- ಜಯಶ್ರೀ ದೇಶಪಾಂಡೆ

'ಆ ವರ್ಷದ ವೈಫ್ ಕ್ಯಾರಿಯಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್ ಸ್ಪರ್ಧೆ' ನಡೆಯಲಿದೆ ಎಂದು ಗೊತ್ತಾದ ಕೂಡಲೇ ನಾನು 'ಸೊನ್ಕಾಯಾರ್ವಿಗೆ ಹೋಗಬೇಕು' ಎಂದೆನಿಸಿಬಿಟ್ಟಿತು. ಫಿನ್ಲೆಂಡ್‌ನ ಈ ಊರು ಪ್ರಸಿದ್ಧವಾಗಿರುವುದೇ ಪತ್ನಿಯನ್ನು ಹೊತ್ತುಕೊಂಡು ಓಡಿ ಗೆಲ್ಲುವ ಈ ಕೌತುಕಮಯ, ಹಾಸ್ಯಪ್ರಧಾನ ಸ್ಪರ್ಧೆಯ ಜನಪ್ರಿಯತೆಗಾಗಿ. ಹಾಗೆಂದು ಇದೇನೂ ಸುಲಭವಲ್ಲ. ತಿಂಗಳುಗಳು, ವರ್ಷಗಳ ಕಾಲ ಎಷ್ಟೋ ಪತಿಯರು ತಮ್ಮ ಹೆಂಡತಿಯನ್ನು ಬೆನ್ನ ಮೇಲೆ ಹೊತ್ತುಕೊಂಡು 250 ಮೀಟರುಗಳಷ್ಟು ಕಠಿಣವಾದ ಓಟದಲ್ಲಿ ಗೆದ್ದು ಗುರಿ ಮುಟ್ಟುವ ಬಯಕೆಯಿಂದ ಪ್ರಾಕ್ಟೀಸ್ ಮಾಡುತ್ತಾರೆ!

ಪತ್ನಿಯ ತೂಕದಷ್ಟು ಬಿಯರ್!

ನಾವಿದ್ದ ಕುವೋಪಿಯೋ ನಗರದಿಂದ ಸೊನ್ಕಾಯಾರ್ವಿ ಮುಟ್ಟುವಾಗ ಇನ್ನೇನು ಸ್ಪರ್ಧೆ ಶುರುವಾಗಲಿತ್ತು.‌ ಎಲ್ಲೆಲ್ಲೂ ಉತ್ಸಾಹ ಕೂಗು, ನಗು, ನಲಿವು, ಹರಟೆ, ತಮ್ಮ ದೇಶದಿಂದ ಬಂದು ಸ್ಪರ್ಧೆಗಿಳಿದಿದ್ದ ಅನೇಕ ಜೋಡಿಗಳನ್ನು ಚಿಯರ್ ಅಪ್ ಮಾಡುವ ಆಯಾ ದೇಶದ ಜನಗಳ‌ ಗದ್ದಲ ಆಗಲೇ ಎದ್ದಿತ್ತು. ಸ್ಪರ್ಧಿಗಳು ದಾಡಬೇಕಿರುವ ಓಟಕ್ಕಾಗಿ ಪುಟ್ಟ ನೀರಿನ ಕೊಳ, ಕೆಸರು ಗದ್ದೆ, ಮರಳಿನ ಹಾಸು, ಹರ್ಡಲ್ಸ್ ಹಗ್ಗ ಎಲ್ಲವೂ 'ರೆಡಿ' ಎನ್ನುತ್ತಿದ್ದುವು. ತುಂಡುಡುಗೆ, ಹೆಲ್ಮೆಟ್ ಹಾಕಿ ಕೈ ಕಾಲು ಸಡಿಲ ಮಾಡಿಕೊಳ್ಳುತ್ತ ನಿಂತಲ್ಲೇ ಸ್ಪಾಟ್ ಜಾಗಿಂಗ್ ಮಾಡ್ತಿದ್ದ 'ಜೋಡಿ'ಗಳ ಮುಖದಲ್ಲಿ ನಗುವಿನ ಜತೆ ಆತಂಕವೂ ಇದ್ದ ಹಾಗಿತ್ತು!

ಮೈಕಿನಲ್ಲಿ ನಿರಂತರ ಅನೌನ್ಸ್ಮೆಂಟ್ ಬರುತ್ತಿತ್ತು. ಸುವೋಮಿ ಯಾನೆ ಫಿನ್ನಿಶ್ ಭಾಷೆಯಲ್ಲಿ. ನನಗೆ ಅರ್ಥವಾಗಲಿಲ್ಲ, ಅಷ್ಟೇ ಅಲ್ಲ ಅದರ ನಡುನಡುವೆ ಒಂದಿಷ್ಟು ಇಂಗ್ಲೀಷ್‌ನಲ್ಲೇ ಆತ ಕೊಡುತ್ತಿದ್ದ ವೀಕ್ಷಕ ವಿವರಣೆಯೂ ಫಿನ್ನಿಶ್ ನಂತೆಯೇ ಭಾಸವಾಯಿತು.‌ ಸ್ಪರ್ಧಿಗಳು ಯಾವ್ಯಾವ ದೇಶಗಳಿಂದ ಬಂದವರೆಂಬ ಹೆಸರುಗಳ ಲಿಸ್ಟ್ ಅಲ್ಲಿನ ಡಿಜಿಟಲ್ ಬೋರ್ಡ್ ಮೇಲೆ ಹೊಳೆಯುತ್ತಿದ್ದುವು. ಅಬ್ಬಾ! ಎನಿಸಿತು.

