂದರ ತಾಣಗಳನ್ನು ವೀಕ್ಷಿಸುವ ಆಸೆ ಎಲ್ಲರಂತೆ ನನಗೂ ಇತ್ತು. ಅದರಲ್ಲೂ ಅಗಾಧ ಪ್ರಕೃತಿ ಸೌಂದರ್ಯ, ವಿಭಿನ್ನ ಸಂಸ್ಕೃತಿಗಳನ್ನೊಳಗೊಂಡ ಐತಿಹಾಸಿಕ ಮಹತ್ವವುಳ್ಳ ಯುರೋಪ್‌ನ ದೇಶಗಳನ್ನು ನೋಡುವ ಆಸೆ. ಇದು ನೆರವೇರಿದ್ದು ಅನುಭವಿ ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಸಮಾನಮನಸ್ಕ ಸ್ನೇಹಿತರು ಕಾರ್ಯೋನ್ಮುಖರಾದಾಗ. ನಾನು, ಇವರು, ಸುಮಾ, ಇಂದಿ & ಸಹೋದ್ಯೋಗಿ ಸ್ನೇಹಿತರು ಮತ್ತು ಕುಟುಂಬದವರು ಹಾಗೂ ಇತರ ಪ್ರವಾಸಿ ಮಿತ್ರರ ಜತೆ ಕೈಗೊಂಡ ಈ ಪ್ರವಾಸ ನಿಜಕ್ಕೂ ಸ್ಮರಣೀಯ. ಯುರೋಪ್ ಪ್ರವಾಸದ ಸಂಕ್ಷಿಪ್ತವಾದ ವಿವರ ಪ್ರವಾಸಪ್ರಿಯ ಓದುಗರಾದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೇ ತಿಂಗಳ ನಾಲ್ಕನೇ ತಾರೀಕು ನಮ್ಮ ಪ್ರವಾಸದ ಮೊದಲ ದಿನ ಬೆಳಗ್ಗೆ 3 ಗಂಟೆಗೆ ನಮ್ಮ ವಿಮಾನಯಾನ ಪ್ರಾರಂಭವಾಯಿತು. ಜರ್ಮನ್‌ನ ಫ್ರ್ಯಾಂಕ್‌ಫರ್ಟ್‌ನಲ್ಲಿ ವಿಮಾನ ಬದಲಾಯಿಸಿ ಇಂಗ್ಲೆಂಡ್‌ನ ರಾಜಧಾನಿ ಲಂಡನ್ ತಲುಪಿದಾಗ ನಮ್ಮನ್ನು ಸ್ವಾಗತಿಸಿದ್ದು ಕೊರೆಯುವ ಚಳಿ ಮತ್ತು ತಣ್ಣನೆಯ ಗಾಳಿ. ಅಬ್ಬಾ! ಚಳಿಯ ಅಬ್ಬರಕ್ಕೆ ನಾವು ಅಕ್ಷರಶಃ ಹೌಹಾರಿದ್ದೆವು. ಮೇ ತಿಂಗಳೆಂದರೆ ಭಾರತದಲ್ಲಿ ಬಿರುಬೇಸಗೆ. ವಿಮಾನ ಹತ್ತಿ ಇಳಿಯುವ ಹೊತ್ತಿಗೆ ವಾತಾವರಣ ಈ ಪರಿ ಬದಲಾಗಿಬಿಟ್ಟರೆ ದೇಹಕ್ಕೆ ಮನಸ್ಸಿಗೆ ಶಾಕ್ ಆಗದಿರುತ್ತದೆಯೇ? ಶಾಕ್ ಆಗಿದ್ದಕ್ಕಿಂತ ಮಿಗಿಲಾಗಿ ಆಗ ಶಾಖ ಬೇಕೆನಿಸಿತ್ತು. ಇಷ್ಟು ಚಳಿಯಲ್ಲಿ ಪ್ರವಾಸ ಮುಂದುವರಿಸಲು ಸಾಧ್ಯವೇ ಎಂದು ಆ ಕ್ಷಣದಲ್ಲಿ ಅನಿಸಿದ್ದಂತೂ ಸತ್ಯ. ಆದರೆ ಮನುಷ್ಯನ ದೇಹಕ್ಕೆ ಬಹಳ ಬೇಗ ಹವಾಮಾನದ ಬದಲಾವಣೆಗೆ ಒಗ್ಗಿಕೊಳ್ಳುವ ತಾಕತ್ತಿದೆ ಎಂಬುದು ಮತ್ತೊಮ್ಮೆ ಪ್ರೂವ್ ಆಯ್ತು. ಆ ಚಳಿಗೆ ನಮ್ಮ ದೇಹ ಮತ್ತು ಮನಸ್ಸು ತಯಾರಾಗಿಬಿಟ್ಟಿತ್ತು.

