ಮನೆಯಿಂದ ದೂರ, ತ್ರಿವರ್ಣಕ್ಕೆ ಇನ್ನಷ್ಟು ಹತ್ತಿರ!
ಭಾರತದಲ್ಲಿದ್ದಾಗ ತ್ರಿವರ್ಣ ನಮ್ಮ ಸುತ್ತಲಿನ ಪರಿಚಿತ ದೃಶ್ಯ. ಅದನ್ನು ನೋಡಲು ನಾವು ಹುಡುಕಿಕೊಂಡು ಹೋಗಬೇಕಾಗಿಲ್ಲ. ಇನ್ನೂ ನನ್ನ ಪ್ರವಾಸಗಳಲ್ಲಿ ಭಾರತದ ಧ್ವಜ ನನಗೆ ಕೇವಲ ಮೂರು ಬಣ್ಣಗಳ ಧ್ವಜವಲ್ಲ. ಅದು ನನ್ನ ದೇಶವನ್ನು ನೆನಪಿಸುವ ಒಂದು ಭಾವನೆ, ನನ್ನ ಗುರುತನ್ನು ಹೇಳುವ ಒಂದು ದೊಡ್ಡ ಸಂಕೇತ.
- ವಿಜಯ್ ಕೊಪ್ಪ
ವಿದೇಶ ಪ್ರವಾಸಗಳಲ್ಲಿ ನಾವು ಎಷ್ಟೋ ಅದ್ಭುತಗಳನ್ನು ನೋಡುತ್ತೇವೆ. ಜಗತ್ತಿನ ಪ್ರಸಿದ್ಧ ಕಟ್ಟಡಗಳು, ಪ್ರಕೃತಿ ಸೌಂದರ್ಯ, ಐತಿಹಾಸಿಕ ಸ್ಥಳಗಳು, ವಿಭಿನ್ನ ಸಂಸ್ಕೃತಿ, ಹೊಸ ಜನರು, ಹೊಸ ಅನುಭವಗಳು. ಅವುಗಳ ಮುಂದೆ ನಿಂತು ಫೊಟೋ ತೆಗೆದುಕೊಳ್ಳುತ್ತೇವೆ. ಕೆಲವು ವರ್ಷಗಳ ನಂತರ ಆ ಫೊಟೋಗಳನ್ನು ನೋಡಿದಾಗ ಆ ಕ್ಷಣಗಳು ಮತ್ತೆ ನೆನಪಾಗುತ್ತವೆ.
ಆದರೆ, ವಿದೇಶದಲ್ಲಿ ಸುತ್ತಾಡುವಾಗ, ಇವೆಲ್ಲದರ ನಡುವೆ ಅನಿರೀಕ್ಷಿತವಾಗಿ ಭಾರತದ ತ್ರಿವರ್ಣ ಧ್ವಜ ಕಣ್ಣಿಗೆ ಬಿದ್ದರೆ, ಅದೇನೋ ಬೇರೆ ಅನುಭವ.
ಇದನ್ನೂ ಓದಿ: ಜೈಲು ಪ್ರವಾಸೋದ್ಯಮಕ್ಕೆ ಡಿಮ್ಯಾಂಡ್ !
ಭಾರತದಲ್ಲಿರುವಾಗ ಎಲ್ಲೆಡೆ ಕಾಣುವ ಅದೇ ಧ್ವಜ. ಶಾಲೆಯಲ್ಲಿ, ಸರಕಾರಿ ಕಚೇರಿಯಲ್ಲಿ, ಸ್ವಾತಂತ್ರ್ಯ ದಿನಾಚರಣೆಯಲ್ಲಿ, ಗಣರಾಜ್ಯೋತ್ಸವದಲ್ಲಿ ಕಾಣುವ ಅದೇ ತ್ರಿವರ್ಣ. ಆದರೆ, ಸಾವಿರಾರು ಕಿಲೋಮೀಟರ್ ದೂರದಲ್ಲಿ, ಅಪರಿಚಿತ ದೇಶದಲ್ಲಿ ಅದನ್ನು ನೋಡಿದಾಗ ಅದರೊಳಗಿನ ಭಾವನೆ ಇನ್ನಷ್ಟು ಗಾಢವಾಗಿ ಅರ್ಥವಾಗುತ್ತದೆ.
