ಜರ್ಮನಿಯಲ್ಲಿ ಕಳೆದು ಹೋಗಿ ಪರದಾಡಿದ್ದೆ-ಬಸವರಾಜ ಹೊರಟ್ಟಿ
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಪ್ರವಾಸ ಪ್ರೇಮಿ. ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಪದವಿ ಮತ್ತು ಪ್ರಭಾವದ ಸುತ್ತ ಒಂದು ಅದೃಶ್ಯ ಗೋಡೆಯನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ಇದಕ್ಕೆ ಅಪವಾದವೆಂಬಂತಿರುವ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಅಧಿಕಾರವಿದ್ದರೂ ಸರಳತೆ ಜೀವನ ನಡೆಸುತ್ತಿರುವವರು. ಸುಮಾರು 45 ರಿಂದ 50 ದೇಶಗಳನ್ನು ಸುತ್ತಿ ಬಂದಿದ್ದಾರೆ
- ಸಂದರ್ಶನ: ಭಾಗ್ಯ ದಿವಾಣ
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಪ್ರವಾಸ ಪ್ರೇಮಿ. ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಪದವಿ ಮತ್ತು ಪ್ರಭಾವದ ಸುತ್ತ ಒಂದು ಅದೃಶ್ಯ ಗೋಡೆಯನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ಇದಕ್ಕೆ ಅಪವಾದವೆಂಬಂತಿರುವ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಅಧಿಕಾರವಿದ್ದರೂ ಸರಳತೆ ಜೀವನ ನಡೆಸುತ್ತಿರುವವರು. ಸುಮಾರು 45 ರಿಂದ 50 ದೇಶಗಳನ್ನು ಸುತ್ತಿ ಬಂದಿರುವ ಇವರು, ತಮ್ಮ ಪ್ರವಾಸಾನುಭವಗಳನ್ನು ಪ್ರವಾಸಿ ಪ್ರಪಂಚದೊಂದಿಗೆ ಹಂಚಿಕೊಂಡಿದ್ದು ಹೀಗೆ.
ಇತ್ತೀಚೆಗಷ್ಟೇ ಕೈಗೊಂಡ ಫಿಲಿಪ್ಪೈನ್ಸ್ ಪ್ರವಾಸ ಹೇಗಿತ್ತು?
ನನಗೆ ದೇಶಗಳನ್ನು ಸುತ್ತಿ ಅಲ್ಲಿನ ಪರಿಸರ, ಆಹಾರ ಪದ್ಧತಿ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದೆಂದರೆ ಬಹಳ ಇಷ್ಟ. ಈ ಕಾರಣಕ್ಕಾಗಿಯೇ 1984ರಿಂದ ಇಂದಿನವರೆಗೆ ಸುಮಾರು 45-50 ದೇಶಗಳನ್ನು ಸುತ್ತಾಡಿಬಂದಿದ್ದೇನೆ. ಅದರಲ್ಲೂ ಇತ್ತೀಚೆಗಷ್ಟೇ ಪ್ರವಾಸಿ ಪ್ರಪಂಚದ ಸಂಪಾದಕ ವಿಶ್ವೇಶ್ವರ ಭಟ್ಟರ ಜತೆ ಫಿಲಿಪ್ಪೈನ್ಸ್‌ಗೆ ಹೋಗುವ ಅವಕಾಶ ನನಗೆ ಒದಗಿಬಂದಿತ್ತು. ಮೊದಲ ಎರಡು ದಿನ ಎಲ್ಲರೊಂದಿಗೆ ಹೊಂದಿಕೊಳ್ಳುವುದರಲ್ಲೇ ಬೇಕಾಗಿತ್ತು. ಸಭಾಪತಿಗಳೆಂದು ಎಲ್ಲರೂ ಗೌರವದಿಂದ ನೋಡುತ್ತಿದ್ದರಿಂದ ನನ್ನೊಂದಿಗೆ ಖುಷಿಯಿಂದ ಬೆರೆಯುವುದು ಕಷ್ಟವಾಗಿತ್ತು. ಆದರೆ ಎಂಟು ದಿನಗಳ ಕಾಲದ ಈ ಪ್ರವಾಸದಲ್ಲಿ ದಿನಕಳೆದಿದ್ದೇ ಗೊತ್ತಾಗಿರಲಿಲ್ಲ. ಎಲ್ಲರೂ ನನ್ನೊಂದಿಗೆ ಆಪ್ತರಾಗಿಬಿಟ್ಟರು. ನಾನೂ ಸಭಾಪತಿಯೆಂಬುದನ್ನೇ ಮರೆತು ಎಲ್ಲರೊಂದಿಗೆ ಒಬ್ಬನಾಗಿಬಿಟ್ಟಿದ್ದೆ. ವಿಶ್ವೇಶ್ವರ ಭಟ್ಟರ ಜತೆಗೆ ಹೋಗಿದ್ದ ಈ ಪ್ರವಾಸ ಎಂದಿನಂತೆ ಅನಿಸಲಿಲ್ಲ. ಅಪಾರವಾದ ಮಾಹಿತಿ ಭಂಡಾರವೆಂದೇ ಕರೆಸಿಕೊಳ್ಳುವ ಅವರ ಒಡನಾಟ, ಪ್ರತಿ ಪ್ರವಾಸಿ ತಾಣಗಳಲ್ಲಿ ಅವರು ನೀಡುವ ಮಾಹಿತಿಗಳು, ಇತಿಹಾಸದ ಪರಿಚಯವಂತೂ ಅದ್ಭುತವಾಗಿತ್ತು.

ಪಗಸಂಜನ್ ಫಾಲ್ಸ್ ಅನುಭವ ಹೇಗಿತ್ತು?
ನಾನು ಈವರೆಗೂ ಅನೇಕ ಜಲಪಾತಗಳಿಗೆ ಭೇಟಿ ನೀಡಿದ್ದೇನೆ. ಆದರೆ ಫಿಲಿಪ್ಪೈನ್ಸ್‌ನ ಮನಿಲಾದಲ್ಲಿರುವ ಪಗಸಂಜನ್ ಫಾಲ್ಸ್ ನನಗೆ ಹೊಸ ಅನುಭವ ನೀಡಿತ್ತು. ಅದರ ಭೋರ್ಗರೆತ ಕಂಡಾಗ ಮೈ ರೋಮಾಂಚನವಾಯಿತು. ಅದು ಎಲ್ಲ ಜಲಪಾತಗಳಂತಲ್ಲ, ನಾವು ಅಲ್ಲಿಗೆ ಹೋಗಿ ಸುಮ್ಮನೆ ನೋಡಿ ವಾಪಸ್ ಬರುವುದಲ್ಲ. ಒಂದು ಬಿದಿರಿನ ತೆಪ್ಪದ ಮೇಲೆ ಕುಳಿತು ಜಲಪಾತದ ಒಳಕ್ಕೆ, ಅದರಲ್ಲೂ 'ಡೆವಿಲ್ಸ್ ಕೇವ್' ಒಳಕ್ಕೆ ನಮ್ಮನ್ನು ಕರೆದೊಯ್ಯುವ ವಿಭಿನ್ನ ಅನುಭವ ಒಮ್ಮೆಗೆ ಕಷ್ಟವೆನಿಸಿದರೂ ನೆನಪಿನಲ್ಲುಳಿಯುವ ಪ್ರವಾಸಿವಾಗುತ್ತದೆ. ನಂತರ ಸುತ್ತುವರಿದ ಅರಣ್ಯದಲ್ಲಿ ವಾಕಿಂಗ್ ಮಾಡಿರುವುದೂ ಸಹ ಪ್ರವಾಸವೆಂದರೆ ಹೀಗಿರಬೇಕು ಎನ್ನುವಂತೆ ಮಾಡಿತ್ತು.
ನೀವು ಕಂಡಂತೆ ಮನಿಲಾ ಅಂದರೆ ?