ಹೊಟೇಲ್ ರೂಮ್‌ಗೆ ಹೋಗಿ ಲಗೇಜ್ ಇಟ್ಟು ಫ್ರೆಶ್‌ ಆಗಿ ಊಟ ಮುಗಿಸಿ ನಂತರ ಸುಂದರವಾದ ಬಸ್‌ನಲ್ಲಿ ಸಾಗಿ ಥೇಮ್ಸ್ ನದಿಯ ತೀರದೆಡೆ ಸಾಗಿದೆವು. ದಾರಿಯಲ್ಲಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ನೇರವಾದ ರಸ್ತೆಗಳಲ್ಲಿ ಹೆಚ್ಚೂ ಕಡಿಮೆ ಒಂದೇ ಬಣ್ಣದ (English color) ಆಕರ್ಷಣೀಯ, ಕ್ರಮಬದ್ಧ, ಒಂದೇ ವಿನ್ಯಾಸದ ದೊಡ್ಡ ದೊಡ್ಡ ಕಟ್ಟಡಗಳು. ಒಂದು ವಿಶೇಷವೆಂದರೆ ಪ್ರತಿ ಕಟ್ಟಡದ ಗೋಡೆಯೂ ಚಿಕ್ಕ ಚಿಕ್ಕ ಇಟ್ಟಿಗೆ ಗಾತ್ರದ ಮಾದರಿಯ ಟೈಲ್ಸ್‌ನಲ್ಲೇ ಕಾಣಿಸುತ್ತದೆ. (ರೋಮ್‌ಗೆ ಹೋದಾಗ ತಿಳಿದಿದ್ದೇನೆಂದರೆ, ರೋಮನ್ನರು ತಾವು ಆಳ್ವಿಕೆಗೆ ಒಳಪಡಿಸಿದ್ದ ಪ್ರದೇಶದ ಕುರುಹಾಗಿ ಈ ವಿನ್ಯಾಸವನ್ನು ಬಳಸಿದ್ದರಂತೆ).

Basava statue in london

ಲಂಡನ್‌ನಲ್ಲೂ ಬಸವ

ಪರದೇಶದಲ್ಲಿ ಭಾರತದ ಚಿಕ್ಕ ಗಾಳಿ ಬೀಸಿದರೂ ಅದರ ಸಂತಸ ಬೇರೆ. ಹೀಗಿರುವಾಗ ನಮ್ಮ ರಾಜ್ಯದ ಮಹಾಕವಿ, ಜಗಜ್ಯೋತಿ ಎಂದೇ ಖ್ಯಾತರಾದ ಬಸವಣ್ಣನವರ ವಿಗ್ರಹ ಕಂಡರೆ ಹೇಗನಿಸಬಹುದು. ಕಾಯಕವೇ ಕೈಲಾಸ ಎಂಬ ತತ್ತ್ವ ಬೋಧಿಸಿದ ಬಸವೇಶ್ವರರ ವಿಗ್ರಹವನ್ನು ವೀಕ್ಷಿಸಿದೆವು. ಕಪ್ಪುಶಿಲೆಯಲ್ಲಿ ಕೆತ್ತಿದ ಸುಂದರ ವಿಗ್ರಹ. ಅಲ್ಲಿಗೆ ಭೇಟಿಕೊಟ್ಟ ಗಣ್ಯರ ಹೆಸರುಗಳನ್ನು ವಿಗ್ರಹದ ಮುಂದೆ ದಾಖಲಿಸಿದ್ದಾರೆ. ನದಿ ತೀರದ ಬಳಿ ಇರುವ ಈ ಜಾಗದಲ್ಲಿ ಸಹಜವಾಗಿಯೇ ಚಳಿ ಜಾಸ್ತಿ.

Madamme Tussauds Wax museaum

ಮನ ಕರಗಿಸೋ ಮೇಣದ ವ್ಯಕ್ತಿಗಳು!

