ನೀ ಹಾಂಗ ನೋಡಬೇಡ ನನ್ನ...
ಕ್ರೂರಿ, ಕುತಂತ್ರಿ ಬ್ರಿಟಿಷರ ಈ ಷಡ್ಯಂತ್ರಕ್ಕೆ ಮತ್ತೊಮ್ಮೆ ಬಲಿಯಾಯಿತು ಭಾರತ. ಬಲಿಪಶುಗಳಾದರು ಬಂಗಾಳದ ರೈತರು. ಬಂಗಾಳದಲ್ಲಿ ಅಫೀಮನ್ನು ಮಾತ್ರ ಬೆಳೆಯಬೇಕು ಎನ್ನುವ ಬ್ರಿಟಿಷರ ಕಟ್ಟಪ್ಪಣೆ ಜಾರಿಯಾಯಿತು. ಹಾಗಾಗಿ ಸಮೃದ್ಧವಾಗಿ ಭತ್ತ ಬೆಳೆಯುತ್ತಿದ್ದ ಬಂಗಾಳಕ್ಕೆ ಅಫೀಮು ಬೆಳೆಯುವ ಅನಿವಾರ್ಯತೆ ಎದುರಾಯಿತು.
- ವಿಂಗ್ ಕಮಾಂಡರ್ ಸುದರ್ಶನ್
ಭಾರತದ ಹಾಗೆ ಹಾಂಕಾಂಗ್ ನ ಇತಿಹಾಸವೂ ಯುರೋಪಿಯನ್ನರ, ಅದರಲ್ಲೂ ಬ್ರಿಟಿಷರ ಸುತ್ತ ಮುತ್ತ ಹೆಣೆದು ಕೊಂಡಿದೆ. ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಸಮಯದಲ್ಲಿ, ಅಂದರೆ ಹದಿನಾರನೇ ಶತಮಾನದಲ್ಲಿ ಚೈನಾದ ಈ ಪ್ರಾಂತ್ಯಕ್ಕೆ ಮೊದಲು ಕಾಲಿಟ್ಟವರೇ ಪೋರ್ಚುಗೀಸರು. ತದನಂತರ ಫ್ರೆಂಚರು ಮತ್ತು ಬ್ರಿಟಿಷರು. ಯುರೋಪಿಯನ್ನರು ವ್ಯಾಪಾರ ಮಾಡುವ ಸೋಗಿನಲ್ಲಿ ಪ್ರವೇಶಿಸುತ್ತಾರೆ. ಆದರೆ ಕುಯುಕ್ತಿ, ಕ್ರೌರ್ಯ ಮತ್ತು ಕ್ರಿಶ್ಚಿಯಾನಿಟಿಯನ್ನು ಬೆನ್ನಿಗೆ ಕಟ್ಟಿಕೊಂಡೇ ಪ್ರವೇಶಿಸಿ ಅಲ್ಲಿಯ ಸ್ಥಾನೀಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿಬಿಡುತ್ತಾರೆ.
ಹಾಂಗ್ ಕಾಂಗ್ ನ ಕಥೆಯೂ ಅದೇ.
