Monday, November 10, 2025
Monday, November 10, 2025

ಟೈಗರ್‌ನೆಸ್ಟ್‌ ಟ್ರೆಕ್ಕಿಂಗ್ ತಂದ ಉದರ ವೈರಾಗ್ಯ

ನೂರಿಪ್ಪತ್ತು ಮೆಟ್ಟಿಲುಗಳನ್ನು ಹತ್ತಿ, ಗುರು ಪದ್ಮಸಂಭವರವರ ಮೂರ್ತಿಯ ಎದುರಿಗೆ ನಿಂತಾಗ ಅಂತೂ ಇಲ್ಲಿಯವರೆಗೆ ಬಂದು ತಲುಪಿದೆನಲ್ಲ ಎನ್ನುವ ಧನ್ಯತೆ ಮೂಡಿತು. ಅಲ್ಲಿ ಬೇಡಿದ ನಮ್ಮ ಆಶೋತ್ತರಗಳೆಲ್ಲ ನೆರವೇರುವುದೆಂದು ನಮ್ಮ ಗೈಡ್ ತಿಳಿಸಿದಾಗ, ಎಂದಿನಂತೆ ಅಂದೂ ನಾನು ಬೇಡಿದ್ದು, ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂದು.

- ವಾಣಿ ಸುರೇಶ್ ಕಾಮತ್

ʼಭೂತಾನ್‌ಗೆ ಹೋಗಿದ್ದೆ’ ಎಂದು ಈಗಾಗಲೇ ಅಲ್ಲಿಗೆ ಹೋಗಿ ಬಂದವರ ಬಳಿ ಹೇಳಿ ನೋಡಿ. ‘ಟೈಗರ್ಸ್ ನೆಸ್ಟ್‌ಗೆ ಹೋಗಿದ್ದಿರಾ?’ ಎನ್ನುವ ಪ್ರಶ್ನೆ ಅವರಿಂದ ಬರುವುದು ಗ್ಯಾರಂಟಿ! ಭೂತಾನಿನ ಮುಖ್ಯ ಆಕರ್ಷಣೆಯೇ ಅದು!

ಪರೋ ಜಿಲ್ಲೆಯಲ್ಲಿರುವ, ಸಮುದ್ರಮಟ್ಟದಿಂದ 10,100 ಅಡಿಗಳಷ್ಟು ಎತ್ತರದಲ್ಲಿರುವ ಕಲ್ಲುಬಂಡೆಯ ಮೇಲಿರುವ ನೈಸರ್ಗಿಕ ಗುಹೆಯೇ ʼTiger’s nestʼ. ಭೂತಾನಿನಲ್ಲಿ ಎರಡನೇ ಬುದ್ಧನೆಂದು ಪೂಜಿಸಲ್ಪಡುವ ಗುರು ಪದ್ಮಸಂಭವರವರು ತಪಸ್ಸಿಗೆ ಕುಳಿತ ಗುಹೆಯದು. ನಾವು ಅಲ್ಲಿದ್ದ ಏಳು ದಿನಗಳಲ್ಲಿ ನಮ್ಮೊಂದಿಗಿದ್ದ ಗೈಡ್ ಶೆನ್ ಚೋ ವಿವರಿಸಿದ ಕಥೆ ಹೀಗಿದೆ:

ಮೊದಲು ಕಾಡಿನಿಂದ ಆವೃತವಾಗಿದ್ದ ಭೂತಾನಿನಲ್ಲಿ ಪ್ರಕೃತಿಯ ಆರಾಧಕರಾಗಿ, ನಾಗರಿಕ ಪ್ರಪಂಚದಿಂದ ದೂರವಿದ್ದ ಜನರು ತುಂಬಿದ್ದರು. ಆಗಾಗ ಬಂದು ಕಾಟ ಕೊಡುತ್ತಿದ್ದ ರಾಕ್ಷಸಗಣಗಳಿಂದ ಅವರು ತೊಂದರೆಗೊಳಗಾಗುತ್ತಿದ್ದರು. ಎಂಟನೇ ಶತಮಾನದಲ್ಲಿ ಟಿಬೆಟ್‌ನಿಂದ ಹುಲಿಯ ಮೇಲೆ ಸವಾರಿ ಮಾಡಿ ಬಂದ ಗುರು ಪದ್ಮಸಂಭವರವರು ಈ ಕಡಿದಾದ ಬಂಡೆಯಲ್ಲಿರುವ ಗುಹೆಯೊಳಗೆ ತಪಸ್ಸಿಗೆ ಕುಳಿತರು. ಅವರ ಶಿಷ್ಯೆಯಾಗಿದ್ದ ‘ಯೇಶೆ ಸೋಗ್ಯಾಲ್’ ಎನ್ನುವವರೇ ಹುಲಿಯ ರೂಪ ಧರಿಸಿದ್ದರಲ್ಲದೆ, ಆ ಗುಹೆಯ ಪಕ್ಕದಲ್ಲೇ ಆಕೆಯೂ ಧ್ಯಾನಕ್ಕೆ ಕೂತಿದ್ದರಂತೆ. ಹೀಗೆ ಗುರು ಪದ್ಮಸಂಭವರವರು ತಮ್ಮ ಧ್ಯಾನಕ್ಕೆ ತೆಗೆದುಕೊಂಡ ಸಮಯ ಮೂರು ವರ್ಷ, ಮೂರು ತಿಂಗಳು, ಮೂರು ವಾರ ಮತ್ತು ಮೂರು ದಿನಗಳು. ನಂತರ ಅವರು ತಮ್ಮಲ್ಲಿದ್ದ ತಾಂತ್ರಿಕ ಶಕ್ತಿಯಿಂದ ಅಲ್ಲಿದ್ದ ರಾಕ್ಷಸಗಣಗಳನ್ನು ಒಳ್ಳೆಯವರನ್ನಾಗಿಸಿದರಂತೆ. ಅಷ್ಟೇ ಅಲ್ಲದೆ ಗೊತ್ತುಗುರಿಯಿಲ್ಲದೆ ಬದುಕುತ್ತಿದ್ದ ಜನರಿಗೆ ಬೌದ್ಧಧರ್ಮವನ್ನು ಬೋಧಿಸಿ, ಪರಸ್ಪರ ಕಚ್ಚಾಡುತ್ತಿದ್ದವರನ್ನು ಒಂದುಗೂಡಿಸಿದರಂತೆ. ಹಾಗಾಗಿ ಭೂತಾನಿನಲ್ಲಿ ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಟೈಗರ್ಸ್ ನೆಸ್ಟ್‌ನಲ್ಲಿರುವ ಗುಹೆಯೊಳಗೆ ಜನಸಾಮಾನ್ಯರಿಗೆ ಪ್ರವೇಶವಿಲ್ಲ. ಆದರೆ ಅಲ್ಲಿ ಮಂದಿರಗಳನ್ನು ಕಟ್ಟಿ ಗುರುಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅಲ್ಲಿಯ ಜನರು ಜೀವಮಾನದಲ್ಲಿ ಒಮ್ಮೆಯಾದರೂ ಬೆಟ್ಟ ಹತ್ತಿ, ತಮ್ಮ ಮನೋಕಾಮನೆಗಳನ್ನು ಈಡೇರಿಸುವ ಗುರುಗಳ ಮೂರ್ತಿಯ ದರ್ಶನವನ್ನು ಪಡೆಯುವ ಹಂಬಲವನ್ನು ಹೊಂದಿದ್ದಾರೆ.

