ಡೇರ್‌ಡೆವಿಲ್‌ ಮುಸ್ತಾಫಾ, ಫ್ಯಾಮಿಲಿ ಡ್ರಾಮಾ, ವಲವಾರ ಸಿನಿಮಾಗಳಲ್ಲಿ ನಟನೆಯ ಮೂಲಕ ಗಮನ ಸೆಳೆದ ಅಭಯ್‌ ಬಿಡುವಿನ ಸಮಯದಲ್ಲಿ ಸಾಕಷ್ಟು ಪ್ರವಾಸ ಕೂಡ ಮಾಡುತ್ತಾರೆ. ಈಗ ಇನ್ನೊಂದು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರುವ ಅವರು ಪ್ರವಾಸಕ್ಕೆ ಇಷ್ಟಪಡುವ ಜಾಗಗಳ್ಯಾವುದು? ತಿನಿಸುಗಳೇನು? ಇವೆಲ್ಲದರ ಬಗ್ಗೆ ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಹೈಡ್ರೋಫೋಬಿಯಾ ಇಂದಿಗೂ ಕಾಡುತ್ತಿದೆ – ಐಶ್ವರ್ಯಾ ಸಿಂಧೋಗಿ

ಸಮಯ ನಿಲ್ಲಬೇಕು

ಟ್ರಾವೆಲ್‌ ನನಗೆ ಬಹಳ ಮಜ ಕೊಡೋದು ಅಥವಾ ನೆನಪಲ್ಲಿ ಉಳಿಯುವುದು ಯಾವಾಗ ಎಂದರೆ ಆ ಪ್ರವಾಸದಲ್ಲಿ ಇದ್ದಾಗ ನನಗೆ ಬೇರೆ ಯಾವುದೇ ಯೋಚನೆ ಬರಬಾರದು. ಬೇರೆ ಯಾವುದೇ ಕೆಲಸದ ಟೆನ್ಷನ್‌ ಇರಬಾರದು. ಆ ಜಾಗ ಮನಸಿಗೆ ನೆಮ್ಮದಿ ನೀಡಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಮಯ ನಿಧಾನ ಗತಿಯಲ್ಲಿ ಸಾಗುವಂತಿರಬೇಕು. ಅಂಥ ಟ್ರಿಪ್‌ ಕೆಲವೊಮ್ಮೆ ಜತೆಗಿದ್ದ ಜನಗಳ ಮೇಲೆ ಹಾಗೂ ಕೆಲವೊಮ್ಮೆ ಜಾಗದ ಮೇಲೆ ಡಿಪೆಂಡ್‌ ಆಗಿರುತ್ತದೆ.

Untitled design (90)

ಟ್ರಾವೆಲ್‌ ಬ್ಯಾಗ್‌

ಇದ್ದಕ್ಕಿದ್ದಂತೆ ಎಲ್ಲಾದರೂ ಟ್ರಿಪ್‌ ಹೋಗುವ ಸಂದರ್ಭ ಬಂದರೆ ಬಹುಶಃ ಮೊದಲು ಬ್ಯಾಗ್‌ ಒಳಗೆ ಫೋನ್‌ ಚಾರ್ಜರ್‌ ಹಾಗೂ ಪವರ್‌ ಬ್ಯಾಂಕ್‌ ಇಟ್ಟುಕೊಳ್ಳುತ್ತೇನೆ. ಫೋನ್‌ ಅಲ್ಲಿ ಚಾರ್ಜ್‌ ಇರುವುದು ಬಹಳ ಮುಖ್ಯ ನನಗೆ. ಅಮ್ಮ ಒಂದಿಷ್ಟು ಖಾಲಿ ಕವರ್‌ ಹಾಕಿ ಕೊಡುತ್ತಾರೆ. ಯಾವುದಾದರೂ ಜಾಗಕ್ಕೆ ಹೋದಾಗ ಅಲ್ಲಿಂದ ಏನಾದರು ತರುವುದಕ್ಕೆ ಸಹಾಯ ಆಗುತ್ತೆ ಎನ್ನುವುದು ಅವರ ಯೋಚನೆ. ಅವಿಷ್ಟು ಬಿಟ್ಟರೆ ಕೆಲವು ಬಟ್ಟೆ, ಟೈಂಪಾಸ್‌ ಫುಡ್‌ ಏನಾದರು ಇರುತ್ತವೆ ಅಷ್ಟೇ.