ಎರಡನೇ ದಿನದ ಪ್ರವಾಸದಲ್ಲಿ, ಬೆಳಿಗ್ಗೆ ತಿಂಡಿ ಮುಗಿಸಿ ಮೊದಲು ನೋಡಿದ್ದು Madame Tussauds ವ್ಯಾಕ್ಸ್ ಮ್ಯೂಸಿಯಂ. ಹಲವಾರು ಪ್ರತಿಷ್ಠಿತ ಆಟಗಾರರು, ನಟ-ನಟಿಯರು, ಕಲಾವಿದರು ಮೊದಲಾದವರ ಮೇಣದ ಗೊಂಬೆಗಳು ಅದೆಷ್ಟು ಅದ್ಭುತವಾಗಿ ಮತ್ತು ಸಹಜವಾಗಿ ತಯಾರಿಸಿದ್ದಾರೆಂದರೆ, ಅವು ಜೀವತಳೆದು ನಮ್ಮ ಮುಂದೆ ನಿಂತಂತೆ ಭಾಸವಾಗುತ್ತಿತ್ತು. ಸಚಿನ್ ತೆಂಡೂಲ್ಕರ್, ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ರಾಜಕುಮಾರಿ ಡಯಾನಾ, ಟೈಟಾನಿಕ್ ಹೀರೋ ಲಿಯೋನಾರ್ಡೋ ಡಿಕ್ಯಾಪ್ರಿಯೋ. ಒಬ್ರಾ ಇಬ್ರಾ! ಕಲಾಕಾರನ ಕೈಚಳಕ ಕಂಡು ಪುಳಕಗೊಂಡೆವು.

ಮನತಣಿಯುವಷ್ಟು ಫೊಟೋ ಕ್ಲಿಕ್ಕಿಸಿಕೊಂಡು ಕೆಳಗಡೆ ಹೋದರೆ ಅಲ್ಲಿ ಸ್ಕೇರಿ ಹೌಸ್. ಕತ್ತಲಲ್ಲಿ ಬೀಗಹಾಕಿದ ಮನೆಯೊಳಗಿಂದ ಶಬ್ದವಾದಂತೆ, ದೆವ್ವ ಕಿರಿಚಿದಂತೆ ಹೀಗೆ ಹಲವು ರೀತಿಯಲ್ಲಿ ಭಯಪಡಿಸುತ್ತೆ ಆ ಮನೆ. ಈಗಾಗಲೇ ಭಾರತದಲ್ಲೂ ಸ್ಕೇರಿ ಹೌಸ್ ಖ್ಯಾತಿ ಪಡೆದಿವೆ. ಕಾಮನ್ ಕೂಡ ಆಗಿದೆ. ಆದರೆ ಇಲ್ಲಿಯ ಸ್ಕೇರಿ ಹೌಸ್ ಎಲ್ಲದಕ್ಕಿಂತ ಭಯಾನಕ ಬಿಡಿ. ಹೆದರಿ ಹೌಹಾರಿ ಅಲ್ಲಿಂದ ಹೊರಟೆವು.

ಟ್ಯಾಕ್ಸಿಯಲ್ಲಿ ಲಂಡನ್

ಅಲ್ಲಿಂದ ಹೊರಗೆ ಹೊರಟರೆ ಟ್ಯಾಕ್ಸಿಯಲ್ಲಿ ಕೂರಿಸಿ ಒಂದು ಟೂರ್‌ ಮಾಡಿಸುತ್ತಾರೆ. ಅದಂತೂ ಎಂದೂ ಮರೆಯಲಾಗದ ಅನುಭವ. 400 ವರ್ಷಗಳ ಹಿಂದಿನ ಲಂಡನ್ ಇತಿಹಾಸದ ದೃಶ್ಯ ಅನಾವರಣವಾಗುತ್ತಾ ಹೋಗುತ್ತದೆ. ಮಬ್ಬುಗತ್ತಲಲ್ಲಿ, ಹಿನ್ನೆಲೆಯ ಶಬ್ದ ಮತ್ತು ವಿವರದೊಂದಿಗೆ ಲಂಡನ್ ಇತಿಹಾಸ ಮತ್ತು ಸಂಸ್ಕೃತಿಯ ಚಿತ್ರಣ ನಮ್ಮನ್ನು ಆ ಕಾಲಕ್ಕೇ ಕರೆದೊಯ್ದಿತ್ತು.