Wife carrying championship

ಸ್ವೀಡನ್, ನಾರ್ವೆ, ಚೆಕ್ ರಿಪಬ್ಲಿಕ್, ರಷ್ಯಾ, ಜರ್ಮನಿ, ಯುಗೊಸ್ಲಾವಿಯ, ಕೊನೆಗೆ ಅಮೆರಿಕನ್ ಜೋಡಿಗಳೂ ಪತ್ನಿಯನ್ನು ಬೆನ್ನ ಮೇಲೇರಿಸಿ ಓಡಲು ಅಣಿಯಾಗಿದ್ದರು! ಆಹಾ ಈ ಕ್ರೀಡೆಯ ಜನಪ್ರಿಯತೆಯೇ ಅನಿಸಿಬಿಟ್ಟಿತು.‌ ಜೀವನೋತ್ಸಾಹದ ಪರಾಕಾಷ್ಠೆ.‌ ಸ್ಪರ್ಧೆ ಗೆದ್ದರೆ ಸಿಗಲಿರುವ ಬಂಪರ್ ಬಿಯರ್ ಕುರಿತು ಅವರವರಲ್ಲೇ ಮಾತುಕತೆ!

ಸುತ್ತ ಮುಕುರಿದ ಜನರ ಸ್ವಯಂಘೋಷಿತ ಚಿಯರ್ ಲೀಡಿಂಗ್ ಕೇಕೆಗಳ ನಡುವೆ ಜಂಟಿರೂಪದ ಜೋಡಿಗಳು ಓಡಿದರು. ಕೆಲವರು ಮಿಂಚಿನಂತೆ ಆರಂಭಿಸಿ ಕೊಂಚ ದೂರಕ್ಕೆ ಥಂಡಾ ಹೊಡೆದು ನಿಧಾನವಾದರು, ಕೆಲವರು ನೀರಿಗಿಳಿಯುವಾಗ ದಬಕ್ಕನೆ ಬಿದ್ದರು, ಕೆಲವರು ಮರಳಿನಲ್ಲಿ ದೊಪ್ಪಂತ ಕುಸಿದರು, ಕೆಲವರು ಉಪ್ಪಿನ ಮೂಟೆ ಹೊತ್ತಂತೆ ಏದುಸಿರು ಬಿಟ್ಟು ನಡೆದರು. ಒಬ್ಬಾಕೆ ಗಂಡನ ಬೆನ್ನ ಹಿಂದೆ ಇಳಿಬಿದ್ದುಕೊಂಡೇ ಅವನನ್ನು ಯಾಕೋ ಬೈಯುತ್ತಿದ್ದಳು!

Finland special race

ಎಷ್ಟೋ ತಿಂಗಳು ಪತ್ನಿಯನ್ನು ಹೊತ್ತು ಓಡುವ ಅಭ್ಯಾಸ ಮಾಡಿದ್ದ‌ ಫಿನ್ನಿಶ್ ಯುವಕನೊಬ್ಬನಿಗೆ ಸ್ಪರ್ಧೆಯ ದಿನ ಹತ್ತಿರವಾದಾಗ ಅಕಸ್ಮಾತ್‌ ಆದ ಆಘಾತದಲ್ಲಿ‌ ಕಾಲಿಗೆ ಗಾಯವಾಗಿತ್ತು. ಆಗ ಅವನ ಹೆಂಡತಿಯೇ ಪತಿಯನ್ನು‌ ಹೊತ್ತುಕೊಂಡು ಹೊತ್ತು‌ ಸ್ಪರ್ಧೆಯಲ್ಲಿ ಓಡಿದ್ದನ್ನೂ ಅವತ್ತು ನೋಡಿದೆವು, ಹಾಗೆ ಇಲ್ಲಿ‌ ಓಡುವವರು ಗಂಡ ಹೆಂಡತಿಯೇ‌ ಆಗಿರಬೇಕೆಂದು ಕಡ್ಡಾಯವಿಲ್ಲ. ಸಹಜೀವನ‌ /ಕೋ ಲಿವಿಂಗ್ ನಡೆಸುವ ಜೋಡಿಯೂ ಆದೀತು!