Bhutan tourism

ಅಲ್ಲಿರುವ ಮೂರ್ತಿಯ ಬಗ್ಗೆಯೂ ಒಂದು ಕಥೆಯಿದೆ. ಪುನಾಖಾ ಎಂಬಲ್ಲಿಂದ ತಂದ ಹನ್ನೆರಡು ಅಡಿ ಎತ್ತರವಿರುವ ಮೂರ್ತಿಯನ್ನು ಆ ಕಡಿದಾದ ದಾರಿಯಲ್ಲಿ ಹೊತ್ತೊಯ್ಯಲು ಕಷ್ಟವಾಯಿತಂತೆ. ಮೂರ್ತಿಯನ್ನು ಸಾಗಿಸುವವರು ಅದನ್ನು ಹಲವು ಭಾಗಗಳನ್ನಾಗಿ ತುಂಡರಿಸಿ ಸಾಗಿಸಲು ನಿರ್ಧರಿಸಿದರಂತೆ. ಆಗ ಮಾತನಾಡಿದ ಮೂರ್ತಿಯು, ತನ್ನನ್ನು ಸಾಗಿಸುವ ಬಗ್ಗೆ ಚಿಂತಿಸದಿರಿ ಎಂದು ಹೇಳಿತಂತೆ. ಮರುದಿನ ಬೆಳಗಾಗಲು ನೋಡಿದಾಗ ಮೂರ್ತಿಯು ಬೆಟ್ಟದ ಮೇಲೆ ರಾರಾಜಿಸುತ್ತಿತ್ತಂತೆ. ಖುದ್ದು ಗುರು ಪದ್ಮಸಂಭವರವರೇ ತಮ್ಮ ಶಿಷ್ಯಂದಿರ ಮೂಲಕ ಆ ಮೂರ್ತಿಯನ್ನು ಸಾಗಿಸಿದರೆಂದು ಜನರು ನಂಬುತ್ತಾರೆ. ಅಂದ ಹಾಗೆ, ಪದ್ಮಸಂಭವರನ್ನು ಭೂತಾನಿನಲ್ಲಿ ‘ರಿನ್ ಪೋಚೆ’ ಎಂದು ಕರೆಯುತ್ತಾರೆ.

ಈಗ ಚಾರಣದ ವಿಷಯಕ್ಕೆ ಬರೋಣ. ನಮ್ಮ ಚಾರಣ ಶುರುವಾದದ್ದು ಬೆಳಗ್ಗೆ ಎಂಟೂವರೆಗೆ. ಒಬ್ಬರಿಗೆ ಒಂದು ಸಾವಿರ ರುಪಾಯಿಯಂತೆ ಟಿಕೆಟ್ ಕೊಂಡು ನಾವು ಮುಂದುವರಿದೆವು. ಅಲ್ಲೇ ಬಾಡಿಗೆಗೆ ಸಿಗುತ್ತಿದ್ದ ಊರುಗೋಲಿಗೆ ನೂರು ರುಪಾಯಿ ಪಾವತಿಸಿ ಕೊಂಡೆವು. ಊರುಗೋಲು ಮನುಷ್ಯನಿಗೆ ಎಷ್ಟು ಉಪಕಾರಿ ಎನ್ನುವುದು ನನಗೆ ಗೊತ್ತಾಗಿದ್ದು ಆಗಲೇ. ಕುದುರೆಗಳನ್ನು ಬಳಸಬಹುದಾದರೂ ಅವುಗಳ ಸೇವೆ ಲಭ್ಯವಿರುವುದು ಸ್ವಲ್ಪ ದಾರಿಯವರೆಗೆ ಮಾತ್ರ. ಅದು ಕೂಡ ಹತ್ತುವಾಗ ಮಾತ್ರವೇ ಹೊರತು ಇಳಿಯುವಾಗ ಕುದುರೆ ಸವಾರಿ ಸಿಗುವುದಿಲ್ಲ. ಬೇಸ್‌ನಿಂದ ಸುಮಾರು ಮೂರೂವರೆ ಕಿಮೀ ದೂರದಲ್ಲಿರುವ ಮಂದಿರ ತಲುಪಲು ಸಾಗಬೇಕಾದ ದಾರಿ ಕಠಿಣವಾದದ್ದು. ಕೆಲವೊಂದು ಕಡೆ ಕೊರಕಲು, ಮತ್ತೆ ಕೆಲವು ಕಡೆ ತೀರಾ ಏರುರಸ್ತೆಗಳು. ಮೇಲೇರಿದಂತೆಲ್ಲಾ ದೈಹಿಕ ಶ್ರಮದ ಜತೆಗೆ ಆಕ್ಸಿಜನ್ ಕೊರತೆ ಕೂಡ ಸ್ವಲ್ಪ ಮಟ್ಟಿಗೆ ಕಾಣತೊಡಗುವುದು. ಅರ್ಧದಾರಿ ಕ್ರಮಿಸಿದಾಗ ಅಲ್ಲೊಂದು ಸುಂದರವಾದ ವ್ಯೂ ಪಾಯಿಂಟ್ ಜತೆಗೆ ಒಂದು ಕೆಫೆಯೂ ಇದೆ. ಅಲ್ಲಿಯವರೆಗೆ ಮಾತ್ರ ಪಯಣಿಸಿ ಕೆಲವರು ಹಿಂದಿರುಗುತ್ತಾರೆ. ದೈಹಿಕವಾಗಿ ಶಕ್ತರಿರುವವರು ಚಾರಣವನ್ನು ಮುಂದುವರಿಸುತ್ತಾರೆ.