ಹಾಂಗ್ ಕಾಂಗ್ ಆಗ ಚೀನಾದ ವ್ಯಾಪ್ತಿಗೆ ಒಳಪಟ್ಟ ಒಂದು ಹಳ್ಳಿ. ಬ್ರಿಟಿಷರು ಇಲ್ಲಿಗೆ ಬಂದದ್ದು ಇಲ್ಲಿಯ ಚಹಾ, ರೇಷ್ಮೆ ಮತ್ತು ಪಿಂಗಾಣಿ ವಸ್ತುಗಳ ಪ್ರಮುಖ ಆಕರ್ಷಣೆಯಿಂದಾಗಿ. ಆದರೆ ಚೀನಾದ ಚಕ್ರವರ್ತಿಗಳು ಇವರನ್ನು ಯಾವಾಗಲೂ ಗುಮಾನಿಯಿಂದಲೇ ನೋಡುತ್ತಿದ್ದರು, ವ್ಯಾಪಾರಕ್ಕೆಷ್ಟು ಬೇಕೊ ಅಷ್ಟೇ ಇವರೊಂದಿಗಿನ ವ್ಯವಹಾರ. ಚೀನಾದ ಪ್ರಾಂತ್ಯಗಳಲ್ಲಿ ಇವರಿಗೆ ಮಕ್ತವಾಗಿ ಸಂಚರಿಸಲು ಅವಕಾಶ ಕೊಡಲಿಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಇವರಿಗೆ ಓಡಾಡಲು ಅವಕಾಶವಿತ್ತು. ಚೀನೀಯರಿಗೆ ಚಿನ್ನಕ್ಕಿಂತ ಬೆಳ್ಳಿಯ ಮೇಲೆ ಅತಿ ವ್ಯಾಮೋಹ, ಹಾಗಾಗಿ ಯುರೋಪಿನವರೊಂದಿಗೆ ವ್ಯವಹಾರವೆಲ್ಲಾ ಬೆಳ್ಳಿಯಲ್ಲೇ ನಡೆಯಬೇಕು ಎನ್ನುವುದು ಚೀನಾದ ನಿಯಮ. ಅಷ್ಟೊತ್ತಿಗಾಗಲೇ ಯೂರೋಪು ಚೀನಾದ ಚಹಾಕ್ಕೆ ಮಾರುಹೋಗಿತ್ತು. ಅತ್ಯಧಿಕವಾದ ಚಹಾದ ಬೇಡಿಕೆ, ಎಷ್ಟು ಸರಬರಾಜು ಆದರೂ ಕಡಿಮೆಯೇ ಎನ್ನುವ ಸ್ಥಿತಿ. ಪರಿಸ್ಥಿತಿಯ ಲಾಭ ಪಡೆದ ಬ್ರಿಟನ್ ಯಥೇಚ್ಛವಾಗಿ ಚಹಾವನ್ನು ಖರೀದಿಸಿ ಹಡಗುಗಳಲ್ಲಿ ಇಂಗ್ಲೆಂಡಿನೆಡೆ ರವಾನಿಸತೊಡಗಿತು. ಚೀನಾದ ಬೊಕ್ಕಸಕ್ಕೆ ಹೇರಳವಾಗಿ ಬೆಳ್ಳಿ ಸಂದಾಯವಾಗತೊಡಗಿತು. ಅದೊಂದು ಏಕಮುಖ ವ್ಯಾಪಾರ. ಆಗ ಚೀನಾ ಒಂದು ಸಮೃದ್ಧ, ಸಂತುಷ್ಟ ರಾಷ್ಟ್ರ. ಯುರೋಪಿನಿಂದ ಚೀನಾಕ್ಕೆ ಆಮದು ಮಾಡಿಕೊಳ್ಳಲು ಅಂಥ ಆಕರ್ಷಕ ವಸ್ತುಗಳೇನೂ ಕಾಣಿಸಲಿಲ್ಲ. ಹತ್ತೊಂಬತ್ತನೇ ಶತಮಾನದಷ್ಟೊತ್ತಿಗೆ ಬ್ರಿಟಿಷರ ಕ್ರೌರ್ಯ, ಕುಯುಕ್ತಿಗೆ ಭಾರತ ಸಂಪೂರ್ಣವಾಗಿ ಬಲಿಯಾಗಿ ಬಿಟ್ಟಿತ್ತು. ಆದರೆ ಚೀನಾದಲ್ಲಿ ಇದಕ್ಕೆ ಅವಕಾಶ ಸಿಗುತ್ತಿಲ್ಲವಲ್ಲ ಎನ್ನುವ ಅಸಮಾಧಾನ ಒಳಗೇ ಕುದಿಯುತ್ತಿತ್ತು. ಏನಾದರೂ ಮಾಡಿ ಇವರ ಭದ್ರಕೋಟೆಯನ್ನು ಭೇದಿಸಲೇ ಬೇಕು ಎಂದು ನಿರ್ಧರಿಸಿದ್ದ ಬ್ರಿಟನ್ನಿಗರಿಗೆ ಸಿಕ್ಕ ಬ್ರಹ್ಮಾಸ್ತ್ರ "ಅಫೀಮು"! ಹೌದು ಅಫೀಮು.

ಅಫೀಮು ಎಂಬ ಬ್ರಹ್ಮಾಸ್ತ್ರ!
