Saturday, May 16, 2026
Saturday, May 16, 2026

ಗೈಡ್‌ಗಳ ಜತೆಗೆ ಗೈಡಿಂಗ್‌ ಕೋಲುಗಳ ಮಾತೂ ಕೇಳಿ

ಪ್ರತಿ ಗುಂಪಿನ ಮಾರ್ಗದರ್ಶಿಯ ಕೋಲಿನ ತುದಿಗೆ ಒಂದು ಬಣ್ಣದ ಬಟ್ಟೆ ಅಥವಾ ಆಯಾ ದೇಶದ ಧ್ವಜ ಇರುತ್ತದೆ. ಎಲ್ಲವೂ ಭಿನ್ನವಾಗಿರುತ್ತವೆ. ಕೆಲವರು ಕೆಂಪು, ಹಸಿರು, ಬಿಳಿ, ಗುಲಾಬಿ ಹೀಗೆ ಬಗೆಬಗೆಯ ಬಣ್ಣದ ಬಟ್ಟೆಯಲ್ಲಿ ತಮಗಿಷ್ಟವಾದ ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿರುತ್ತಾರೆ. ಕೆಲವರು ಮಕ್ಕಳಾಟಿಕೆಯ ಪುಟ್ಟ ಗೊಂಬೆಯನ್ನು ಕಟ್ಟಿರುತ್ತಾರೆ.

  • ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

ವಿಯೆಟ್ನಾಮ್‌ ಪ್ರವಾಸದಲ್ಲಿ ನನಗೆ ತುಂಬಾ ಕುತೂಹಲ ಮೂಡಿಸಿದ್ದು, ನಮ್ಮ ಇಡೀ ಪ್ರವಾಸದುದ್ದಕ್ಕೂ ನಮ್ಮೊಂದಿಗಿದ್ದ ಮಾರ್ಗದರ್ಶಿಯ ಕೈಯಲ್ಲಿದ್ದ ಕೋಲು. ನಾವು ಗುಂಪಿನಲ್ಲಿ ಪ್ರವಾಸ ಮಾಡುವಾಗ ಅಲ್ಲಿನ ಸ್ಥಳಗಳ ವೀಕ್ಷಣೆಯಲ್ಲಿ ಜನದಟ್ಟಣೆಯಿದ್ದರೆ ಈ ಕೋಲನ್ನು ನಾವು ಅನುಸರಿಸಿಕೊಂಡು ಹೋಗಬೇಕಿತ್ತು. ಹಾಗೆ ಹೋದರೆ ನಾವು ಸೇರುವ ಗಮ್ಯ ಸ್ಥಾನವನ್ನು ಸರಳವಾಗಿ ತಲುಪುತ್ತಿದ್ದೆವು. ಜನನಿಬಿಡ ಪ್ರವಾಸಿ ಸ್ಥಳದಲ್ಲಿ ನಾವು ಗುಂಪಿನಲ್ಲಿ ಕಳೆದು ಹೋಗಬಾರದು ಎಂದರೆ ನಮ್ಮ ದೃಷ್ಟಿ ಈ ಕೋಲಿನ ತುದಿಯಲ್ಲಿರಬೇಕು.

