• ಸವಿತಾ, ಕೊಡಗು

ನಾನು ಇದೇ ಅಕ್ಟೋಬರ್ ನಲ್ಲಿ ಕೆನಡಾದ ಟೊರಾಂಟೋದಲ್ಲಿರುವ ಮಗನ ಮನೆಗೆ ಹೋಗಿದ್ದೆ. ಅಲ್ಲಿ ಹೋದ ದಿನದಿಂದಲೇ ಮನೆಯ ಬಾಲ್ಕನಿಯಿಂದ ನೋಡಿದಾಗ, ಬಗೆಬಗೆಯ ಮರಗಳಿಂದ ಕೂಡಿದ ಆ ಪ್ರದೇಶ ಮನ ಸೆಳೆಯುತ್ತಿತ್ತು. ಮರುದಿನವೇ ಮನೆಯಿಂದ 10 ನಿಮಿಷ ದೂರದಲ್ಲಿರುವ ಅಲ್ಲಿಗೆ ಮಕ್ಕಳ ಜೊತೆ ಹೋದೆ. ನೋಡಿದರೆ ಅದು ಪಾರ್ಕ್ ಅಲ್ಲ,ಸ್ಮಶಾನ. ಅದರ ಹೆಸರು ಮೌಂಟ್ ಪ್ಲೆಸೆಂಟ್ ಸಿಮೆಟರಿ. (Mount Pleasant Cemetery).

250 ಎಕರೆ ವಿಸ್ತೀರ್ಣವಿರುವ ಇದು ಟೊರಾಂಟೋ ನಗರದ ಮಧ್ಯ ಭಾಗದಲ್ಲಿದೆ. ಅದರ ಅಂದ ಚಂದ ನೋಡಿ ನನಗೆ ದಿಗ್ಭ್ರಮೆಯಾಯಿತು. ಊಟಿ, ಶ್ರೀಲಂಕಾದಲ್ಲಿ ಬೋಟಾನಿಕಲ್ ಗಾರ್ಡನ್ ನೋಡಿದ ನನಗೆ ಇದು ಅದಕ್ಕಿಂತಲೂ ಅದ್ಭುತವಾಗಿದೆ ಅನಿಸಿತು. ನನಗಲ್ಲಿ ಇಷ್ಟವಾದದ್ದು ಅಲ್ಲಿರುವ ವಿವಿಧ ಥರದ ಮರಗಳು, ಇಡೀ ಪ್ರದೇಶವನ್ನು ಆವರಿಸಿಕೊಂಡಿರುವ ಸುಂದರ ಹುಲ್ಲು ಹಾಸು ಹಾಗೂ ಅದರ ಉತ್ತಮ ನಿರ್ವಹಣೆ.

mount pleasant cemetery toronto3

ಆ ಸಮಯದಲ್ಲಿ ಅಲ್ಲಿರುವ ಕೆಲವು ಮರಗಳು ಬಣ್ಣ ಬದಲಿಸಿ ಚಳಿಗಾಲವನ್ನು ಎದುರು ನೋಡುತ್ತಿದ್ದವು. ರಾಶಿ ರಾಶಿ ಅಳಿಲುಗಳು ಖುಷಿಯಿಂದ ಓಡಾಡುತ್ತಿದ್ದವು .ಅಲ್ಲಿಗೆ ಯಾರು ಬೇಕಾದರೂ ಹೋಗಿ ಬರಬಹುದು. ಪರಿಸರ ಪ್ರೇಮಿಗಳಿಗೆ ಎಷ್ಟು ಹೊತ್ತು ಅಲ್ಲಿದ್ದರೂ ಬೋರ್ ಅನಿಸದು .ಆದರೆ ಅಲ್ಲಿಗೆ ಒಬ್ಬರೇ ಹೋದರೆ ವಾಪಸ್ ಬರಲು ದಾರಿ ಸಿಗುವುದು ಕಷ್ಟ. ಆದರೂ 3 ಬಾರಿ ಹೋಗಿ ಅದರ ಬೇರೆ ಬೇರೆ ಭಾಗಗಳನ್ನು ನೋಡಿ ಬಂದೆ. ಬಹಳ ವಿಸ್ತಾರವಾದ ಪ್ರದೇಶವಾದುದರಿಂದ ಅದರೊಳಗೆ ಬರಲು ಹಲವು ಎಂಟ್ರೆನ್ಸ್ ಗಳಿವೆ. ಒಳಗೆ ಸುಂದರವಾದ ರಸ್ತೆಯ ಸೌಕರ್ಯವಿದೆ .ಆ ರಸ್ತೆಗಳಲ್ಲಿ ಕೆಲವರು ವಾಕ್ ಮಾಡುತ್ತಿರುವುದನ್ನೂ, ಸೈಕಲ್, ಕಾರ್ ಗಳಲ್ಲಿ ಸಂಚರಿಸುತ್ತಿರುವುದನ್ನೂ ಕಂಡೆ. ಅದರೊಳಗೆ ಅಲ್ಲಲ್ಲಿ ಹೂದೋಟಗಳಿವೆ. ಕಾರಂಜಿ ಕೊಳವಿದೆ. ಗಾಜಿನ ಮನೆಯಿದೆ. ಇಡೀ ಸ್ಮಶಾನದ ಕಾಲು ಭಾಗವಾಗುವಷ್ಟು ಪ್ರದೇಶದಲ್ಲಿ ಮಾತ್ರ ದೂರ ದೂರಕ್ಕೆ ಮರಗಳ ನಡುವೆ ಗೋರಿಗಳು, ನೆನಪಿನ ಕಲ್ಲು, ಕಟ್ಟೆಗಳಿವೆ.