ಚೀನಾದ ಮಹಾಗೋಡೆಯ ಮೇಲೆ ತ್ರಿವರ್ಣ
ಕೆಲವು ವರ್ಷಗಳ ಹಿಂದೆ ಚೀನಾಕ್ಕೆ ಹೋಗಿದ್ದಾಗ, ಬೀಜಿಂಗ್ ಬಳಿ ಇರುವ ಚೀನಾದ ಮಹಾಗೋಡೆಯ ಒಂದು ಪ್ರವಾಸಿ ತಾಣಕ್ಕೆ ಹೋಗಿದ್ದೆವು. ನಮಗೆ ಸ್ವಲ್ಪ ಬಿಡುವಿನ ಸಮಯ ಸಿಕ್ಕಿದ್ದರಿಂದ ಅಲ್ಲಿಗೆ ಹೋಗುವ ಯೋಜನೆ ಮಾಡಿಕೊಂಡಿದ್ದೆವು.

ಪ್ರಪಂಚದ ಅದ್ಭುತಗಳಲ್ಲಿ ಒಂದಾದ ಚೀನಾದ ಮಹಾಗೋಡೆಯನ್ನು ನೋಡುವುದೇ ಒಂದು ವಿಶೇಷ ಅನುಭವ. ಬೆಟ್ಟಗಳ ಮೇಲೆ ಹಾವಿನಂತೆ ಸಾಗುವ ಆ ಗೋಡೆ, ಅದರ ಇತಿಹಾಸ, ಅದರ ಅಗಾಧತೆ ಎಲ್ಲವನ್ನೂ ನೋಡುತ್ತಾ ಮುಂದೆ ಸಾಗುತ್ತಿದ್ದೆವು.
ಪ್ರವಾಸಿ ತಾಣ ಎಂದ ಮೇಲೆ ಸುತ್ತಮುತ್ತ ಸಣ್ಣಪುಟ್ಟ ಅಂಗಡಿಗಳು ಸಹಜ. ನೆನಪಿಗಾಗಿ ಕೊಂಡೊಯ್ಯುವ ವಸ್ತುಗಳು, ಆಟಿಕೆಗಳು, ಟೀ ಶರ್ಟ್‌ಗಳು ಹೀಗೆ ಪ್ರವಾಸಿಗರನ್ನು ಸೆಳೆಯುವ ವ್ಯಾಪಾರಿಗಳು ಅಲ್ಲಿಯೂ ಇದ್ದರು.
ಅಲ್ಲೊಬ್ಬ ರಸ್ತೆಬದಿಯ ವ್ಯಾಪಾರಿ ನಮ್ಮ ಗಮನ ಸೆಳೆದ. ನಾವು ಭಾರತೀಯರು ಎಂದು ಆತನಿಗೆ ಗೊತ್ತಾಯಿತು. ಬಹುಶಃ ನಮ್ಮ ಮಾತು ಕೇಳಿರಬಹುದು, ಅಥವಾ ಭಾರತೀಯ ಪ್ರವಾಸಿಗರನ್ನು ನೋಡಿ ನೋಡಿ ಗುರುತಿಸುವಷ್ಟು ಅನುಭವ ಆತನಿಗಿದ್ದಿರಬಹುದು. ನಮ್ಮನ್ನು ನೋಡುತ್ತಿದ್ದಂತೆಯೇ ಬಾಲಿವುಡ್ ಹಾಡೊಂದನ್ನು ಹಾಕಿದ!
ಚೀನಾದ ಮಹಾಗೋಡೆಯ ಬಳಿ ನಿಂತು ಬಾಲಿವುಡ್ ಹಾಡು ಕೇಳುವುದೇ ನಮಗೆ ನಗು ತರಿಸಿತು. ಆದರೆ, ಆತನ ವ್ಯಾಪಾರದ ತಂತ್ರ ಅಲ್ಲಿಗೆ ಮುಗಿದಿರಲಿಲ್ಲ. ಮುಂದೆ ಆತ ತೋರಿಸಿದ್ದು, ಭಾರತದ ಸಣ್ಣ ತ್ರಿವರ್ಣ ಧ್ವಜಗಳನ್ನು!
