ಗುಂ-ಟೂರ್ ಮಸಾಲಾ - ಅವನಲ್ಲಿ.. ಇವಳಿಲ್ಲಿ.. ನಡುವೆ ಇದು ಹೇಗೆ?
ಕೀನ್ಯಾದ ಸಾಂಬೂರು ಎಂಬ ಹಳ್ಳಿಯಲ್ಲಿ ಮೂವತ್ತೈದು ವರ್ಷಗಳಿಂದ ಪುರುಷರಿಗೆ ಪ್ರವೇಶವಿಲ್ಲವಂತೆ. ಆ ಹಳ್ಳಿಯಲ್ಲಿರೋದು ಕೇವಲ ಮಹಿಳೆಯರು ಮಾತ್ರ. ಮೂವತ್ತೈದು ವರ್ಷಗಳಿಂದ ಅಲ್ಲಿ ಹೆಂಗಸರು ಮಾತ್ರ ಇದ್ದಾರಂತೆ. ಅಲ್ಲಿನ ಹೆಂಗಸರು ಗಂಡುಮಗುವಿಗೆ ಜನ್ಮಕೊಟ್ಟರೆ(!?) ಹದಿನೆಂಟು ತುಂಬುತ್ತಿದ್ದಂತೆ ಆಚೆ ಹಾಕಲಾಗುತ್ತಂತೆ.
ಮೂವತ್ತು ವರ್ಷಗಳ ಹಿಂದೆ ರವಿಚಂದ್ರನ್ ಅಭಿನಯದ ಪುಟ್ನಂಜ ಚಿತ್ರದಲ್ಲೊಂದು ಲಾಜಿಕಲ್ ಕಾಮಿಡಿ ದೃಶ್ಯವಿತ್ತು. ನಾಯಕಿ ಮೀನಾಳ ಪತಿ ಪೀಟರ್ಸ್ ಬರ್ಗ್ ನಲ್ಲಿರೋ ರಿಚ್ ಬಿಜಿನೆಸ್ ಮನ್. ಆತ ಎರಡು ವರ್ಷದಿಂದ ಬೆಂಗಳೂರಿಗೆ ಬಂದಿಲ್ಲ ಎಂದು ನಾಯಕಿಯ ಅಮ್ಮ ತನ್ನ ಕ್ಲಬ್ ಗೆಳತಿಯರ ಬಳಿ ಜಂಭ ಕೊಚ್ಚಿಕೊಳ್ಳುತ್ತಿರುವಾಗಲೇ ಮೀನಾಗೆ ವಾಂತಿಯಾಗುತ್ತದೆ. ಮೂರುತಿಂಗಳ ಗರ್ಭಿಣಿ ಎಂದು ಕನ್ಫರ್ಮ್ ಆಗುತ್ತದೆ. ಗಂಡ ಎರಡುವರ್ಷದಿಂದ ಬೆಂಗಳೂರಿಗೆ ಬಂದಿಲ್ಲ. ಹೆಂಡತಿ ಎರಡುವರ್ಷದಿಂದ ಪೀಟರ್ಸ್ ಬರ್ಗ್ ಗೆ ಹೋಗಿಲ್ಲ. ಆದರೂ ಈ ಗರ್ಭಗಟ್ಟಿದ್ದು ಹೇಗೆ? ಪರಸ್ಪರ ದೂರವಿದ್ದೂ ಗರ್ಭಧರಿಸೋ ತಂತ್ರಜ್ಞಾನ ಏನಾದ್ರೂ ಬಂದಿದ್ಯಾ ಅಂತ ಕಥಾನಾಯಕ ರವಿಚಂದ್ರನ್ ಕಿಚಾಯಿಸುವ ದೃಶ್ಯವದು. ಅಫ್ ಕೋರ್ಸ್ ಈಗ ಆ ತಂತ್ರಜ್ಞಾನವೂ ಬಂದಾಯ್ತು ಬಿಡಿ. ಅದೇ ಥರದ ಇನ್ನೊಂದು ಜೋಕ್ ಇತ್ತು. ಹದಿಮೂರು ಮಕ್ಕಳ ತಾಯಿಯೊಬ್ಬಳು ಜಡ್ಜ್ ಎದುರು ಹೋಗಿ, ನನ್ನನ್ನು ತೊರೆದು ಹೋದ ನನ್ನ ಪತಿಯಿಂದ ನನ್ನ ಈ 