ಹೈಡ್ರೋಫೋಬಿಯಾ ಇಂದಿಗೂ ಕಾಡುತ್ತಿದೆ – ಐಶ್ವರ್ಯಾ ಸಿಂಧೋಗಿ
ಪ್ರವಾಸಕ್ಕಿಂತ ಪ್ರಯಾಣವೇ ನನಗೆ ಬಹಳ ಇಷ್ಟ. ಪ್ರವಾಸವೆಂದರೆ ಪೂರ್ವಯೋಜಿತ ತಾಣಗಳನ್ನು ನೋಡಿ ಬರುವುದಷ್ಟೆ. ಆದರೆ ಪ್ರಯಾಣದ ಮೂಲಕ ನಮ್ಮದೇ ಯೋಜನೆಗಳಿಗೆ ಅನುಸಾರವಾಗಿ ಅಲ್ಲಿನ ಎಲೆಮರೆಯ ಕಾಯಿಯಂತಿರುವ ಅನೇಕ ಪ್ರದೇಶಗಳನ್ನು ಅನ್ವೇಷಿಸಬಹುದು. ಉದಾಹರಣೆಗೆ ಬೆಂಗಳೂರು ಪ್ರವಾಸವೆಂದರೆ ಬರಿಯ ಅರಮನೆ, ಲಾಲ್‌ಬಾಗ್ ನೋಡಿ ಹಿಂದಿರುವುದಲ್ಲ, ಬದಲಾಗಿ ಮಲ್ಲೇಶ್ವರಂನ ಸಿಟಿಆರ್‌ನ ಬೆಣ್ಣೆ ದೋಸೆಯ ರುಚಿಯನ್ನೂ ಸವಿಯಬೇಕು ಎನ್ನುತ್ತಾರೆ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಐಶ್ವರ್ಯಾ ಸಿಂಧೋಗಿ. ಅವರ ಪ್ರವಾಸಿ ಜೀವನ ಪರಿಚಯ ಇಲ್ಲಿದೆ.
ಸುತ್ತಾಟವೇ ಜೀವನ
ನನ್ನದು ಪ್ರವಾಸಿ ಜೀವನ. ಬೇಕೆನಿಸಿದಾಗೆಲ್ಲ ಪ್ರವಾಸ ಮಾಡುತ್ತೇನೆ. ಪ್ರವಾಸವೆಂಬುದು ಈಗ ಟ್ರೆಂಡ್ ಆಗಿದೆ. ಆದರೆ ನಾನು ಚಿಕ್ಕಂದಿನಿಂದಲೇ ಪ್ರವಾಸವನ್ನು ರೂಢಿಸಿಕೊಂಡಿದ್ದೇನೆ. ಹೆತ್ತವರು ಈ ಅಭ್ಯಾಸವನ್ನು ನನ್ನಲ್ಲಿ ಬೆಳೆಸಿದ್ದು, ಅದು ಜೀವನದ ಒಂದು ಭಾಗವೇ ಆಗಿದೆ. ಹಿಂದೆ ಹೆತ್ತವರೇ ನನ್ನನ್ನು ಎಲ್ಲೆಡೆಗೆ ಕರೆದೊಯ್ಯುತ್ತಿದ್ದರು, ಇಂದು ನನ್ನದೇ ದುಡಿಮೆಯಲ್ಲಿ ಪ್ರವಾಸಕ್ಕೆ ಹೋಗುತ್ತಿದೇನೆ ಎಂಬುದಷ್ಟೇ ವ್ಯತ್ಯಾಸ.
ಇದನ್ನೂ ಓದಿ: ಐಕಾನಿಕ್ ನಟಿಯ ಟ್ರಾವೆಲ್ ಕಹಾನಿ
ಒತ್ತಡ ನಿವಾರಿಸಲು ಪ್ರವಾಸವೇ ಮದ್ದು
ಅಪ್ಪ ಅಮ್ಮನ ಜತೆಗೆ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನಕ್ಕೆ ಮೊದಲ ಪ್ರವಾಸವನ್ನು ಕೈಗೊಂಡಿದ್ದೆ. ಅದಾದಮೇಲೆ ನನ್ನ ನೆನಪಿನಲ್ಲಿ ಉಳಿಯುವ ಪ್ರವಾಸವೆಂದರೆ ಪದವಿ ಶಿಕ್ಷಣದ ವೇಳೆ ಶೂಟಿಂಗ್, ಓದು ಇವೆರಡರ ನಡುವೆ ಒತ್ತಡದ ಜೀವನ ನಡೆಸುತ್ತಿದ್ದ ನನ್ನನ್ನು ಅಪ್ಪ ಅದೊಂದು ದಿನ ತಡರಾತ್ರಿ 2 ಗಂಟೆ ಸುಮಾರಿಗೆ ಕೂರ್ಗ್ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಪ್ರಯಾಣದಿಂದ ಮಾತ್ರವೇ ಒತ್ತಡದ ಜೀವನದಿಂದ ಹೊರಬರಲುಸಾಧ್ಯವೆಂದು ತಿಳಿದಿದ್ದ ಅಪ್ಪ ನನಗಂದು ಸರ್‌ಪ್ರೈಸ್ ನೀಡಿದ್ದು ಮರೆಯಲು ಸಾಧ್ಯವಿಲ್ಲ.