ಕ್ರೂರಿ, ಕುತಂತ್ರಿ ಬ್ರಿಟಿಷರ ಈ ಷಡ್ಯಂತ್ರಕ್ಕೆ ಮತ್ತೊಮ್ಮೆ ಬಲಿಯಾಯಿತು ಭಾರತ. ಬಲಿಪಶುಗಳಾದರು ಬಂಗಾಳದ ರೈತರು. ಬಂಗಾಳದಲ್ಲಿ ಅಫೀಮನ್ನು ಮಾತ್ರ ಬೆಳೆಯಬೇಕು ಎನ್ನುವ ಬ್ರಿಟಿಷರ ಕಟ್ಟಪ್ಪಣೆ ಜಾರಿಯಾಯಿತು. ಹಾಗಾಗಿ ಸಮೃದ್ಧವಾಗಿ ಭತ್ತ ಬೆಳೆಯುತ್ತಿದ್ದ ಬಂಗಾಳಕ್ಕೆ ಅಫೀಮು ಬೆಳೆಯುವ ಅನಿವಾರ್ಯತೆ ಎದುರಾಯಿತು. ಮುಂದೆ ಇದೇ ಕಾರಣ ಭೀಕರ ಬರಗಾಲ ಬಂದಾಗ ಆಹಾರ ಧಾನ್ಯಗಳ ಸಂಗ್ರಹವಿಲ್ಲದೆ ಲಕ್ಷಾಂತರ ಬಂಗಾಳಿಗಳು ದಾರುಣವಾಗಿ ಹಸಿವಿನಿಂದ ಸತ್ತೇ ಹೋದರು. ಆದರೆ ಬ್ರಿಟಿಷರ ಕಣ್ಣಿಗೆ ಕಾಣುತ್ತಿದ್ದದ್ದು ಆಫೀಮಿನಿಂದ ಬರುತ್ತಿದ್ದ ಅಪರಿಮಿತ ಲಾಭ. ಹೀಗೆ ಬಂಗಾಳದಲ್ಲಿ ಬೆಳೆದ ಅಫೀಮನ್ನು ಹರಾಜು ಹಾಕಿ ಅದನ್ನು ಚೀನಾಕ್ಕೆ ರವಾನಿಸಲು ಶುರುಮಾಡಿದರು. ಅಲ್ಲಿಯ ವ್ಯಾಪಾರಿಗಳು ರಹಸ್ಯವಾಗಿ ಇದನ್ನು ಹಾಂಗ್ ಕಾಂಗ್ ಮುಖಾಂತರ ಒಳನಾಡಿಗೆ ತಲುಪಿಸುತ್ತಿದ್ದರು. ಕೆಲವೇ ವರುಷಗಳಲ್ಲಿ ಚೀನಾದ ಅರ್ಧಕ್ಕರ್ಧ ಜನಗಳು ಅಫೀಮಿನ ವ್ಯಸನಿಗಳಾದರು. ಬ್ರಿಟಿಷರ ಕುಯುಕ್ತಿ ನೋಡಿ ಹೇಗಿದೆ ಎಂದು. ಇದರಿಂದ ಕಂಗೆಟ್ಟ ಚೀನಾದ ಚಕ್ರವರ್ತಿ, ಸೈನ್ಯದ ಸಹಾಯದಿಂದ ಅವರ ಹಡಗುಗಳನ್ನು ಬಂದರಿಗೆ ಬರದಂತೆ ತಡೆಹಿಡಿದರು. ಇದರಿಂದ ರೊಚ್ಚಿಗೆದ್ದ ಬ್ರಿಟನ್, ದೊಡ್ಡಗಾತ್ರದ ನೌಕಾಪಡೆಯನ್ನು ಕ್ಯಾಪ್ಟನ್ ಇಲ್ಲಿಯಟ್ ಎನ್ನುವ ಖೂಳನ ಮುಖಂಡತ್ವದಲ್ಲಿ ಚೀನಾಕ್ಕೆ ರವಾನಿಸಿ, ಚೀನಾದ ಸೈನ್ಯವನ್ನು ಬಗ್ಗುಬಡಿಯುವಂತೆ ನಿರ್ದೇಶಿಸಿತು.
ಡ್ರಗ್ ವಾರ್ ಕೊಟ್ಟ ಏಟು!