ಮಧ್ಯಾಹ್ನದ ಹೊತ್ತಿಗೆ ಟಾವರ್‌ ಆಫ್‌ ಲಂಡನ್ ನೋಡಿ, ನಂತರ ಲಂಡನ್ ಬ್ರಿಡ್ಜ್‌ ಕಡೆಗೆ ಬಂದೆವು. ನಗರದ ಮಧ್ಯದಲ್ಲಿ ಹರಿಯುವ ಥೇಮ್ಸ್ ನದಿಗೆ ಕಟ್ಟಿರುವ ಬ್ರಿಡ್ಜ್‌ ಎತ್ತರ ಮಾತ್ರವಲ್ಲ, ಅದರ ಅಗಾಧ ಗಾತ್ರ ಅಚ್ಚರಿ ಹುಟ್ಟಿಸುತ್ತದೆ. ಸುಂದರವಾದ ಈ ಸೇತುವೆ ಬಗ್ಗೆ ಪದ್ಯಗಳಿರುವುದು ಅಚ್ಚರಿ ಅನಿಸಲಿಲ್ಲ. ಲಂಡನ್ ಬ್ರಿಡ್ಜ್‌ ಈಸ್ ಫಾಲಿಂಗ್ ಡೌನ್ ಪದ್ಯ ನೆನಪಾದರೂ, ಬ್ರಿಡ್ಜ್‌ ನೋಡಿ ಅದರ ಸೌಂದರ್ಯಕ್ಕೆ ನಾವು ಬಿದ್ದೆವು ಅನಿಸಿತು. ಹಾಗೆಯೇ ವಾಪಸ್ ಮಾರ್ಗದಲ್ಲಿ ವೆಸ್ಟ್ ಮಿನಿಸ್ಟರ್ ಅಬೆ ಕೂಡ ನೋಡಲು ಸಾಧ್ಯವಾಯ್ತು.

london eye capsule

ಕ್ಯಾಪ್ಸೂಲ್ ಯಾನ

ಲಂಡನ್‌ಗೆ ಹೋದವರು ಲಂಡನ್ ಐ ಕ್ಯಾಪ್ಸೂಲ್‌ನಲ್ಲಿ ಕುಳಿತು ನಗರ ವೀಕ್ಷಣೆ ಮಾಡುವುದನ್ನು ಮಿಸ್ ಮಾಡಕೂಡದು. ಒಂದೊಂದು ಕ್ಯಾಪ್ಸೂಲ್ ಎಂದು ಕರೆಯುವ ಕ್ಯಾಬಿನ್‌ನಲ್ಲಿ 25 ಜನ ಕುಳಿತುಕೊಳ್ಳಬಹುದು. ವೃತ್ತಾಕಾರವಾಗಿ ಸರಿಸುಮಾರು 135 ಮೀಟರ್‌ವರೆಗೆ ನಿಧಾನವಾಗಿ ಮೇಲಕ್ಕೆ ಹೋಗುತ್ತದೆ. ಅಲ್ಲಿಂದ ಲಂಡನ್ ನಗರದ ಅದ್ಭುತ ದೃಶ್ಯ ನೋಡಲು ಬಲುಸುಂದರ. ಪಾರ್ಲಿಮೆಂಟ್ ಹೌಸ್, ಬ್ರಿಡ್ಜ್‌ಗಳು, ನದಿ ಎಲ್ಲವೂ ಅಲ್ಲಿ ಕೂತು ವೀಕ್ಷಿಸಬಹುದು. ರಾಜಮನೆತನದವರ ವಾಸ್ತವ್ಯವಿರುವ ಬಕಿಂಗ್ ಹ್ಯಾಮ್ ಅರಮನೆ ನಮ್ಮ ನಿರೀಕ್ಷೆಯಷ್ಟು ವೈಭವೋಪೇತವಾಗಿರದೇ ಆಧುನಿಕ ದೊಡ್ಡ ಬಂಗಲೆಯಂತೆ ಭಾಸವಾಯ್ತಷ್ಟೆ.

ಪ್ರವಾಸದ ಎರಡು ದಿನಗಳಲ್ಲಿ ನನಗೆ ನೋಡಿ ಅನುಭವಿಸಲು ಸಿಕ್ಕಿದ್ದಿಷ್ಟು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...