ಫಿಲಿಪೈನ್ಸ್‌ನ ಮನಿಲಾದ ವಿಶೇಷತೆಯೊಂದನ್ನು ಪ್ರವಾಸಿ ಪ್ರಪಂಚದೊಂದಿಗೆ ಹಂಚಿಕೊಳ್ಳಲೇಬೇಕು. ನಾನು ಅಲ್ಲಿದ್ದಷ್ಟೂ ದಿನ ಗಮನಿಸಿರುವ ವಿಚಾರವೆಂದರೆ ಅಲ್ಲಿನ ಜನರು ಎಷ್ಟೇ ಕಷ್ಟವೆಂದರೂ ಮುಖ ಗಂಟಿಕ್ಕಿ, ಚಿಂತೆಯಲ್ಲೇ ಕಾಲ ಕಳೆಯುವದಿಲ್ಲ. ನಗುತ್ತಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಅದಕ್ಕೆ ಚಿಂತೆ ಮುಕ್ತ ದೇಶವೆಂಬ ಬಿರುದು ಕೊಟ್ಟರೂ ತಪ್ಪೇನಿಲ್ಲ. ಅಲ್ಲಿನ ಜನ ನಾಳೆಯ ಬಗ್ಗೆ ಚಿಂತಿಸುತ್ತಾ ಕಾಲಹರಣ ಮಾಡುವುದಿಲ್ಲ, ಬದಲಾಗಿ ಇಂದಿನ ದಿನವನ್ನು ಖುಷಿಯಿಂದ ಕಳೆಯುತ್ತಾರೆ.
ಮೊದಲ ವಿದೇಶ ಪ್ರವಾಸ ?
1984ರಲ್ಲಿ ನಾನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದು ಲಾಸ್ ಏಂಜಲೀಸ್‌ಗೆ. ರೊನಾಲ್ಡ್ ವಿಲ್ಸನ್ ರೇಗನ್ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದೆ. ಆಗ ನಾನು ಸ್ಟೇಟ್ ಒಲಿಂಪಿಕ್ಸ್ ಕಮಿಟಿಯ ಚೇರ್‌ಮನ್ ಆಗಿದ್ದರಿಂದ ನನಗೆ ಅ ಸದಾವಕಾಶ ಲಭ್ಯವಾಗಿತ್ತು. ಅದಾದಮೇಲೆ ಜಪಾನ್, ಟರ್ಕಿ, ಸೌತ್ ಆಫ್ರಿಕಾ, ರೋಮ್ ಹೀಗೆ ಅನೇಕ ದೇಶಗಳಿಗೆ ಹೋಗಿದ್ದೇನೆ.

ಮತ್ತೆ ಮತ್ತೆ ಹೋಗಬೇಕೆನಿಸುವ ದೇಶ?
ಜಪಾನ್ ದೇಶ ನನ್ನನ್ನು ಅತಿಯಾಗಿ ಆಕರ್ಷಿಸಿದೆ. ಅದಕ್ಕೆ ಅಲ್ಲಿನ ಕಾನೂನು ಸುವ್ಯವಸ್ಥೆ, ಸ್ವಚ್ಛತೆಯೇ ಪ್ರಮುಖ ಕಾರಣ. ಪತ್ನಿ ಹೇಮಲತಾ ಜತೆಗೆ ನಾನು, ಕಿಮ್ಮನೆ ರತ್ನಾಕರ್, ನಾಣಯ್ಯ, ವಸಂತ ಬಂಗೇರ ಸೇರಿದಂತೆ ಅನೇಕ ಗಣ್ಯರು ಜಪಾನ್ ಪ್ರವಾಸ ಮಾಡಿದ್ದೆವು. ಅಲ್ಲಿನ ಅಧಿಕಾರಿಗಳಷ್ಟೇ ಅಲ್ಲದೆ ಕಸ ಗುಡಿಸುವ ಕೂಲಿ ಕಾರ್ಮಿಕರಲ್ಲೂ ಕೆಲಸದ ಬಗ್ಗೆ ಇರುವ ಬದ್ಧತೆ ನನಗೆ ಬಹಳ ಮೆಚ್ಚುಗೆಯಾಯ್ತು. ಆ ಪ್ರವಾಸದಲ್ಲೊಂದು ದಿನ ನಾವು ಟೋಕಿಯೋದಿಂದ ಸಮೀಪದ ಪ್ರದೇಶವೊಂದಕ್ಕೆ ಪ್ರಯಾಣಿಸಬೇಕಿತ್ತು. ನಮ್ಮಲ್ಲೊಬ್ಬರು ಅಲ್ಲಿಂದ ಕೊಂಡುಕೊಂಡ ಅರ್ಧ ಲೀಟರ್ ಬಾಟಲ್ ನೀರನ್ನು ಕುಡಿದು ಉಳಿದ ಸ್ವಲ್ಪ ನೀರನ್ನು ಬಾಟಲ್ ನಲ್ಲಿ ಉಳಿಸಿ ಅಲ್ಲೇ ಬಿಟ್ಟಿದ್ದರು. ಅದನ್ನು ಗಮನಿಸಿದ ಅಲ್ಲಿನ ಗಾರ್ಬೇಜ್ ಕ್ಲೀನಿಂಗ್ ವ್ಯಕ್ತಿಯೊಬ್ಬ ನೀರಿನ ಬಾಟಲ್ ಎಲ್ಲೆಂದರಲ್ಲಿ ಎಸೆಯದಂತೆ ತಾಕೀತು ಮಾಡಿದ್ದ. ವಾದಕ್ಕಿಳಿದ ನಮ್ಮ ತಂಡಕ್ಕೆ ಪೊಲೀಸರಿಗೆ ಮಾಹಿತಿ ನೀಡಿ, ಕೇಸ್ ಹಾಕುವೆನೆಂದು ಗದರಿಸಿಬಿಟ್ಟಿದ್ದ. ಇದರಿಂದಲೇ ಸ್ವಚ್ಛತೆಯ ಬಗೆಗೆ ಅಲ್ಲಿನ ಪ್ರತಿ ಪ್ರಜೆಗೂ ಇರುವ ಕಾಳಜಿ ನಮ್ಮ ಅರಿವಿಗೆ ಬಂತು.
ಪ್ರವಾಸದಲ್ಲಿ ಫಜೀತಿಯಾಗಿತ್ತೇ ?
ಪ್ರವಾಸದಲ್ಲಿ ಫಜೀತಿಗಳಿಲ್ಲವಾದರೆ ಹೇಗೆ ? ಆದರೆ ನನಗೆ ಊಹೆಗೂ ಮೀರಿದ ಫಜೀತಿಯಾಗಿತ್ತು. 1988ರಲ್ಲಿ ಖರ್ಗೆ, ರಮೇಶ್ ಕುಮಾರ್ ಸೇರಿ ಸುಮಾರು 30 ಜನರ ನಮ್ಮ ತಂಡ ಒಂದು ತಿಂಗಳ ಕಾಲ ಯುರೋಪ್‌ನ ದೇಶಗಳಿಗೆ ಪ್ರವಾಸ ಹೋಗಿದ್ದೆವು. ಅಲ್ಲಿ ಜರ್ಮನಿಯ ನಿರುಂಬರ್ಗ್ ಎಂಬ ದೇಶದಲ್ಲಿ ಸಮಯಪಾಲನೆಯಲ್ಲಿ ಎಡವಿದ್ದಕ್ಕೆ ನನಗೆ ಮರೆಯಲಾರದ ಅನುಭವವಾಗಿತ್ತು. ಸೀತಾ ಟ್ರಾವೆಲ್ಸ್‌ನಿಂದ ನಾವು ಪ್ರವಾಸಕ್ಕೆ ಹೋಗಿದ್ದು, ನಡುವೆ ಶಾಪಿಂಗ್ ಮಾಡಲು ಮಾಲ್ ಒಂದರಲ್ಲಿ ನಮಗೆ ಅವಕಾಶ ಕಲ್ಪಿಸಿದ್ದರು. ಶಾಪಿಂಗ್ ಸಮಯ ಸ್ವಲ್ಪ ಹೆಚ್ಚಿಗೆ ತೆಗೆದುಕೊಂಡ ಕಾರಣ ನನ್ನನ್ನು ಕಾಯದೆ ಬಿಟ್ಟೇ ಹೋಗಿದ್ದರು. ನನಗಂತೂ ಸ್ಥಳದ ಪರಿಚಯ ಹಾಗಿರಲಿ, ಹೊಟೇಲ್ ಹೆಸರು, ರಸ್ತೆ ಸೇರಿದಂತೆ ಯಾವುದರ ಪರಿಚಯವೂ ಇಲ್ಲದೆ ಪೇಚಾಟಕ್ಕೆ ಸಿಲುಕಿದ್ದೆ. ರಸ್ತೆ ನಿಯಮಗಳು ತಿಳಿಯದೆ ರಸ್ತೆ ದಾಟಲು ಮುಂದಾಗಿ ಬೈಸಿಕೊಂಡಿದ್ದೆ. ಒಂದೆರಡು ಗಂಟೆಗಳ ನಂತರ ಖರ್ಗೆಯವರೇ ನಮ್ಮನ್ನು ನೆನಪಿಸಿಕೊಂಡು ವಿಚಾರಿಸಿದಾಗ, ನಾವು ಜತೆಗಿಲ್ಲದಿರುವುದು ಅರಿವಿಗೆ ಬಂದು ಟ್ರಾವೆಲ್ಸ್ ನವರಿಗೆ ಮಾಹಿತಿ ನೀಡಿದ್ದರು. ಅವರು ಹುಡುಕಾಡುತ್ತಾ ನಾವಿರುವ ಜಾಗಕ್ಕೆ ಬಂದು ಹೊಟೇಲ್‌ಗೆ ವಾಪಾಸ್ ಕರೆದುಕೊಂಡು ಬಂದಿದ್ದರು. ಅಲ್ಲಿನ ಭಾಷೆಯೂ ತಿಳಿಯದೆ ಕಷ್ಟಪಟ್ಟಿದ್ದ ಅನುಭವ ಮರೆಯುವುದು ಕಷ್ಟ.
ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ ಹೇಗಿತ್ತು ?
ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಹಿಂದೆ ಫ್ರಾನ್ಸ್ ಮತ್ತು ಸ್ವಿಡ್ಜರ್ ಲ್ಯಾಂಡ್ ಗೆ ಹೋಗುವ ಸಂದರ್ಭವಿತ್ತು. ನಮ್ಮ ದೇಶದ ಗಡಿ ದಾಟಿ, ಪರ ದೇಶಗಳಲ್ಲಿ ಅವಾರ್ಡ್‌ಗಳನ್ನು ಪಡೆದುಕೊಳ್ಳುವುದೆಂದರೆ ಸಾಮಾನ್ಯ ವಿಚಾರವಲ್ಲ. ವ್ಯಕ್ತಿಯ ಸೇವೆಗೆ ಸಲ್ಲುವ ಗೌರವವದು. ಇಂಥ ವಿಭಿನ್ನ ಕಾರ್ಯಕ್ರಮಗಳನ್ನು ಹೊರದೇಶಗಳಲ್ಲಿ ಆಯೋಜಿಸುವ ಮೂಲಕ ವಿಶ್ವೇಶ್ವರ ಭಟ್ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.

ಪತ್ನಿ ಹೇಮಲತಾ ಅವರ ಜತೆಗಿನ ಪ್ರವಾಸ ಜೀವನ ಹೇಗಿದೆ ?
ನಾನು ಈವರೆಗೆ ಯಾವುದೇ ಪ್ರವಾಸಕ್ಕೆ ಹೋದರೂ ಪತ್ನಿ ಹೇಮಲತಾರನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದೆ. ಅವರ ಅನಾರೋಗ್ಯದ ಕಾರಣದಿಂದ ಕಳೆದ ಎರಡು ಪ್ರವಾಸಗಳನ್ನು ಅವರನ್ನು ಬಿಟ್ಟು ಹೋಗಬೇಕಾಗಿತ್ತು. ಆದರೂ ಖುಷಿಯ ವಿಚಾರವೆಂದರೆ ಅವರು ಎಂದಿಗೂ ದೇಶ ಸುತ್ತಿದವರಲ್ಲ. ಮನೆ, ಸಂಸಾರದ ನಡುವೆ ಉಳಿದುಬಿಟ್ಟಿದ್ದರು. ಆದರೆ ನನ್ನೊಂದಿಗೆ ದೇಶಗಳನ್ನು ಸುತ್ತಲು ಪ್ರಾರಂಭಿಸಿದ ನಂತರ ಅವರಿಗೂ ಸಮಾಜದೊಂದಿಗೆ ಬೆರೆಯುವುದಕ್ಕೆ, ಅನೇಕ ವಿಚಾರಗಳನ್ನು ತಿಳಿಯುವುದಕ್ಕೆ ಸಾಧ್ಯವಾಯಿತು. ಈಗಾಗಲೇ ನನ್ನ ಜತೆಗೆ 45ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿ ಬಂದ ಅನುಭವ ಅವರಿಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಸರಳ ವ್ಯಕ್ತಿಯಾಗಿ ದೇಶ ಸುತ್ತಲು ಹೇಗೆ ಸಾಧ್ಯವಾಗಿದೆ ?