ಅರೇ ಇಸ್ಕೀ... ನಮ್ಮ ಅಫೀಮನ್ನು ನೀವ್ಯಾಕೆ ತಡೆ ಹಾಕಿದ್ರಿ ಅಂತ ಯುದ್ಧ ಮಾಡೋದಾ? ಚೀನಾಕ್ಕೆ ಇದೊಂದು ಅನಿರೀಕ್ಷಿತ ಆಕ್ರಮಣ. ನಮ್ಮ ದೇಶಕ್ಕೆ ನಿಮ್ಮ ಅಫೀಮು ಬೇಡ, ತರಬೇಡಿ ಎಂದಿದ್ದಕ್ಕೆ ಇಂಥ ದೌರ್ಜನ್ಯವೇ? ಮೊಟ್ಟ ಮೊದಲ ಬಾರಿಗೆ ಚೀನಾಕ್ಕೆ ಬ್ರಿಟಿಷರ ಕ್ರೌರ್ಯದ ಬಿಸಿ ತಟ್ಟಿತು ಮತ್ತು ಯುದ್ಧದಲ್ಲಿ ಸೋಲುಂಡಿತು. ಇದರ ಪರಿಣಾಮ, ಇಂಗ್ಲೆಂಡ್ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡು ಹಾಂಗ್ ಕಾಂಗ್ ಅನ್ನು ವಶಪಡಿಸಿಕೊಂಡು ಅಧಿಕೃತವಾಗಿ ತನ್ನ ವಸಾಹತನ್ನು ಚೀನಾದಲ್ಲಿ ಸ್ಥಾಪಿಸಿಯೇ ಬಿಟ್ಟಿತು. ಇದೇ ಮೊದಲ "ಅಫೀಮಿನ ಯುದ್ಧ". ಪುನಃ ಅದೊಂದು ನೆವ, ಇದೊಂದು ನೆವ ಮಾಡಿಕೊಂಡು ಚೀನಾದಿಂದ ಒಂದೊಂದೇ ಭಾಗವನ್ನು ಕಿತ್ತುಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿತ್ತು ಬ್ರಿಟಿಷರಿಗೆ. ನಿರಂತರ ಲೂಟಿ ನಡೆಸಲು ಶುರುಮಾಡಿದರು. ಮುಂದೊಮ್ಮೆ ಹಾಂಗ್ ಕಾಂಗ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು 99 ವರ್ಷಗಳ ಲೀಸಿನ ಒಪ್ಪಂದ ಮಾಡಿ ಕೊಂಡು ಯುದ್ಧವನ್ನು ನಿಲ್ಲಿಸಿದರು.1997 ರಲ್ಲಿ ಲೀಸಿನ ಅವಧಿ ಮುಗಿದು ಅಂತಾರಾಷ್ಟ್ರೀಯ ಒಪ್ಪಂದಕ್ಕೆ ತಲೆಬಾಗಿ ಹಾಂಗ್ ಕಾಂಗ್ ಅನ್ನು ಬಿಟ್ಟುಕೊಡಬೇಕಾಯಿತು. ಆದರೆ ' Basic Law' ಎನ್ನುವ ಸೂತ್ರದಡಿಯಲ್ಲಿ ಹಾಂಗ್ ಕಾಂಗ್ ಕಮ್ಯುನಿಸ್ಟ್ ಚೀನಾದಿಂದಲೂ ಮುಕ್ತಿ ಪಡೆದು ಸ್ವಯಂ ನಿರ್ಧಾರಿತ ಸರ್ಕಾರ ರಚಿಸಿಕೊಂಡು ಈಗ ಸ್ವಾವಲಂಬಿ ಪ್ರದೇಶವಾಗಿದೆ. ಕರಮುಕ್ತ ವ್ಯಾಪಾರ ಕೇಂದ್ರವಾಗಿ ವಿಶ್ವದಲ್ಲೇ ವಿಶೇಷ ಸ್ಥಾನ ಪಡೆದಿದೆ.
ಪ್ರತಿದಿನ 1100 ವಿಮಾನ!
ಹಾಂಗ್ ಕಾಂಗ್ ನ ಮೂಲಭೂತ ಸೌಕರ್ಯದ ಪರಿಚಯವಾಗುವುದೇ ಅಲ್ಲಿಯ ಏರ್ ಪೋರ್ಟ್ ನಿಂದ. ಏರ್ ಪೋರ್ಟ್ ಅನ್ನು ನಿರ್ಮಿಸಲು ವಿಸ್ತಾರವಾದ ಭೂಮಿ ಬೇಕು. ಆದರೆ ಇಲ್ಲಿರುವುದೆಲ್ಲಾ ಚಿಕ್ಕ ಚಿಕ್ಕ ದ್ವೀಪಗಳು ಮತ್ತು ಗುಡ್ಡಗಾಡು. ಹಾಗಾಗಿ ಸಮುದ್ರದಲ್ಲೇ ಪ್ಲಾಟ್ ಫಾರ್ಮ್ ನಂತೆ ಏರ್ ಪೋರ್ಟ್ ನ ನಿರ್ಮಾಣ ಮಾಡಲಾಗಿದೆ. ಇದೊಂದು ತಾಂತ್ರಿಕ ಕೌಶಲ್ಯದ ಅದ್ಭುತ ವಿನ್ಯಾಸ. ಪ್ರತಿದಿನ ಇಲ್ಲಿ ಸುಮಾರು 1100 ವಿಮಾನಗಳು ಆಗಮಿಸುತ್ತವೆಂದರೆ ಇದು ಎಷ್ಟು ಬ್ಯುಸಿ ಏರ್ ಪೋರ್ಟ್ ಎಂದು ಅಂದಾಜಿಸಬಹುದು.
