ಕುಂದಾಪುರದಲ್ಲಿ ಶೈಕ್ಷಣಿಕ, ಧಾರ್ಮಿಕ, ಔದ್ಯಮಿಕ, ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮಹತ್ವಪೂರ್ಣ ಸೇವೆಗಳನ್ನು ಮಾಡಿದ ಸುಕುಮಾರ್‌ ಶೆಟ್ಟಿಯವರು ಬೈಂದೂರು ತಾಲೂಕಿನ ಶಾಸಕರಾಗಿಯೂ ಜನಸೇವೆಯನ್ನು ಮಾಡಿದ್ದಾರೆ. ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳು ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳ ಮೇಲೆ ಕಾಳಜಿಯನ್ನು ಇಟ್ಟುಕೊಂಡಿದ್ದಾರೆ. 2003ರಿಂದ ಕುಂದಾಪುರ ಎಜುಕೇಶನ್‌ ಸೊಸೈಟಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ಆಗ ಚಿಕ್ಕದಾಗಿದ್ದ ಈ ಸಂಸ್ಥೆ ಈಗ ಹೆಮ್ಮರವಾಗಿದೆ. ಪ್ರವಾಸಿ ಪ್ರಪಂಚಕ್ಕೆ ಸುಕುಮಾರ ಶೆಟ್ಟಿಯವರು ನೀಡಿದ ಸಂದರ್ಶನ ನಿಮಗಾಗಿ…

ಈ ಸಂಸ್ಥೆಯನ್ನು ಮುನ್ನಡೆಸುವಲ್ಲಿ ನಿಮ್ಮ ಧ್ಯೇಯವಾಕ್ಯ ಏನು?

  • ನಮ್ಮ ಮೂಲ ತತ್ತ್ವ ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ, ಈ ದೇಶ ಬದಲಾವಣೆಯಾಗುತ್ತದೆ. ಈ ಮಾತನ್ನು ಹಲವಾರು ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ. ಅದೇ ನಮ್ಮ ಮುಖ್ಯ ಧ್ಯೇಯ.

ಈ ಸಂಸ್ಥೆ ಹೇಗೆ ಮತ್ತು ಯಾರಿಂದ ಶುರುವಾಯಿತು?

  • ಈ ಸಂಸ್ಥೆಯನ್ನು ಮೇಲಿನಮನೆ ದಂಪತಿಗಳು 1975ರಲ್ಲಿ, ಕುಂದಾಪುರದ ಕೆಲವು ಮಾನ್ಯರನ್ನು ಸೇರಿಕೊಂಡು ಶುರು ಮಾಡಿದರು. 12 ಮಕ್ಕಳಿಂದ ಪ್ರಾರಂಭವಾದ ಈ ಸಂಸ್ಥೆ, ನಿಧಾನ ಗತಿಯಲ್ಲಿ ಎಸ್ಸೆಸೆಲ್ಸಿಯ ವರೆಗೆ ಬಂತು, 2003ರಲ್ಲಿ ಈ ಸಂಸ್ಥೆಯ ಅಧ್ಯಕ್ಷನಾಗಿ ಮತ್ತು ಸೀತಾರಾಮ ನೆಕ್ಕತ್ತಾಯರವರು ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ, ಆರ್‌.ಎನ್‌.ಶೆಟ್ಟಿಯವರ ಸಹಾಯದಿಂದ ಇಲ್ಲಿ ಪಿಯುಸಿಯನ್ನು ಶುರುಮಾಡಿದೆವು. ಅದಾದ ನಂತರ 2010ರಲ್ಲಿ ಡಾ ಬಿ.ಬಿ.ಹೆಗಡೆಯರ ಧರ್ಮಪತ್ನಿ ವಿಶಾಲಾಕ್ಷಿ ಹೆಗಡೆಯನ್ನು ದೇಣಿಗೆಯಲ್ಲಿ ಕೊಟ್ಟ 2.5 ಎಕರೆ ಸ್ಥಳದಲ್ಲಿ ಡಿಗ್ರೀ ಕಾಲೇಜನ್ನು ಶುರುಮಾಡಿದೆವು. ಸುಮಾರು 120 ಮಕ್ಕಳಿಂದ ಪ್ರಾರಂಭವಾದ ಈ ಕಾಲೇಜು, ಈಗ 2000 ಮಕ್ಕಳನ್ನು ಹೊಂದಿದ್ದೇವೆ. ನಾನು ಅಧ್ಯಕ್ಷನಾಗುವ ಸಮಯದಲ್ಲಿ ಈ ಸಂಸ್ಥೆಯಲ್ಲಿ ಸುಮಾರು 525 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಈಗ ಸುಮಾರು 5000 ಮಕ್ಕಳು ವ್ಯಾಸಂಗ ಮಾಡುವಂಥ ದೊಡ್ಡ ಮತ್ತು ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ.
Untitled design (19)

ಈಗ ಸಂಸ್ಥೆ ಮಾಡಿದ ಸಾಧನೆಗಳೇನು?