ಇದನ್ನೂ ಓದಿ: ಮಲಗಾ: ಸಮುದ್ರದ ಅಂಚಿನಲ್ಲಿ ಹಾದುಹೋಗುವ ಇತಿಹಾಸ

ದೊಡ್ಡ ಗುಂಪುಗಳಲ್ಲಿ ಪ್ರವಾಸಿಗರು ತಮ್ಮ ಮಾರ್ಗದರ್ಶಿಯನ್ನು ಸುಲಭವಾಗಿ ಗುರುತಿಸಲು ಇದು ಸಹಾಯ ಮಾಡುತ್ತದೆ. ನಾವು ಸ್ಥಳವೊಂದರ ವೀಕ್ಷಣೆಗೆ ತೆರಳಿ ಅಥವಾ ಶಾಪಿಂಗ್‌ ಮಾಡಿಕೊಂಡು ಬಂದು ಒಂದು ನಿರ್ಧಿಷ್ಟ ಸ್ಥಳದಲ್ಲಿ ಸೇರಬೇಕು. ಆದರೆ, ಕೆಲವೊಮ್ಮೆ ನಾವು ಒಂದೆಡೆ ಸೇರಬೇಕಾದ ಜಾಗ ಮರೆತು ಹೋಗಬಹುದು. ಹಾಗಾಗಿ ಅಲ್ಲಿ ನಮಗಿಂತ ಮೊದಲು ನಮ್ಮ ಮಾರ್ಗದರ್ಶಿ ಈ ಕೋಲನ್ನು ಎತ್ತಿ ಹಿಡಿದು ನಮಗಾಗಿ ಕಾಯುತ್ತಿರುತ್ತಾರೆ.

Untitled design - 2026-05-16T153629.294

ಮಾರ್ಗದರ್ಶಿ ಕೋಲುಗಳನ್ನು ಸ್ಟೇನ್‌ಲೆಸ್‌ ಸ್ಟೀಲ್‌ನಿಂದ ತಯಾರಿಸಲಾಗಿರುತ್ತದೆ. ಇವುಗಳನ್ನು ಟೆಲಿಸ್ಕೋಪಿಕ್‌ ಪೋಲ್‌ ಎಂದು ಕರೆಯಲಾಗುತ್ತದೆ. ಇವು 1-3 ಮೀಟರ್‌ ಉದ್ದ ಮಾಡಬಹುದಾದ ಸೌಲಭ್ಯ ಹೊಂದಿರುತ್ತವೆ. ಇವುಗಳನ್ನು ಬೇಕಾದಾಗ ಉದ್ದ ಮಾಡಬಹುದು ಬೇಡವಾದಾಗ ಕೊಡೆ ರೀತಿ ಮಡಚಿ ಬ್ಯಾಗಿನಲ್ಲಿಟ್ಟುಕೊಳ್ಳಬಹುದು.

ಪ್ರತಿ ಗುಂಪಿನ ಮಾರ್ಗದರ್ಶಿಯ ಕೋಲಿನ ತುದಿಗೆ ಒಂದು ಬಣ್ಣದ ಬಟ್ಟೆ ಅಥವಾ ಆಯಾ ದೇಶದ ಧ್ವಜ ಇರುತ್ತದೆ. ಎಲ್ಲವೂ ಭಿನ್ನವಾಗಿರುತ್ತವೆ. ಕೆಲವರು ಕೆಂಪು, ಹಸಿರು, ಬಿಳಿ, ಗುಲಾಬಿ ಹೀಗೆ ಬಗೆಬಗೆಯ ಬಣ್ಣದ ಬಟ್ಟೆಯಲ್ಲಿ ತಮಗಿಷ್ಟವಾದ ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿರುತ್ತಾರೆ. ಕೆಲವರು ಮಕ್ಕಳಾಟಿಕೆಯ ಪುಟ್ಟ ಗೊಂಬೆಯನ್ನು ಕಟ್ಟಿರುತ್ತಾರೆ. ಇದು ಆಯಾ ಮಾರ್ಗದರ್ಶಿಗಳ ಅಸ್ಮಿತೆ ಇದ್ದಂತೆ.

ಮಾರ್ಗದರ್ಶಿ ಕೋಲುಗಳ ಅನೇಕ ಬಗೆಗಳು

ಧ್ವಜ ಕೋಲು

ಈ ಕೋಲುಗಳ ತುದಿಯಲ್ಲಿ ಸಣ್ಣ ಧ್ವಜವನ್ನು ಕಟ್ಟಿರುತ್ತಾರೆ. ಇದು ಪ್ರವಾಸಿ ಮಾರ್ಗದರ್ಶಿಯ ಸಂಸ್ಥೆಯ ಗುರುತೋ ಆಯಾ ದೇಶವನ್ನು ಪ್ರತಿನಿಧಿಸುವ ಧ್ವಜವೋ ಆಗಿರಬಹುದು. ಇದು ಸ್ಪಷ್ಟ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ.