ಸಿನಿಮಾ ಪ್ರವಾಸ

ಪ್ರವಾಸ ನಮ್ಮ ಆಲೋಚನೆಗಳ ಮೇಲೂ ಪ್ರಭಾವ ಬೀರುತ್ತವೆ. ಇತ್ತೀಚೆಗೆ ಬರವಣಿಗೆ ಕೂಡ ಶುರು ಮಾಡಿದ್ದೇನೆ. ನಾನು ಏನಾದರು ಬರೆಯಬೇಕು ಎಂದುಕೊಂಡರೆ ಯಾವುದಾದರೂ ಜಾಗಕ್ಕೆ ಹೋಗಿಯೇ ಬರೆಯಲು ಇಷ್ಟಪಡುತ್ತೇನೆ. ನನ್ನ ಪ್ರಕಾರ ನಾವು ಟ್ರಾವೆಲ್‌ ಮಾಡಿದಷ್ಟೂ ನಮ್ಮ ಆಲೋಚನೆಗಳೂ ಸಂಚಾರ ಮಾಡುತ್ತಿರುತ್ತವೆ. ಆಗ ಮಾತ್ರ ಹೊಸ ದೃಷ್ಟಿಕೋನ ಸಿಗಲು ಸಾಧ್ಯ. ಇನ್ನು ನಟನೆಯ ವಿಷಯಕ್ಕೆ ಬಂದರೆ, ಕೆಲವು ಜಾಗಗಳಿಗೆ ಹೊಂದಿಕೊಂಡರೆ ಆ ಭಾಗದ ಪಾತ್ರವನ್ನು ಮಾಡಲು ಹೆಚ್ಚು ಸುಲಭವಾಗುತ್ತದೆ. ʼವಲವಾರʼ ಸಿನಿಮಾ ಸಕಲೇಶಪುರ ಭಾಗದ ಕಥೆ. ಹೀಗಾಗಿ ಆ ಭಾಗದ ಭಾಷೆಯ ಶೈಲಿಯನ್ನು ಕಲಿಯಲು ಚಿತ್ರೀಕರಣಕ್ಕೂ ಬಹಳ ದಿನಗಳ ಮುಂಚೆಯೇ ಅಲ್ಲಿ ಹೋಗಿ ಉಳಿದುಕೊಂಡಿದ್ದೆ. ಹಾಗೆಯೇ ಇತ್ತೀಚೆಗೆ ಒಂದು ತೆಲುಗು ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಅದಕ್ಕಾಗಿಯೂ ರಾಯಲಸೀಮೆಯ ಬಳಿ ಕೆಲವು ದಿನಗಳ ಮುಂಚಿತವಾಗಿಯೇ ಹೋಗಿದ್ದೆ. ನನಗೆ ಆ ಭಾಗದ ನೈಜತೆಯನ್ನು ಹಾಗೆಯೇ ಉಳಿಸಿಕೊಂಡು ಪಾತ್ರ ನಿರ್ವಹಿಸಬೇಕು ಎನ್ನುವ ಆಸೆಯಿದೆ.

Untitled design (89)

ಮರೆಯಲಾರದ ಪ್ರವಾಸ

ಯಾವಾಗ ಬೇಸರವಾದರೂ ಮನಸು ಹಗುರವಾಗಿಸಲು ಹೋಗಬಹುದಾದ ಜಾಗವೆಂದರೆ ನನಗದು ಮೈಸೂರು. ಅದು ಬಿಟ್ಟರೆ ಕೇರಳ, ತಮಿಳುನಾಡು, ದೆಹಲಿ ಹಾಗೂ ಭರತದ ಸಕಾಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಒಡಿಶಾ ಕೂಡ ಬಹಳ ಇಷ್ಟವಾದ ಜಾಗ. ಪುರಿ ಜಗನ್ನಾಥ್‌ ಸಕತ್‌ ವೈಬ್‌ ಕೊಟ್ಟ ಜಾಗ. ಚಿಕ್ಕವಯಸ್ಸಿನಲ್ಲಿ ಅಪ್ಪ ಅಮ್ಮ ಹೆಚ್ಚಾಗಿ ದೇವಾಲಯಗಳನ್ನು ಸುತ್ತಿಸಿದ್ದರು. ಆಗ ಅವೆಲ್ಲ ಬೋರ್‌ ಆಗುತ್ತಿತ್ತು. ಆದರೆ ಒಮ್ಮೆ ಅಮ್ಮನ ಜತೆಗೆ ಗೋಕರ್ಣ ಹೋಗಿದ್ದೆ. ಮೊದಲ ಬಾರಿಗೆ ಬೀಚ್‌ ನೋಡಿದ್ದಾಗಿತ್ತು. ಆಗ ಅಮ್ಮನ ಜತೆ ಬಹಳ ಆಟವಾಡಿದ್ದೆ. ಅಮ್ಮನ ಜತೆ ಹೈದರಾಬಾದ್‌ ಹಾಗೂ ಸ್ನೋ ಸಿಟಿ ಹೋದಾಗಲು ಸಕತ್‌ ಮಜ ಮಾಡಿದ್ದೆ.

ಅನ್‌ಪ್ಲಾನ್ಡ್‌ ಮತ್ತು ಸೋಲೋ

ನನಗೆ ಹೆಚ್ಚಾಗಿ ಯಾವುದೇ ಪೂರ್ವ ಯೋಜನೆ ಇಲ್ಲದ ಪ್ರವಾಸಗಳೆಂದರೆ ಬಹಳ ಇಷ್ಟ. ಹಾಗೇ ಹೋದ ಪ್ರವಾಸಗಳಲ್ಲಿ ಗೆಳೆಯ ಶಿಶಿರ್‌ ಬೈಕಾಡಿ ಜತೆಗೆ ಉಡುಪಿ ಹೋಗಿದ್ದು ಯಾವಾಗಲೂ ನೆನಪಲ್ಲಿರುತ್ತದೆ. ಒಂದು ಬೀಚ್‌ಗೆ ಹೋಗಿ, ಬಹಳ ಸಮಯ ಕಳೆದಿದ್ದೆವು. ಅದು ಎಷ್ಟು ನೆಮ್ಮದಿಯಾಗಿತ್ತು ಎಂದರೆ ಮರುದಿನ ಕೂಡ ಅಲ್ಲೇ ಹೋಗಿ ಸುಮ್ಮನೆ ಕುಳಿತು ಸಮುದ್ರದ ಅಲೆಗಳನ್ನು ನೋಡುತ್ತಿದ್ದೆವು. ಇನ್ನೊಮ್ಮೆ ಇನ್ನೊಬ್ಬ ಗೆಳೆಯನ ಜತೆಗೆ ಕುಮಟಾ ಹೋದಾಗ ಅಲ್ಲಿ ಪ್ರಶಾಂತ್‌ ನೀಲ್‌ ಅವರ ಮುಂದಿನ ಸಿನಿಮಾ ಚಿತ್ರೀಕರಣದ ಸೆಟ್‌ ಕಂಡಿತ್ತು. ಅದು ಇಬ್ಬರಿಗೂ ಅಚ್ಚರಿಯಾಗಿತ್ತು. ನನ್ನ ಗೆಳೆಯ ಜರ್ನಲಿಸ್ಟ್‌ ಆಗಿದ್ದರಿಂದ ಅವರಿಗೆ ಅಲ್ಲೊಂದು ಬ್ರೇಕಿಂಗ್‌ ನ್ಯೂಸ್‌ ಕೂಡ ಸಿಕ್ಕಿತು. ಇಂಥ ಕೆಲವು ಅನಿರೀಕ್ಷಿತ ಘಟನೆಗಳು ಆಗುವುದು ಅನ್‌ಪ್ಲಾನ್ಡ್‌ ಟ್ರಿಪ್‌ ಅಲ್ಲಿ ಅಂತ ನನ್ನ ಭಾವನೆ. ಹಾಗೆಯೇ ಕೆಲವೊಮ್ಮೆ ನನ್ನ ಫ್ರೆಂಡ್ಸ್‌ ಅವರೆಲ್ಲರೂ ಪ್ಲಾನ್‌ ಮಾಡಿ ನನ್ನಿಂದ ಮಾತ್ರ ಮುಚ್ಚಿಡುತ್ತಾರೆ. ನನಗದು ಸರ್ಪ್‌ರೈಸಿಂಗ್‌ ಆಗಿರಬೇಕು ಅಂತ. ಕೆಲವೊಮ್ಮೆ ಅದು ಅವರಿಗೇ ಉಲ್ಟಾ ಹೊಡೆದು ಫ್ಲೈಟ್‌ ಮಿಸ್‌ ಮಾಡಿಕೊಂಡ ಮಜವಾದ ಕಥೆಗಳೂ ಇವೆ.