Tiger's nest

ಮೊದಲು ಉತ್ಸಾಹದಿಂದ ಆರಂಭಗೊಂಡ ಚಾರಣ, ದಾರಿ ಕ್ರಮಿಸಿದಂತೆಲ್ಲ ಕಠಿಣವೆನಿಸತೊಡಗಿತು. ನಿಶ್ಶಕ್ತಿಯ ಜತೆಗೆ ಮೈ ಬೆವರತೊಡಗಿದಂತೆ ಬ್ಯಾಗು, ಗಾಗಲ್ಸ್, ಐಫೋನು- ಇವೆಲ್ಲವೂ ಭಾರವೆನಿಸಿ, ತೆಗೆದು ಎಸೆಯೋಣವೆನಿಸಿತು. ಅಕ್ಕಪಕ್ಕ ನಡೆದುಹೋಗುತ್ತಿರುವವರತ್ತ ಗಮನ ನೀಡಲೂ ಸಾಧ್ಯವಾಗದೆ ಹೋಯಿತು. ಒಂದೆರಡು ಕಡೆ ಕನ್ನಡ ಭಾಷೆ ಕಿವಿಗೆ ಬಿದ್ದರೂ, ನನ್ನ ಮುಖವಂತೂ ಅತ್ತ ತಿರುಗಲಿಲ್ಲ. ನನ್ನ ಗಮನವಿದ್ದದ್ದು ಕೇವಲ ಏರುತಗ್ಗಿನ ದಾರಿ, ಊರುಗೋಲು, ಉಸಿರಾಟ ಮತ್ತು ಗಮ್ಯದತ್ತ ಮಾತ್ರ! ಅದರ ಜತೆಗೆ ಗೈಡ್ ಸದಾ ನನ್ನ ಬೆನ್ನ ಹಿಂದೆಯೇ ಇರುವರೆಂಬ ನಂಬಿಕೆ!