ಅವರವರ ಶ್ರೀಮಂತಿಕೆ, ಆಸಕ್ತಿಗೆ ತಕ್ಕಂತೆ ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಸ್ಮಾರಕಗಳಿವೆ. ಕೆಲವು ಕಡೆ, ಒಂದು ದೊಡ್ಡ ಸ್ಮಾರಕದಲ್ಲಿ ಕುಟುಂಬದಲ್ಲಿ ಸತ್ತವರೆಲ್ಲರ ಹೆಸರಿದೆ. ಎಲ್ಲದರಲ್ಲೂ ಹುಟ್ಟಿದ ಮತ್ತು ಸತ್ತ ದಿನಾಂಕವನ್ನು ನಮೂದಿಸಿದ್ದಾರೆ. ಹಲವು ಕುಟುಂಬದವರ ಸ್ಮಾರಕಗಳಲ್ಲಿ ಮುಂದೆ ಸಾಯಲಿರುವವರ ಹೆಸರನ್ನು ಕೆತ್ತಲು ಜಾಗ ಬಿಟ್ಟಿದ್ದಾರೆ. ಗಾಜಿನ ಮನೆಯೊಳಗೆಯೂ ಒಂದು ಕುಟುಂಬದವರ ಸ್ಮಾರಕವಿದೆ ಹಾಗೂ ಅದರಲ್ಲಿ ಇನ್ನೂ ಹಲವು ಹೆಸರು ಬರೆಯುವಷ್ಟು ಜಾಗವೂ ಇದೆ. ಕೆಲವು ಕಡೆ ಗಂಡನ ಹೆಸರು ಕೆತ್ತಿದ ಸ್ಮಾರಕದ ಕಲ್ಲಿನ ಪಕ್ಕದ ಇನ್ನೊಂದು ಕಲ್ಲಿನಲ್ಲಿ ಹೆಂಡತಿಯ ಹೆಸರು ಮತ್ತು ಜನ್ಮದಿನಾಂಕವನ್ನು ಕೆತ್ತಿದ್ದಾರೆ. ಮರಣ ಎಂಬಲ್ಲಿ ಖಾಲಿ ಬಿಟ್ಟಿದ್ದಾರೆ. ಅವರು ಇನ್ನೂ ಸಾಯಬೇಕಿದೆ. ಸಾಯುವ ಮೊದಲೇ ಸ್ಮಾರಕ ರೆಡಿ. ಕೆಲವು ಕಡೆ ಸ್ಮಾರಕದ ಸುತ್ತಲೂ ಚಂದ ಚಂದದ ಹೂ ಕುಂಡಗಳನ್ನಿಟ್ಟರೆ, ಇನ್ನು ಕೆಲವು ಕಡೆ ಪುಟ್ಟ ಹೂದೋಟವನ್ನೇ ಮಾಡಿದ್ದಾರೆ.

mount pleasant cemetery toronto 1

ಆ ಸ್ಮಶಾನ ಬರೀ ಕ್ರೈಸ್ತರಿಗೆ ಮಾತ್ರ ಅಲ್ಲ, ಕೆನಡಾದ ಎಲ್ಲಾ ಪ್ರಜೆಗಳಿಗೆ ಮೀಸಲು. ಭಾರತದ ಕೆಲವು ಹೆಸರುಗಳ ಸ್ಮಾರಕಗಳೂ ಅಲ್ಲಿ ಇತ್ತು. ಒಂದು ಸ್ಮಾರಕದಲ್ಲಿ ಓಂ ಎಂದು ಬರೆದು ಧನುರ್ಧಾರಿ ಎಂಬ ಹೆಸರು ಇತ್ತು. ಇನ್ನೊಂದರಲ್ಲಿ ಸುಧೀರ್ ಮೆಹತಾ ಅಂತ ಇತ್ತು. ಇವರೆಲ್ಲಾ ಹಿಂದೆಯೇ ಅಲ್ಲಿ ನೆಲೆಸಿದ ಅಲ್ಲಿನ ಪ್ರಜೆಗಳಾಗಿರಬಹುದು. ಅಲ್ಲಿ ಸಮಾಧಿ ಮಾಡಲು, ಸ್ಮಾರಕ ನಿರ್ಮಿಸಲು ನಿಗದಿಯಾದ ಬೆಲೆ ಇದೆಯಂತೆ ಹಾಗೂ ಸ್ಮಾರಕಗಳ ನಿರ್ವಹಣೆಗೆ ವರ್ಷಕ್ಕೆ ಇಷ್ಟು ಎಂದು ದುಡ್ಡು ತೆಗೆದುಕೊಳ್ಳುತ್ತಾರಂತೆ. ಏನೇ ಆಗಲಿ, ಆ ಪರಿಸರದ ಸೌಂದರ್ಯವನ್ನು ನೋಡಿದಾಗ Rest in peace ಎಂಬ ಮಾತು ಎಷ್ಟು ಅರ್ಥಪೂರ್ಣವಲ್ಲವೇ ಎಂದೆನಿಸಿತು . ಅಲ್ಲಿ ಚಿರನಿದ್ರೆಯಲ್ಲಿರುವವರಿಗೆ ಖಂಡಿತವಾಗಿಯೂ ಶಾಂತಿ ಸಿಕ್ಕೀತು.