ಜೀ ಕನ್ನಡ ವಾಹಿನಿಯಲ್ಲಿ 'ಡ್ರಾಮಾ ಜ್ಯೂನಿಯರ್ಸ್' ಸೀಸನ್- 4 ರ ಮೂಲಕ ಕನ್ನಡಿಗರಿಗೆ ಪರಿಚಿತಳಾದವಳು ಬಾಲ ನಟಿ ರಿತೂ ಸಿಂಗ್. ಮೂಲತಃ ನೇಪಾಳಿಯಾದರೂ ಬೆಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿರುವ ರಿತೂ, ಮುದ್ದು ಮುದ್ದಾಗಿ ಕನ್ನಡ ಮಾತನಾಡುವುದನ್ನು ಕೇಳುವುದೇ ಖುಷಿ. ಇತ್ತೀಚೆಗಷ್ಟೇ 'ಸೀತಾ ರಾಮ' ಧಾರಾವಾಹಿಯಲ್ಲಿ ರಿತೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಸಿಹಿ ಹಾಗೂ ಖುಷಿ ಎಂಬ ದ್ವಿಪಾತ್ರಗಳಲ್ಲೂ ಮಿಂಚಿದ್ದಳು. ಈ ಧಾರಾವಾಹಿ ಮುಗಿಯುವ ಮುನ್ನವೇ ಸಿನಿರಂಗದಿಂದಲೂ ಅನೇಕ ಅವಕಾಶಗಳನ್ನು ಪಡೆದಿರುವ ಏಳರ ಪೋರಿ ರಿತೂ ಓದಿನಲ್ಲೂ ಬೆಸ್ಟ್‌, ಪ್ರವಾಸ ಮಾಡುವುದರಲ್ಲಂತೂ ದಿ ಬೆಸ್ಟ್.‌

ಬೆಂಗಳೂರೇ ಬೆಸ್ಟ್

ನನ್ನ ಊರು ನೇಪಾಳ. ನಾನು ಅಲ್ಲಿ ಹುಟ್ಟಿ ಬೆಳೆದವಳಲ್ಲ. ಆದರೆ ನನ್ನ ಅಪ್ಪ-ಅಮ್ಮ, ಕುಟುಂಬ ಎಲ್ಲರೂ ಅಲ್ಲೇ ಇದ್ದವರು, ನಾನು ಹುಟ್ಟುವ ಮೊದಲು ಮೈಸೂರಿಗೆ ಬಂದು ನೆಲೆಸಿದರು. ನಂತರ ಬೆಂಗಳೂರಿಗೆ ಬಂದರು. ನಾನು ಹುಟ್ಟಿದ್ದು, ಓದುತ್ತಿರುವುದೆಲ್ಲವೂ ಬೆಂಗಳೂರಿನಲ್ಲೇ. ಅದಕ್ಕೇ ಬೆಂಗಳೂರೆಂದರೆ ನನಗೆ ತುಂಬಾ ಇಷ್ಟ. ಕನ್ನಡ ಭಾಷೆ, ನೆಲ, ಬೆಂಗಳೂರು ಜನ ಎಲ್ಲವೂ, ಎಲ್ಲರೂ ನನಗೆ ಬಹಳ ಇಷ್ಟ. ಬೆಂಗಳೂರಲ್ಲೇ ಶೂಟಿಂಗ್‌ ಇರುವಾಗಲಂತೂ ಪೇರೆಂಟ್ಸ್ ಜತೆ ಇಲ್ಲಿ ಅನೇಕ ಕಡೆ ಸುತ್ತಾಡುತ್ತಿರುತ್ತೇನೆ.

Untitled design (82)

ಸುತ್ತಾಡುತ್ತಲೇ ಇರಬೇಕು

ಟ್ರಾವೆಲ್‌ ಮಾಡುವುದೆಂದರೆ ನನಗಂತೂ ಸಿಕ್ಕಾಪಟ್ಟೆ ಇಷ್ಟ. ಟ್ರಿಪ್‌ ನಲ್ಲಿರುವ ಮಜ ಮನೆಯಲ್ಲೇ ಇದ್ದಾಗ ಸಿಗುವುದಿಲ್ಲ. ಎಲ್ಲ ಕಡೆಗಳಲ್ಲಿ ಸುತ್ತಾಡಬಹುದು, ಅಲ್ಲಿನ ಸ್ಪೆಷಲ್‌ ಫುಡ್‌ ಟೇಸ್ಟ್‌ ಮಾಡಬಹುದು, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು. ಫಾರಿನ್‌ ಗೇ ಹೋಗ್ಬೇಕಂತಿಲ್ಲ, ಆದ್ರೆ ಸಣ್ಣ ಪುಟ್ಟ ಟ್ರಿಪ್‌ ಆದರೂ ಹೋಗುತ್ತಿರಬೇಕು.