ವಿರಾಗಿಯಂತೆ ಮೌನವಾಗಿಯೇ ಸಾಗುತ್ತಿದ್ದ ನನ್ನಲ್ಲಿ ಆ ಹೊತ್ತಿಗೆ ಹಲವು ಪ್ರಶ್ನೆಗಳು ಮೂಡತೊಡಗಿದ್ದವು. ನಮ್ಮ ಪೌರಾಣಿಕ ಪಾತ್ರಗಳಿಂದ ಹಿಡಿದು ಅಘೋರಿಗಳವರೆಗೆ, ಜೈನಮುನಿಗಳಿಂದ ಹಿಡಿದು ಬೌದ್ಧಮುನಿಗಳವರೆಗೆ ಎಲ್ಲರೂ ತಪಸ್ಸು, ಧ್ಯಾನವನ್ನು ಕೈಗೊಂಡಿದ್ದು ಪರ್ವತಗಳ ಮೇಲೆಯೇ. ಚಾಮುಂಡಿ ಬೆಟ್ಟದಿಂದ ಹಿಡಿದು ಕೇದಾರದವರೆಗಿನ ಪುಣ್ಯಕ್ಷೇತ್ರಗಳು ಇರುವುದೂ ಗಿರಿಗಳ ಮಡಿಲಿನಲ್ಲಿಯೇ. ವೆಂಕಟೇಶ್ವರನ ಸ್ಮರಣೆ ಮಾಡುತ್ತಾ ಏಳುಮಲೆಗಳನ್ನು ಹತ್ತುವುದು, ‘ಸ್ವಾಮಿ ಶರಣಂ’ ಎನ್ನುತ್ತಾ ಶಬರಿಮಲೆಯ ಯಾತ್ರೆ ಮಾಡುವುದು ಕೂಡ ಜನಸಾಮಾನ್ಯರ ಭಕ್ತಿಯ ಉತ್ತುಂಗವೇ. ಹಾಗಾದರೆ ಪರ್ವತಗಳು ವೈರಾಗ್ಯದ, ಭಕ್ತಿಯ ಸಂಕೇತಗಳೇ? ಎತ್ತರಕ್ಕೇರುತ್ತಿದ್ದಂತೆ ಮೋಹದ ಬಂಧನಗಳನ್ನೆಲ್ಲ ಬಿಸುಟಿ ಬಿಡಬೇಕೆನ್ನಿಸುವುದೇ? ಎಲ್ಲರಿಂದಲೂ, ಎಲ್ಲದರಿಂದಲೂ ದೂರವಾಗಿ ಸಾಧನೆಯೇ ಮುಖ್ಯವೆನಿಸಿಬಿಡುತ್ತದೆಯೇ?

tigers nest monastery bhutan

ಹೀಗೆಲ್ಲ ಯೋಚಿಸುತ್ತಾ ನಡೆಯುತ್ತಿದ್ದಾಗ ಗಮನಿಸಿದ ಅಂಶವೆಂದರೆ ನಾವೀಗ ಟೈಗರ್ಸ್ ನೆಸ್ಟ್‌ಗಿಂತಲೂ ಎತ್ತರಕ್ಕೆ ಏರಿದ್ದೆವು. ಅಂದರೆ ನಮ್ಮ ಮುಂದಿರುವ ದಾರಿ ಇಳಿದುಹೋಗಬೇಕಿರುವಂಥದ್ದು. ಸುಮಾರು ಏಳುನೂರರಷ್ಟಿರುವ ಕಾಂಕ್ರೀಟ್ ಮೆಟ್ಟಿಲುಗಳನ್ನು ಇಳಿದ ನಂತರ ಸಿಕ್ಕ ಜಲಪಾತದ ಸ್ಫಟಿಕದಷ್ಟು ಶುಭ್ರವಾಗಿದ್ದ ನೀರಹನಿಗಳು ನಮ್ಮ ದಣಿದ ದೇಹಕ್ಕೆ ಚೇತನವನ್ನು ಮರಳಿ ತಂದುಕೊಟ್ಟವು. ಪಕ್ಕದಲ್ಲಿ ನೂರಾರು ಅಡಿಗಳಷ್ಟು ಎತ್ತರಕ್ಕೆ ಚಾಚಿಕೊಂಡಿರುವ ಬೃಹದಾಕಾರದ ಬಂಡೆಯನ್ನು ನೋಡಿದಾಗ, ಪ್ರಕೃತಿಯ ಎದುರು ನಾವೆಷ್ಟು ಕುಬ್ಜರು ಎನ್ನುವ ಭಾವನೆ ಮೂಡಿತು. ನಮ್ಮ ಈ ಕುಬ್ಜತೆಯನ್ನು ಅರಿಯುವ ಸಲುವಾಗಿಯೇ ಹಿರಿಯರು ಬೆಟ್ಟ, ಗುಡ್ಡಗಳ ಮೇಲೆ ಮಂದಿರಗಳನ್ನು ಕಟ್ಟಿಸಿದರೋ ಅನ್ನಿಸಿತು ಕೂಡ.

ನಂತರ ಪುನಃ ನೂರಿಪ್ಪತ್ತು ಮೆಟ್ಟಲುಗಳನ್ನು ಹತ್ತಿ, ಗುರು ಪದ್ಮಸಂಭವರವರ ಮೂರ್ತಿಯ ಎದುರಿಗೆ ನಿಂತಾಗ ಅಂತೂ ಇಲ್ಲಿಯವರೆಗೆ ಬಂದು ತಲುಪಿದೆನಲ್ಲ ಎನ್ನುವ ಧನ್ಯತೆ ಮೂಡಿತು. ಅಲ್ಲಿ ಬೇಡಿದ ನಮ್ಮ ಆಶೋತ್ತರಗಳೆಲ್ಲ ನೆರವೇರುವುದೆಂದು ನಮ್ಮ ಗೈಡ್ ತಿಳಿಸಿದಾಗ, ಎಂದಿನಂತೆ ಅಂದೂ ನಾನು ಬೇಡಿದ್ದು, ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂದು.

Tiger's nest visit

ಮೂರು ಗಂಟೆಯ ನಡಿಗೆಯ ಸುಸ್ತು ಕಳೆದ ನಂತರ ಮರಳಿ ಗೂಡಿನತ್ತ ಹೆಜ್ಜೆ ಹಾಕಿದೆವು. ಆಕಾಶವನ್ನು ಕವಿದ ಕಪ್ಪುಮೋಡವನ್ನು ನೋಡಿ ಎಲ್ಲಿಯೂ ನಿಲ್ಲದೆ, ಎರಡು ಗಂಟೆಯಲ್ಲೇ ನೆಲಮಟ್ಟವನ್ನು ತಲುಪಿದೆವು. ಬೆಳಗ್ಗೆ ತಿಂದ ತಿಂಡಿ ಯಾವಾಗಲೋ ಕರಗಿಹೋಗಿ ರಾಕ್ಷಸ ಹಸಿವು ಕಾಡತೊಡಗಿದಂತೆ ಮನೆಯ ನೆನಪಾಗತೊಡಗಿತು. ಅಮ್ಮ-‍ಅತ್ತೆ ಹೇಗಿದ್ದಾರೋ, ಸಣ್ಣಮಗನ ಪರೀಕ್ಷೆ ಹೇಗಿತ್ತೋ, ದೊಡ್ಡಮಗ ಏನು ತಿಂದನೋ ಮುಂತಾದ ಪ್ರಶ್ನೆಗಳು ಲೌಕಿಕ ಜಗತ್ತಿಗೆ ನನ್ನನ್ನು ಎಳೆದುತಂದವು.‍ ಆಗ ಭಾರವೆನಿಸಿದ ಬ್ಯಾಗು ಈಗ ಪ್ರಿಯವೆನಿಸಿ ಗಾಗಲ್ ಕಣ್ಣಿಗೇರಿತು, ಮೊಬೈಲು ಕೈಯನ್ನು ಅಲಂಕರಿಸಿತು. ಕೆಲವೇ ಗಂಟೆಗಳ ಹಿಂದೆ ನನ್ನನ್ನು ಕಾಡಿದ ವೈರಾಗ್ಯ ಭಾವ ನೆಲಮಟ್ಟವನ್ನು ಮುಟ್ಟಿದಂತೆಲ್ಲ ಅದ್ಹೇಗೆ ಕರಗಿಹೋಯಿತೋ! ಇದನ್ನೇ ಅಲ್ಲವೇ ಪುರಂದರದಾಸರು ‘ಉದರ ವೈರಾಗ್ಯ’ ಎಂದು ಕರೆದಿರುವುದು!

ನೋಯುತ್ತಿರುವ ಕಾಲಿಗೆ ಮಸಾಜು ಮಾಡಿಸಬೇಕು ಅಂದುಕೊಳ್ಳುತ್ತಾ ಕಾರಿನಿಂದ ನೋಡುತ್ತಿದ್ದಂತೆ ‘ಟೈಗರ್ಸ್ ನೆಸ್ಟ್’ ಕಣ್ಣಿನಿಂದ ಮರೆಯಾಗತೊಡಗಿತು. ಆದರೆ ಚಾರಣದ ಅನುಭವ ಮಾತ್ರ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂಥದ್ದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...