ಹಾಂಗ್ ಕಾಂಗ್ ನ ಸಂಡೇ ಫಂಡೇ
ನಮ್ಮ ಹಳ್ಳಿಯಲ್ಲಿ ಬಹಳ ಹಿಂದೆ ಒಂದು ಹಬ್ಬ ಮಾಡುತ್ತಿದ್ದರಂತೆ. ಊರಿನ ಎಲ್ಲ ಜನರು ಮೂರು ದಿವಸಗಳ ಕಾಲ, ದನಕರುಗಳ ಸಮೇತ ಸುಮಾರು ಎರಡು ಮೈಲಿ ದೂರದ ಹಳ್ಳದ ದಂಡೆಯ ಮೇಲೆ ಬಿಡಾರ ಹೂಡುವುದು..ಅಲ್ಲೇ ಅಡುಗೆ ತಿಂಡಿ..ಹಾಡು...ಆಟ ಎಲ್ಲಾ. ಈ ಆಚರಣೆಯ ಹೆಸರು "ಹೊರ ಬೀಡು". ನಾವಂತೂ ನೋಡಿರಲಿಲ್ಲ. ಆದರೆ ನಮ್ಮ ತಾಯಿಯವರಿಂದ ಕೇಳಿದ ವಿವರಣೆಯಲ್ಲೇ ಆನಂದಿಸುತ್ತಿದ್ದೆವು. ಈಗಲೂ ಇಂಥ ಆಚರಣೆಗಳು ಯಾಕೆ ನಡೆಯ ಬಾರದು ಎನಿಸುತ್ತಿತ್ತು. ಹಾಂಕ್ ಕಾಂಗ್ ನಲ್ಲಿ "ಹೊರ ಬೀಡು" ಸಂಭ್ರಮದ ಅವತರಣಿಕೆ ಭಾನುವಾರದಂದು ನೋಡಲು ಸಿಗುತ್ತದೆ.

ಮನೆಗೆಲಸದವರ ಜನಜಾತ್ರೆ!
ಇಲ್ಲಿಯ ಸಾರ್ವಜನಿಕ ಪಾರ್ಕುಗಳಲ್ಲಿ, ರೈಲ್ವೇ ಸ್ಟೇಷನ್ನುಗಳ ಹೊರಗೆ, ಸರಕಾರಿ ಕಟ್ಟಡಗಳ ಆವರಣದಲ್ಲಿ, ಚರ್ಚುಗಳ ಅಂಗಳದಲ್ಲಿ, ವಾಣಿಜ್ಯ ಮಳಿಗೆಗಳ ಮುಂದೆ...ಎಲ್ಲೆಲ್ಲಿ ನೋಡಿದರೂ ಸಡಗರದ ವಾತಾವರಣ..ಚಾಪೆಗಳ ಮೇಲೆ..ರಟ್ಟಿನ ಹಾಳೆಗಳ ಮೇಲೆ ಗುಂಪು ಗುಂಪಾಗಿ ಕುಳಿತು ಕೆಲವರು ಹರಟುತ್ತಿದ್ದರೆ ಇನ್ನು ಕೆಲವರು ಊಟದ ಡಬ್ಬಿಗಳನ್ನು ಬಿಚ್ಚಿಟ್ಟು, ಹಂಚುತ್ತಾ, ತಿನ್ನುತ್ತಾ, ಮಾತಾಡುತ್ತಾ, ನಗುವ ಕಲರವ ಎಲ್ಲೆಡೆಯಲ್ಲೂ. ಆದರೆ ಇವರಲ್ಲಿ ಗಂಡಸರಾರೂ ಇಲ್ಲ..ಬರೀ ಮಹಿಳೆಯರದೇ ಕಾರುಬಾರು! ಇದು ಸಣ್ಣ ಗುಂಪೇನಲ್ಲ. ಸುಮಾರು ಮೂರು ಲಕ್ಷ ಜನ ಮಹಿಳೆಯರು ಹಾಂಗ್ ಕಾಂಗ್ ನ ಮೂಲೆ ಮೂಲೆಗಳಲ್ಲೂ 'Sunday Funday' ಯನ್ನು ಆಚರಿಸುತ್ತಾರೆ.