ಸಾಮಾನ್ಯವಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಪದವಿ ಮತ್ತು ಪ್ರಭಾವದ ಸುತ್ತ ಒಂದು ಅದೃಶ್ಯ ಗೋಡೆಯನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ನನಗೆ ಹಾಗೆ ಇರುವುದು ಕಷ್ಟವೆನಿಸಿದೆ. ಜನರೊಂದಿಗೆ ಬೆರೆಯುವುದು, ಅನೇಕ ವಿಚಾರಗಳನ್ನು ತಿಳಿಯುವುದು ನನಗಿಷ್ಟ. ಆದರೆ ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಎಲ್ಲರೂ ನನ್ನನ್ನು ಬಹಳ ಗೌರವದಿಂದಲೇ ನಡೆಸಿಕೊಂಡು ನಡುವೆ ಅಂತರವನ್ನಿಟ್ಟುಕೊಳ್ಳುತ್ತಿದ್ದರು. ಅದು ಸ್ಥಾನಕ್ಕೆ ಕೊಡುವ ಗೌರವ, ಒಪ್ಪಿಕೊಳ್ಳುತ್ತೇನೆ. ಆದರೆ ಹೊರದೇಶಗಳಿಗೆ ಹೋದಾಗ ಸಿಗುವ ಅನುಭವವೇ ಬೇರೆ. ಜನ ನನ್ನನ್ನು ಗುರುತಿಸುವುದು ಕಷ್ಟವಾದ್ದರಿಂದ ಜನಸಾಮಾನ್ಯರೊಂದಿಗೆ ನಾನೂ ಒಬ್ಬನಾಗಿಬಿಡುತ್ತೇನೆ. ಊಟಕ್ಕೆ ಕುಳಿತಾಗ, ಹೊರಗೆಲ್ಲಾದರೂ ಹೋದಾಗ ಸಾಮಾನ್ಯನಂತೆ ಉಳಿದುಬಿಡುತ್ತೇನೆ. ಹರಟೆ ಹೊಡೆಯುತ್ತಾ, ತಮಾಷೆ ಮಾಡುತ್ತಾ ಎಲ್ಲರನ್ನೂ ನಗಿಸುತ್ತೇನೆ. ಸಾಮಾನ್ಯರಂತೆ ಜೀವನ ನಡೆಸುವುದರಲ್ಲಿರುವ ಖುಷಿಯೇ ಬೇರೆ.
ನಿಮ್ಮೂರಿನ ಪ್ರವಾಸಿ ತಾಣಗಳ ಪೈಕಿ ಯಾವುದು ನಿಮಗೆ ಪ್ರಿಯವಾದುದು ?
ನಾನು ಹುಬ್ಬಳ್ಳಿ ಮೂಲದವನು. ಅದೆಷ್ಟೇ ದೇಶಗಳನ್ನು ಸುತ್ತಿ ಬಂದರೂ ನಮ್ಮೂರೇ ನಮಗೆ ಮೇಲು ಎಂಬಂತೆ ನಮ್ಮೂರಿನಲ್ಲಿರುವ ಪ್ರವಾಸಿ ತಾಣಗಳ ಬಗೆಗೆ ಸ್ವಲ್ಪ ಹೆಚ್ಚಿನ ಒಲವು. ಬಿಜಾಪುರ ಗೋಲ್ ಗುಂಬಜ್, ಕೂಡಲಸಂಗಮ ಹೀಗೆ ಅನೇಕ ತಾಣಗಳಿಗೆ ಬಿಡುವಾದಾಗೆಲ್ಲ ಭೇಟಿ ನೀಡುತ್ತೇನೆ. ಪ್ರವಾಸಿಗರಿಗೆ ಪರಿಚಿತವಲ್ಲದ ಇನ್ನೂ ಅನೇಕ ಪ್ರವಾಸಿತಾಣಗಳು ಹುಬ್ಬಳ್ಳಿ – ಧಾರವಾಡ ಅವಳಿ ನಗರಿಯ ಆಸುಪಾಸಿನಲ್ಲಿವೆ. ಪ್ರವಾಸೋದ್ಯಮವೂ ರಾಜ್ಯ, ದೇಶಗಳ ಏಳಿಗೆಗೆ, ಆದಾಯಕ್ಕೆ ಕಾರಣವಾಗಿರುವುದರಿಂದ ಅವುಗಳ ಅಭಿವೃದ್ಧಿಯ ಬಗೆಗೆ ಅನೇಕ ಬಾರಿ ಸರಕಾರಗಳಿಗೆ ಪತ್ರ ಬರೆದಿದ್ದೇನೆ. ಆದರೆ ಕಾರ್ಯರೂಪಕ್ಕೆ ಬರುವುದು ತಡವಾಗುತ್ತಿದೆ ಎಂಬುದು ಬೇಸರದ ವಿಚಾರ. ವಿದೇಶಗಳಲ್ಲಿರುವಂತೆ ನಮ್ಮಲ್ಲೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ನಮ್ಮ ರಾಜ್ಯ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ಬಗ್ಗೆ ಆಡಳಿತ ಸರಕಾರ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.
ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಸದ್ದಿಲ್ಲದಾಗಿರುವುದೇಕೆ?
ಕರ್ನಾಟಕದ ಪ್ರಜಾಸತ್ತಾತ್ಮಕ ಇಚ್ಛಾಶಕ್ತಿಯನ್ನು ಪ್ರತಿನಿಧಿಸುವ ಭವ್ಯ ಕಟ್ಟಡವಾದ ವಿಧಾನಸೌಧವನ್ನು ಕಣ್ತುಂಬಿಕೊಳ್ಳುವ ಸುವರ್ಣ ಅವಕಾಶವನ್ನು ಸ್ಥಳೀಯರಿಗಷ್ಟೇ ಅಲ್ಲದೆ ಎಲ್ಲ ಪ್ರವಾಸಿಗರಿಗೂ ನೀಡಬೇಕೆಂಬ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಪ್ರಸ್ತಾಪಿಸಿದ್ದೆ. ವಾಷಿಂಗ್ಟನ್ ಡಿಸಿಯನ್ನು ನೋಡಿಬಂದಿರುವ ನನಗಂತೂ ವಿಧಾನ ಸೌಧದಷ್ಟು ಅದ್ಭುತವಾದ ಇತಿಹಾಸ, ವಿನ್ಯಾಸಗಳಿರುವ ಕಟ್ಟಡಗಳೇ ಇಲ್ಲವೆನಿಸಿದೆ. ನನ್ನ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದ ಸಿದ್ದರಾಮಯ್ಯನವರು, ಕಳೆದ ವರ್ಷ ಜೂನ್ 1ರಿಂದ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಯೋಜನೆಗೆ ಚಾಲನೆ ನೀಡಿದ್ದರು. ಕರ್ನಾಟಕದ ಅಸ್ಮಿತೆಯ ಆಧಾರಸ್ತಂಭ ಮತ್ತು ಭಾರತೀಯ ಪ್ರಜಾಪ್ರಭುತ್ವದ ಶಾಶ್ವತ ಚೈತನ್ಯದ ಪ್ರಬಲ ಸಂಕೇತವಾಗಿರುವ ವಿಧಾನಸೌಧವನ್ನು ಸಾರ್ವಜನಿಕರು ಒಳಗಿನಿಂದ ವೀಕ್ಷಣೆ ಮಾಡುವಂತಾಗಿದ್ದು ಸಾಮಾನ್ಯ ವಿಚಾರವಲ್ಲ. ಆದರೆ ಈ ಯೋಜನೆ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಹೊಸ ಸರಕಾರ ಬಂದ ನಂತರ ಇನ್ನಷ್ಟು ಅಭಿವೃದ್ಧಿಯಾಗಬೇಕು. ಪ್ರವಾಸೋದ್ಯಮವು ದೇಶದ ಆರ್ಥಿಕತೆಯ ಬೆನ್ನೆಲುಬು. ಹೊಸ ಸರಕಾರದ ಮೂಲಕ ರೂಪುಗೊಳ್ಳಲಿರುವ ಪ್ರವಾಸೋದ್ಯಮ ಇಲಾಖೆ ಚುರುಕಿನಿಂದ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿ ಎಂಬುದು ನನ್ನ ಆಶಯ.