ಶೂಟಿಂಗ್‌ ಟೂರಿಸಂ

ಈಗ ರಿಯಾಲಿಟಿ ಶೋ, ಧಾರಾವಾಹಿ, ಸಿನಿಮಾ ಅಂತ ಅನೇಕ ಕಡೆಗಳಿಗೆ ಸುತ್ತಾಡುತ್ತಿರುತ್ತೇನೆ. ಇತ್ತೀಚೆಗಷ್ಟೇ ಸಿನಿಮಾ ಚಿತ್ರೀಕರಣಕ್ಕಾಗಿ ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಕೊಡೈಕೆನಾಲ್‌ ಗೆ ಟ್ರಾವೆಲ್‌ ಮಾಡಿದ್ದೆ. ಒಂದೊಂದು ಪ್ರದೇಶವೂ ಒಂದೊಂದು ಹೊಸ ಅನುಭವಗಳನ್ನು ಕೊಟ್ಟಿದೆ. ಫುಡ್‌ ವಿಚಾರದಲ್ಲಿ, ಸ್ಟೇ ವಿಚಾರದಲ್ಲಿ..ಶೂಟಿಂಗ್‌ ಗಾಗಿ ಸುತ್ತಾಡುವುದೆಂದರೆ ಖುಷಿಯೆನಿಸುತ್ತದೆ.

ನೇಪಾಳಕ್ಕೆ ಹೋಗುವಾಸೆ

ಅಮ್ಮ ಅನೇಕ ಸಲ ನೇಪಾಳದ ಬಗ್ಗೆ ಹೇಳುತ್ತಿರುತ್ತಾಳೆ. ನಾವು ನೇಪಾಳ ಮೂಲದವರಾದ್ದರಿಂದ ನನಗೆ ಅಲ್ಲಿನ ಪರಿಸರವನ್ನು ನೋಡುವಾಸೆಯಿದೆ. ಆದರೆ ಸ್ಕೂಲು, ಶೂಟಿಂಗ್‌, ಟ್ಯೂಷನ್‌, ಡ್ಯಾನ್ಸ್‌ ಹೀಗೆ ಅನೇಕ ವಿಚಾರಗಳ ನಡುವೆ ಸಮಯ ಹೊಂದಿಕೆ ಮಾಡಿಕೊಳ್ಳುವುದಕ್ಕಾಗುತ್ತಿಲ್ಲ. ಮುಂದೊಂದು ದಿನ ಅಪ್ಪ-ಅಮ್ಮನ ಜತೆ ನೇಪಾಳಕ್ಕೆ ಹೋಗಿಬರಬೇಕು ಎಂದುಕೊಂಡಿದ್ದೇನೆ.

ವಾವ್‌ ! ವಾಟರ್‌ ಫಾಲ್ಸ್‌

ನನಗೆ ವಾಟರ್‌ ಫಾಲ್ಸ್‌ಗಳೆಂದರೆ ತುಂಬಾನೇ ಇಷ್ಟ. ಶಿವಮೊಗ್ಗಕ್ಕೆ ಶೂಟಿಂಗ್‌ ಹೋಗಿದ್ದಾಗ ಒಮ್ಮೆ ಜೋಗ ಜಲಪಾತ, ಕುಂಚಿಕಲ್‌ ಜಲಪಾತಗಳಿಗೆ ಹೋಗಿ ಬಂದಿದ್ದೆ. ನೀರಿಗಿಳಿಯಲಿಲ್ಲ. ಆದರೆ ದೂರದಿಂದಲೇ ಎಂಜಾಯ್‌ ಮಾಡಿದ್ದೆ.

ಇಸ್ಕಾನ್‌ ಗೆ ಮೊದಲ ಬಾರಿ

ಫ್ಯಾಮಿಲಿ ಟ್ರಿಪ್‌ ಅಂತ ಹೋಗುವುದಕ್ಕೆ ಸಮಯವೇ ಸಾಲುವುದಿಲ್ಲ. ಆದರೂ ಬಿಡುವು ಮಾಡಿಕೊಂಡು ಆಗಾಗ ಬೆಂಗಳೂರು ರೌಂಡ್ಸ್‌ ಹಾಕುತ್ತೇವೆ. ಅದರಲ್ಲೂ ದೇವಸ್ಥಾನಗಳಿಗೆ. ಇತ್ತೀಚೆಗೆ ಇಸ್ಕಾನ್‌ ಟೆಂಪಲ್‌ಗೆ ಹೋಗಿದ್ದೆವು. ದೇವಸ್ಥಾನ ತುಂಬಾ ಚೆನ್ನಾಗಿತ್ತು.