ಅಕ್ಕಪಕ್ಕದ ಫುಡ್ ಸ್ಟಾಲ್‌ಗಳಲ್ಲಿ ಫಿನ್ನಿಶ್ ಮತ್ತು ಯೂರೋಪಿನ ಸ್ವಾದಿಷ್ಟ ತಿಂಡಿ ತಿನಿಸು ಆನಂದಿಸಿದೆವು. ಫಿನ್ನಿಶ್ ಜನರ ಪ್ರಸಿದ್ಧ ಪುಲಾ ಬ್ರೆಡ್, ಕ್ರೊಸಾಂತ್ಸ್, ತಿರಾಮಿಸು ಸವಿಯಬಹುದು. ಕಾಡೇ ನಾಡಾಗಿರುವ, ಸರೋವರಗಳೇ ಜೀವಾಳ ಆಗಿರುವ ಫಿನ್ಲೆಂಡ್ ನಾನಾ ವಿಧದ ಬೆರಿ ಹಣ್ಣುಗಳ ತವರು. ಅದೆಲ್ಲ ವಿಧಗಳ ಜ್ಯೂಸ್ ಧಾರಾಳ ಸಿಗುತ್ತೆ.

ಇಷ್ಟಾಗಿ ಇಲ್ಲಿ ವಿಚಿತ್ರವೂ ಒಂದುಂಟು. ಒಂದು ಲಕ್ಷ ಎಂಬತ್ತು ಸಾವಿರ ಸಿಹಿನೀರಿನ ಸರೋವರಗಳಿರುವ ಫಿನ್ಲೆಂಡ್‌ನಲ್ಲಿ ರೆಸ್ಟೋರೆಂಟ್‌ಗಳು ಕುಡಿಯುವ ನೀರನ್ನು ಉಚಿತವಾಗಿ ಕೊಡುವುದಿಲ್ಲ. ನೀವದನ್ನು ಖರೀದಿಸಬೇಕು!

wife carrying race at Finland

ವೈಫ್ ಕ್ಯಾರಿಯಿಂಗ್ ಸ್ಪರ್ಧೆ ಫಿನ್ಲೆಂಡಿನಲ್ಲೇ ಜನ್ಮ ತಾಳಿದ್ದಂತೆ. ಹುಟ್ಟು ಮಾತ್ರ ಹೀಗೆ, 19 ನೆಯ ಶತಮಾನದಲ್ಲಿ ರೊಸ್ವೊ ರೊಂಕೈನೆನ್ ಎಂಬ ಡಕಾಯಿತ ಜನರ ಮನೆಗಳಿಗೆ ದಾಳಿ,ಲೂಟಿ ಮಾಡಿ ಅಲ್ಲಿದ್ದ ಹೆಣ್ಮಕ್ಕಳನ್ನು ಹೊತ್ತು ಓಡುತ್ತಿದ್ದನಂತೆ. ಅದೇ ಅವರ ತಾಕತ್ತಿನ ಪರೀಕ್ಷೆಯೂ ಆಗಿತ್ತಂತೆ!

ಒಟ್ಟಾರೆ ಬಲಪ್ರದರ್ಶನ. ಅವನ ಜತೆಗಾರ ಕಳ್ಳರಿಗೂ ಅದೇ ರೂಢಿಯಂತೆ. ಮುಂದೆ ಅದೇ ಬರಬರುತ್ತ ಮನರಂಜನಾ ಕ್ರೀಡೆ ಆಯಿತಂತೆ! "World Championship of wife carrying sports" ಫಿನ್ಲೆಂಡ್ ಮೂಲದ್ದೇ ಆಗಿದ್ದರೂ ಯೂರೋಪಿನ ಹಲವು ದೇಶಗಳಲ್ಲೂ ನಡೆಯುತ್ತದೆ.‌

ಫಿನ್ಲೆಂಡ್ ಸ್ಪೆಷಲ್

  • ಇಲ್ಲಿನ ಜನಸಂಖ್ಯೆ ಕೇವಲ 55-60 ಲಕ್ಷ, ಆದರೆ ಸಾಕ್ಷರತೆ 99%!.
  • ಪ್ರಿಸ್ಕೂಲ್‌ನಿಂದ ಯೂನಿವರ್ಸಿಟಿ ಲೆವೆಲ್ ವರೆಗೂ ಶಿಕ್ಷಣ ಉಚಿತ!
  • ಸರ್ವೆಯೊಂದರ ಪ್ರಕಾರ ಜನರಿಗೆ ಈರ್ಷ್ಯೆಯೇ ಇಲ್ಲವಂತೆ.
  • ಫಿನ್ಲೆಂಡ್ ಒಂದು ವೆಲ್ಫೇರ್ ಸ್ಟೇಟ್!
  • ಫೆಮಸ್ ಆಗಿದೆ ವೈಫ್ ಕ್ಯಾರಿಯಿಂಗ್ ವರ್ಲ್ಡ್ ಚಾಂಪಿಯನ್ ಶಿಪ್