ಪ್ರವಾಸಿಗನಿಗೆ ಸ್ವಂತಕ್ಕೆಂದು ಮನೆ ಯಾಕೆ ಬೇಕು?

ನಾವು ಹುಟ್ಟಿ ಬೆಳೆದಿರುವ ಊರನ್ನು ಹೊರತುಪಡಿಸಿ ಬೇರೆ ಊರು, ಅಲ್ಲಿನ ಜನ, ಆಹಾರ ಶೈಲಿ ಎಲ್ಲದರ ಅನುಭವ ಪಡೆದರಷ್ಟೇ ಹೊಸ ಚಿಂತನೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದಕ್ಕೆ ಸಾಧ್ಯ. ಆ ಕಾರಣಕ್ಕಾಗಿಯೇ ಪ್ರವಾಸವೆಂದರೆ ನನಗೆ ಹುಚ್ಚು ಪ್ರೀತಿ. ಹುಟ್ಟೂರಿನಲ್ಲಿರುವ ಸ್ವಂತ ಮನೆಯ ಹೊರತಾಗಿ ಬೇರೆಲ್ಲೂ ಸ್ವಂತಕ್ಕೆ ಮನೆ ಮಾಡಿಕೊಳ್ಳುವುದಿಲ್ಲವೆಂದುಕೊಂಡಿದ್ದೇನೆ. ಎಲ್ಲೇ ಪ್ರಯಾಣ ಮಾಡಿದರೂ, ಪ್ರವಾಸ ಕೈಗೊಂಡರೂ ಅಲ್ಲೊಂದಿಷ್ಟು ದಿನ ಇರುವಂತೆ ಪ್ಲ್ಯಾನ್‌ ಮಾಡಿಕೊಳ್ಳುವ ಬಗ್ಗೆ ಚಿಂತಿಸಿದ್ದೇನೆ.

ಇದನ್ನೂ ಓದಿ: ಕಾಂತಾರದ ʼಲೀಲಾʼ ಬಿಚ್ಚಿಟ್ಟ ಸತ್ಯ !

ಬದುಕಿನ ಪಾಠ ಕಲಿಸಿದ ಬಾಬಾಜಿ ಗುಹೆ

ನಾನು ಮಾಡಿದ ಪ್ರವಾಸಗಳೆಲ್ಲವೂ ನನಗೆ ಬೆಸ್ಟ್.‌ ಆದರೆ ಬೆಸ್ಟೆಸ್ಟ್ ಯಾವುದೆಂದರೆ ಕಳೆದ ವರ್ಷ ಕೇದಾರನಾಥಕ್ಕೆ ಹೋದದ್ದು. ಹಿರಿಯ ನಟ ರಜನೀಕಾಂತ್‌ ಸಾಮಾನ್ಯವಾಗಿ ಹಿಮಾಲಯದಲ್ಲಿ ಹೋಗುವ ಉತ್ತರಾಖಂಡದ ಪ್ರಸಿದ್ಧ ಮಹಾವತಾರ್ ಬಾಬಾಜಿ ಗುಹೆಗೆ 2017-18ರಲ್ಲಿ ನಾನೂ ಹೋಗಿದ್ದೆ. ಸುಮಾರು ಒಂದು ತಿಂಗಳ ಕಾಲ ಉಳಿದುಕೊಂಡಿದ್ದೇನೆ. ಅಲ್ಲಿ ಇದ್ದು ಬಂದ ಮೇಲಂತೂ ಜೀವನವನ್ನು ನಾನು ನೋಡುವ ರೀತಿಯೇ ಬದಲಾಗಿದೆ.

ಯಾವುದೇ ಪ್ರವಾಸಕ್ಕೂ ನಾನು ಸೀಮಿತವಾಗಿಲ್ಲ

shain (2)

ನಾನು ಬರೀ ಧಾರ್ಮಿಕ ಪ್ರವಾಸವನ್ನೇ ಮಾಡುತ್ತೇನೆಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದುದು. ಧಾರ್ಮಿಕ ಪ್ರವಾಸಕ್ಕೆಂದೇ ಹೋಗುವುದಿದೆ. ಇಲ್ಲವೇ ಹೋದ ಸ್ಥಳಗಳ ಸುತ್ತಮುತ್ತಲಿನ ಪುಣ್ಯ ಕ್ಷೇತ್ರಗಳು, ಧಾರ್ಮಿಕ ಕೇಂದ್ರಗಳನ್ನೂ ನೋಡಿ ಬರುವುದೂ ಇದೆ. ಒಟ್ಟಿನಲ್ಲಿ ನನಗೆ ಎಲ್ಲವೂ ಒಂದೊಂದು ವಿಧದ ಪ್ರವಾಸವಷ್ಟೇ.

ಶಬರಿಮಲೆ..ಭಕ್ತಿಯ ಜತೆಗೆ ಶಿಸ್ತಿನ ಪಾಠ

ನಾನು ಸುಮಾರು 5ನೆಯ ತರಗತಿಯಲ್ಲಿದ್ದಾಗ ನನ್ನ ತಂದೆ ನನಗೆ ಅಯ್ಯಪ್ಪನ ಮಾಲೆ ಹಾಕಿಸಿದ್ದರು. ಅದಾದಮೇಲೆ ಪ್ರತಿ ಬಾರಿಯೂ ಹೋಗಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಸೀರಿಯಲ್‌, ಸಿನಿಮಾ ಚಿತ್ರೀಕರಣದ ವೇಳೆ ಮಡಿ ಮೈಲಿಗೆಯಲ್ಲಿದ್ದು ವ್ರತ ಪಾಲನೆ ಕಷ್ಟವಾಗಿತ್ತು. ಅದಕ್ಕಾಗಿಯೇ ಕಳೆದ ವರ್ಷ ಬಿಡುವು ಮಾಡಿಕೊಂಡು ಶಬರಿಮಲೆಗೆ ಹೋಗಿ ಬಂದೆ. ಈ ವರ್ಷವೂ ಒಂದು ಸಿನಿಮಾ ಶೂಟ್‌ ಮುಗಿದ ಗ್ಯಾಪ್‌ನಲ್ಲಿ ಮತ್ತೆ ಶಬರಿಮಲೆಗೆ ಭೇಟಿ ನೀಡಿದ್ದೆ. ನನಗೆ ಶಬರಿಮಲೆ ಎಂದರೆ ಶಿಸ್ತನ್ನು ಕಲಿಸಿಕೊಡುವ ತಾಣವೂ ಹೌದು.

ನಮ್ಮೂರೇ ನಮಗೆ ಮೇಲು

ನಾನು ಅಭಿನಯಿಸಿದ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣವೆಲ್ಲವೂ ಕರ್ನಾಟಕದಲ್ಲೇ ನಡೆದಿದೆ. ವಿದೇಶದಲ್ಲಷ್ಟೇ ನಮ್ಮ ದೇಶ, ನಮ್ಮ ನಾಡಿನಲ್ಲೂ ಅನೇಕ ಚಿತ್ರೀಕರಣಕ್ಕೆ ಯೋಗ್ಯ ತಾಣಗಳಿವೆ. 2025ರ ಅಕ್ಟೋಬರ್‌ನಲ್ಲಿ ನನ್ನದೇ ಹೊಸ ಪ್ರೊಡಕ್ಷನ್‌ನಲ್ಲಿ ಒಂದು ಸಿನಿಮಾ ಚಿತ್ರೀಕರಣ ಮಾಡಿದ್ದೆವು. ಉಜಿರೆ ಸಮೀಪದ ಸುಂದರ ತಾಣಗಳು, ಪಶ್ಚಿಮ ಘಟ್ಟದ ಹೆಬ್ರಿ ಬಳಿಯ ಕಬ್ಬಿನಾಲೆಯನ್ನು ಕ್ಯಾಮೆರಾ ಕಣ್ಣುಗಳಲ್ಲಿ ನೋಡುವ ಖುಷಿಯೇ ಬೇರೆ.

ಉಡುಪಿಯೆಂಬ ಸುಂದರ ನೆನಪು

ಕುಂದಾಪುರ ನನ್ನೂರಾದರೂ ಉಡುಪಿಯೊಂದಿಗೆ ನನಗೆ ನಂಟಿದೆ. ಚಿಕ್ಕಂದಿನಿಂದಲೂ ಅನೇಕ ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಆದರೆ ಈಗ ಉಡುಪಿ ಸಾಕಷ್ಟು ಬದಲಾಗಿದೆ.

ಮಲ್ಪೆ, ಕಾಪು ಬೀಚುಗಳು ಅಭಿವೃದ್ಧಿಗೊಂಡಿವೆ. ಡೆಲ್ಟಾ ಬೀಚ್‌ ಅಭಿವೃದ್ಧಿಯಾದಮೇಲೆ, ಕೋಡಿ ಬೀಚ್‌ ಬಳಿಯಲ್ಲಿ ಕಯಾಕಿಂಗ್‌ ನಂಥ ಜಲಕ್ರೀಡೆಗಳಿಗೆ ಅವಕಾಶ ಕಲ್ಪಿಸಿದ ನಂತರ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಊರಿಗೆ ಹೋದಾಗ ಸ್ವಲ್ಪ ಬಿಡುವಾದರೂ ಅಲ್ಲೇ ಸಮೀಪದಲ್ಲಿರುವ ಐಲ್ಯಾಂಡ್‌ಗೆ ಕಯಾಕಿಂಗ್‌ ಮಾಡುತ್ತಲೇ ಹೋಗುತ್ತೇನೆ.

ಸಂಗೀತದೊಂದಿಗೆ ಪ್ರಯಾಣ

ಸಂಗೀತವಿದ್ದರಷ್ಟೇ ಪ್ರಯಾಣಕ್ಕೊಂದು ಅರ್ಥ ಬರುತ್ತದೆ. ಬುಲೆಟ್‌ ರೈಡ್‌ ಅಥವಾ ಕಾರ್‌ ಡ್ರೈವ್‌ ಮಾಡುವಾಗ ನಾನು ಒಬ್ಬನೇ ಇದ್ದರೆ ನನಗಿಷ್ಟವಾದ ಹಾಡುಗಳ ಜತೆಗೆ ಪ್ರಯಾಣಿಸುತ್ತೇನೆ. ಒಬ್ಬನೇ ಪ್ರಯಾಣಿಸುವಾಗ ಮಾತನಾಡುವುದಕ್ಕೂ ಯಾರೂ ಇರುವುದಿಲ್ಲ. ಆಗ ಹಾಡುಗಳೇ ನನಗೆ ಜತೆಯಾಗುತ್ತವೆ.

shain1

ಪ್ರಯಾಗದಲ್ಲಿ ಪವಿತ್ರ ಸ್ನಾನ

ಎರಡು ಬಾರಿ ನಾನು ಪ್ರಯಾಗಕ್ಕೆ ಹೋಗಿ ಬಂದಿದ್ದೇನೆ. ಮೊದಲ ಭೇಟಿಯಲ್ಲಿ ಬರಿಯ ಪ್ರಯಾಗಕ್ಕಷ್ಟೇ ಹೋಗಿದ್ದೆ. ಆಗ ಅಲ್ಲಿನ ಸಂಗಮದಲ್ಲಿ ಸ್ನಾನ ಮಾಡಿ ಒಂದೆರಡು ದಿನ ಅಲ್ಲೇ ಇದ್ದು ಬಂದಿದ್ದೆ. ಆದರೆ ಫೆಬ್ರವರಿಯಲ್ಲಿ ಮತ್ತೊಮ್ಮೆ ಪ್ರಯಾಗಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಆಗ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಅಲ್ಲಿಂದ ಅಯೋಧ್ಯೆ, ವಾರಾಣಸಿಗೂ ಹೋಗಿ ಬಂದಿದ್ದೆ.

ಸೋಲೋ ಟ್ರಾವೆಲ್‌- ಸೋಲೋ ಡ್ರೈವ್‌

ಸಾಮಾನ್ಯವಾಗಿ ನಾನು ಸೋಲೋ ಡ್ರೈವ್‌ ಮಾಡುವುದಕ್ಕೆ ಇಷ್ಟಪಡುತ್ತೇನೆ. ನಾನೇ ಪ್ಲ್ಯಾನ್‌ ಮಾಡುವ ಪ್ರಯಾಣಗಳಲ್ಲಿ ಹೆಚ್ಚಿನವು ಸೋಲೋ ಇರುತ್ತವೆ. ನಮಗಿಷ್ಟದ ತಾಣಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸರದೊಂದಿಗೆ ಹೊಂದಿಕೊಳ್ಳಬಹುದು. ಜತೆಗೆ ಬೇರೆ ಯಾರೇ ಇದ್ದರೂ ಅವರ ಬಗೆಗೂ ನಾವು ಚಿಂತಿಸಬೇಕಾಗುತ್ತದೆ. ಸೋಲೋ ಟ್ರಾವೆಲ್‌ ಈಸ್‌ ಆಲ್ವೇಸ್‌ ದಿ ಬೆಸ್ಟ್‌.

shain (1)

ವಿದೇಶ ಪ್ರವಾಸಕ್ಕೆ ಕಾಲ ಕೂಡಿ ಬಂದಿಲ್ಲ

ಅಂತಾರಾಷ್ಟ್ರೀಯ ಪ್ರವಾಸವೆಂದು ನಾನು ಹೋಗಿಯೇ ಇಲ್ಲ. ಆಹ್ವಾನದ ಮೇಲೆ ಒಂದು ಪಬ್‌ ಉದ್ಘಾಟನೆ ಮಾಡುವುದಕ್ಕಾಗಿ ದುಬೈಗೆ ಹೋಗಿರುವುದು ಬಿಟ್ಟರೆ ಪ್ರವಾಸದ ಮೂಡ್‌ನಲ್ಲಿ ವಿಮಾನವೇರಿದ್ದೇ ಇಲ್ಲ. ಭಾರತದ ಗಡಿ ದಾಟಿಯೂ ಇಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕಿದೆ.

ಹಿಮದ ನಡುವೆ ಅಡ್ವೆಂಚರ್‌

ಟ್ರಾವೆಲ್‌ನಲ್ಲಿ ಅಡ್ವೆಂಚರ್‌ ಇದ್ದರಷ್ಟೇ ಮಜವಾಗಿರುತ್ತದೆ. ಮ್ಯೂಸಿಕ್‌ ವಿಡಿಯೋ ಚಿತ್ರೀಕರಣಕ್ಕಾಗಿ ಚಂಡೀಗಢದಿಂದ ಸ್ಪಿಟಿ ವ್ಯಾಲಿಗೆ ಬುಲೆಟ್‌ ರೈಡ್‌ ಮಾಡಿದ್ದೆ. ರಾಯಲ್‌ ಎನ್‌ಫೀಲ್ಡ್‌ ಕಂಪನಿಯಿಂದಲೇ ಸ್ಪಾನ್ಸರ್‌ಶಿಪ್‌ ಇತ್ತು. ಸ್ಪಿಟಿ ವ್ಯಾಲಿಯ ಕೊನೆಯ ಗ್ರಾಮದವರೆಗೂ ಹೋಗಿ ಅಲ್ಲಿ ಚಿತ್ರೀಕರಣ ಮಾಡಿದ್ದೆವು. ಆ ಹಿಮ, ಮೈನಡುಗಿಸುವ ಚಳಿ ಎಲ್ಲವೂ ನನಗೆ ಹೊಸ ಅನುಭವವನ್ನೇ ಕಟ್ಟಿಕೊಟ್ಟಿತ್ತು.

shain (3)

ಬೆಂಗಳೂರಿನಲ್ಲಿ ಫುಡ್‌ ಅಡ್ಡಾ!

ಎನ್‌ ಆರ್‌ ಕಾಲೋನಿಯಲ್ಲಿರುವ ಸೌತ್‌ ಕಿಚನ್‌ನಲ್ಲಿ ಸಿಗುವ ಚೌಚೌ ಬಾತ್‌, ಖಾರ ಬಾತ್‌, ಬಿಡಿಎ ಕಾಂಪ್ಲೆಕ್ಸ್ ಬಳಿಯ ಎಸ್‌ಎಲ್‌ವಿಯ ಇಡ್ಲಿ ಚಟ್ನಿಯೆಂದರೆ ನನಗೆ ಬಲು ಇಷ್ಟ. ಕೆಂಟಕಿ ಚಿಕನ್‌ನಲ್ಲಿ ಸಿಗುವ ದೋಸೆ ಚಿಕನ್‌ ರುಚಿಯನ್ನು ಮರೆಯುವುದಕ್ಕೇ ಸಾಧ್ಯವಿಲ್ಲ.

ಗಲ್ಲಿ ಕಿಚನ್‌ ಈಗಿಲ್ಲ..

ಗಲ್ಲಿ ಕಿಚನ್‌ ಅರ್ಧಕ್ಕೆ ನಿಲ್ಲಿಸಿರುವ ಬಗ್ಗೆ ಅಲ್ಲರೂ ಕೇಳುತ್ತಲೇ ಇರುತ್ತಾರೆ. ನಿಜ ಹೇಳಬೇಕೆಂದರೆ ಅದೊಂದು ಕಾಲವಿತ್ತು, ಸಿನಿಮಾಗಳಿಗಾಗಿ ಕಾಯಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಜೀವನ ನಡೆಸುವುದಕ್ಕಾಗಿ ಅನಿವಾರ್ಯವಾಗಿ ಪ್ರಾರಂಭಿಸಿದ್ದು ಗಲ್ಲಿ ಕಿಚನ್.‌ ಆದರೆ ಅದುವೇ ಬಿಗ್‌ ಬಾಸ್‌ ಎನ್ನುವ ಪ್ಲಾಟ್‌ಫಾರಂನಲ್ಲಿ ಗೆಲ್ಲುವುದಕ್ಕೆ ಕಾರಣವಾಯ್ತು. ಅದಕ್ಕೆ ಮತ್ತೂ ಅನೇಕ ವರ್ಷಗಳ ಕಾಲ ಅದನ್ನು ನಡೆಸಿಕೊಂಡು ಹೋದೆ. ಆದರೆ ಈಗ ಚಿತ್ರರಂಗದಲ್ಲಿ ಅಭಿನಯ ಹಾಗೂ ನಿರ್ಮಾಣ ಎರಡರ ಜವಾಬ್ದಾರಿ ಹೆಚ್ಚಾಗಿರುವುದರಿಂದ ಅದನ್ನು ಬೇರೆ ಆಸಕ್ತರಿಗೆ ವ್ಯಾಪಾರ ಮಾಡಬೇಕಾಗಿ ಬಂತು.

ರುಕ್ಮಿಣಿ ವಸಂತ್‌ ಜತೆಗೆ ಎಳನೀರು ಡೇಟ್‌

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ನಟೀಮಣಿಯರಿದ್ದಾರೆ. ಆದರೆ ಇತ್ತೀಚೆಗೆ ಚಿತ್ರರಂಗದ ಹೆಮ್ಮೆಯಾಗಿರುವ ರುಕ್ಮಿಣಿ ವಸಂತ್‌ ಜತೆಗೆ ಅವಕಾಶ ಸಿಕ್ಕರೆ ಎಳನೀರು ಡೇಟ್‌ ಮಾಡಲು ಇಷ್ಟಪಡುತ್ತೇನೆ.