  • ನನ್ನ ಅಧ್ಯಕ್ಷತೆಯಲ್ಲಿ ಪಿಯುಸಿ ಕಾಲೇಜು ಶುರುವಾಯಿತು. ಬಿ.ಬಿ. ಹೆಗಡೆ ಡಿಗ್ರೀ ಕಾಲೇಜು ಶುರುವಾಯಿತು. ಸಣ್ಣ ಕಟ್ಟಡದಲ್ಲಿ ನಡೆಯುತ್ತಿದ್ದ ಎಚ್‌.ಎಂ.ಎಂ., ವಿಕೆ ಆಚಾರ್ಯ ಶಾಲೆಯನ್ನು ದೊಡ್ಡ ಕ್ಯಾಂಪಸ್‌ಗೆ ಸ್ಥಳಾಂತರಿಸಿದೆವು. ಹಾಗೇ ನಮ್ಮ ಸಂಸ್ಥೆ ಎಸ್‌ಎಸ್‌ಎಲ್‌ಸಿಯಲ್ಲಿ ಹಲವಾರು ರ್ಯಾಂಕ್‌ ಬರುತ್ತಿತ್ತು. ಈ ಸಲ ರಾಜ್ಯಾದ್ಯಂತ 9 ರ್ಯಾಂಕ್‌ಗಳನ್ನು ಪಡೆಯುವ ಮೂಲಕ ನಮ್ಮ ಶಾಲೆಯ ಮಕ್ಕಳು ಸಾಧನೆ ಮಾಡಿದ್ದಾರೆ. ಹಾಗೆ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಹಳಷ್ಟು ಮಕ್ಕಳು ನೀಟ್‌ ಮತ್ತು ಸಿಇಟಿಯಿಂದ ತೇರ್ಗಡೆ ಹೊಂದಿ ಎಂಜಿನಿಯರ್‌ ಮತ್ತು ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿಗ್ರೀ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ರ್ಯಾಂಕ್‌ ಮತ್ತು ಗೋಲ್ಡ್‌ ಮೆಡಲ್‌ ಪಡೆಯುವುದು ಸಾಮಾನ್ಯವಾಗಿದೆ. ವಿಶ್ವವಿದ್ಯಾಲಯ ಮತ್ತು ಸುತ್ತ ಮುತ್ತ ಜಿಲ್ಲೆಗಳಲ್ಲಿ ಒಳ್ಳೆಯ ಕಾಲೇಜು ಎಂಬ ಅಗ್ಗಳಿಕೆಯನ್ನು ನಮ್ಮ ಸಂಸ್ಥೆ ಪಡೆದಿದೆ. ಹಲವಾರು ಕಾರ್ಪೋರೆಟ್‌ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಇಲ್ಲಿನ ವಿದ್ಯಾರ್ಥಿಗಳ ಕ್ಯಾಂಪಸ್‌ ಸೆಲೆಕ್ಷನ್‌ ಮಾಡುವಂಥ ಕೆಲಸ ಮಾಡುತ್ತಿದ್ದೇವೆ. ಒಳ್ಳೆಯ ಶಿಕ್ಷಕರು ಇದ್ದಾರೆ. ನಮ್ಮ ಸಂಸ್ಥೆಯಲ್ಲಿ ಒಟ್ಟು 300ಕ್ಕೂ ಹೆಚ್ಚು ಮಂದಿ ಸ್ಟಾಫ್‌ ಇದ್ದಾರೆ.

ಸಂಸ್ಥೆಯಿಂದ ಕರಾವಳಿ ಭಾಗದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಮಾಡಲಾದ ಕೆಲಸಗಳೇನು?