ಫುಕೆಟ್ ಪ್ರವಾಸದಲ್ಲಿ ಫಜೀತಿ
ಇತ್ತೀಚೆಗೆ ಶ್ರೀನಿಧಿ ಹಾಲಿಡೇಸ್ ಅವರು ನಿರಂಜನ್ ದೇಶಪಾಂಡೆ, ಅವರ ಪತ್ನಿ ಯಶಸ್ವಿನಿ, ಸ್ನೇಹಿತ ಶಿಶಿರ್ ಜತೆಗೆ ನನ್ನನ್ನೂ ದ್ವೀಪಗಳ ನಗರ ಥೈಲ್ಯಾಂಡ್‌ನ ಫುಕೆಟ್‌ಗೆ ಕರೆದುಕೊಂಡು ಹೋಗಿದ್ದರು. ಫುಕೆಟ್ ಸುಂದರ ನೆನಪುಗಳನ್ನು ಕಟ್ಟಿಕೊಟ್ಟಿದೆಯಾದರೂ ಫಜೀತಿಗಳೇ ಹೆಚ್ಚಿತ್ತು. ಅಲ್ಲಿನ ಜನರು ಪ್ರವಾಸಿ ಸ್ನೇಹಿಗಳಲ್ಲ, ಭಾಷೆಯೇ ನಮಗೆ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಅವರು ಭಾರತೀಯರನ್ನು ಇಷ್ಟಪಡುವುದಿಲ್ಲ. ಟ್ರಾವೆಲ್ ಪಾರ್ಟ್ನರ್‌ಗೆ ನಮ್ಮ ಬೇಡಿಕೆ, ಯೋಜನೆಗಳನ್ನು ಮುಂಚಿತವಾಗಿ ಹೇಳಿ, ಲೋಕಲ್ ಟ್ರಾವೆಲ್ ವೆಹಿಕಲ್ ಸರ್ವಿಸ್ ಬುಕ್ ಮಾಡಲಾಗಿತ್ತು. ಆದರೆ ಅವರ ಕಳಪೆ ಸೇವೆಯಿಂದ ಪ್ರವಾಸವೆಲ್ಲ ಫಜೀತಿಯಾಗಿತ್ತು.
ಉಪ್ಪಿ ಜತೆ ಟ್ರಾವೆಲ್ ಡೇಟ್
ಉಪೇಂದ್ರ ಅವರು ನನ್ನ ನೆಚ್ಚಿನ ನಟ. ಅವಕಾಶ ಸಿಕ್ಕಿದರೆ ಅವರ ಜತೆಗೆ ಯುರೋಪ್ ಪ್ರವಾಸ ಹೋಗುವಾಸೆ ಇದೆ. ಅದರಲ್ಲೂ ಸ್ವಿಟ್ಜರ್‌ಲ್ಯಾಂಡ್ ಅಥವಾ ಗ್ರೀಸ್ ದೇಶಗಳನ್ನು ಅವರೊಂದಿಗೆ ಸುತ್ತಾಡಿ ಬರಬೇಕೆಂಬುದು ನನ್ನ ಬಹುದಿನಗಳ ಕನಸು.