13 ಮಕ್ಕಳಿಗೆ ಪರಿಹಾರ ಕೊಡಿಸಿ ಅಂತ ಕೇಳ್ತಾಳೆ. ಆಗ ಜಡ್ಜ್ ಪ್ರಶ್ನೆ ಮಾಡ್ತಾರೆ. ನಿನ್ನ ಗಂಡ ನಿನ್ನನ್ನು ಬಿಟ್ಟು ಹೋಗಿ ಎಷ್ಟು ವರ್ಷವಾಯ್ತಮ್ಮಾ ಅಂತ. ಆಕೆ ದಿಟ್ಟವಾಗಿ ಹೇಳ್ತಾಳೆ.. ಹದಿನಾಲ್ಕು ವರ್ಷವಾಯ್ತು ಸ್ವಾಮಿ..! ಗಂಡ ನಿನ್ನನ್ನು ಬಿಟ್ಟು ಹೋಗು ಹದಿನಾಲ್ಕು ವರ್ಷವಾಗಿದೆ ಅಂತೀಯ. ಮತ್ತೆ ಈ ಹದಿಮೂರು ಮಕ್ಕಳು ಹೇಗೆ ಅಂತ ಜಡ್ಜ್ ಅಚ್ಚರಿಯಿಂದ ಕೇಳ್ತಾರೆ. ಆ ತಾಯಿ ನಾಚುತ್ತಾ ಹೇಳ್ತಾಳೆ... ಅವಾಗವಾಗ ಸಾರಿ ಕೇಳೋಕಂತ ಬರ್ತಾ ಇದ್ರು. ಇವೆಲ್ಲ ಆ ಟೈಮಲ್ಲಾಗಿದ್ದು!

ಇವೆರಡೂ ಹಾಸ್ಯಪ್ರಸಂಗ ನೆನಪಾಗೋದಕ್ಕೆ ಕಾರಣ ಕೀನ್ಯಾದ ಸಾಂಬೂರು ಎಂಬ ಹಳ್ಳಿಯ ವಿಚಿತ್ರ ಹಾಗೂ ಗಂಭೀರ ಸಾಮಾಜಿಕ ಪರಿಸ್ಥಿತಿ. ಆ ಊರಿನಲ್ಲಿ ಮೂವತ್ತೈದು ವರ್ಷಗಳಿಂದ ಪುರುಷರಿಗೆ ಪ್ರವೇಶವಿಲ್ಲವಂತೆ. ಆ ಹಳ್ಳಿಯಲ್ಲಿರೋದು ಕೇವಲ ಮಹಿಳೆಯರು ಮಾತ್ರ. ಮೂವತ್ತೈದು ವರ್ಷಗಳಿಂದ ಅಲ್ಲಿ ಹೆಂಗಸರು ಮಾತ್ರ ಇದ್ದಾರಂತೆ.ಅಲ್ಲಿನ ಹೆಂಗಸರು ಗಂಡುಮಗುವಿಗೆ ಜನ್ಮಕೊಟ್ಟರೆ(!?) ಹದಿನೆಂಟು ತುಂಬುತ್ತಿದ್ದಂತೆ ಆಚೆ ಹಾಕಲಾಗುತ್ತಂತೆ.ಈ ಪುರುಷ ದ್ವೇಷಕ್ಕೆ ಅವರದ್ದೇ ಕಾರಣವಿದೆ. ಆದರೆ ಇಲ್ಲಿ ಮಹಿಳೆಯರು ತಾಯಿಯಾಗ್ತಾ ಇರೋದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಮಜವಾಗಿದೆ.ಇಲ್ಲಿನ ಹೆಣ್ಮಕ್ಕಳು ತಮ್ಮ ಗೆಳೆಯರನ್ನು ಭೇಟಿಯಾಗಲು ಗ್ರಾಮದಿಂದ ಹೊರಗೆ ಹೋಗಬಹುದಂತೆ. ಪ್ರಿಯಕರನೂ ಆಗಾಗ ಹಳ್ಳಿಗೆ ಬಂದು ಹೋಗಬಹುದಂತೆ. ಗ್ರಾಮನಾಯಕಿಯ ಒಪ್ಪಿಗೆ ಸಿಗಬೇಕಷ್ಟೆ.