  • ಈಗಾಗಲೇ ಹೇಳಿದ ಹಾಗೆ, ಸಮಾಜ ಕಟ್ಟ ಕಡೆಯ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವುದೇ ನಮ್ಮ ಉದ್ದೇಶ. ಅದೇ ರೀತಿ ವರ್ಷಕ್ಕೆ ಸುಮಾರು 50ಲಕ್ಷಕ್ಕೂ ಹೆಚ್ಚು ಫೀಸ್‌ನ್ನು ಮನ್ನಾ ಮಾಡುತ್ತಿದ್ದೇವೆ. ತಂದೆ ತಾಯಿ ಇಲ್ಲದೇ ಇದ್ದರೆ, ಅರ್ಧ ಫೀಸ್‌ ಅಥವಾ ಉಚಿತ ಶಿಕ್ಷಣ. ಆರ್ಥಿಕವಾಗಿ ಹಿಂದುಳಿದವರು ಎಷ್ಟು ಫೀಸ್‌ ಕೊಡುತ್ತಾರೋ ಅಷ್ಟನ್ನು ಮಾತ್ರ ತೆಗೆದುಕೊಳ್ಳುವುದನ್ನು ಮಾಡುತ್ತಿದ್ದೇವೆ. ಸುಮಾರು 500ಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನ ಉಚಿತ ಊಟವನ್ನು ನೀಡುತ್ತಿದ್ದೇವೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಂದಲೂ ಮಕ್ಕಳು ಇಲ್ಲಿ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಯಾವ ಸಂಸ್ಥೆಯೂ ಸಂಬಳ ಕೊಡದಿದ್ದಂಥ ಸಂದರ್ಭದಲ್ಲಿ ನಮ್ಮ ಸಂಸ್ಥೆಯಿಂದ ಸಿಬ್ಬಂದಿಗಳಿಗೆ ಸಂಬಳ ಕೊಡುತ್ತಿದ್ದೆವು.

ಈ ಪರಿಸರದಲ್ಲಿರುವ ಗ್ರಾಮೀಣ ಪ್ರದೇಶದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಷ್ಟೇ ನಮ್ಮ ಕಾಲೇಜಿಗೆ ಬರುತ್ತಾರೆ. ಫೀಸ್‌ನಲ್ಲೂ ಎಲ್ಲವೂ ಒಮ್ಮೆಲೇ ಕೇಳುವುದಕ್ಕಿಂತ ಕಂತಿನಲ್ಲಿ, ಅಂದರೆ, ಅವರ ಹತ್ತಿರ ಇದ್ದಾಗಲಷ್ಟೇ ಫೀಸ್‌ನ್ನು ಪಡೆಯುವ ವ್ಯವಸ್ಥೆ ಮಾಡಿದ್ದೇವೆ.

ಸಂಸ್ಥೆ ಇಷ್ಟೊಂದು ದೊಡ್ಡದಾಗಿ ಬೆಳೆಯುವುದಕ್ಕೆ ಕಾರಣವೇನು?

  • ಪ್ರಾಮಾಣಿಕ ಸೇವೆ. ಪ್ರಾಮಾಣಿಕವಾಗಿ ಈ ಕೆಲಸ ಮಾಡುತ್ತಿರುವ ಕಾರಣದಿಂದಲೇ ಸಂಸ್ಥೆ ಇಷ್ಟೊಂದು ದೊಡ್ಡದಾಗಿ ಬೆಳೆದಿದೆ ಎಂದು ನನಗನಿಸುತ್ತದೆ.
Untitled design (21)

ನೀವು ರಿಸಲ್ಟ್‌ಗೆ ಹೆಚ್ಚು ಮಹತ್ವ ಕೊಡುತ್ತೀರಾ ಅಥವಾ ಪ್ರೊಸೆಸ್‌ಗೆ ಹೆಚ್ಚು ಮಹತ್ವ ನೀಡುತ್ತೀರಾ?

  • ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಈ ಸಮಾಜಕ್ಕೆ ಸೇವೆ ಮಾಡುವುದಕ್ಕೆ ಮಹತ್ವ ನೀಡುತ್ತೇವೆ. ಇವರೆಲ್ಲರೂ ಶಿಸ್ತುಬದ್ಧ ವಿದ್ಯಾರ್ಥಿ ಮತ್ತು ಪ್ರಜೆಗಳನ್ನು ಕೊಡುವುದೇ ನಮ್ಮ ಉದ್ದೇಶ. ಆ ದಾರಿಯಲ್ಲೇ ಕೆಲಸ ಮಾಡುತ್ತಿದ್ದೇವೆ. ರಿಸಲ್ಟ್‌ ಸೆಕಂಡರಿ.