ಇಂಟರ್ನ್‌ಶಿಪ್ ಪ್ರವಾಸ
ನನಗೆ ಪ್ರವಾಸ ಆಸಕ್ತಿ ಎಷ್ಟಿದೆಯೆಂದರೆ ಪದವಿಯಲ್ಲಿದ್ದಾಗ ಇಂಟರ್ನ್‌ಶಿಪ್‌ಗಾಗಿ ಯುಎಸ್‌ನ ವಿಸ್ಕಾನ್ಸಿನ್ ಅನ್ನುವ ರಾಜ್ಯದ ಫೈವ್ ಡೈಮಂಡ್ ಗಾಲ್ಫ್ ರೆಸಾರ್ಟ್‌ನಲ್ಲಿದ್ದೆ. ಅಲ್ಲಿ ವಾರಾಂತ್ಯದ ರಜೆಗಳೆಲ್ಲವನ್ನೂ ಉಳಿಸಿಕೊಂಡು ನ್ಯೂಯಾರ್ಕ್, ಶಿಕಾಗೋದಂಥ ಪ್ರಮುಖ ನಗರಗಳಿಗೆ ಭೇಟಿ ನೀಡಿದ್ದೆ. ನ್ಯೂಯಾರ್ಕ್‌ನ ಚೈನೀಸ್ ಸ್ಟ್ರೀಟ್ ಹಾಗೂ ಇಟಾಲಿಯನ್ ಸ್ಟ್ರೀಟ್‌ಗಳೆಂದರೆ ನನಗಿಷ್ಟ. ಹೀಗೆ ಜೀವನ ಪೂರ್ತಿ ಸುತ್ತಾಡುತ್ತಲೇ ಇರಬೇಕೆನ್ನುವುದು ನನ್ನ ಆಸೆ.
ಬೆಸ್ಟ್ ಪಾರ್ಟ್ನರ್ ಜತೆಗಿರಬೇಕು
ಕಳೆದ ಒಂದು ವರ್ಷದಿಂದ ಶಿಶಿರ್ ನನ್ನ ಟ್ರಾವೆಲ್ ಪಾರ್ಟ್ನರ್ ಆಗಿಬಿಟ್ಟಿದ್ದಾರೆ. ಅವರು ನನ್ನಂತೆ ಪ್ರವಾಸಿ ಜೀವನವನ್ನು ಮೆಚ್ಚಿಕೊಂಡವರು. ಅಂಥವರು ಜತೆಗಿದ್ದರೆ ಮಾತ್ರವೇ ಪ್ರವಾಸದ ಪ್ರತಿ ಕ್ಷಣವನ್ನೂ ಅನುಭವಿಸುವುದಕ್ಕೆ ಸಾಧ್ಯ. ಪ್ರವಾಸದ ವೇಳೆ ನಾವು ಖುದ್ದು ಅಲ್ಲಿನ ಸ್ಥಳೀಯರಾಗಬೇಕು, ಆಹಾರ, ಉಡುಗೆ-ತೊಡುಗೆಯೆಲ್ಲವನ್ನೂ ಖುಷಿಯಿಂದ ಅನುಭವಿಸಿದರಷ್ಟೇ ಪ್ರವಾಸಕ್ಕೊಂದು ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಶಿಶಿರ್ ನನಗೆ ಬೆಸ್ಟ್ ಪಾರ್ಟ್ನರ್.

ರಾಜಸ್ಥಾನದ ಸುತ್ತ
ಬಹುವರ್ಷಗಳಿಂದ ಕಾಯುತ್ತಿದ್ದ ರಾಜಸ್ಥಾನ ಪ್ರವಾಸವನ್ನು ಸ್ನೇಹಿತರ ಜತೆಗೆ ಹೋಗಿಬಂದಿದ್ದೆ. 8 ದಿನಗಳ ಆ ಪ್ರವಾಸದಲ್ಲಿ ಅಲ್ಲಿನ ಸುಂದರ ತಾಣಗಳನ್ನು ಕಣ್ತುಂಬಿಕೊಂಡು, ಜೈಸಲ್ಮೇರ್, ಜೈಪುರ, ಉದಯಪುರ, ಹೀಗೆ ಅಲ್ಲಿನ ಪ್ರಮುಖ ನಗರಗಳನ್ನು ಸುತ್ತಿದ್ದೇನೆ. ಸುಂದರವಾದ ಪ್ರವಾಸಿ ಈ ಪ್ರವಾಸಿ ತಾಣದ ಬಗ್ಗೆ ದಕ್ಷಿಣ ಭಾರತೀಯರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲವೆನಿಸುತ್ತದೆ.
ಭೂಮಿಯ ಮೇಲಿನ ಸ್ವರ್ಗ
ನಟ ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ʻಸಪ್ನೋ ಕಿ ರಾಣಿʼ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಾಯಕಿಯಾಗಿ ನನ್ನ ಮೊದಲ ಸಿನಿಮಾ ಪ್ರಯಾಣ ಆರಂಭವಾಗಿತ್ತು. ಈ ಸಿನಿಮಾದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿತ್ತು. ಚಿತ್ರೀಕರಣದ ವೇಳೆ ಚಿಕ್ಕಮಗಳೂರಿನ ಅನೇಕ ತಾಣಗಳನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅಲ್ಲಿ ವರ್ಷಕ್ಕೊಮ್ಮೆ ಭಕ್ತರಿಗೆ ಮುಕ್ತವಾಗುವ ದೇವೀರಮ್ಮ ಬೆಟ್ಟಕ್ಕೂ ಹೋಗಿ ಹರಸಿಕೊಂಡು ಬಂದಿದ್ದೆ.