Untitled design (83)

ಮೇಕಪ್‌ ಕಿಟ್‌ ಇಲ್ಲದೇ ಪ್ರವಾಸವೇ ಕಷ್ಟ

ನಾನು ಶೂಟಿಂಗ್‌ಗಾಗಿ ಅನೇಕ ಕಡೆ ಪ್ರಯಾಣ ಮಾಡುತ್ತಿರುತ್ತೇನೆ. ಅದಕ್ಕಾಗಿ ಟ್ರಾವೆಲ್‌ ಬ್ಯಾಗ್‌ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇನೆ. ಬ್ಯಾಗ್‌ ನಲ್ಲಿ ಏನಿಲ್ಲವಾದರೂ ಸ್ನ್ಯಾಕ್ಸ್‌ ಬ್ಯಾಗ್‌ ಇಟ್ಟುಕೊಂಡೇ ಇರುತ್ತೇನೆ. ಹಸಿವಾದರೆ ತಿನ್ನುವುದಕ್ಕೆ ಹುಡುಕಾಡಬೇಕಿಲ್ಲ ಅಲ್ವಾ..? ಮತ್ತೆ ವಾಟರ್‌ ಬಾಟಲ್, ಮೇಕಪ್‌ ಕಿಟ್‌ ಇಟ್ಟುಕೊಳ್ಳುತ್ತೇನೆ. ಅದರಲ್ಲಿ ಲಿಪ್‌ ಬಾಮ್‌, ಸನ್‌ಸ್ಕೀನ್ ಲೋಶನ್ಸ್, ಪೌಡರ್‌, ಲಿಪ್‌ ಸ್ಟಿಕ್ ಇವೆಲ್ಲವನ್ನೂ ಇಟ್ಟುಕೊಳ್ಳುತ್ತೇನೆ. ಮರೆತರೆ ಅಮ್ಮನೇ ಅವನ್ನು ಜತೆಗಿಟ್ಟುಕೊಳ್ಳುತ್ತಾರೆ.

ಚೋಟೀಸಿ ಆಶಾ

ಮುಂದೊಂದು ದಿನ ದೇಶದ ಗಡಿ ದಾಟಿ ಅಮೆರಿಕ, ಜಪಾನ್‌, ಕೊರಿಯಾ ಪ್ರವಾಸ ಮಾಡಬೇಕು ಎಂಬ ಆಸೆ ನನಗಿದೆ. ಈಗಲ್ಲ, ಸ್ವಲ್ಪ ದೊಡ್ಡವಳಾದ ಮೇಲೆ. ಅದೂ ನನ್ನದೇ ದುಡ್ಡಿನಲ್ಲಿ. ಅಲ್ಲಿನ ಫುಡ್‌ ಟೇಸ್ಟ್‌ ಮಾಡಬೇಕು, ಅಲ್ಲಿನ ಚಾಕೊಲೆಟ್ಸ್‌ ತಿನ್ನಬೇಕು ಹೀಗೆ ಒಂದಷ್ಟು ಪುಟ್ಟ ಪುಟ್ಟ ಆಸೆಗಳು.

ಮೊದಲು ಓದು, ನಂತರವೇ ನಟನೆ

ಓದು ಮುಖ್ಯವಾ ಅಥವಾ ಆ್ಯಕ್ಟಿಂಗ್‌ ಮಾಡೋದಾ ಎಂದು ಅನೇಕರು ನನ್ನನ್ನು ಕೇಳುತ್ತಾರೆ. ಆದರೆ ಸದ್ಯಕ್ಕೆ ನನಗೆ ಓದುವುದೇ ಮುಖ್ಯ. ಯಾಕೆಂದರೆ ಓದಿನ ಮೂಲಕ ಎಲ್ಲವೂ ಸಾಧ್ಯವಾಗುತ್ತದೆ. ವಿದ್ಯಾಭ್ಯಾಸದ ನಂತರವೂ ನಟನೆಗೆ ಅವಕಾಶಗಳಿರುತ್ತವೆ. ಇದು ನನ್ನ ಗುರುಗಳು ನನಗೆ ಶಾಲೆಯಲ್ಲಿ ಹೇಳಿಕೊಟ್ಟ ಪಾಠ. ಇದನ್ನು ನಾನೂ ಚಾಚೂ ತಪ್ಪದೆ ಪಾಲಿಸುತ್ತೇನೆ.