Untitled design (92)

ಫಾರಿನ್‌ ಆಸೆ

ಭಾರತದಲ್ಲಿ ನನಗೆ ಹಿಮಾಲಯಕ್ಕೆ ಹೋಗಬೇಕು ಎಂಬ ಆಸೆಯಿದೆ. ಅದರ ಜತೆಗೆ ವಿದೇಶ ಪ್ರವಾಸ ಎಂದರೆ ವೆನಿಸ್‌ಗೆ ಹೋಗಬೇಕು ಅಂತ ಆಸೆಯಿದೆ. ಆ ದೇಶವಿರುವುದೇ ನೀರಿನ ಮೇಲೆ. ಹೀಗಾಗಿ ಅದನ್ನು ನೋಡಬೇಕು ಅಂತ ಅದೇನೋ ವಿಚಿತ್ರ ಆಸೆ. ಹಾಗೆಯೇ ಒಂದು ಸಲ ಒಬ್ಬನೇ ಪ್ಯಾರಿಸ್‌ಗೆ ಹೋಗಬೇಕು ಅಂತ ಆಸೆ. ಹೌದು, ಅದು ಕಪಲ್‌ ಆಗಿ ಹೋಗಬೇಕಾದ ಜಾಗ. ಆದರೆ, ನನಗೆ ಒಂದು ಸಲ ಒಬ್ಬನೇ ಹೋಗಬೇಕು. ನಂತರ ಜೋಡಿಯಾಗಿ ಮತ್ತೊಮ್ಮೆ ಹೋದರೂ ಪರವಾಗಿಲ್ಲ.

ತಿಂದರೆ ಲೋಕಲ್‌ ತಿನ್ನಬೇಕು

ನನಗೆ ಎಲ್ಲೇ ಪ್ರವಾಸಕ್ಕೆ ಹೋದರೂ ಅಲ್ಲಿನ ಸ್ಥಳೀಯ ಫುಡ್‌ ಟ್ರೈ ಮಾಡುವುದು ಇಷ್ಟ. ಕುಮಟಾದಲ್ಲಿ ತಿಂದ ತುಪ್ಪದ ದೋಸೆ, ಅವಲಕ್ಕಿ ಮೊಸರು ಸಕತ್ತಾಗಿತ್ತು. ಆಂಧ್ರ ಫುಡ್‌ ತುಂಬಾ ಇಷ್ಟ. ಹೈದರಾಬಾದ್‌ ಕಡೆಗೆ ಹೋದಾಗ ಬಿರಿಯಾನಿ ಮಿಸ್‌ ಮಾಡಲ್ಲ. ಕೇರಳ ಆಪ್ಪಂ, ಉತ್ತರ ಭಾರತದ ಚಾಟ್ಸ್‌, ಗುಜರಾತ್‌ ಹಾಗೂ ರಾಜಸ್ಥಾನಿ ತಿನಿಸುಗಳೆಲ್ಲ ನನಗಿಷ್ಟ.