Untitled design - 2026-05-16T153622.472

ಬೊಂಬೆ ಕೋಲು

ಕೆಲವು ಮಾರ್ಗದರ್ಶಕರು ತಮ್ಮ ಕೋಲಿನ ತುದಿಯಲ್ಲಿ ಸಣ್ಣ ಮತ್ತು ಬಣ್ಣ ಬಣ್ಣದ ಬೊಂಬೆ, ಹೂವುಗಳು, ವಿಶಿಷ್ಟವಾದ ಆಟಿಕೆಗಳನ್ನು ಕಟ್ಟಿರುತ್ತಾರೆ. ಅವುಗಳಲ್ಲಿ ನಗುವ ಬುದ್ದ, ಐಫೆಲ್‌ ಟವರ್‌, ಮೊಲ, ಆನೆ, ನವಿಲು, ಡ್ರ್ಯಾಗನ್‌ ಇತ್ಯಾದಿ ಮಾದರಿಗಳನ್ನು ಕಾಣಬಹುದು.

ಲೇಸರ್‌ ಲೈಟ್‌ ಕೋಲು

ಇತ್ತೀಚಿನ ಕೋಲುಗಳ ತುದಿಯಲ್ಲಿ ಲೇಸರ್‌ ಲೈಟ್‌ ಇರುತ್ತದೆ. ಇದು ಎತ್ತರದ ಕಟ್ಟಡಗಳು, ಕತ್ತಲೆಯಾದ ಮ್ಯೂಸಿಯಂಗಳಲ್ಲಿ ನಿರ್ಧಿಷ್ಟ ಕೆತ್ತನೆಯನ್ನು ಪ್ರವಾಸಿಗರಿಗೆ ತೋರಿಸಲು ಇವು ತಂಬಾ ಉಪಯುಕ್ತವಾಗುತ್ತವೆ.

ಮೈಕ್‌ ಕೋಲುಗಳು

ಕೆಲವು ಸುಧಾರಿತ ಕೋಲುಗಳಲ್ಲಿ ಮೈಕ್‌ ಅಥವಾ ಸ್ಪೀಕರ್‌ ವ್ಯವಸ್ಥೆ ಇರುತ್ತದೆ. ಇದರಿಂದ ಮಾರ್ಗದರ್ಶಿ ವಿವರಿಸುವ ವಿಷಯಗಳು ಗುಂಪಿನ ಎಲ್ಲರಿಗೂ ಕೇಳುವಂತಾಗುತ್ತದೆ. ಮತ್ತು ತಾನು ಕರೆದುಕೊಂಡು ಹೋಗುವ ಬಸ್‌ನಲ್ಲಿ ನಾವು ಸಾಗಬೇಕಾದ ಸ್ಥಳದ ವಿವರಣೆ, ಅಲ್ಲಿ ಪಾಲಿಸಬೇಕಾದ ನಿಯಮಗಳು, ಸಮಯದ ಪಾಲನೆ ಎಲ್ಲವನ್ನು ವಿವರಿಸಲು ಸಾಧ್ಯವಾಗುತ್ತದೆ.

ಒಟ್ಟಾರೆ, ಪ್ರವಾಸದಲ್ಲಿ ನಾವು ಕಳೆದು ಹೋಗದೇ ಸದಾ ನಮ್ಮವರ ಜತೆಯಲ್ಲಿರಲು ಈ ಕೋಲಿನ ತುದಿಯನ್ನು ಆಗಾಗ ನೋಡುತ್ತಿರಬೇಕು. ಕೋಲು ಒಂದು ಉಪಯೋಗ ಹತ್ತಾರು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...