ಆ ಕ್ಷಣದಲ್ಲಿ ನನಗೆ ಅನಿಸಿದ್ದು, ಈತನಿಗೆ ಪ್ರವಾಸಿಗರ ಮನಸು ಚೆನ್ನಾಗಿಯೇ ಗೊತ್ತಿದೆ ಎಂದು. ಯಾವ ದೇಶದವರು ಬಂದರೆ ಯಾವ ಹಾಡು ಹಾಕಬೇಕು, ಯಾವ ವಸ್ತು ತೋರಿಸಬೇಕು, ಯಾವುದನ್ನು ನೋಡಿದರೆ ಅವರ ಮುಖದಲ್ಲಿ ಸಂತೋಷ ಮೂಡುತ್ತದೆ ಎಂಬುದನ್ನು ಆತ ಕಲಿತುಕೊಂಡಿದ್ದ.
ಭಾರತದ ಆ ಪುಟ್ಟ ಧ್ವಜಗಳನ್ನು ನೋಡಿದ ಮೇಲೆ ಬೆಲೆ ಎಷ್ಟು, ಬೇರೆ ಅಂಗಡಿಯಲ್ಲಿ ಕಡಿಮೆಗೆ ಸಿಗುತ್ತದೆಯೇ ಎಂಬ ಯಾವ ಲೆಕ್ಕಾಚಾರವೂ ಬರಲಿಲ್ಲ. ಎರಡು ಧ್ವಜಗಳನ್ನು ಕೊಂಡುಕೊಂಡೆವು.
ಅವುಗಳನ್ನು ಹಿಡಿದುಕೊಂಡೇ ಮಹಾಗೋಡೆಯ ಮೇಲೆ ಹತ್ತಿದೆವು. ಸಾವಿರಾರು ವರ್ಷಗಳ ಇತಿಹಾಸವಿರುವ ಚೀನಾದ ಮಹಾಗೋಡೆಯ ಮೇಲೆ ನಿಂತು ಭಾರತದ ತ್ರಿವರ್ಣ ಹಿಡಿದು ಹೆಮ್ಮೆಯಿಂದ ಫೊಟೋ ತೆಗೆದುಕೊಂಡೆವು.
ಇಂದಿಗೂ ಆ ಫೊಟೋ ನೋಡಿದಾಗ ನನಗೆ ಚೀನಾದ ಮಹಾಗೋಡೆಯಷ್ಟೇ ನೆನಪಾಗುವುದಿಲ್ಲ. ಆ ರಸ್ತೆಬದಿಯ ವ್ಯಾಪಾರಿಯೂ ನೆನಪಾಗುತ್ತಾನೆ.
ಆತನಿಗೆ ಅದು ವ್ಯಾಪಾರ. ನಮಗೆ ಅದು ಭಾವನೆ. ಬಹುಶಃ ಆತ ನಮಗೆ ಮಾರಿದ್ದು ಎರಡು ಸಣ್ಣ ಧ್ವಜಗಳಲ್ಲ. ನಮ್ಮೊಳಗೇ ಇದ್ದ ಒಂದು ಭಾವನೆಯನ್ನು ಗುರುತಿಸಿ, ಅದನ್ನೇ ನಮಗೆ ಮಾರಿದ್ದ!
ಬ್ಯಾಗಿನಲ್ಲಿ ಸದಾ ಒಂದು ಪುಟ್ಟ ತ್ರಿವರ್ಣ
ನನ್ನ ಬಹುತೇಕ ವಿದೇಶ ಪ್ರವಾಸಗಳಲ್ಲಿ ನನ್ನ ಜತೆಗೆ ಇರುವ ಒಂದು ಪುಟ್ಟ ವಸ್ತುವಿದೆ. ಅದು ಭಾರತದ ಧ್ವಜದ ಬ್ಯಾಡ್ಜ್.
ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಭೆಗಳು, ಉಪನ್ಯಾಸಗಳು ಇರುವಾಗ ಸಾಧ್ಯವಾದಷ್ಟು ಅದನ್ನು ಧರಿಸುತ್ತೇನೆ. ಕೆಲವೊಮ್ಮೆ ಭಾರತವನ್ನು ಪ್ರತಿನಿಧಿಸುವ ನಿಯೋಗದ ಭಾಗವಾಗಿ ಅಥವಾ ವಿದೇಶದ ಯಾವುದೋ ಸರಕಾರ ಅಥವಾ ಸಂಸ್ಥೆ ವೈಯಕ್ತಿಕವಾಗಿ ಉಪನ್ಯಾಸಕ್ಕೆ ಅಥವಾ ಚರ್ಚೆಗೆ ಆಹ್ವಾನಿಸಿರಬಹುದು. ಆಗಲೂ ಆ ಪುಟ್ಟ ತ್ರಿವರ್ಣದ ಬ್ಯಾಡ್ಜ್ ಧರಿಸಲು ನನಗೆ ಇಷ್ಟ. ಅದು ದೊಡ್ಡದೇನೂ ಅಲ್ಲ. ಕೋಟಿನ ಮೇಲೆ ಕಾಣುವ ಒಂದು ಪುಟ್ಟ ಗುರುತು ಅಷ್ಟೇ. ಆದರೆ, ಅದನ್ನು ಧರಿಸಿದಾಗ ನನ್ನೊಳಗೆ ಮೂಡುವ ಭಾವನೆ ದೊಡ್ಡದು.
ವೇದಿಕೆಯಲ್ಲಿ ನಮ್ಮ ಹೆಸರಿನ ಜತೆಗೆ ನಮ್ಮ ದೇಶದ ಹೆಸರು ಹೇಳಿದಾಗ, ಎದುರಿಗಿರುವವರು ಆ ಪುಟ್ಟ ತ್ರಿವರ್ಣವನ್ನು ಗಮನಿಸಿದಾಗ, ಮಾತುಕತೆಯಲ್ಲೂ ಅದಕ್ಕೊಂದು ವಿಶೇಷ ಗೌರವ ಸೇರುತ್ತದೆ. ನಾವು ಅಲ್ಲಿ ಕೇವಲ ಒಬ್ಬ ವ್ಯಕ್ತಿಯಾಗಿ ನಿಂತಿಲ್ಲ, ನಮ್ಮ ಹಿಂದೆ ಒಂದು ದೇಶ, ಒಂದು ಸಂಸ್ಕೃತಿ, ಒಂದು ಗುರುತು ಇದೆ ಎನ್ನುವ ಭಾವನೆ ಮೂಡುತ್ತದೆ.
ಬೊಗೋಟಾದಲ್ಲಿ ಕಂಡ ತ್ರಿವರ್ಣ
ಇತ್ತೀಚೆಗೆ ಕೊಲಂಬಿಯಾದ ಬೊಗೋಟಾಗೆ ಹೋಗಿದ್ದಾಗಲೂ ಇಂಥದ್ದೇ ಒಂದು ಕ್ಷಣ ಎದುರಾಯಿತು. ಅಲ್ಲಿನ ಪ್ರಸಿದ್ಧ ಪ್ರವಾಸಿ ಸ್ಥಳಕ್ಕೆ ಕೇಬಲ್ ಕಾರಿನಲ್ಲಿ ಹೋಗುವಾಗ, ಪ್ರವೇಶದ ಬಳಿ ವಿವಿಧ ದೇಶಗಳ ಧ್ವಜಗಳನ್ನು ಪ್ರದರ್ಶಿಸಿದ್ದರು. ಒಂದೊಂದಾಗಿ ನೋಡುತ್ತಾ ಹೋದಾಗ ಅವುಗಳ ನಡುವೆ ನಮ್ಮ ಭಾರತದ ತ್ರಿವರ್ಣವೂ ಕಾಣಿಸಿತು.
ಅಷ್ಟೇ. ಹೆಜ್ಜೆ ನಿಂತಿತು. ಭಾರತದಿಂದ ಸುಮಾರು 15,000 ಕಿಲೋಮೀಟರ್ ದೂರದಲ್ಲಿ, ʼಇಲ್ಲಿ ನಮ್ಮ ಧ್ವಜ ಇದೆ!ʼ ಎಂಬ ಸಣ್ಣ ಸಂತೋಷ. ಅದರ ಮುಂದೆ ಒಂದು ಫೊಟೋ ತೆಗೆದುಕೊಳ್ಳದೆ ಮುಂದೆ ಹೋಗಲು ಮನಸಾಗಲಿಲ್ಲ.
ಅದು ಯಾರೋ ನಮಗಾಗಿ ಅಲ್ಲಿ ಹಾಕಿದ್ದ ಧ್ವಜವಲ್ಲ. ಹಲವು ದೇಶಗಳ ಧ್ವಜಗಳ ಪೈಕಿ ಭಾರತದ ಧ್ವಜವೂ ಒಂದು. ಆದರೆ, ನಮ್ಮ ಕಣ್ಣಿಗೆ ಮಾತ್ರ ಅದು ಉಳಿದೆಲ್ಲ ಧ್ವಜಗಳಿಗಿಂತ ಮೊದಲು ಕಾಣುತ್ತದೆ.

ನೂರಾರು ಧ್ವಜಗಳ ನಡುವೆ ನಮ್ಮದು
ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲೂ ಇದೇ ಅನುಭವ ನನಗೆ ಹಲವು ಬಾರಿ ಆಗಿದೆ. ವೇದಿಕೆಯ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಧ್ವಜಗಳನ್ನು ಇಟ್ಟಿರುತ್ತಾರೆ. ಸಭಾಂಗಣದ ಹೊರಗೆ ಸದಸ್ಯ ರಾಷ್ಟ್ರಗಳ ಧ್ವಜಗಳು ಹಾರಾಡುತ್ತಿರುತ್ತವೆ. ಅಂಥ ಜಾಗದಲ್ಲಿ ನಮ್ಮ ತ್ರಿವರ್ಣ ಕಂಡಾಗ ಅದರ ಪಕ್ಕದಲ್ಲಿ ನಿಂತು ಒಂದು ಫೊಟೋ ತೆಗೆದುಕೊಳ್ಳಬೇಕು ಎನ್ನಿಸುತ್ತದೆ.
ಇದು ಕೇವಲ ದೇಶಭಕ್ತಿಯ ಪ್ರದರ್ಶನ ಎಂದು ನನಗೆ ಅನಿಸುವುದಿಲ್ಲ. ಬದಲಾಗಿ, ನಮ್ಮ ಮನೆಯಿಂದ ಸಾವಿರಾರು ಕಿಲೋಮೀಟರ್ ದೂರ ಹೋದಾಗ ನಮ್ಮ ಗುರುತಿನ ಬಗ್ಗೆ ಮೂಡುವ ಸಹಜವಾದ ಪ್ರೀತಿ.
ಭಾರತದಲ್ಲಿದ್ದಾಗ ತ್ರಿವರ್ಣ ನಮ್ಮ ಸುತ್ತಲಿನ ಪರಿಚಿತ ದೃಶ್ಯ. ಅದನ್ನು ನೋಡಲು ನಾವು ಹುಡುಕಿಕೊಂಡು ಹೋಗಬೇಕಾಗಿಲ್ಲ. ಆದರೆ, ಚೀನಾದ ಮಹಾಗೋಡೆಯ ಬಳಿ ಯಾವುದೋ ಸಣ್ಣ ಅಂಗಡಿಯಲ್ಲಿ, ಬೊಗೋಟಾದ ಬೆಟ್ಟದ ಮೇಲಿನ ಪ್ರವೇಶದ್ವಾರದಲ್ಲಿ, ಅಥವಾ ಜಗತ್ತಿನ ಯಾವುದೋ ಮೂಲೆಯ ಅಂತಾರಾಷ್ಟ್ರೀಯ ಸಮ್ಮೇಳನದ ವೇದಿಕೆಯಲ್ಲಿ ಅದೇ ತ್ರಿವರ್ಣ ಕಂಡಾಗ ಮನಸು ಒಂದು ಕ್ಷಣ ನಿಲ್ಲುತ್ತದೆ.
ದೂರ ಹೋದಾಗ ಮನೆಯ ನೆನಪು ಹೆಚ್ಚಾಗುವಂತೆ, ದೇಶದಿಂದ ದೂರ ಹೋದಾಗ ಧ್ವಜದ ಮೇಲಿನ ಭಾವನೆಯೂ ಹೆಚ್ಚಾಗುತ್ತದೆಯೇನೋ.
ಅದಕ್ಕೇ ನನ್ನ ಪ್ರವಾಸಗಳಲ್ಲಿ ಭಾರತದ ಧ್ವಜ ನನಗೆ ಕೇವಲ ಮೂರು ಬಣ್ಣಗಳ ಧ್ವಜವಲ್ಲ. ಅದು ನನ್ನ ದೇಶವನ್ನು ನೆನಪಿಸುವ ಒಂದು ಭಾವನೆ, ನನ್ನ ಗುರುತನ್ನು ಹೇಳುವ ಒಂದು ಪುಟ್ಟ ಸಂಕೇತ.
ಎಷ್ಟೇ ದೂರ ಪ್ರಯಾಣಿಸಿದರೂ, ನಮ್ಮ ಜತೆಗೆ ಪ್ರಯಾಣಿಸುವ ಒಂದು ಗುರುತು, ಭಾರತ.