ತೆರೆಕಾಣಲು ಸಿದ್ಧವಿರೋ ಪ್ರವಾಸಿ ಸಿನಿಮಾ ʻಆಶಿಕಿʼ
ಜೆ. ಚಂದ್ರಕಲಾ ಅವರು ನಿರ್ದೇಶನ ಮಾಡಿರುವ ʻಆಶಿಕಿʼ ಸಿನಿಮಾ ನಾನು ಅಭಿನಯಿಸಿರುವ ಮೊದಲ ಪ್ರವಾಸಿ ಸಿನಿಮಾ. ಈ ಸಿನಿಮಾಕ್ಕಾಗಿ ದಕ್ಷಿಣ ಭಾರತದಿಂದ ಉತ್ತರ ಭಾರತದ ಅನೇಕ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನಿಂದ ಪ್ರಾರಂಭವಾಗಿ ವಿಶಾಖಪಟ್ಟನಂ, ಕೇರಳ, ಮುಂಬೈ, ಪಂಜಾಬ್, ದೆಹಲಿ, ಚಂಡೀಗಡ, ಮನಾಲಿ ಹೀಗೆ ಅನೇಕ ಪರಿಸರಗಳಲ್ಲಿ ಶೂಟಿಂಗ್ ಮಾಡಿದ ಅನುಭವವಂತೂ ಮರೆಯಲು ಅಸಾಧ್ಯ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಈ ಚಿತ್ರ ಇನ್ನೂ ತೆರೆಕಂಡಿಲ್ಲ.
ಪ್ರವಾಸೋದ್ಯಮ ರಾಯಭಾರಿಯಾದರೆ
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾಗುವ ಅವಕಾಶ ಸಿಕ್ಕಿದರೆ ನಾನು ಅದರ ಸದ್ಬಳಕೆ ಮಾಡಿಕೊಳ್ಳುತ್ತೇನೆ. ಸ್ಥಳೀಯ ಅನುಭವಗಳನ್ನು ಜನರಿಗೆ, ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಪ್ರವಾಸಿ ಜೀವನಕ್ಕೆ ಪ್ರೋತ್ಸಾಹ ನೀಡುತ್ತೇನೆ. ಅಲ್ಲದೆ ಕರ್ನಾಟಕದಲ್ಲಿ ಪರಿಚಿತವಲ್ಲದ ಅನೇಕ ತಾಣಗಳನ್ನು ಜನರಿಗೆ ಹತ್ತಿರವಾಗಿಸುತ್ತೇನೆ.
ನನಗಿದೆ ಹೈಡ್ರೋ ಫೋಬಿಯಾ
ಪ್ರವಾಸ ಇಲ್ಲವೇ ಪ್ರಯಾಣದಲ್ಲಿ ಸಾಹಸಕ್ರೀಡೆಗಳಲ್ಲಿ ಪಾಲ್ಗೊಳ್ಳುವುದೆಂದರೆ ನನಗೆ ಬಹಳ ಇಷ್ಟ. ರಾಫ್ಟಿಂಗ್, ಪ್ಯಾಸೇಲಿಂಗ್ ಮಾಡಿದ್ದೇನೆ. ʻ777 ಚಾರ್ಲಿʼ ಸಿನಿಮಾದಲ್ಲಿ ಮನಾಲಿಯ ಪ್ಯಾರಾಗ್ಲೈಡಿಂಗ್ ವಿಶೇಷ ಆಕರ್ಷಣೆಯಾಗಿತ್ತು. ಅದೇ ಸ್ಥಳದಲ್ಲಿ ನಾನು ಪ್ಯಾರಾಗ್ಲೈಡಿಂಗ್ ಮಾಡಿದ್ದೇನೆ. ಆದರೆ ನನಗೆ ಹೈಡ್ರೋ ಫೋಬಿಯಾ ಇರುವುದರಿಂದ ಜಲಕ್ರೀಡೆಗಳಿಂದ ದೂರವೇ ಉಳಿದಿದ್ದೇನೆ. ಅದರಿಂದ ಹೊರಬರುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ.