Monday, December 8, 2025
Monday, December 8, 2025

ಹೆಂಚಿನಲ್ಲಿ ಶತಮಾನದ ಐತಿಹ್ಯ!

ಹಳೆಯ ಅಂಚೆ ಪೆಟ್ಟಿಗೆ, ಟಪ್ಪಾಲು ಕೊಂಡೊಯ್ಯುತ್ತಿದ್ದ ದೊಡ್ಡ ದೊಡ್ಡ ಪೆಟ್ಟಿಗೆಗಳು, ಹಳೆಯ ವಿದ್ಯುತ್ ಎಂ ಸಿ ಬಿ ಪೆಟ್ಟಿಗೆ, ಸ್ವಿಚ್ಗಳು ಎಲ್ಲವನ್ನು ಚೆನ್ನಾಗಿ ಕಾಪಾಡಿಕೊಂಡು, ಅಂಚೆ ಕೆಲಸಗಳನ್ನೂ ನಡೆಸಿಕೊಂಡು ಚಂದದ ಸಂಗ್ರಹಾಲಯವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಇದು ತನ್ನ ಮೂಲ ಸ್ವರೂಪವನ್ನು ಇಂದಿಗೂ ಕಳೆದುಕೊಂಡಿಲ್ಲ.

- ಡಾ. ಲತಾ. ಎಸ್

ಶ್ರೀಲಂಕಾದ ಮಧ್ಯದಲ್ಲಿರುವ ಪರ್ವತ ಭಾಗ, ನಮ್ಮ ಊಟಿ ಕುಲು ಮನಾಲಿಯಂಥ ತಂಪಾದ, ಚಹಾ ತೋಟಗಳು, ಕಂಡಲ್ಲಿ ಜಲಪಾತಗಳಿಂದ ಕಣ್ಣಿಗೆ ಹಬ್ಬ ತರುವ ಪ್ರದೇಶ. ಅಲ್ಲಿನ ಒಂದು ಪುಟ್ಟ ಊರು 'ನುವಾರ ಎಲಿಯ'. ಇದು ಸಮುದ್ರದಿಂದ 1868 ಮೀ. ಎತ್ತರದಲ್ಲಿದೆ. ಮೋಡಗಳು ಕೈಗೆಟಕುವಷ್ಟು ಹತ್ತಿರವೆಂದು ಭಾಸವಾಗಿಸುತ್ತ, ಮಂಜಿನ ನಾಡೆಂದೇ ಜನಪ್ರಿಯವಾಗಿದೆ. ನುವಾರ ಎಲಿಯವನ್ನು ಶ್ರೀಲಂಕಾದ ಸ್ಕಾಟ್ಲೆಂಡ್ ಎಂದರೆ ಉತ್ಪ್ರೇಕ್ಷೆಯಲ್ಲ. ಹಸಿರು ಪರ್ವತಗಳು, ಸದಾ ನಲಿಯುತ್ತಿರುವ ಹತ್ತಿಯಂಥ ಹೂಮೋಡಗಳು, ಸ್ಕಾಟ್ಲೆಂಡ್ ನೆನಪಿಸುವ ಚಳಿ, ಸುತ್ತುವರಿದ ಹಸಿರು ಚಹಾ ಎಸ್ಟೇಟ್‌ಗಳು. ಇಂಥ ಚುಮು ಚುಮು ಚಳಿಯ ಮಧ್ಯೆ ಪರ್ವತದ ಮೇಲೆ ಸೂರ್ಯ ರಶ್ಮಿ ಬಿದ್ದಾಗ, ಒಂದು ಅನಿರ್ವಚನೀಯ ಸೌಂದರ್ಯ, ಸ್ವರ್ಗ ಧರೆಗಿಳಿದ ಅನುಭವ. 'ಲಿಟಲ್ ಇಂಗ್ಲೆಂಡ್' ಎಂದೇ ಕರೆಸಿಕೊಳ್ಳುವ ಈ ತಾಣದಲ್ಲಿ ಬ್ರಿಟಿಷರ ವಾಸ್ತು ಭವನಗಳು ಅನೇಕ ಇವೆ. ಇವೆಲ್ಲದರ ಮಧ್ಯೆ ಮನಸೆಳೆಯುವ ಕಟ್ಟಡವೆಂದರೆ 120 ವರ್ಷಗಳ ಹಿಂದೆ ಕಟ್ಟಲಾದ, ಇಂದಿಗೂ ಕೆಲಸ ಮಾಡುತ್ತಿರುವ ಪೋಸ್ಟ್ ಆಫೀಸ್. ತನ್ನ ಹೆಂಚಿನಲ್ಲಿ ಇತಿಹಾಸವನ್ನು ಬಚ್ಚಿಟ್ಟುಕೊಂಡ ಅಂಚೆಮನೆ ಇದು ಎಂದರೆ ಅಕ್ಷರಶಃ ಸತ್ಯ. ಇಲ್ಲಿನ ಮಾಡಿನ ಹೆಂಚುಗಳಲ್ಲಿ ಇದರ ಇಸವಿ ದಾಖಲಾಗಿದೆ.

16ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಕಟ್ಟಲಾಗುತ್ತಿದ್ದ 'ಟ್ಯೂಡೋರ್' ಶೈಲಿಯಲ್ಲಿ ಇದನ್ನು ಕಟ್ಟಿದ್ದಾರೆ. 1894ರಲ್ಲಿ ಕಟ್ಟಲಾದ, ನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದ ಈ ಕೆಂಪು ರಂಗಿನ ಟಪ್ಪಾಲು ಕಚೇರಿ ಶ್ರೀಲಂಕಾದ ಹೆಮ್ಮೆಯ ಚಿಹ್ನೆ. ಕೆಂಪು ಇಟ್ಟಿಗೆಗಳ ಗೋಡೆಗಳು, ತ್ರಿಕೋನಾಕಾರದ ಮೆಟ್ಟಿನ ಮೇಲ್ಚಾವಣಿ, ಬಿಳಿ ಕಿಟಕಿಯ ಕಂಬಿಗಳು ಮತ್ತು ಮಧ್ಯದಲ್ಲಿ ಎತ್ತರದ ಗಡಿಯಾರ ಗೋಪುರ ಎಲ್ಲವೂ ನೋಡಲು ಒಂದು ಲಿಟಲ್‌ ಇಂಗ್ಲೆಂಡ್ ನೆನಪಿಸುವುದರಲ್ಲಿ ಸಂಶಯವಿಲ್ಲ. ಇಂದಿಗೂ ಸಕ್ರಿಯವಾಗಿ ವರ್ಕಿಂಗ್ ಕಂಡೀಷನ್‌ನಲ್ಲಿ ಇಟ್ಟುಕೊಂಡಿರುವ ಸಾಧನೆ ಸಿಂಹಳೀಯರದ್ದು. ಹಾಗೆಯೇ ಹಳೆಯ ಅಂಚೆ ಪೆಟ್ಟಿಗೆ, ಟಪ್ಪಾಲು ಕೊಂಡೊಯ್ಯುತ್ತಿದ್ದ ದೊಡ್ಡ ದೊಡ್ಡ ಪೆಟ್ಟಿಗೆಗಳು, ಹಳೆಯ ವಿದ್ಯುತ್ ಎಂ ಸಿ ಬಿ ಪೆಟ್ಟಿಗೆ, ಸ್ವಿಚ್‌ಗಳು ಎಲ್ಲವನ್ನು ಚೆನ್ನಾಗಿ ಕಾಪಾಡಿಕೊಂಡು, ಅಂಚೆ ಕೆಲಸಗಳನ್ನೂ ನಡೆಸಿಕೊಂಡು ಚಂದದ ಸಂಗ್ರಹಾಲಯವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಇದು ತನ್ನ ಮೂಲ ಸ್ವರೂಪವನ್ನು ಇಂದಿಗೂ ಕಳೆದುಕೊಂಡಿಲ್ಲ. ಇಟ್ಟಿಗೆಯ ಕೆಂಪು ಬಣ್ಣದ ಗೋಡೆಗಳು ಈಗ ಸ್ವಲ್ಪ ಗುಲಾಬಿ ವರ್ಣವನ್ನು ಪಡೆದಿರುವುದರಿಂದ ಇದನ್ನು “ಪಿಂಕ್ ಪೋಸ್ಟ್ ಆಫೀಸ್” ಎಂದು ಕರೆಯುತ್ತಾರೆ. ಅದರ ಮುಂಭಾಗದ ಹಸಿರು ತೋಟಗಳು, ಕಳಚದ ಮರದ ಬಾಗಿಲುಗಳು ಮತ್ತು ಗಡಿಯಾರದ ಗೋಪುರವು ಛಾಯಾಗ್ರಾಹಕರ ಮೆಚ್ಚಿನ ಸ್ಥಳವಾಗಿದೆ. ಬೆಳಗಿನ ಮಂಜಿನಲ್ಲಿ ಅಥವಾ ಸಂಜೆಯ ಬಂಗಾರದ ಬೆಳಕಿನಲ್ಲಿ ಈ ಕಟ್ಟಡದ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.

Nuwara eliya post office Shrilanka

ಬ್ರಿಟಿಷ್ ಕಾಲದಲ್ಲಿ ನುವಾರ ಎಲಿಯ ಚಹಾ ತೋಟಗಳ ಕೇಂದ್ರವಾಗಿತ್ತು. ಅಧಿಕಾರಿಗಳು, ಉದ್ಯೋಗಿಗಳು ಮತ್ತು ತೋಟದ ಮಾಲೀಕರು ತಮ್ಮ ತಮ್ಮ ಕೆಲಸಗಳಿಗೆ ಇಡೀ ದ್ವೀಪದಲ್ಲಿ ವಾಸಿಸುತ್ತಿದ್ದರು. ಅವರ ಸಂಪರ್ಕದ ಏಕಮಾತ್ರ ಕೊಂಡಿಯಾಗಿದ್ದುದು ಟಪ್ಪಾಲು. ಈ ಕಚೇರಿ ಪತ್ರಗಳು, ದಾಖಲೆಗಳು ಮತ್ತು ಪಾರ್ಸೆಲ್‌ಗಳನ್ನು ಸಾಗಿಸುವ ಮುಖ್ಯ ಕೇಂದ್ರವಾಗಿತ್ತು. ಈಗ ಚಂದದ ಇತಿಹಾಸದ ಚಿಹ್ನೆಯಾಗಿರುವ ಈ ಅಂಚೆಮನೆ, ಅಂದು ಇಂದಿಗಿಂತ ಹೆಚ್ಚು ಕಾರ್ಯನಿರತವಾಗಿ ಅವಿಶ್ರಾಂತ ಕಚೇರಿಯಾಗಿತ್ತು. ಹಿಂದೆ ಚಹಾತೋಟಗಳಿಗೆ ಹೊರಗಿನಿಂದ ಮುಖ್ಯವಾಗಿ ಭಾರತದಿಂದ ಕುಶಲ ಕೆಲಸಗಾರರನ್ನು ಕೊಂಡೊಯ್ಯುವ ಪದ್ಧತಿ ಬ್ರಿಟಿಷರಿಗೆ ಸಾಮಾನ್ಯವಾಗಿತ್ತು. ಇಂಥ ಅನೇಕ ಚಹಾ ತೋಟಗಳಲ್ಲಿ ಎಲ್ಲಿಂದಲೋ ಬಂದ ಕೆಲಸಗಾರರಿಗೆ ಇದು ಪ್ರಮುಖ ಹಾಗೂ ಏಕೈಕ ಸಂವಹನ ಮಾಧ್ಯಮವಾಗಿತ್ತು ಎಂದು ಇಲ್ಲಿನವರು ಬಣ್ಣಿಸುತ್ತಾರೆ.

Visit to Nuwara Eliya

ಕಾಲಕ್ರಮೇಣ ಬ್ರಿಟಿಷರು ತೆರಳಿದರೂ, ಈ ಕಟ್ಟಡ ತನ್ನ ಕೆಲಸವನ್ನು ಮುಂದುವರಿಸಿತು. ಇಂದು ಇದು ಶ್ರೀಲಂಕಾದ ರಾಷ್ಟ್ರೀಯ ಟಪ್ಪಾಲು ವ್ಯವಸ್ಥೆಯ ಭಾಗವಾಗಿದೆ. ಅಂದರೆ ಈ ಕಟ್ಟಡವು ಕೇವಲ ಪುರಾತನ ಶಿಲ್ಪವಷ್ಟೇ ಅಲ್ಲ, ಜೀವಂತ ಆಡಳಿತದ ಕಚೇರಿಯಾಗಿದೆ. ಅಂದಿನ ಗಡಿಯಾರ ಇಂದಿಗೂ ಚಾಲನೆಯಲ್ಲಿದೆ! ನುವಾರ ಎಲಿಯ ಹಾಗೂ ಶ್ರೀಲಂಕಾದ ಅನೇಕ ಪ್ರೇಕ್ಷಣೀಯ ಸ್ಥಳಗಳ ಪೋಸ್ಟ್ ಕಾರ್ಡ್ ದೊರೆಯುತ್ತವೆ. ಅದರಲ್ಲಿ ಬರೆದು ನೀವು ಬೇಕಾದಲ್ಲಿಗೆ ಇಲ್ಲಿಯೇ ಪೋಸ್ಟ್ ಮಾಡಬಹುದು. ಒಳ್ಳೆಯ ಸ್ಮರಣಿಕೆಯಿದು. 1990ರಲ್ಲಿ ಶ್ರೀಲಂಕಾ ಪೋಸ್ಟ್ ವಿಶ್ವ ಅಂಚೆ ದಿನದ ಅಂಗವಾಗಿ ಈ ಕಟ್ಟಡದ ಚಿತ್ರವಿರುವ ₹10 ಮೌಲ್ಯದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು.

ಅಂತೂ ಪಕ್ಕದಲ್ಲಿರುವ ಹಸಿರು ಗಾಲ್ಫ್ ಕೋರ್ಸ್, ಬಟಾನಿಕಲ್ ಗಾರ್ಡನ್ ಸುತ್ತ ಕಂಗೊಳಿಸುತ್ತಿರುವ ಬೆಟ್ಟಗಳು ಸಾಲು, ಅದರ ಮಧ್ಯೆ ತನ್ನ ಕೆಂಪು ಬಣ್ಣದಿಂದ ರಾರಾಜಿಸುತ್ತಿರುವ ಅಂಚೆ ಕಚೇರಿ ಶತಮಾನಗಳ ಆಗುಹೋಗುಗಳಿಗೆ ಜೀವಂತ ಸಾಕ್ಷಿಯಾಗಿದ್ದುಕೊಂಡು ಪ್ರವಾಸಿಗರನ್ನೂ ಆಕರ್ಷಿಸುತ್ತಾ ಕಾಲವನ್ನು ನಿಧಾನಿಸುವುದಂತೂ ನಿಜ. ಇತಿಹಾಸವನ್ನು ಗೌರವಿಸುತ್ತಾ, ಇದನ್ನು ಕಾಪಿಟ್ಟುಕೊಂಡ ಶ್ರೇಯಸ್ಸು ಸಿಂಹಳೀಯರಿಗೂ ಸಲ್ಲಬೇಕು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!