ಸಂಸ್ಥೆಯು ಮಾಡಲಿರುವ ಮುಂದಿನ ಕೆಲಸವೇನು?

  • ಇಲ್ಲಿಯ ವರೆಗೂ ಹಾಸ್ಟೆಲ್‌ ಇರಲಿಲ್ಲ, ಇನ್ನೂ ಮುಂದೆ ಹಾಸ್ಟೆಲ್‌ ಮಾಡುವ ಯೋಜನೆಯಿದೆ. ನಮ್ಮ ಡಿಗ್ರಿ ಕಾಲೇಜನ್ನು ಆಟೋನೋಮಸ್‌ ಆಗಿ ರೂಪಿಸುವ ಯೋಚನೆ ಇದೆ. ಇನ್ನೂ ನಮ್ಮ ಶಾಲೆಯಲ್ಲಿ ಸಿಬಿಎಸ್‌ಸಿ ಸಿಲಬಸ್‌ ಇಲ್ಲ ಅದರ ಒಂದು ಶಾಲೆಯನ್ನು ತೆರೆಯುವ ಯೋಜನೆ ಇದೆ.

ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೀವು ಏನಾದರೂ ಹೇಳಲು ಇಚ್ಛಿಸುತ್ತೀರಾ?

  • ಉಡುಪಿ ಜಿಲ್ಲೆಯಲ್ಲಿ, ಕುಂದಾಪುರ ತಾಲೂಕು ವಿಶೇಷವಾಗಿದೆ. ನಮ್ಮ ಕಾಲೇಜಿನ ಪಕ್ಕದಲ್ಲೇ ಪಂಚಗಂಗಾವಳಿ ನದಿ ಹರಿಯುತ್ತಿದೆ. ನದಿಯ ತಟದಲ್ಲಿ ವಿದ್ಯಾಸಂಸ್ಥೆ ಇದ್ದರೆ, ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಅದೇ ರೀತಿ ವ್ಯಾಸಂಗ ಮಾಡುವಂಥ ಮಕ್ಕಳಿಗೆ ಈ ನದಿಯ ತಟದಲ್ಲಿ ವ್ಯಾಸಂಗ ಮಾಡಿದರೆ, ಮನಶ್ಶಾಂತಿ, ತಿಳಿವಳಿಕೆ ಮತ್ತು ಪ್ರೌಢಿಮೆ ಬರುತ್ತದೆ ಎಂದು ನನಗನಿಸುತ್ತದೆ. ರಾಜ್ಯದ ಜನರೆಲ್ಲ ಬುದ್ಧಿವಂತರು, ಅದರಲ್ಲೂ ಉಡುಪಿ ಜಿಲ್ಲೆಯ ಜನರು ಮತ್ತಷ್ಟು ಬುದ್ಧಿವಂತರು. ಉಡುಪಿಯ ಕುಂದಾಪುರ ತಾಲೂಕಿನ ಜನರು ಮತ್ತಷ್ಟು ಬುದ್ಧಿವಂತರು ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಕುಂದಾಪುರದ ಜನ ಉದ್ಯೋಗಕ್ಕೋಸ್ಕರ ಬೇರೆ ಬೇರೆ ಊರುಗಳಿಗೆ ಹೋಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹಾಗೆ ಬೆಂಗಳೂರಂಥ ನಗರಗಳಲ್ಲಿ ಕ್ಯಾಟರಿಂಗ್‌ ಮತ್ತು ಹೊಟೇಲ್‌ ಉದ್ಯಮದಲ್ಲಿ ಕುಂದಾಪುರಿನವರೇ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಊರಿನ ಜನರಿಗೆ ಕೊಲ್ಲೂರು ಮೂಕಾಂಬಿಕೆಯ ಪೂರ್ಣ ಅನುಗ್ರಹ ಇದ್ದಿದ್ದರಿಂದ ಜನರು ತಮ್ಮ ಕೆಲಸದಲ್ಲಿ ಜಯವನ್ನು ಹೊಂದುತ್ತಿದ್ದಾರೆ. ಹಾಗೇ ತಾಯಿ ಮೂಕಾಂಬಿಕೆಯ ಅನುಗ್ರಹ ನಮ್ಮೂರಿನ ಜನರ ಮೇಲೆ, ಸಂಸ್ಥೆಯ ಮೇಲೆ, ವಿದ್ಯಾರ್ಥಿಗಳ ಮೇಲೆ ಇರಲೆಂದು ಪ್ರಾರ್ಥಿಸುತ್ತೇನೆ.