ಯಾರಿವರೆಲ್ಲಾ? ಮುಖ್ಯವಾಗಿ ಫಿಲಿಪಿನೋಗಳು, ಮಲೇಷಿಯನ್ನರು ಮತ್ತು ಇಂಡೋನೇಷಿಯನ್ನರು. ಇವರೆಲ್ಲಾ ಹಾಂಗ್ ಕಾಂಗ್ ನಲ್ಲಿ ಮನೆಕೆಲಸದವರು! ಹಾಂಗ್ ಕಾಂಗ್ ನ ಸರಕಾರಿ ನಿಯಮದಂತೆ ಇವರಿಗೆ ಪ್ರತಿ ಭಾನುವಾರ ಹನ್ನೆರಡು ಗಂಟೆಗಳ ಕಡ್ಡಾಯ ವಿರಾಮ ಕೊಡಲೇಬೇಕಂತೆ. ಹಾಗಾಗಿ ಇವರೆಲ್ಲ ಅವತ್ತು ಬೆಳಗಾಗುವ ಮುನ್ನವೇ ತಮ್ಮ ತಮ್ಮ ದೇಶದ ಅಡುಗೆಗಳನ್ನು ಮಾಡಿಕೊಂಡು, ತಮಗಿಷ್ಟದ ಉಡುಪನ್ನು ಧರಿಸಿಕೊಂಡು, ತಮ್ಮದೇ ಗುಂಪಿನ ನಿರ್ದಿಷ್ಟ ಪ್ರದೇಶಕ್ಕೆ ಬಂದು ಸೇರಿಕೊಳ್ಳುತ್ತಾರೆ. ಸುಮಾರು ವರ್ಷಗಳಿಂದಲೂ ಬರುತ್ತಿರುವ ಸದಸ್ಯೆಯರು ಹೊಸದಾಗಿ ಬಂದವರನ್ನು ಸ್ವಾಗತಿಸಿ, ಪ್ರೋತ್ಸಾಹಿಸಿ, ಅವರಿಗೆ ಧೈರ್ಯ ತುಂಬುತ್ತಾರೆ. ತನ್ನೂರಿನಲ್ಲಿ ಬಿಟ್ಟು ಬಂದ ಮಗುವನ್ನು ನೆನಪಿಸಿಕೊಂಡು ದುಖಿಃಸುವ ತಾಯಿಗೆ.. ಅಳು ಬಂದರೆ ಒಂದು ಹೆಗಲು ಸಿಗುತ್ತದೆ. ಹೊಸತಾಗಿ ಕಲಿತ ಅಡುಗೆಯ ವಿನಿಮಯವಾಗುತ್ತದೆ. ತನ್ನ ದೇಶದ ಕಾಲೇಜಿನಲ್ಲಿ ಓದುತ್ತಿರುವ ಮಗಳಿಗೆ ಹಣ ಕಳುಹಿಸುವ ಪ್ರಕ್ರಿಯೆಯೂ ನಡೆಯುತ್ತದೆ. ಅದಕ್ಕೆಂದೇ ಕೆಲವು ಬ್ಯಾಂಕುಗಳನ್ನೂ ತೆರೆದಿರಿಸಲಾಗುತ್ತದೆ. ಜೋಕುಗಳು, ಹಾಡುಗಳು, ಕೆಲವರ ನೃತ್ಯವೂ ನಿಸ್ಸಂಕೋಚವಾಗಿ ನಡೆಯುತ್ತಿರುತ್ತವೆ. ನಮ್ಮಂಥ ಪ್ರವಾಸಿಗರಿಗೆ ಇದು ಸೋಜಿಗವೆನಿಸಿದರೆ ಇಲ್ಲಿಯ ಸ್ಥಳೀಯರಿಗೆ ಇದೊಂದು ಸಾಪ್ತಾಹಿಕ ಅನಿವಾರ್ಯತೆ.