ಸಂಸ್ಥೆಯ ಹೊರತಾಗಿಯೂ ನೀವು ಮಾಡಿದ ಸಮಾಜಸೇವೆಗಳೇನು?

  • ಆರ್ಥಿಕವಾಗಿ ಹಿಂದುಳಿದ ಮಕ್ಕಳ ಬಗ್ಗೆ ಬಹಳ ಚಿಂತನೆಯನ್ನು ಹೊಂದಿದವನು ನಾನು. ಶಾಲೆಯ 50ಕ್ಕೂ ಹೆಚ್ಚು ಮಕ್ಕಳಿಗೆ ಉಳಿಯುವ ಧರ್ಮಾತ್ಮ ಹಾಸ್ಟೆಲ್‌ ಮಾಡಿದ್ದೇನೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷನಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೆ. ಆಗ ಅಲ್ಲಿ 7ನೇ ಕ್ಲಾಸ್‌ ವರೆಗೂ ಮಾತ್ರ ಶಾಲೆಗಳಿದ್ದವು. ಬೇರೆ ಊರಿಗೆ ಹೋಗಿ ಕಲಿಯಲು ಬಸ್‌ನ ಸೌಕರ್ಯವೂ ಇರಲಿಲ್ಲ. ಆಗ ಏಳನೇ ಕ್ಲಾಸ್‌ ಕಲಿತ ಮಕ್ಕಳು ಬೆಂಗಳೂರಿನಲ್ಲಿ ಕ್ಯಾಟರಿಂಗ್‌ ಅಥವಾ ಬೇರೆ ಯಾವುದೋ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು 7ನೇ ಕ್ಲಾಸ್‌ ವರೆಗೂ ಕಲಿತು ಮನೆಯಲ್ಲೇ ಕೂರುತ್ತಿದ್ದರು. ಹೆಣ್ಣು ಮಗಳು ವಿದ್ಯಾವಂತೆಯಾದರೆ, ಆ ಮನೆ ಸುಸಂಸ್ಕೃತವಾಗಿರುತ್ತೆ ಎಂಬ ಭಾವನೆಯನ್ನು ಇಟ್ಟುಕೊಂಡಿದ್ದೇನೆ. ಆದಕಾರಣ ದೇವಸ್ಥಾನದ ವತಿಯಿಂದ ಕೊಡ್ಲಾಡಿ, ಹೊಸೂರು, ಹಿರೇ ಶಿರೂರು, ಮಾವಿನಕಟ್ಟೆ ಎಂಬ ಹಳ್ಳಿಗಳಲ್ಲಿ ಹೈಸ್ಕೂಲ್‌ಗಳನ್ನು ಮಾಡಿದೆವು. ಈಗೆಲ್ಲ ಆ ವಿದ್ಯಾರ್ಥಿಗಳು ಮುಂದಿನ ಶಿಕ್ಷಣವನ್ನು ಕಲಿರು ಬೇರೆಡೆಯಲ್ಲೆಲ್ಲ ಇದ್ದಾರೆ. ಈ ಸಂಸ್ಥೆಯ ಹೊರತಾಗಿಯೂ ಆರ್ಥಿಕವಾಗಿ ಹಿಂದುಳಿದವರು ವಿದ್ಯಾವಂತರಾದರೆ ಮಾತ್ರ ಆ ಮನೆ ಸಮೃದ್ಧಿಯಾಗುತ್ತೆ ಎನ್ನುವುದೇ ನನ್ನ ಅಭಿಪ್ರಾಯ. ನನ್ನ ಆಲೋಚನೆ ಸರಿ ಇದೆ ಎಂದು ಕಾಲವೇ ಹೇಳಿದೆ.
Untitled design (20)

ನಮ್ಮ ಪತ್ರಿಕೆ ಹಾಗೂ ವಿಶ್ವೇಶ್ವರ ಭಟ್ಟರ ಬಗ್ಗೆ ನಿಮ್ಮ ಅನಿಸಿಕೆ?

  • ಪ್ರವಾಸಿ ಪ್ರಪಂಚ ಚೆನ್ನಾಗಿ ಮೂಡಿ ಬರುತ್ತಿದೆ. ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು ನನಗೆ ಬಹಳ ಆತ್ಮೀಯರು, ಅವರು ಮೇಧಾವಿ ಪತ್ರಕರ್ತರು, ಸಮಾಜಮುಖಿವಾದ ಚಿಂತನೆಗಳು ಇರುವಂಥ ಮಹಾನ್‌ ವ್ಯಕ್ತಿ. ಅವರೂ ನಮ್ಮ ಹಾಗೇ ಕರಾವಳಿಯ ಸುಪುತ್ರ, ಕರಾವಳಿಯ ಶಿವರಾಮ ಕಾರಂತರ ನಂತರ ಇವರೇ ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕೃಷಿ ಮಾಡಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.

ಗೋಲ್ಡನ್‌ ಜುಬಿಲೀ ಕಾರ್ಯಕ್ರಮ ಹೇಗೆಲ್ಲ ಇರುತ್ತದೆ?

  • ಈ ಕಾರ್ಯಕ್ರಮ 18ನೇ ತಾರೀಕಿನಿಂದ 24ನೇ ತಾರೀಕಿನವರೆಗೂ ನಡೆಯುತ್ತದೆ. ಪ್ರತಿದಿನವೂ ಬಂದವರಿಗೆ ಮಧ್ಯಾಹ್ನದ ಊಟ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಶಾಲೆಯ ಮಕ್ಕಳು ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವಂಥ ಕಾರ್ಯಕ್ರಮಗಳು ಇರುತ್ತವೆ. ಇನ್ನೂ 50ನೇ ವರ್ಷದ ಸವಿನೆನಪಿಗಾಗಿ ಕಟ್ಟಲಾದ ಸುವರ್ಣ ಸೌಧದ ಉದ್ಘಾಟನೆ ಇರುತ್ತದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಹಳೆಯ ವಿದ್ಯಾರ್ಥಿ ಮಿಲನಗಳು ಇರುತ್ತದೆ.

ಕಾರ್ಯಕ್ರಮಕ್ಕೆ ಯಾರೆಲ್ಲ ಅತಿಥಿಗಳು ಬರುತ್ತಿದ್ದಾರೆ?

  • ಕುಂದಾಪುರದ ಪ್ರಪ್ರಥಮ ಇಂಗ್ಲಿಷ್‌ ಮೀಡಿಯಂ ಶಾಲೆ ಸುವರ್ಣ ಮಹೋತ್ಸವ ಮಾಡುತ್ತಿದೆ ಎಂದರೆ, ನಿಜವಾಗಿಯೂ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಈ ಕಾರ್ಯಕ್ರಮಕ್ಕೆ, ಗೌರವಾನ್ವಿತ ರಾಜ್ಯಪಾಲ ಥಾವರ ಚಂದ ಗೆಹ್ಲೋಥ್‌ ಅವರು 23ನೇ ತಾರೀಖಿನಂದು ಬರುತ್ತಾರೆ. ಪರಮಪೂಜ್ಯ ಸುಬುಧೇಂದ್ರ ತೀರ್ಥರು 20ನೇ ತಾರೀಖಿನಂದು ಬರುತ್ತಾರೆ. ಹಾಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರು 21ನೇ ತಾರೀಖಿನಂದು ಬರುತ್ತಿದ್ದಾರೆ. ಹೊಸದಿಗಂತ ಪತ್ರಿಕೆಯ ಪಿ.ಎಸ್‌. ಪ್ರಕಾಶ್‌ರವರು 22ನೇ ತಾರೀಖಿನಂದು ಬರುತ್ತಾರೆ. ಅದರ ಜತೆಗೆ, ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ, ಸಂಸದ ಬಿ.ವೈ.ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಎಸ್‌.ಎಲ್‌.ಭೋಜೇಗೌಡ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ. ಈ ಶಾಲೆಯಲ್ಲಿ ಕಲಿತು ಈಗ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಿರುವ ಹಲವಾರು ಹಳೆಯ ವಿದ್ಯಾರ್ಥಿಗಳೂ ಅತಿಥಿಗಳಾಗಿ ಬರುತ್ತಿದ್ದಾರೆ.

ಇಲ್ಲಿನ ಮಕ್ಕಳಿಗೆ ಮಾರ್ಗದರ್ಶನ ಮಾಡಲು, ಚೆನ್ನಾಗಿ ಓದಿಸುವಂತೆ ಹುಮ್ಮಸ್ಸು ಉತ್ಸಾಹ ನೀಡುವಂಥ ಹಲವಾರು ಸಂಪನ್ಮೂಲ ವ್ಯಕ್ತಿಗಳೂ ಬರಲಿದ್ದಾರೆ.